ವಂಶಪಾರಂಪರ್ಯದ ಸುಳಿಗೆ ಸಿಕ್ಕಿ ಕುಸಿಯುತ್ತಿರುವ ಕಾಂಗ್ರೆಸ್; ನೆನಪಾಗುತ್ತಿರುವ ಪಾಮುಲಪರ್ತಿ ವೆಂಕಟ ನರಸಿಂಹ ರಾವ್

135 ವರ್ಷಗಳಷ್ಟು ಪುರಾತನವಾದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕುರಿತು ಈಗ ಬಿರುಗಾಳಿ ಎದ್ದಿದೆ. ನೆಹರು-ಗಾಂಧಿ ಕುಟುಂಬದ ವಂಶಪಾರಂಪರ್ಯ ಆಡಳಿತದ ಕಪಿಮುಷ್ಟಿಗೆ ಸಿಲುಕಿರುವ ಆ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಖಂಡಿತವಾಗಿಯೂ ಇಲ್ಲ. ಅಲ್ಲಿರುವುದೇನಿದ್ದರೂ ಒಂದು ಪಕ್ಷಕ್ಕೆ ಗಂಡಾಂತರಕಾರಿಯಾದ ಹೈಕಮಾಂಡ್ ಸಂಸ್ಕೃತಿ! ವಿಚಿತ್ರವೆಂದರೆ, ಈ ಕುಟುಂಬದ ಕುಡಿಗಳ ಮುಂದೆ ತಗ್ಗಿಬಗ್ಗಿ, ಡೊಗ್ಗು ಸಲಾಮು ಹೊಡೆಯುತ್ತಿದ್ದವರೇ ಈಗ ಬಂಡಾಯದ ಬಾವುಟ ಹಾರಿಸಿದ್ದಾರೆ. ಆದರೆ, ಸೋನಿಯಾ ಗಾಂಧಿ ಯಥಾಪ್ರಕಾರ ತಮ್ಮ ಬಾಲಬಡುಕರಿಗೇ ಮಣೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ನಾವು ದಿವಂಗತ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷ, ದಕ್ಷ ರಾಜನೀತಿಜ್ಞ, ಚತುರ ರಾಜಕಾರಣಿ ಪಿ.ವಿ.ನರಸಿಂಹರಾವ್ ಅವರನ್ನು ನೆನಪಿಸಿಕೊಳ್ಳಲೇಬೇಕು.