ಮೇಲಿನ ಚಿತ್ರ: ಚಿಕ್ಕಬಳ್ಳಾಪುರದ ಬಾಲಾಜಿ ಥಿಯೇಟರ್.
***
news & views
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ಥಿಯೇಟರ್ಗಳಿಗೆ ಕೋವಿಡ್ ರೆಡ್ ಸಿಗ್ನಲ್;
ಚಿಕ್ಕಬಳ್ಳಾಪುರ/ಕೋಲಾರ: ಸಿನಿಮಾ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದಾಗ್ಯೂ ಪ್ರೇಕ್ಷಕನಿಗೆ ಮಾತ್ರ ಕೊರೊನ ವೈರಾಣು ಇನ್ನೂ ರೆಡ್ ಸಿಗ್ನಲ್ ಕೊಟ್ಟು ಅಡ್ಡಹಾಕಿ ಕೂತಿದೆ. ಕೋವಿಡ್ ನಿಯಮಗಳಿಂದ ಹೈರಾಣಾಗಿದ್ದ ಚಿತ್ರೋದ್ಯಮಕ್ಕೆ ಮರುಚಾಲನೆ ನೀಡಲು ಇನ್ನಿಲ್ಲದ ಕಸರತ್ತು ನಡೆಸಿದ್ದ ಸ್ಯಾಂಡಲ್ವುಡ್ಗೆ ಪ್ರೇಕ್ಷಕನ ನಿರಾಸಕ್ತಿ ಮತ್ತು ವೈರಾಣುವಿನ ಭೀತಿ ತೊಲಗದ ಬಗ್ಗೆ ಆತಂಕವನ್ನು ಮತ್ತೂ ಹೆಚ್ಚಿಸಿದೆ.
ರಾಜ್ಯಾದ್ಯಂತ ಸಿನಿಮಾ ಪ್ರದರ್ಶನಕ್ಕೆ ಸರಕಾರ ಅನುಮತಿ ನೀಡಿದ ನಂತರ ಗಡಿ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರದ ಎಲ್ಲ ಭಾಗಗಳಲ್ಲಿ ಚಿತ್ರ ಪ್ರದರ್ಶನ ಆರಂಭವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೆಲ ಥಿಯೇಟರ್ಗಳನ್ನು ಬಿಟ್ಟರೆ ಬಹುತೇಕ ಥಿಯೇಟರ್ಗಳ ಮಾಲೀಕರು ಮಾರ್ಚ್ನಲ್ಲಿ ಮುಚ್ಚಿದ್ದ ಬಾಗಿಲನ್ನು ತೆರೆಯುವ ಧೈರ್ಯ ಮಾಡಲೇ ಇಲ್ಲ. ಹೀಗಾಗಿ ಸಾಧ್ಯವಾದಷ್ಟು ಎಲ್ಲಡೆ ಥಿಯೇಟರ್ಗಳ ಬಾಗಿಲು ತೆರೆಸಲು ಭಗೀರಥ ಪ್ರಯತ್ನ ನಡೆಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ವಲ್ಪಮಟ್ಟಿಗೆ ನಿರಾಶೆ ವ್ಯಕ್ತಪಡಿಸಿದೆಯಾದರೂ, ಇನ್ನು ಕೆಲ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
“ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಅಲ್ಲಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಇದೊಂದು ಶುಭ ಸೂಚನೆ. ಏಕಾಏಕಿ ಪ್ರೇಕ್ಷಕರು ಥಿಯೇಟರ್ಗೆ ಬರಲಿ ಎನ್ನುವುದಕ್ಕಿಂತ ಚಿತ್ರೋದ್ಯಮಕ್ಕೆ ಮರುಚಾಲನೆ ಸಿಗಲಿ ಎಂಬ ಸದಾಶಯ ನಮ್ಮದು. ಹೀಗಾಗಿ, ಈ ಪ್ರಯತ್ನದಲ್ಲಿ ಕೊಂಚ ಯಶಸ್ಸು ಸಿಕ್ಕಿತು ಎನ್ನಬಹುದು ಎನ್ನುತ್ತಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರು. ತುಮಕೂರಿನಲ್ಲಿ ಚಿತ್ರಮಂದಿರ ನಡೆಸುತ್ತಿರುವ ಅವರು, ಶುಕ್ರವಾರ ರಾತ್ರಿ ಸಿಕೆನ್ಯೂಸ್ ನೌ ಜತೆ ಮಾತನಾಡಿದರು.
ಚಿಕ್ಕಬಳ್ಳಾಪುರದಲ್ಲಿ ಇಲ್ಲ ಚೀಯರ್ಸ್
ಕನ್ನಡ ಮತ್ತು ತೆಲುಗು ಚಿತ್ರಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 14 ಚಿತ್ರಮಂದಿರಗಳಿದ್ದು ಆ ಪೈಕಿ ನಾಲ್ಕರಿಂದ ಐದು ಚಿತ್ರಮಂದಿರಗಳಷ್ಟೇ ಪ್ರದರ್ಶನ ಆರಂಭಿಸಿವೆ. ಈ ಪೈಕಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿರುವ ‘ಬಾಲಾಜಿ’, ‘ಕೃಷ್ಣ’ ಮತ್ತು ‘ವಾಣಿ’ ಪೈಕಿ ‘ಬಾಲಾಜಿ’ ಚಿತ್ರಮಂದಿರ ಮಾತ್ರ ಶುಕ್ರವಾರದಿಂದ ಪ್ರದರ್ಶನ ಆರಂಭಿಸಿ ಧೈರ್ಯ ತೋರಿದೆ.
“ಬಾಲಾಜಿಯಲ್ಲಿ ದಿವಂಗತ ಚಿರಂಜೀವಿ ಸರ್ಜಾ ನಟಿಸಿದ್ದ ‘ಶಿವಾರ್ಜುನ’ ಸಿನಿಮಾವನ್ನು ಬಿಡುಗಡೆ ಮಾಡಲಾಗಿದ್ದು, ದಿನದ ನಾಲ್ಕು ಶೋಗಳೂ ಸೇರಿ ಒಟ್ಟು 154 ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಇನ್ನು ಕಲೆಕ್ಷನ್ ವಿಷಯಕ್ಕೆ ಬಂದರೆ, 5ರಿಂದ 6 ಸಾವಿರ ರೂಪಾಯಿ ಬಂದಿದೆ” ಎಂದು ಆ ಚಿತ್ರಮಂದಿರದ ವ್ಯವಸ್ಥಾಪಕ ವೇಣಗೋಪಾಲ್ ತಿಳಿಸಿದ್ದಾರೆ.
ಶಿವಾರ್ಜುನ
ಉಳಿದಂತೆ ಅವರಿಗೆ ಸಿನಿಮಾ ಪ್ರದರ್ಶಿಸಲು ಆತಂಕದ ಜತೆಗೆ ನಷ್ಟದ ಭೀತಿಯೂ ಕಾಡುತ್ತಿದೆ. “ಹೀಗೆ ಒಂದು ವಾರ ನೋಡುತ್ತೇವೆ. ಪ್ರೇಕ್ಷಕರು ಬಂದು ಕಲೆಕ್ಷನ್ ಹೆಚ್ಚಿದರೆ ಪ್ರದರ್ಶನ ಮುಂದುವರಿಸುತ್ತೇವೆ. ಇಲ್ಲವಾದರೆ ಸ್ಥಗಿತ ಮಾಡುತ್ತೇವೆ. ಯಾಕೆಂದರೆ; ಸಿಬ್ಬಂದಿ ವೇತನ, ವಿದ್ಯುತ್, ತೆರಿಗೆ, ಸ್ಯಾನಿಟೈಸರ್, ಸ್ವಚ್ಛತೆ ಸೇರಿ ನಮಗೆ ದಿನಕ್ಕೆ 10 ಸಾವಿರಕ್ಕೂ ಹೆಚ್ಚೇ ಖರ್ಚಾಗುತ್ತದೆ. ಹೀಗಾಗಿ ನಷ್ಟದಿಂದ ಸಿನಿಮಾ ಪ್ರದರ್ಶಿಸುವುದು ಕಷ್ಟವಲ್ಲವೇ?” ಎಂದು ಅವರು ಪ್ರಶ್ನಿಸುತ್ತಾರೆ.
“ಇದರ ಜತೆಗೆ, ‘ವಾಣಿ’ ಮತ್ತು ‘ಕೃಷ್ಣ’ ತೆರೆಯುವುದಿಲ್ಲ ಎಂದು ಗೊತ್ತಿದ್ದ ಕಾರಣಕ್ಕೆ, ಅಟ್ಲೀಸ್ಟ್ ತನ್ನಲ್ಲಿಗಾದರೂ ಪ್ರೇಕ್ಷಕರು ಬರುತ್ತಾರೆಂದು ʼಬಾಲಾಜಿʼ ನಂಬಿತ್ತು. ಆದರೆ, ಪ್ರೇಕ್ಷಕರು ಹೊರಗೆ ಆರಾಮಾಗಿ ಓಡಾಡಿಕೊಂಡಿದ್ದರಾದರೂ ಥಿಯೇಟರೊಳಕ್ಕೆ ಮಾತ್ರ ಬರಲಿಲ್ಲ” ಎನ್ನುತ್ತಾರೆ ಹಿರಿಯ ಪತ್ರಕರ್ತ ಎಂ.ಕೃಷ್ಣಪ್ಪ.
ಉಳಿದಂತೆ ಗುಡಿಬಂಡೆಯಲ್ಲಿದ್ದ ಏಕೈಕ ಚಿತ್ರಮಂದಿರ ‘ಆರ್ಕೆ’ ಲಾಕ್ಡೌನ್ಗೆ ಮೊದಲೇ ಮುಚ್ಚಿಕೊಂಡಿತ್ತು. ಅದು ತೆರೆದುಕೊಳ್ಳಲಿಲ್ಲ. ಇನ್ನು ಜಿಲ್ಲೆಯಲ್ಲಿ ಸಿನಿಮಾ ಸಂಸ್ಕೃತಿ ಬೆಳೆಯಲು ಸಾಕಷ್ಟು ಕಾಣಿಕೆ ನೀಡಿರುವ ಗೌರಿಬಿದನೂರಿನ ‘ಅಭಿಲಾಶ್’, ‘ಶಂಕರ್’ ಚಿತ್ರಮಂದಿರಗಳು ಓಪೆನ್ ಆಗಿದ್ದವಾದರೂ ಅವುಗಳಿಗೆ ಸಿಕ್ಕ ಪ್ರತಿಕ್ರಿಯೆಯೂ ಬಾಲಾಜಿ ಟಾಕೀಸ್ಗೆ ಸಿಕ್ಕಿದಷ್ಟೇ ಆಗಿತ್ತು. ಬಾಗೇಪಲ್ಲಿಯಲ್ಲಿ ‘ವೆಂಕಟೇಶ್ವರ’ ಮತ್ತು ‘ರಾಘವೇಂದ್ರ’ ಚಿತ್ರಮಂದಿರಗಳು, ಶಿಡ್ಲಘಟ್ಟದ ‘ವೆಂಕಟೇಶ್ವರ’ ಮತ್ತು ‘ಮಯೂರ’ ಹಾಗೂ ಚಿಂತಾಚಣಿಯ ‘ಎಸ್ಎಲ್ಎನ್’, ‘ಅಂಜನಾ’, ‘ಆದರ್ಶ’ ಚಿತ್ರಮಂದಿರಗಳು ಮುಚ್ಚಿಯೇ ಇದ್ದವು.
ಕೋಲಾರ ಜಿಲ್ಲೆಯಲ್ಲೂ ಇದೇ ಕಥೆ
ಈ ಜಿಲ್ಲೆಯಲ್ಲೂ ಚಿಕ್ಕಬಳ್ಳಾಪುರದ ಸ್ಥಿತಿಯೇ ಕಂಡುಬಂದಿತು. ಕೋಲಾರದ ‘ನಾರಾಯಣಿ’ ಥಿಯೇಟರಿನಲ್ಲಿ ಸಿನಿಮಾ ಪ್ರದರ್ಶನ ನಡೆಯಿತಾದರೂ ಪ್ರೇಕ್ಷಕರ ಸಂಖ್ಯೆ ನೀರಸವಾಗಿತ್ತು. ಉಳಿದಂತೆ ನಗರದ ‘ಪ್ರಭಾತ್’, ‘ಶಾರದಾ’ ಬಂದ್ ಆಗಿದ್ದವು. ಬಂಗಾರಪೇಟೆಯಲ್ಲಿ ‘ಬಾಲಚಂದ್ರ’ ಮತ್ತು ‘ವಿಜಯ’ ಚಿತ್ರಮಂದಿರಗಳು ತೆರೆಯಲಿಲ್ಲ. ಮಾಲೂರಿನ ಏಕೈಕ ಚಿತ್ರಮಂದಿರ ‘ಬಾಲಾಜಿ’ ಕೂಡ ಗೇಟ್ ತೆರೆಯಲಿಲ್ಲ. ಶ್ರೀನಿವಾಸಪುರದ ‘ಸಂಗೀತಾ’ ಈ ತಿಂಗಳು ಓಪೆನ್ ಆಗಲ್ಲ ಎಂದು ಗೊತ್ತಾಗಿದೆ. ಕೆಜಿಎಫ್ ಪಟ್ಟಣದ ಒಂದೇಒಂದು ಸಿನಿಮಾ ಥಿಯೇಟರ್ ‘ಮೀನಾಕ್ಷಿ’ ಕೂಡ ಶುಕ್ರವಾರ ಬಾಗಿಲು ತೆರೆಯದೇ ನಿಶ್ಯಬ್ದವಾಗಿತ್ತು.
ಮುಂದೆ ಸುಧಾರಿಸಬಹುದು
ಜೈರಾಜ್
“ಕೋವಿಡ್ ಚಿತ್ರೋದ್ಯಮಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ. ಎಲ್ಲ ಮುನ್ನೆಚ್ಚರಿಕೆಗಳ ಜತೆಯಲ್ಲಿಯೇ ಪ್ರೇಕ್ಷಕರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಚಿತ್ರ ಪ್ರದರ್ಶನ ಮಾಡಲು ಪ್ರಯತ್ನ ನಡೆದಿದೆ. ಲಕ್ಷಾಂತರ ಜನರಿಗೆ ಅನ್ನ, ಉದ್ಯೋಗ ನೀಡುವ ಇಂಡಸ್ಟ್ರಿ ಸ್ಥಗಿತವಾಗಬಾರದು. ಹೀಗಾಗಿ ಚಿತ್ರ ಪ್ರದರ್ಶನ ಆರಂಭವಾಗಲಿ ಎಂದು ವಾಣಿಜ್ಯ ಮಂಡಳಿ ಪ್ರಯತ್ನ ಮಾಡಿತ್ತು. ಇನ್ನು, ಶುಕ್ರವಾರ ಕೆಲ ಕಡೆ ತಾಂತ್ರಿಕ ಕಾರಣಗಳಿಂದ ಪ್ರದರ್ಶನ ಆರಂಭವಾಗಿಲ್ಲ. ತುಮಕೂರಿನ ಎರಡು ಥಿಯೇಟರ್ಗಳಲ್ಲಿ ಬಾಕಿ ತುಂಬಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಕಟ್ ಮಾಡಲಾಗಿದೆ. ಸಿನಿಮಾವೇ ಪ್ರದರ್ಶನ ಆಗುತ್ತಿಲ್ಲ ಎಂದರೆ ವಿದ್ಯುತ್ ಬಿಲ್ ಎಲ್ಲಿಂದ ತಂದು ಕಟ್ಟಲು ಸಾಧ್ಯ? ಈ ಬಗ್ಗೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇವೆ. ವಿದ್ಯತ್ ಬಾಕಿ ಮನ್ನಾ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಹೀಗಾಗಿ ನಿಧಾನಗತಿಯಲ್ಲಿ ಮತ್ತಷ್ಟು ಚಿತ್ರಮಂದಿರಗಳು ತೆರೆದುಕೊಳ್ಳಲಿವೆ. ಹೀಗೆಯೇ ಚಿಕ್ಕಬಳ್ಳಾಪುರ, ಕೋಲಾರದಲ್ಲೂ ಆಗಬಹುದು. ಇವತ್ತು ನಾನು ಬೆಂಗಳೂರಿನ ‘ಸಂತೋಷ್’ ಟಾಕೀಸ್ಗೆ ಹೋಗಿದ್ದೆ. ಅಲ್ಲಿ 110 ಪ್ರೇಕ್ಷಕರು ಸಿನಿಮಾ ನೋಡುತ್ತಿದ್ದರು. ಇದು ಉತ್ತಮ ಸಂಖ್ಯೆಯೇ. ಅದೇ ರೀತಿ, ‘ಪ್ರಸನ್ನ’ ಥಿಯೇಟರ್ಗೂ ವಿಸಿಟ್ ಮಾಡಿದ್ದೆ. ಅಲ್ಲೂ ಪರವಾಗಿಲ್ಲ. ನಾಳೆಯಷ್ಟೊತ್ತಿಗೆ ಇಡೀ ರಾಜ್ಯದ ಚಿತ್ರಣ ಸಿಗುತ್ತದೆ. ನಾವೇ ಶಿವಾರ್ಜುನ ಚಿತ್ರಕ್ಕೆ ಸಪೋರ್ಟ್ ಮಾಡಿ ಬಿಡುಗಡೆ ಮಾಡಿಸಿದ್ದೇವೆ. ನೋಡೋಣ..” ಎಂದು ಪರಿಸ್ಥಿತಿಯನ್ನು ವಿವರಿಸಿದರು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್.
ಜನಕ್ಕೆ ಮನರಂಜನೆಯೂ ಔಷಧವೇ
ಮಾಸ್ತಿ
“ಸಿನಿಮಾ ಅನ್ನೋದು ಮನರಂಜನಾ ಮಾಧ್ಯಮ. ಯುದ್ಧ, ಮಳೆ, ಪ್ರವಾಹ, ಮಾರಕ ವ್ಯಾಧಿಗಳು ಬಂದಾಗ ಸಿನಿಮಾ ಜನರಿಂದ ಕೊಂಚ ಕಾಲ ದೂರವಿರೋದು ಸಹಜ. ಈಗ ಕೊರೋನ ಕಾರ್ಮೋಡದ ಮಧ್ಯೆ ಥಿಯೇಟರ್ಗಳು ತೆರೆಯಲು ಅನುಮತಿ ದೊರಕಿದೆ. ಜನ ನಿಧಾನವಾಗಿಯಾದರೂ ಸರಿ ಸಿನಿಮಾಗಳಿಗೆ ಬರುವುದು ಗ್ಯಾರಂಟಿ. ಯಾಕಂದರೆ ಸಿನಿ ಉದ್ಯಮ ನೂರು ವರುಷದ ಅನುಭವ ಹೊಂದಿರುವಂಥದ್ದು. ಜನಕ್ಕೆ ಮನರಂಜನೆಯೂ ಔಷಧವೇ. ಹೇಳಿಕೇಳಿ ಚಿಕ್ಕಬಳ್ಳಾಪುರ ಮತ್ತು ಕೋಲಾರದ ಜನರು ಪಕ್ಕಾ ಮನರಂಜನಾ ಪ್ರಿಯರು. ಅವರು ಸಿನಿಮಾವನ್ನು ತುಂಬಾ ಇಷ್ಟಪಡುತ್ತಾರೆ. ಆತಂಕ ಬೇಡ ಅನ್ಸುತ್ತೆ” ಎನ್ನುತ್ತಾರೆ ‘ಟಗರು’ ಚಿತ್ರ ಖ್ಯಾತಿಯ ಸಂಭಾಷಣೆಕಾರ ಮಾಸ್ತಿ. ಇವರು ಮೂಲತಃ ಮಾಲೂರು ತಾಲ್ಲೂಕಿನ ಮಾಸ್ತಿಯವರು.