- ಎಂ.ಕೃಷ್ಣಪ್ಪ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಸಕಾಲ ಸೇವೆಯಲ್ಲಿ ಜಿಲ್ಲಾಡಳಿತ ಮತ್ತೆ ಉತ್ತಮ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ವಿಳಂಬ ರಹಿತವಾಗಿ ಸಾರ್ವಜನಿಕ ಅರ್ಜಿಗಳ ವಿಲೇವಾರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ.
ಈಗಾಗಲೇ ಹತ್ತನೇ ತರಗತಿ ಫಲಿತಾಂಶ ಹಾಗೂ ನರೇಗಾ ಕಾಮಗಾರಿಗಳ ಗುರಿ ಸಾಧನೆಯಲ್ಲೂ ರಾಜ್ಯದ ಮೂವತ್ತೂ ಜಿಲ್ಲೆಗಳನ್ನು ಮೀರಿಸಿ ಸಾಧನೆ ಮಾಡಿದ್ದ ಚಿಕ್ಕಬಳ್ಳಾಪುರ ಇದೀಗ ಸಕಾಲ ಸೇವೆಯಲ್ಲೂ ನಂಬರ್ ಒನ್ ಸ್ಥಾನಕ್ಕೇರಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಜೀಡಿದ ಮತ್ತಷ್ಟು ಮಾಹಿತಿ ಹೀಗಿದೆ;
ಡಿಸೆಂಬರ್ ತಿಂಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಸಕಾಲ ಅಧಿನಿಯಮದಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಒಟ್ಟು ೫೨,೨೧೭ ಅರ್ಜಿ ಸ್ವೀಕರಿಸಲಾಗಿತ್ತು. ಈ ಪೈಕಿ ೫೨,೬೬೦ ಅರ್ಜಿ (ಬಾಕಿ ಅರ್ಜಿಗಳು ಸೇರಿ)ಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲಾಗಿದೆ. ಸೂಕ್ತ ದಾಖಲೆ ಸಲ್ಲಿಸದ ಮತ್ತು ಇನ್ನಿತರೇ ಕಾರಣಗಳಿಂದಾಗಿ ೧೮೮೩ ಅರ್ಜಿಗಳು ತಿರಸ್ಕೃತಗೊಂಡಿವೆ.
ಜಿಲ್ಲೆಯಲ್ಲಿ ಅಕ್ಟೋಬರ್ನಲ್ಲಿ ಒಟ್ಟು ೫೩,೦೨೫ ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಪೈಕಿ ೫೩,೧೫೩ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು. ಅದೇ ರೀತಿಯಲ್ಲಿ ನವೆಂಬರ್ನಲ್ಲಿ ಒಟ್ಟು ೫೯,೬೮೭ ಅರ್ಜಿಗಳನ್ನು ಸ್ವೀಕೃತಗೊಂಡಿದ್ದವು. ಇದರಲ್ಲಿ ೫೮,೦೦೬ ಅರ್ಜಿಗಳು ವಿಲೇವಾರಿ ಮಾಡಲಾಗಿದೆ.
ಸಕಾಲ ಸೇವೆಗಳನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಮೂಲಕ ೨೦೨೦ರ ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿಯೇ ೩ನೇ ಸ್ಥಾನ ಪಡೆದಿತ್ತು. ಇದೀಗ ಡಿಸೆಂಬರ್ನಲ್ಲಿ ಮತ್ತೆ ಪ್ರಥಮ ಸ್ಥಾನ ಕಾಯ್ದುಕೊಳ್ಳುವ ಮೂಲಕ ಜಿಲ್ಲಾಧಿಕಾರಿಗಳಾದ ಆರ್.ಲತಾ ಅವರು ಜಿಲ್ಲಾ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿ ಮಾಡಿದ್ದಾರೆ.
ಸಕಾಲ ಯೋಜನೆಗಳು: ರಾಜ್ಯ ಸರಕಾರ ನಿಗದಿಪಡಿಸಿರುವ ಸಕಾಲ ಸೇವೆಗಳು ಸೂಕ್ತ ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ವಿಲೇವಾರಿ ಮಾಡಲಾಗುತ್ತದೆ. ಇದರಲ್ಲಿ ೭ ಕೆಲಸದ ದಿನಗಳಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿತರಿಸಲಾಗುತ್ತದೆ. ೧೫ ದಿನಗಳಲ್ಲಿ ವಾಣಿಜ್ಯ ಪರವಾನಗಿ ನೀಡುವಿಕೆ, ೭ ದಿನಗಳಲ್ಲಿ ಖಾತಾ ನಕಲು ನೀಡುವುದು, ೩೦ ದಿನಗಳಲ್ಲಿ ೨೪೦೦ ಚದರ ಅಡಿಗಳವರೆಗಿನ ವಸತಿ ನಿರ್ಮಾಣ ಮಾದರಿಯ ಕಟ್ಟಡ ಯೋಜನೆಯನ್ನು ಅನುಮೋದಿಸುವುದು, ೧೫ ದಿನಗಳಲ್ಲಿ ವಸತಿ ಕಟ್ಟಡಗಳಿಗೆ ನೀರು ಸರಬರಾಜು ಮತ್ತು ಒಳ ಚರಂಡಿಯ ಹೊಸ ಸಂಪರ್ಕಕ್ಕಾಗಿ ಅನುಮತಿ ನೀಡುವುದು ಹಾಗೂ ೭ ದಿನಗಳಲ್ಲಿ ವಾಸ ದೃಢೀಕರಣ ಪ್ರಮಾಣ ಪತ್ರ ನೀಡಿಕೆ ಸೇರಿದಂತೆ ೧೦೨೫ ಸೇವೆಗಳನ್ನು ಕಡ್ಡಾಯವಾಗಿ ಕಾಲ ಮಿತಿಯೊಳಗೆ ವಿಲೇವಾರಿ ಮಾಡಲಾಗುತ್ತದೆ.
ಸೇವೆಯಲ್ಲಿರುವ ಇಲಾಖೆಗಳು: ಪೊಲೀಸ್ ಇಲಾಖೆ ಸೇರಿದಂತೆ ಕಂದಾಯ, ಸ್ಥಳೀಯ ಪ್ರಾಧಿಕಾರದ ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆಹಾರ ಮತ್ತು ನಾಗರೀಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಅಂಗವಿಕಲರ ಕಲ್ಯಾಣಾಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ೯೮ ಇಲಾಖೆಗಳು ಸಕಾಲದ ವ್ಯಾಪ್ತಿಗೆ ಬರುತ್ತವೆ.
“ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ್ಲ” ಎಂಬ ಘೋಷ ವಾಕ್ಯದಡಿ ಜಾರಿಗೆ ಬಂದಿರುವ ಸಕಾಲ ಸೇವೆಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ನಿಯಂತ್ರಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದ ಹಿಡಿದು ಅರ್ಜಿ ವಿಲೇವಾರಿ ಆಗುವ ತನಕ ಎಲ್ಲ ಪ್ರಕ್ರಿಯೆಯು ಆನ್ಲೈನ್ ಮೂಲಕವೇ ನಡೆಯುತ್ತದೆ. ಸಕಾಲದಡಿ ಸಾರ್ವಜನಿಕರು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸುವುದರಿಂದ ತಮ್ಮ ಅಮೂಲ್ಯವಾದ ಸಮಯವನ್ನು ಸರ್ಕಾರಿ ಕಚೇರಿಗಳ ಸುತ್ತಮುತ್ತ ಕಳೆಯು ಅವಶ್ಯಕತೆ ಇಲ್ಲವಾಗಿದೆ. ಇಂತಹ ಸಕಾಲ ಸೇವೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಮೊದಲನೇ ಸ್ಥಾನದಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯ.
ಸಕಾಲ ಸೇವೆ ಅತಿ ಸುಲಭ: ಸಕಾಲ ಸೇವೆ ಸಂಪೂರ್ಣ ಗಣಕೀಕೃತಗೊಂಡಿದ್ದು, ಸಾರ್ವಜನಿಕರಿಗೆ ಅರ್ಜಿಗಳನ್ನು ಅತಿ ಸುಲಭವಾಗಿ ಸಲ್ಲಿಸಬಹುದು. ನಾಗರೀಕರು ಅರ್ಜಿ ಸಲ್ಲಿಸಿದೊಡನೆ ಜಿಎಸ್ಟಿ ರಸೀದಿ ನೀಡಲಾಗುತ್ತದೆ. ರಸೀದಿಯಲ್ಲಿ ಸೇವೆ ನೀಡಬೇಕಾಗಿರುವ ಅವಧಿಯನ್ನೂ ನಮೂದಿಸಲಾಗುತ್ತದೆ. ಇದರಿಂದ ನಾಗರೀಕರು ಅವಧಿಯು ಉಳಿತಾಯವಾಗುತ್ತದೆ.
ಜಿಲ್ಲಾಧಿಕಾರಿಗಳ ಸಂತಸ
ಸಕಾಲ ಸೇವೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮೊದಲನೇ ಸ್ಥಾನ ಗಳಿಸಿರುವುದು ಅತ್ಯಂತ ಸಂತಸದ ವಿಷಯ. ಜಿಲ್ಲೆಯ ಸಕಾಲ ತಂಡ ಉತ್ತಮವಾದ ಕಾರ್ಯನಿರ್ವಹಣೆ ಮಾಡಿದೆ. ಜಿಲ್ಲೆಯಲ್ಲಿ ೨೦೨೦ರ ಡಿಸೆಂಬರ್ ತಿಂಗಳಲ್ಲಿ ಸಕಾಲ ಅಧಿನಿಯಮದಡಿ ಒಟ್ಟು ೫೨,೨೧೭ ಅರ್ಜಿಗಳು ಸ್ವೀಕೃತವಾಗಿದ್ದು, ಆ ಪೈಕಿ ೫೨,೬೬೦ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲಾಗಿದೆ. ಈ ಸಾಧನೆಗೆ ಎಲ್ಲಾ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಪರಿಶ್ರಮವೇ ಕಾರಣ. ಇದೇ ಗುಣಮಟ್ಟವನ್ನು ಕಾಯ್ದುಕೊಳ್ಳಲು ಶ್ರಮಿಸಲಾಗುವುದು.
-ಆರ್.ಲತಾ, ಜಿಲ್ಲಾಧಿಕಾರಿ