ಚಿಕ್ಕಬಳ್ಳಾಪುರ: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಹೆಚ್ಚು ಕಡೆಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಕುಪ್ಪಹಳ್ಳಿ, ದೊಡ್ಡಮರಳಿ, ಅಜ್ಜವಾರ, ಮುದ್ದೇನಹಳ್ಳಿ ಹಾಗೂ ಮಂಚೇನಹಳ್ಳಿ ಹೋಬಳಿ ಶಾಂಪುರ ಗ್ರಾಮ ಪಂಚಾಯಿತಿಗಳಿಗೆ ಸೋಮವಾರ ಚುನಾವಣೆ ನಡೆದಿದೆ. ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಮುನಿ ನಾರಾಯಣಪ್ಪ ಅವರು ತಮ್ಮ ಪ್ರತಿಸ್ಪರ್ಧಿ ರಾಜಣ್ಣ ವಿರುದ್ಧ ಎಂಟು ಮತಗಳ ಅಂತರದಿಂದ ಹಾಗೂ ಉಪಾಧ್ಯಕ್ಷರಾಗಿ ನಂದಿನಿ ರಮೇಶ್ ಅವರು ಹತ್ತು ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಉಳಿದೆಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಅವಿರೋಧವಾಗಿ ಆಯ್ಕೆಯಾಗಿದ್ದು, ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕುಡುವತಿ ಗ್ರಾಮದ ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ನಂದಿನಿ ದೇವರಾಜ್, ದೊಡ್ಡಮರಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬೀಡಗಾನಹಳ್ಳಿ ಬಿಎಂಕೆ ಮಂಜುನಾಥ್, ಉಪಾಧ್ಯಕ್ಷರಾಗಿ ವರಮಲ್ಲೇನಹಳ್ಳಿ ನಾಗವೇಣಿ ಶಿವಕುಮಾರ್, ಅಜ್ಜವಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನಾಯನಹಳ್ಳಿ ಲಕ್ಷ್ಮಮ್ಮ ಹನುಮಂತಪ್ಪ, ಶಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಾದೇನಹಳ್ಳಿ ಮಂಜುನಾಥರೆಡ್ಡಿ, ಉಪಾಧ್ಯಕ್ಷರಾಗಿ ಜಿ.ರವಿ ಆಯ್ಕೆಯಾಗಿರುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಧಿಕಾರ ವಹಿಸಿಕೊಂಡ ಎಲ್ಲಾ ಅಧ್ಯಕ್ಷ -ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿಗಳಲ್ಲಿಯೂ ಸಹ ಪಕ್ಷ ಅಧಿಕಾರಕ್ಕೆ ಬರಲಿದ್ದು, ಗ್ರಾಮಮಟ್ಟದಲ್ಲಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸಮಗ್ರ ಗ್ರಾಮೀಣಾಭಿವೃದ್ಧಿಗೆ ನಾಂದಿ ಹಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.