Savitha Mallikarjun Bengaluru
ಬೆಂಗಳೂರು: ಸರಳ ಜೀವನ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ಸಿಗುವುದನ್ನು ಅನುಭವಿಸುವ ಮೂಲಕ ನಾವು ಸಂತೋಷವಾಗಿರಬೇಕು ಎಂದು ಇನ್ಫೋಸಿಸ್ ಪ್ರಿನ್ಸಿಪಲ್ ಕನ್ಸಲ್ಟೆಂಟ್ ವೀಣಾ ಶಿವಣ್ಣ ಹೇಳಿದರು.
ಬೆಂಗಳೂರಿನ ಭೂಪಸಂದ್ರದಲ್ಲಿರುವ ಸುಮನ ಆಪ್ತ ಸಲಹಾ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಆಪ್ತ ಸಂಬಂಧಗಳ ಜೊತೆ ಸಮಯವನ್ನು ಕಳೆಯುವುದು, ಹಿರಿಯರಿಂದ ಜ್ಞಾನ ಪಡೆದುಕೊಳ್ಳುವುದು, ಹೀಗೆ ಕೈಗೆಟುಕುವುದರನ್ನು ಪಡೆದುಕೊಂಡು ಆನಂದಿಸಿ ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಬಹುದು ಎಂದರು.
ಮುಖ್ಯ ಅತಿಥಿಯಾಗಿ ವೃತ್ತಿಪರ ಮಾಸ್ಟರ್ ಮೈಂಡ್ ತರಬೇತುದಾರರಾದ ವಂದನಾ ಶಾಸ್ತ್ರಿ ಮಾತನಾಡಿ; ಮನಸ್ಸಿನ ಇಚ್ಛಾಶಕ್ತಿ, ಕ್ರಿಯಾಶಕ್ತಿಗಳನ್ನು ಜಾಗೃತಗೊಳಿಸಿಕೊಂಡು ಅದರಿಂದ ಎಂತಹ ಸಾಧನೆಯನ್ನಾದರೂ ಮಾಡಬಹುದು. ಮಾನಸಿಕ ಶಕ್ತಿ ಹಾಗೂ ದೃಢತೆಯು ದೈಹಿಕ ನ್ಯೂನತೆಗಳನ್ನು ಮೀರಿದ್ದು. ಹಾಗಾಗಿಯೇ ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪೀಪಲ್ ಟ್ರೀ ಸೂಪರ್ ಸ್ಪೆಷಾಲಿಟಿ ಸೈಕಿಯಾಟ್ರಿ ಆಸ್ಪತ್ರೆಯ ಸಿಎಒ ಮತ್ತು ಮೈಂಡ್ ಕೇರ್ ವಿಭಾಗದ ಮುಖ್ಯಸ್ಥ ಡಾ. ಸತೀಶ್; ನಕಾರಾತ್ಮಕ ಯೋಚನೆಗಳು ವ್ಯಕ್ತಿತ್ವದ ಮೇಲೆ ಬೀರುವ ಪರಿಣಾಮಗಳು, ಸೂಕ್ಷ್ಮತೆಗಳನ್ನು ಮನಸ್ಸಿಗೆ ಮುಟ್ಟುವಂತೆ ವಿವರಿಸಿದರು.
ಜತೆಗೆ; ತಮ್ಮ ಬಳಿ ಸಲಹೆ ಹಾಗೂ ಮಾರ್ಗದರ್ಶನಕ್ಕಾಗಿ ಬಂದ ಕೆಲವರ ಮನಸ್ಥಿತಿಯ ಉದಾಹರಣೆಗಳನ್ನು ನೀಡಿ, ಹೇಗೆ ನಮ್ಮ ಭಾವನೆಗಳ ನಿಯಂತ್ರಣ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಮೈಂಡ್‌ಫುಲ್‌ನೆಸ್ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟು ಅನುಸರಿಸುವಂತೆ ಸಲಹೆ ನೀಡಿದರು.
- ʼಸುಮನʼ ದ್ವಿತೀಯ ವಾರ್ಷಿಕೋತ್ಸವದ ಕೆಲ ದೃಶ್ಯಗಳು.
ಯುಕ್ತಾ ಅವರ ಗಣೇಶ ಸ್ತುತಿಯೊಂದಿಗೆ ಶುಭಾರಂಭವಾಯಿತು. ವಿಶೇಷವಾಗಿ ಮನಸ್ಸಿನ ಭಾವನೆಗಳಿಗೆ ಸಂಬಂಧಿಸಿದ ಭಾವಗೀತೆಗಳ ಗಾಯನವನ್ನು ಗ್ರೀಷ್ಮಾ ಹಾಗೂ ಕವಿತಾ ನಡೆಸಿಕೊಟ್ಟರು. ಸುಮನ ನಡೆದು ಬಂದ ಹಾದಿಯ ಬಗ್ಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅರುಣಾ ಭಾಸ್ಕರ್ ಮಾಹಿತಿ ನೀಡಿದರು.
ಉಪನ್ಯಾಸಕ ರಮೇಶ್ ಬಾಳಿಕಾಯಿ ಮಾತನಾಡಿ; ಹವ್ಯಾಸಗಳಿಂದ ನಮ್ಮ ಮನಸ್ಸನ್ನು ಸಕಾರಾತ್ಮಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದರು. ಕೌನ್ಸೆಲಿಂಗ್ ಎನ್ನುವುದು ಯಾರಿಗೆ ಅವಶ್ಯಕವಾಗಿದೆ, ಯಾವೆಲ್ಲಾ ಸಮಯದಲ್ಲಿ ಇದು ಬೇಕಾಗುತ್ತದೆ ಎಂಬ ಬಗ್ಗೆ ನೀಲಾಂಬಿಕಾ ಗಂಗಾಧರ್ ಮಾತನಾಡಿದರು.
ಸುಮನ ಸಂಸ್ಥೆಯ ಸಂಸ್ಥಾಪಕಿ ಡಿ. ಯಶೋದಾ ಅವರು ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು. ಸವಿತಾ ಕಾರ‍್ಯಕ್ರಮವನ್ನು ನಿರೂಪಿಸಿದರು. ಗಣ್ಯರು, ಕುಟುಂಬದ ಹಿರಿಯರು, ಕಾರ‍್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರನ್ನೂ ಪ್ರಣತಿ ವಂದಿಸಿದರು.