ಮೀಸಲು ಅರಣ್ಯ-ಕೆರೆಗೆ ವಿಷಪ್ರಾಷಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಿಕೆನ್ಯೂಸ್ ನೌ ವರದಿ ಬಂದ ಮರುದಿನವೇ ಗುಡಿಬಂಡೆ ಅರಣ್ಯಾಧಿಕಾರಿಗಳ ಕೈಸೇರಿದ ಲ್ಯಾಬ್ ವರದಿ: ಆರೋಪಿಗಳ ವಿರುದ್ಧ ಶೀಘ್ರವೇ ಆರೋಪ ಪಟ್ಟಿ
CkNewsNow Impact
By GS Bharath Gudibande
ಗುಡಿಬಂಡೆ: ತಾಲೂಕಿನ ಮೀಸಲು ಅರಣ್ಯ ಪ್ರದೇಶ ಹಾಗೂ ವಾಟದ ಹೊಸಹಳ್ಳಿ ಕೆರೆಗೆ ವಿಷಪ್ರಾಷಣ ಮಾಡಿದ ಆಘಾತಕಾರಿ ಘಟನೆಗೆ ತಾರ್ಕಿಕ ಅಂತ್ಯ ಕಾಣುವ ಸಮಯ ಹತ್ತಿರವಾಗಿದ್ದು, ಟ್ಯಾಂಕರ್ʼನಲ್ಲಿದ್ದ ವಿಷಕಾರಿ ತ್ಯಾಜ್ಯದ ಪ್ರಯೋಗಾಲಯದ ಪರೀಕ್ಷೆ ವರದಿ ಅರಣ್ಯಾಧಿಕಾರಿಗಳ ಕೈಸೇರಿದೆ.
ಮೂರು ತಿಂಗಳ ಬಳಿಕ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅರಣ್ಯ ಇಲಾಖೆಗೆ ಕೇಂದ್ರ ಪರಿಸರ ಪ್ರಯೋಗಾಲಯದ ವರದಿ ಸಲ್ಲಿಸಿದ್ದು, ಈಗ ಅರಣ್ಯ ಇಲಾಖೆ ಅಧಿಕಾರಿಗಳು ವಿಷಕಾರಿ ಟ್ಯಾಂಕರ್ ಬಗ್ಗೆ ಕ್ರಮಕ್ಕೆ ಮುಂದಾಗಿದ್ದಾರೆ.
ತಾಲೂಕಿನ ಅರಣ್ಯ ಪ್ರದೇಶದ ಸರ್ವೆ ನಂ.43 ಹಾಗೂ ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ಸಬ್ಬನಹಳ್ಳಿ ಸರ್ವೆ ನಂ.4ರಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಹೊರಹಾಕಲಾಗುವ ಅತ್ಯಂತ ವಿಷಕಾರಿ ಕೆಮಿಕಲ್ ನೀರನ್ನು ಸಮೀಪದ ಕೆರೆ ಹಾಗೂ ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡುವಾಗ ರೆಡ್ ಹ್ಯಾಂಡ್ ಆಗಿ ಟ್ಯಾಂಕರ್ ಸಮೇತ ಸಿಕ್ಕಿಬಿದ್ದ ಪ್ರಕರಣಕ್ಕೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ವಿಷಕಾರಿ ಟ್ಯಾಂಕರ್ ಸಿಕ್ಕಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಥಮ ವರ್ತಮಾನ ಮಾಹಿತಿ (ಎಫ್.ಐ.ಆರ್) ದಾಖಲಿಸಿದ್ದರು. ನಂತರ ತಾಲೂಕು ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ಅವರು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ವಿಜಯಲಕ್ಷ್ಮೀ ಅವರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ಮಾಡಿ ಪಂಚನಾಮೆ (ಮಹಜರ್) ನಡೆಸಿ ಕೆಮಿಕಲ್ ನೀರಿನ ಸ್ಯಾಂಪಲ್ ಪಡೆದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರಿನ ಕೇಂದ್ರ ಪರಿಸರ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದರು.
ವರದಿಯಲ್ಲಿ ಸ್ಫೋಟಕ ಅಂಶಗಳು
ಕೇಂದ್ರ ಪರಿಸರ ಪ್ರಯೋಗಾಲಯವು ಕೆಮಿಕಲ್ ನೀರಿನಲ್ಲಿ ಎಷ್ಟು ಪ್ರಮಾಣದ ಹಾನಿಕಾರಕ ಕೆಮಿಕಲ್ ಸಂಗ್ರಹಣೆಯಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದೆ. ಈಗ ಅರಣ್ಯ ಇಲಾಖೆಯು ಅಪರಾಧಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಿದೆ. ನವೆಂಬರ್ 12ರಂದೇ ಕೇಂದ್ರ ಪರಿಸರ ಪ್ರಯೋಗಾಲಯದಿಂದ ಈ ವರದಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಕೈಸೇರಿದ್ದು, ಹೆಚ್ಚೂ ಕಡಿಮೆ ಇಪ್ಪತ್ತು ದಿನಗಳ ನಂತರ ವರದಿಯನ್ನು ಗುಡಿಬಂಡೆ ಅರಣ್ಯಾಧಿಕಾರಿಗಳಿಗೆ ನೀಡಿರುವ ಬಗ್ಗೆ ನಾನಾ ರೀತಿಯ ಅರಣ್ಯಾಧಿಕಾರಿಗಳಿಗೆ ನೀಡಲಾಗಿದೆ. ಇದೇ ವೇಳೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ವಿಜಯಲಕ್ಷ್ಮೀ ವರ್ಗಾವಣೆಯಾಗಿದ್ದಾರೆ.
ಮೂರು ತಿಂಗಳಾದರೂ ಕೆಮಿಕಲ್ ನೀರಿನ ವರದಿ ನೀಡದ ಬಗ್ಗೆ ಸಿಕೆನ್ಯೂಸ್ ನೌ ವೆಬ್ತಾಣವು ನವೆಂಬರ್ ೨೮ರಂದು ವರದಿ ಮಾಡಿತ್ತು. ಈ ವರದಿ ಬಂದ ಮರುದಿನವೇ ಪ್ರಯೋಗಾಲಯದ ವರದಿ ಗುಡಿಬಂಡೆ ಅರಣ್ಯಾಧಿಕಾರಿಗಳ ಕೈಸೇರಿದೆ!
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಉಳಿದಂತೆ, ಕೇಂದ್ರ ಪ್ರಯೋಗಾಲಯದಿಂದ ಬಂದಿರುವ ವರದಿಗೆ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ.ರೂಪಾದೇವಿ ಅವರು ಸಹಿ ಹಾಕಿದ್ದು, ಅವರು ನೀಡಿರುವ ವರದಿಯಲ್ಲಿ ಎಲ್ಲ ತಾಂತ್ರಿಕ ಅಂಶಗಳೂ ಇವೆ.
ಈಗ ಗುಡಿಬಂಡೆ ವಲಯ ಅರಣ್ಯಾಧಿಕಾರಿಗಳು ಆರೋಪಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 24 (ಸಿ) (ii), 24 (1)ರ ಅಡಿಯಲ್ಲಿ ಕಳೆದ ಅಗಸ್ಟ್ 29ರಂದು ಎಫ್.ಐ.ಆರ್ ದಾಖಲಿಸಿದ್ದಾರೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಪ್ರಯೋಗಾಲಯದ ವರದಿ ಆಧಾರದ ಮೆರೆಗೆ ಆರೋಪಗಳನ್ನು ವಿಚಾರಣೆ ಮಾಡಿ, ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಈಗಾಗಲೇ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ವರದಿಯನ್ನು ನಮಗೆ ನೀಡಿದ್ದಾರೆ. ನಾವು ಆ ವರದಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ, ಅದರಲ್ಲಿ ಕೆಲ ಅಘಾತಕಾರಿ ಅಂಶಗಳೂ ಇವೆ.
ಚಂದ್ರಶೇಖರ್, ಗುಡಿಬಂಡೆ ವಲಯ ಅರಣ್ಯಾಧಿಕಾರಿ