ಎಟಿಎಂ ಟೀಕೆಗೆ ತಿರುಗೇಟು; ಜೈ ಶಾ ಅರ್ಹತೆ ಬಗ್ಗೆ ಮತ್ತೆ ಪ್ರಶ್ನೆ; ಸಂಕ್ರಾಂತಿ ನಂತರ ಜೆಡಿಎಸ್ ಎರಡನೇ ಪಟ್ಟಿ
ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಟ ನನ್ನ ಮುಂದೆ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ಮಂಡ್ಯ ಭೇಟಿ ವೇಳೆ ಜೆಡಿಎಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡಿದ್ದ ಅಮಿತ್ ಶಾ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು.
ಜೆಡಿಎಸ್ ಗೆದ್ದರೆ ಕುಟುಂಬದ ಎಟಿಎಂ ಆಗುತ್ತದೆ ಎನ್ನುವ ಶಾ ಹೇಳಿಕೆ ಬಗ್ಗೆ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಅವರು; ಗೃಹ ಸಚಿವರ ಹೇಳಿಕೆಗೆ ಉತ್ತರ ನೀಡಿದ್ದೇನೆ. ಆದರೆ ನಾನು ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ. ಯಾವುದಾದರೂ ಒಂದು ಪ್ರಕರಣದಲ್ಲಿ ನಾಡಿನ ಸಂಪತ್ತುನ್ನು ಎಟಿಎಂ ಆಗಿ ದುರ್ಬಳಕೆ ಮಾಡಿಕೊಂಡಿದ್ದರೆ ರಾಜ್ಯದ ಜನತೆ ಮುಂದಿಡಿ ಎಂದು ಅವರು ಸವಾಲು ಹಾಕಿದರು.
ಬಿಜೆಪಿಗೆ ಇಡೀ ಕರ್ನಾಟಕವೇ ಎಟಿಎಂ ಆಗಿದೆ. ಎಲ್ಲೆಲ್ಲೂ ಪರ್ಸಂಟೇಜ್ ವ್ಯವಹಾರ ನಡೆಯುತ್ತಿದೆ. 40% ಪರ್ಸಂಟ್ ವ್ಯವಹಾರ ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಇದು ಅಮಿತ್ ಶಾ ಅವರಿಗೆ ಗೊತ್ತಿಲ್ಲವೆ? ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.
ಜೈ ಶಾ ಅರ್ಹತೆ ಏನು?
ಅಮಿತ್ ಶಾ ಮಗ ಜೈ ಶಾಗೆ ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಇದ್ದಾರೆ. ಕ್ರಿಕೆಟ್ ಗೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರು, ಬಿಸಿಸಿಐನಲ್ಲಿ ಬಂದುಂಕೂರಳು ಜೈ ಶಾಗೆ ಏನು ಅರ್ಹತೆ ಇದೆ ಎನ್ನುವುದನ್ನು ಎಟಿಎಂ ಆರೋಪ ಮಾಡಿರುವ ಅಮಿತ್ ಶಾ ದೇಶಕ್ಕೆ ಹೇಳಬೇಕು ಎಂದು ಒತ್ತಾಯ ಮಾಡಿದರು.
ಇವರು ಹೆಚ್.ಡಿ.ದೇವೇಗೌಡರ ಉಗುರಿಗೆ ಸಮ ಆಗಲ್ಲ. ದೇವೇಗೌಡರ ಬಗ್ಗೆ ಮಾರಾಡುವ ನೈತಿಕತೆ ಅಮಿತ್ ಶಾಗೆ ಇಲ್ಲ. ಆದರೂ ಸುಖಾಸುಮ್ಮನೆ ನಮ್ಮ ಕುರಿತು ಮಾತನಾಡುತ್ತಿದ್ದಾರೆ ಎಂದ ಅವರು, ಬಿಜೆಪಿಯವರು ಕನ್ನಡಿಗರ ಎಟಿಎಂನ್ನು ಬಿಜೆಪಿ ಲೂಟಿ ಮಾಡಿದ್ದಾರೆ. ಅದರ ಬಗ್ಗೆ ಅಮಿತ್ ಶಾ ಮಾತನಾಡಲಿ ಎಂದು ಚಾಟಿ ಬೀಸಿದರು.
ಬಿಜೆಪಿ ಜತೆ ಸರಕಾರ ಮಾಡಲು ನಾನೇನು ಅರ್ಜಿ ಹಾಕಿಕೊಂಡು ಇವರ ಮನೆ ಮುಂದೆ ಹೋಗಿದ್ದೇನಾ? ಹೊಂದಾಣಿಕೆ ಮಾಡಿಕೊಳ್ಳಿ ಅಂತ ಕಾಂಗ್ರೆಸ್ ಮತ್ತು ಬಿಜೆಪಿ ಮನೆ ಬಾಗಿಲಿಗೆ ಹೋಗಿದ್ದೇನಾ? ಇವರೇ ಬಂದರು, ಸರಕಾರ ಮಾಡೋಣ ಎಂದು ದುಂಬಾಲು ಬಿದ್ದರು ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ನನ್ನ ಗುರಿ ಸ್ಪಷ್ಟವಾಗಿದೆ. 123 ಸಂಖ್ಯೆ ದಾಟಲು ದಿನದ 20 ಗಂಟೆ ದುಡಿಯುತ್ತೇನೆ. ನನ್ನ ಪಂಚರತ್ನ ರಥಯಾತ್ರೆ ಹೇಗೆ ಆಗುತ್ತಿದೆ ಎನ್ನುವುದು ಬಿಜೆಪಿಗೆ ಗೊತ್ತಾಗಿದೆ. ಜೆಡಿಎಸ್ ಪಕ್ಷದ ಬಗ್ಗೆ ಅವರಿಗೆ ಹೆದರಿಕೆ ಆರಂಭವಾಗಿದೆ. ಅದಕ್ಕೆ ಹೀಗೆ ಮಾತಾಡುತ್ತಿದ್ದಾರೆ. ಅವರು ವಿನಾಕಾರಣ ಕಂಠ ಶೋಷಣೆ ಮಾಡಿಕೊಂಡರೆ ನನಗೇನು? ಎಂದು ಅವರು ಹೇಳಿದರು.
ಅಮಿತ್ ಶಾ ಏನು ಎನ್ನುವುದು ಕನ್ನಡಿಗರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಅರ್ಥವಾಗಿದೆ. ಈ ತನಕ 800 ಶಾಸಕರು, ನಾಯಕರನ್ನು ಆಪರೇಷನ್ ಕಮಲ ಮಾಡಿದ್ದಾರೆ. ಐಟಿ, ಇಡಿ ಗುಮ್ಮನ್ನು ಬಿಟ್ಟು ಹೆದರಿಸುತ್ತಾರೆ. ಹೀಗೆ ನನ್ನನ್ನು ಹೆದರಿಸಲು ಅವರಿಗೆ ಸಾಧ್ಯ ಇಲ್ಲ. ನಾನು ಹಾಗೆ ಹೆದರುವ ಪೈಕಿ ಅಲ್ಲ ಎಂದು ನೇರ ಮಾತುಗಳಲ್ಲಿ ಹೇಳಿದರು ಅವರು.
ಅಮಿತ್ ಶಾ ಅವರು ಐಟಿ, ಇಡಿ ತೆಗೆದುಕೊಂಡು ಬರಲಿ, ಐಟಿ, ಇಡಿ ಗದಾಪ್ರಹಾರದೊಂದಿಗೆ ಕರೆದುಕೊಂಡು ಬರಲಿ, ನಾನು ಹೆದರಲ್ಲ, ಏಕೆಂದರೆ ನಾನು ಸ್ವಚ್ಛವಾಗಿದ್ದೇನೆ. ಮನೀಷ್ ಸಿಸೋಡಿಡಾ, ಕೆ.ಚಂದ್ರಶೇಖರ ರಾವ್ ಮುಂತಾದವರ ಮೇಲೆ ಇದೇ ಗದಾಪ್ರಹಾರ ಮಾಡುತ್ತಿದ್ದಾರೆ. ಇಲ್ಲಿಗೂ ಬರಲಿ, ನಾನೇನು ಹೆದೆಲ್ಲ. ಭ್ರಷ್ಟ ಕುಟುಂಬ ಅಂತ ಹೇಳೋದಿಕ್ಕೆ ಯಾವುದಾದರೂ ನಿದರ್ಶನ ನೀಡಲಿ. ಬಿಜೆಪಿಯಲ್ಲಿ ಎಷ್ಟು ಕುಟುಂಬಗಳಿವೆ, ಎಷ್ಟು ಎಟಿಎಂ ಗಳಿವೆ ಎನ್ನುವುದು ನನಗಿಂತ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದರು ಮಾಜಿ ಮುಖ್ಯಮಂತ್ರಿಗಳು.
ನಮ್ಮ ಎಟಿಎಂ ಜನತೆಯ ಕಷ್ಟಕ್ಕೆ ಕೊಟ್ಟಿದ್ದೇವೆ. ಅದು ಅಮಿತ್ ಶಾ ತಿಳಿದುಕೊಳ್ಳಲಿ. ಬಿಜೆಪಿಯವರ ಎಟಿಎಂ ಕ್ರಿಪ್ಟೊ ಕರೆನ್ಸಿ, ಡಾಲರ್ ಆಗಿದೆ. ಅವರು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ನನಗೂ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದರು.
ಅಮಿತ್ ಶಾ ಅವರು ನನ್ನ ಪಕ್ಷವನ್ನು ಕೆಣಕಿದ್ದಾರೆ. ಉತ್ತರ ಕೊಡದೆ ಬಿಡುವುದಿಲ್ಲ. 2018ರಲ್ಲಿ ಕಾಂಗ್ರೆಸ್ ಜತೆ ಸೇರಿ ಸರಕಾರ ಮಾಡಿದ್ದಾಗ, ಕಾಂಗ್ರೆಸ್ ಜತೆ ಸರಕಾರ ಮಾಡುವುದು ಬೇಡ. ಹೊಸದಾಗಿ ಚುನಾವಣೆಗೆ ಹೋಗಿ ಎಂದು ಪ್ರಧಾನಿ ಮೋದಿ ಹೇಳಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಜೆಡಿಎಸ್ ಮನೆ ಬಾಗಿಲು ತಟ್ಟಿದ್ದರು ಎಂದು ಎಂದು ಮಾಜಿ ಮುಖ್ಯಮಂತ್ರಿ ಅವರು ಅಮಿತ್ ಶಾ ಅವರಿಗೆ ಹಳೆಯದನ್ನು ನೆನಪು ಮಾಡಿಕೊಟ್ಟರು.
ಜೆಡಿಎಸ್ ಪವರ್ ಪುಲ್
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್ ಗಿಂತ ಜೆಡಿಎಸ್ ಪ್ರಬಲವಾಗಿದೆ. ಅಮಿತ್ ಶಾ ಮಾತುಗಳನ್ನು ನೋಡಿದರೆ ಇದು ವೇದ್ಯವಾಗುತ್ತದೆ. ವಿಧಾನಸೌದದ ಮೊಗಸಾಲೆಯಲ್ಲಿ ಬಿಜೆಪಿ ಶಾಸಕರೇ ಹೀಗೆ ಮಾತನಾಡುತ್ತಿದ್ದಾರೆ. ಬೇಕಾದರೆ ಅಮಿತ್ ಶಾ ಕೇಳಿಕೊಳ್ಳಲಿ ಎಂದು ಕುಮಾರಸ್ವಾಮಿ ಅವರು ಕಾಲೆಳೆದರು.
ಕರ್ನಾಟಕದಲ್ಲಿ ಕಮಲದ ಆಯುಸ್ಸು ಮುಗಿಯುತ್ತಾ ಬಂತು, ಕಮಲ ಮುದುಡುತ್ತಿದೆ. ಈ ಹತಾಶೆಯಿಂದ ಅಮಿತ್ ಶಾ ಹೀಗೆ ಮಾತನಾಡುತ್ತಿದ್ದಾರೆ. ಜೆಡಿಎಸ್ ಎಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೊ ಎಂದು ಹೆದರಿದ್ದಾರೆ ಅಮಿತ್ ಶಾ. ಇದು ಅಮಿತ್ ಶಾ ಡಬಲ್ ಸ್ಟ್ಯಾಂಡರ್ಡ್ ತೋರಿಸುತ್ತದೆ. 2023ರಲ್ಲಿ ನಾವೇ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬರಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಕ್ರಾಂತಿ ನಂತರ ಎರಡನೇ ಪಟ್ಟಿ
ಈಗಾಗಲೇ ನಾವು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಅಮಿತ್ ಶಾ ಅವರ ಪಕ್ಷ ಪಟ್ಟಿ ಮಾಡಲು ಇನ್ನೂ ತಿಣುಕಾಡುತ್ತಿದೆ. ಸಂಕ್ರಾಂತಿ ನಂತರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಇದೇ ವೇಳೆ ಅವರು ಹೇಳಿದರು.
ಬೊಮ್ಮಾಯಿ ನಾಮಕಾವಸ್ತೆ ಸಿಎಂ
ಬಸವರಾಜ ಬೊಮ್ಮಾಯಿ ಅವರು ಹೆಸರಿಗೆ ಮಾತ್ರ ಮುಖ್ಯಮಂತ್ರಿ, ಆದರೆ ಅಧಿಕಾರ ಚಲಾಯಿಸುವುದು ದೆಹಲಿ ಬಿಜೆಪಿ ಹೈಕಮಾಂಡ್. ಅವರು ಕೇವಲ ನಾಮಕಾವಸ್ತೆ ಸಿಎಂ ಎಂದು ಕುಟುಕಿದ ಮಾಜಿ ಮುಖ್ಯಮಂತ್ರಿ ಅವರು; ವೀರಶೈವ, ಒಕ್ಕಲಿಗ ಸಮಾಜಕ್ಕೆ ಮೀಸಲಾತಿಯ ಹೂ ಮುಡಿಸಿದ್ದಾರೆ ಬಿಜೆಪಿಯವರು. ಅದು ಮುಂದೆ ಬಿಜೆಪಿಗೆ ತಿರುಗುಬಾಣ ಆಗಲಿದೆ ಎಂದು ಅವರು ತಿಳಿಸಿದರು.
ಕೆಎಂಎಫ್ ವಿಲೀನ ಹೇಳಿಕೆಗೆ ಕಿಡಿ
ಕೆಎಂಎಫ್ ಇನ್ನು ಮುಂದೆ ಅಮುಲ್ ಜತೆ ಕೆಲಸ ಮಾಡಬೇಕು ಎಂದರೆ ಏನು ಅರ್ಥ? ಕೆಎಂಎಫ್ ಮತ್ತು ಅಮುಲ್ ಜತೆ ಮಾಡಿ ಕಾರ್ಪೊರೇಟ್ ಕುಳಕ್ಕೆ ಮಾರಾಟ ಮಾಡುವ ಹುನ್ನಾರವಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ವಿಮಾನ ನಿಲ್ದಾಣ, ಬಂದರುಗಳನ್ನೆ ಖಾಸಗಿತವರಿಗೆ ಧಾರೆ ಎರೆದಕೊಟ್ಟಿರುವ ಬಿಜೆಪಿ ಸರಕಾರ, ಕೆಎಂಎಫ್ ಅನ್ನು ಮಾರಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಎಂದು ಅವರು ಪ್ರಶ್ನಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವರಾದ ಜಿಟಿ ದೇವೇಗೌಡ, ಸಾರಾ ಮಹೇಶ್, ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಮೇಯರ್ ರವಿ ಮುಂತಾದವರು ಹಾಜರಿದ್ದರು.