ಬೆಳಗ್ಗೆ 2, ರಾತ್ರಿ 1 ಪಾಳಿಯಲ್ಲಿ ವಿದ್ಯುತ್ ಪೂರೈಕೆ
ಬೆಂಗಳೂರು: ಅನಧಿಕೃತ ಲೋಡ್ ಶೆಡ್ಡಿಂಗ್ ನಿಂದಾಗಿ ರೈತರು, ಪ್ರತಿಪಕ್ಷಗಳ ಆಕ್ರೋಶಕ್ಕೆ ತುತ್ತಾಗಿದ್ದ ರಾಜ್ಯ ಸರಕಾರ ಕೊನೆಗೂ ಎಚ್ಚೆತ್ತುಕೊಂಡಿದೆ.
ರಾಜ್ಯದ ರೈತರ ಹಿತ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ಅವರ ಸೂಚನೆಯಂತೆ ರೈತರಿಗೆ 5 ತಾಸು ನಿರಂತರ ವಿದ್ಯುತ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ನಡೆಸಿದ್ದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿದ್ದ ಸೂಚನೆಗಳ ಪಾಲನೆ ಕುರಿತು ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ಸೋಮವಾರ ಸಭೆ ನಡೆಸಿದ ನಂತರ, ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಮಾಹಿತಿ ನೀಡಿದರು.
“ರೈತರಿಗೆ ತೊಂದರೆಯಾಗದಂತೆ ಸತತ 5 ತಾಸು ವಿದ್ಯುತ್ ಒದಗಿಸಲು ಅಗತ್ಯ ಕ್ರಮ ವಹಿಸುವಂತೆ ಎಲ್ಲ ಎಸ್ಕಾಂ ಎಂಡಿಗಳಿಗೆ ಸೂಚಿಸಿದ್ದೇನೆ. ಬೆಳಗ್ಗೆ 2, ರಾತ್ರಿ 1 ಪಾಳಿಯಲ್ಲಿ ಅಂದರೆ ಒಟ್ಟು 3 ಪಾಳಿಯಲ್ಲಿ ವಿದ್ಯುತ್ ನೀಡಲಾಗುವುದು. ಯಾವ ಪ್ರದೇಶದಲ್ಲಿ ಯಾವ ಸಮಯದಲ್ಲಿ ವಿದ್ಯುತ್ ಇರುತ್ತದೆ ಎಂಬ ಮಾಹಿತಿಯನ್ನು ಪ್ರತಿಕೆ, ರೇಡಿಯೋ, ಎಸ್ಎಂಎಸ್ಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತದೆ” ಎಂದು ಅವರು ಹೇಳಿದರು.
“ಹಿಂದಿನ ಸರ್ಕಾರದಲ್ಲಿ ಉತ್ತಮವಾದ ಮಳೆ ಆಗಿದ್ದರೂ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ ಬಂದಿದೆ. ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಿಲ್ಲ. ಅವರು ಅಂದು ಮಾಡಿದ ತಪ್ಪಿಗೆ ನಾವಿಂದು ಸಮಸ್ಯೆ ಎದುರಿಸುತ್ತಿದ್ದೇವೆ. ದೂರುವುದು ನನ್ನ ಜಾಯಮಾನ ಅಲ್ಲ. ಆದರೆ, ನೈಸರ್ಗಿಕ ಕಾರಣದಿಂದ ಈಗ ವಿದ್ಯುತ್ ಅಭಾವ ಎದುರಾಗಿದೆ. ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು,ಕರ್ನಾಟಕ ಕತ್ತಲ್ಲಲ್ಲಿದೆ ಎನ್ನುತ್ತಿರುವುದು ತಪ್ಪು. ಪ್ರತಿಪಕ್ಷದವರು ಈ ವಿಚಾರವಾಗಿ ನಮ್ಮೊಂದಿಗೆ ಚರ್ಚೆ ನಡೆಸಿ, ಪರಿಹಾರ ಸೂಚಿಸಿದರೆ ಖಂಡಿತಾ ಅದನ್ನು ಸ್ವೀಕರಿಸುತ್ತೇವೆ”ಎಂದರು.
ಸೌರ ಪಂಪ್ ಸೆಟ್ ಬಳಕೆಯೇ ಪರಿಹಾರ
“ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್ಸೆಟ್ ಬಳಕೆಯೇ ಪರಿಹಾರ ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಸಬ್ ಸ್ಟೇಷನ್ಗಳ ಬಳಿ ಸೋಲಾರ್ ಪಾರ್ಕ್ಗಳ ಸ್ಥಾಪನೆ ಹಾಗೂ ಐಪಿ ಫೀಡರ್ ಸೋಲರೈಸೇಶನ್ ಮಾಡಲಾಗುತ್ತದೆ. ಈಗಾಗಲೇ 400 ಸಬ್ಸ್ಟೇಷನ್ಗಳನ್ನು ಗುರುತಿಸಲಾಗಿದ್ದು, 230 ಸಬ್ ಸ್ಟೇಷನ್ಗಳಿಗೆ ಟೆಂಡರ್ ಕರೆದಿದ್ದೇವೆ. ಅಲ್ಲದೇ, ಗ್ರಿಡ್ಗೆ 500 ಮೀಟರ್ಗಿಂತ ಕಡಿಮೆ ಅಂತರದಲ್ಲಿರುವ ಜಮೀನಿಗೆ ಅಲ್ಲಿಂದಲೇ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. ಸಬ್ ಸ್ಟೇಷನ್ ಪಕ್ಕದ ಭೂಮಿಯನ್ನು ಸರ್ಕಾರ ಗುತ್ತಿಗೆ ಪಡೆಯಲು ಕ್ರಮ ವಹಿಸಲಾಗಿದೆ”ಎಂದರು.
“ಕುಸುಮ್ ಬಿ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲಾಗುತ್ತಿದೆ. ಈ ಹಿಂದೆ ಯೋಜನೆಗೆ ರಾಜ್ಯದಿಂದ ಶೇ.30 ಮತ್ತು ಕೇಂದ್ರದಿಂದ ಶೇ.30 ಸಬ್ಸಿಡಿ ನೀಡಲಾಗುತ್ತಿತ್ತು. ಇತ್ತೀಚಿನ ಸಂಪುಟ ಸಭೆಯ ನಿರ್ಧಾರದಂತೆ ರಾಜ್ಯ ಸರಕಾರದ ಸಬ್ಸಿಡಿಯನ್ನು ಶೇ. 50ಕ್ಕೆ ಏರಿಸಲಾಗಿದೆ. ಯೋಜನೆಯಡಿ ಪಂಪ್, ಮೀಟರ್, ಪೈಪ್ಗಳನ್ನು ಒದಗಿಸಲಾಗುತ್ತದೆ. ಕುಸುಮ್ ಯೋಜನೆಯಡಿ 3.5 ಲಕ್ಷ ರೈತರಿಗೆ ಸಬ್ ಸ್ಟೇಷನ್ನಿಂದ ವಿದ್ಯುತ್ ಒದಗಿಸಲಾಗುವುದು. ಹಿಂದಿನ ಸರ್ಕಾರ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರೆ ಈಗ ತೊಂದರೆ ಆಗುತ್ತಿರಲಿಲ್ಲ” ಎಂದು ತಿಳಿಸಿದರು.
ದೇಶದಲ್ಲೇ ವಿದ್ಯುತ್ ಕೊರತೆ
“ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದೆ ಎಂದು ಕೇಂದ್ರ ಇಂಧನ ಸಚಿವರೇ ತಿಳಿಸಿದ್ದಾರೆ. ಬೇಸಿಗೆಯಲ್ಲಿ ಬರುವ ಬೇಡಿಕೆ ಆಗಸ್ಟ್ ತಿಂಗಳಲ್ಲೇ ದಾಖಲಾಗಿದೆ. ಮುಂಗಾರು ವೈಫಲ್ಯದಿಂದ ವಿದ್ಯುತ್ ಬೇಡಿಕೆ ಹೆಚ್ಚಿದೆ. ಹವಾಮಾನ ವೈಪರಿತ್ಯದಿಂದ ಪವನ ಹಾಗೂ ಸೌರ ಶಕ್ತಿಯ ಉತ್ಪಾದನೆಯೂ ಕುಂಠಿತವಾಗಿದೆ. ಇದರಿಂದ ಕೆಲವು ದಿನಗಳಿಂದ ವಿದ್ಯುತ್ ಸಮಸ್ಯೆಯಾಯಿತು. ಸದ್ಯ ರಾಜ್ಯದಲ್ಲಿ 1500 ಮೆ.ವಾ ಕೊರತೆ ಇದ್ದು, ಇದನ್ನು ನೀಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ,” ಎಂದರು.
ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಕ್ರಮ
ಸಾಮಾನ್ಯವಾಗಿ ಮಳೆಗಾಲದಲ್ಲಿ ವಿದ್ಯುತ್ ಬೇಡಿಕೆ ಕಡಿಮೆ ಇರುವುದರಿಂದ ಈ ಅವಧಿಯಲ್ಲಿ ಕೆಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಾರ್ಷಿಕ ನಿರ್ವಹಣೆ ಕಾರ್ಯ ನಡೆಯುತ್ತದೆ. ಹಾಗಾಗಿ ಉತ್ಪಾದನೆ ಕಡಮೆಯಾಗಿದ್ದು, ಶೀಘ್ರದಲ್ಲೇ ಉಷ್ಣ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಗುವುದು.
ರಾಜ್ಯದಲ್ಲಿನ ಶಾಖೋತ್ಪನ್ನ ಸಹ-ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನಗಳಿಂದ ವಿದ್ಯುತ್ ಪಡೆಯಲು “ರಾಷ್ಟ್ರೀಯ ವಿಪತ್ತಿನ ಅಡಿಯಲ್ಲಿ” ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಜಾರಿಗೊಳಸಲಾಗುತ್ತಿದೆ. ಇದರಿಂದ ಖಾಸಗಿ ವಿದ್ಯುತ್ ಉತ್ಪಾದಕರಿಂದ ಅವರ ಜತೆಗೆ ಒಪ್ಪಂದ ಮಾಡಿಕೊಂಡು ವಿದ್ಯುತ್ ಖರೀದಿ ಮಾಡಲಾಗುತ್ತದೆ.
ಕಲ್ಲಿದ್ದಲ್ಲು ಸಿಗುವ ಸ್ಥಳಗಳಲ್ಲಿ ಮಳೆಯಾಗಿ ಅದರ ಗುಣಮಟ್ಟ ತಗ್ಗಿದೆ. ಇಂಥ ಕಲ್ಲಿದ್ದಲ್ಲನ್ನು ಬಳಸುವುದರಿಂದ ಶಾಖೋತ್ಪನ್ನ ಯಂತ್ರಗಳು ರಿಪೇರಿಗೆ ಬರುತ್ತಿವೆ. ಹೀಗಾಗದಂತೆ ಎಚ್ಚರವಹಿಸಿ, ಕಲ್ಲಿದ್ದಲನ್ನು ಆಮದು ಮಾಡಿಕೊಂಡು, ಮಿಶ್ರಣ ಮಾಡಲಾಗುತ್ತದೆ.
ಕೂಡಗಿಯ ಉಷ್ಣ ವಿದ್ಯುತ್ ಸ್ಥಾವರದಿಂದ ಡಿ.1ರಿಂದ ವಿದ್ಯುತ್ ಪೂರೈಕೆ ಆಗಲಿದೆ. ಕೇಂದ್ರ ಗ್ರಿಡ್ನಿಂದ ವಿದ್ಯುತ್ ಖರೀದಿಸುವ ಜತೆಗೆ ಪಂಜಾಬ್, ಉತ್ತರ ಪ್ರದೇಶದಿಂದಲೂ ಪರಸ್ಪರ ವಿದ್ಯುತ್ ಕೊಟ್ಟು-ತೆಗೆದುಕೊಳ್ಳುವ ವ್ಯವಸ್ಥೆ ಆಗುತ್ತಿದೆ.
2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಪಾಪವಾಗಡ ಸೋಲಾರ್ ಪಾರ್ಕ್ಗೆ ಶೀಘ್ರದಲ್ಲೇ 10,000 ಎಕರೆ ಸೇರ್ಪಡೆಗೊಳಿಸಿ 2000 ಮೆ.ವ್ಯಾ. ಉತ್ಪಾದಿಸಲಾಗುವುದು. ಜತೆಗೆ ಗದಗ ಹಾಗೂ ಕಲಬುರಗಿಯಲ್ಲೂ ಸೋಲಾರ್ ಪಾರ್ಕ್ ಸ್ಥಾಪಿಸಲಾಗುವುದು.
2023ರ ಏಪ್ರಿಲ್ 23ರಿಂದ ಅಕ್ಟೋಬರ್ 15ರ ಅವಧಿಯಲ್ಲಿ 1102 ಕೋಟಿ ರೂ. ಮೊತ್ತದ 1627 ಎಂ.ಯೂ. ವಿದ್ಯುತ್ ಖರೀದಿಸಲಾಗಿದೆ. ಅದೇ ರೀತಿ ಇದೇ ಅವಧಿಯಲ್ಲಿ 265 ಕೋಟಿ ರೂ. ಮೊತ್ತದ 636 ಎಂ.ಯೂ ವಿದ್ಯುತ್ ಮಾರಾಟ ಮಾಡಲಾಗಿದೆ.
ಸಭೆಯಲ್ಲಿ ಇಂಧನ ಮತ್ತು ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.