ಪುರುಷರ ಮೇಲೆ ಬೀಳಲಿದೆ ಭಾರೀ ಹೊರೆ; ಶಕ್ತಿ ಯೋಜನೆ ನಷ್ಟ ತುಂಬಿಕೊಳ್ಳಲು ದರ ಏರಿಕೆಗೆ ಮೊರೆ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರವನ್ನು ಶೇ15ರಷ್ಟು ಹೆಚ್ಚಳ ಮಾಡುವಂತೆ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನೇತೃತ್ವದ ಉನ್ನತ ಮಟ್ಟದ ಸಮಿತಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.
ನಿಗಮಗಳು ಕಳೆದ 2020ರಿಂದ ಪ್ರಯಾಣ ದರ ಪರಿಷ್ಕರಣೆ ಮಾಡದೆ ಭಾರೀ ನಷ್ಟಕ್ಕೆ ಗುರಿಯಾಗಿದೆ ಎಂದು ದರ ಹೆಚ್ಚಳಕ್ಕೆ ಕಾರಣ ನೀಡಲಾಗಿದೆ.
ವಾರ್ಷಿಕ ₹3,650 ಕೋಟಿ ನಿಗಮಕ್ಕೆ ಹೊರೆಯಾಗುತ್ತಿದ್ದು, ಪ್ರಯಾಣ ದರ ಪರಿಷ್ಕರಣೆ ನಂತರ ನಷ್ಟದ ಪ್ರಮಾಣ ₹1,800 ಕೋಟಿಗೆ ಇಳಿಯುತ್ತದೆ.ಪಾರ್ಸೆಲ್ ಸೇವೆ ಅನುಷ್ಟಾನ ನಿಮಗಕ್ಕೆ ಆಗುತ್ತಿರುವ ನಷ್ಟವನ್ನು ಪ್ರತಿ ಬಾರಿಯೂ ಭರಿಸಲಾಗದು, ಸಂಪನ್ಮೂಲ ಕ್ರೋಡೀಕರಣಕ್ಕೆ ದರ ಹೆಚ್ಚಳದ ಜತೆಗೆ ಪಾರ್ಸೆಲ್ ಸೇವೆಯನ್ನೂ ಜಾರಿಗೊಳಿಸಿ, ನಿಗಮದ ಸೇವೆಗಳನ್ನು ಸಾರ್ವಜನಿಕರಿಗೆ ಪರಿಣಾಮಕರಿಯಾಗಿ ತಿಳಿಸಿ, ಸಂಸ್ಥೆಯಲ್ಲಿರುವ 200 ಎಕರೆ ಭೂಮಿಯನ್ನು ಆದಾಯ ಕ್ರೋಡೀಕರಣಕ್ಕಾಗಿ ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಸಮಿತಿ ಸಲಹೆ ಮಾಡಿದೆ ಎಂದು ಗೊತ್ತಾಗಿದೆ.
ಶಕ್ತಿ ಯೋಜನೆ ಜಾರಿ ನಂತರ ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆ 80 ಲಕ್ಷದಿಂದ 1.05 ಕೋಟಿಗೆ ಏರಿಕೆಯಾಗಿದೆ. ಅದರಲ್ಲಿ 26 ಲಕ್ಷ ಮಹಿಳೆಯರು ಸೇರಿದ್ದಾರೆ, ಸರಕಾರ ನೀಡುವ ಸಬ್ಸಿಡಿ ಜತೆಗೆ ನಿಗಮಗಳು ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚು ಒತ್ತು ನೀಡದಿದ್ದರೆ ಪ್ರಯಾಣಿಕರಿಗೆ ಮೂಲಸೌಕರ್ಯ ನೀಡಲು ಕಷ್ಟಕರವಾಗುತ್ತದೆ ಎಂದು ಸಮಿತಿ ಹೇಳಿಕೊಂಡಿದೆ.
ವಿದ್ಯುತ್ ಚಾಲಿತ ಬಸ್ ಹೆಚ್ಚು ಬಳಸಿಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರಕಾರ ರಿಯಾಯಿತಿ ದರದಲ್ಲಿ ನೀಡುವ ವಿದ್ಯುತ್ ಚಾಲಿತ ಬಸ್‌ಗಳನ್ನು ಪಡೆಯಲು ಹೆಚ್ಚು ಆದ್ಯತೆ ಕೊಡಿ. ವಾಹನಗಳಿಗೆ ಜಿಪಿಎಸ್ ಸಾಧನ ಅಳವಡಿಕೆ ಮತ್ತು ಇ-ಆಡಳಿತಕ್ಕೆ ಹೆಚ್ಚು ಒತ್ತು ಕೊಡುವಂತೆ ತಿಳಿಸಿರುವುದಲ್ಲದೆ, ನಿಗದಿತ ದಿನಗಳೊಳಗೆ ಕಾರ್ಯಕ್ರಮ ರೂಪಿಸಲು ಆದೇಶ ಮಾಡಿದೆ.
ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಅವರಲ್ಲದೆ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್, ವಿವಿಧ ಸಾರಿಗೆ ನಿಗಮಗಳ ವ್ಯವಸ್ಥಾಪಕರಾದ ವಿ.ಅನ್ಬುಕುಮಾರ್, ಆರ್.ರಾಮಚಂದ್ರನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಯಾಣ ದರ ಹೆಚ್ಚಳಕ್ಕೆ ಬಿಜೆಪಿ, ಜೆಡಿಎಸ್ ವಿರೋಧ
ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ, ಜೆಡಿಎಸ್ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಸಾರಿಗೆ ಇಲಾಖೆಯನ್ನು ಸಮಾದಿ ಮಾಡುವ ಮಟ್ಟಕ್ಕೆ ಈ ಸರಕಾರ ತಂದು ನಿಲ್ಲಿಸಿದೆ ಎಂದು ಎರಡೂ ಪಕ್ಷಗಳು ಕಿಡಿಕಾರಿವೆ.
ಸಾರಿಗೆ ಇಲಾಖೆ ನೌಕರರು ಡಿಸೆಂಬರ್ 31 ರಿಂದ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದು, ಅವರ ಬೆಂಬಲಕ್ಕೆ ಬಿಜೆಪಿ ನಿಲ್ಲಲಿದೆ. ಪ್ರಾಮಾಣಿಕ ಅಧಿಕಾರಿಗಳು ಶೇಖರಿಸಿಟ್ಟ ನಿಗಮದ ಆಸ್ತಿಯನ್ನು ಮಾರಾಟ ಮಾಡಲು ಈ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದೆ.
ಅಧಿಕಾರಿ, ಸಿಬ್ಬಂದಿಗೆ ವೇತನ ನೀಡಲು ಆಸ್ತಿ ಮಾರಾಟಕ್ಕೆ ಮುಂದಾಗಿದೆ, ಶಕ್ತಿ ಯೋಜನೆ ಜಾರಿ ನಂತರ ಸರ್ಕಾರ ಇದುವರೆಗೆ 7,401 ಕೋಟಿ ರೂ. ಕೊಡಬೇಕಿದೆ, ನಿಗಮದ ಮೇಲೆ 5,614 ಕೋಟಿ ರೂ. ಸಾಲದ ಹೊರೆ ಇದೆ. ಇಂತಹ ಸಂದಿಗ್ಧಸ್ಥಿತಿಯಲ್ಲಿ ಸರ್ಕಾರ ಮಧ್ಯೆ ಪ್ರವೇಶ ಮಾಡಿ ನಿಗಮ ಮತ್ತು ನೌಕರರನ್ನು ಉಳಿಸುವ ಬದಲು ದಿನನಿತ್ಯ ಬಡಾಯಿ ಕೊಚ್ಚಿಕೊಂಡು ತಿರುಗುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಜೆಡಿಎಸ್ ಕೂಡ ಪ್ರಯಾಣ ದರ ಏರಿಕೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರಕಾರದ ಶಕ್ತಿ ಯೋಜನೆ ಸೇರಿ ಗ್ಯಾರಂಟಿಗಳ ಹೊಡೆತಕ್ಕೆ ರಾಜ್ಯದ ಸಾರಿಗೆ ಸಂಸ್ಥೆಗಳು ದಿವಾಳಿಯತ್ತ ಮುಖಮಾಡಿದೆ. ನಾಡಿನ ಜನರ ಸಂಚಾರದ ಕೊಂಡಿಯಾಗಿರುವ ಬಿಎಂಟಿಸಿ, ಕೆಎಸ್ ಆರ್‌ಟಿಸಿ , ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿ ಒತ್ತಾಡುತ್ತಿವೆ ಎಂದು ದೂರಿದೆ.
ಖಜಾನೆಯಲ್ಲಿ ಹಣವಿಲ್ಲದೇ ಕಾಂಗ್ರೆಸ್ ಸರಕಾರ ಸಾರಿಗೆ ನೌಕರರ ಪಿಎಫ್, ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಸೇರಿದಂತೆ ಒಟ್ಟು 1,787 ಕೋಟಿ ರೂ. ಬಾಕಿ ಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದೆ. ಆರ್ಥಿಕ ಸಮಸ್ಯೆಯಿಂದ ನೊಂದಿರುವ ಸಾರಿಗೆ ನೌಕರರು ಡಿಸೆಂಬರ್ 31ರಂದು ರಾಜ್ಯದಲ್ಲಿ ಸಾರಿಗೆ ಮುಷ್ಕರಕ್ಕೆ ಕರೆ ಕೊಟ್ಟಿರುವುದು ಸರಕಾರದ ಅಸಹಾಯಕತೆಗೆ ಸಾಕ್ಷಿ ಎಂದು ಜೆಡಿಎಸ್ ಹೇಳಿದೆ.