ಗಾಲ್ವಾನ್ ಕಣಿವೆಯ ದುಷ್ಕೃತ್ಯಕ್ಕೆ ಪ್ರತಿಯಾಗಿ ಲಡಾಖ್ ನೆಲದಲ್ಲಿಯೇ ಚೀನಾಕ್ಕೆ ಮಾರಣಾಂತಿಕ ಪೆಟ್ಟು ಕೊಟ್ಟಿದ್ದ ಭಾರತ, ಈಗ ಮತ್ತೊಂದು ಮಾರಣಾಂತಿಕ ಆಘಾತವನ್ನೇ ನೀಡಿದೆ. ಅದರ ಸ್ವರೂಪ ಬೇರೆಯಷ್ಟೆ. ಜಾಗತಿಕವಾಗಿ ಆ ದೇಶವನ್ನು ಒಂಟಿ ಮಾಡುವ ಪ್ರಯತ್ನವನ್ನು ಮುಂದುವರಿಸುತ್ತಲೇ ಆರ್ಥಿಕ-ವಾಣಿಜ್ಯ ವಲಯಗಳಲ್ಲಿ ತಕ್ಕಪಾಠ ಕಲಿಸುವ ದೊಡ್ಡ ಹೆಜ್ಜೆಯನ್ನೇ ಭಾರತ ಇಟ್ಟಿದೆ. ಮುಂದೆ ಇದರ ಡೋಸ್ ಮತ್ತೂ ಹೆಚ್ಚಾಗುವ ಎಲ್ಲ ಸಾಧ್ಯತೆಗಳೂ ಇವೆ.
ಹಿಂದೆ ಬ್ರಿಟನ್ ಹೊಂದಿದ್ದ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನೇ ಆರ್ಥಿಕವಾಗಿ ಬಡದೇಶಗಳ ಮೇಲೆ ಸಾಲ, ಮೂಲಸೌಕರ್ಯ, ವ್ಯಾಪಾರ ಮುಂತಾದ ಹೆಸರುಗಳಲ್ಲಿ ಕ್ರೂರ ಗುಲಾಮಗಿರಿಯನ್ನು ಹೇರುತ್ತಿರುವ ಚೀನಾಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ ಭಾರತ.
ಅದರ ಮೊದಲ ಭಾಗವಾಗಿ ಟಿಕ್ ಟಾಕ್ ಸೇರಿ ಚೀನಾದ ಕಂಪನಿಗಳು ಭಾರೀ ಮಹತ್ವಾಕಾಂಕ್ಷೆಯಿಂದ ಡಿಸೈನ್ ಮಾಡಿದ್ದ ಆ್ಯಪ್‌ಗಳು ಆಪಲ್ ಸ್ಟೋರ್ , ಆಂಡ್ರಾಯಿಡ್ ಸೇರಿ ಎಲ್ಲ ಆಪರೇಟಿಂಗ್ ಸಿಸ್ಟಂಗಳನ್ನು ತುಂಬಿಕೊಂಡಿದ್ದವು. ಭಾರತ, ಯುರೋಪ್, ಆಫ್ರಿಕಾ, ಅಮೆರಿಕ ಒಳಗೊಂಡು ಜಗತ್ತಿನ ಆಷ್ಟೂ ದೇಶಗಳಲ್ಲಿ ಮೊಬೈಲ್ ಬಳಕೆದಾರರನ್ನು ಅಡಿಕ್ಟ್ ಮಾಡಿಕೊಂಡಿದ್ದ ಇವೆಲ್ಲವೂ ಚೀನಾ ಕಂಪನಿಗಳ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಗಳು.
ಚೀನಾ ಹೊರತುಪಡಿಸಿದರೆ ಇಡೀ ಜಗತ್ತಿನ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾದ ಭಾರತದ ಮೇಲೆ ಆ ದೇಶದ ಕಂಪನಿಗಳು ಬಹಳ ಆಸೆ ಇಟ್ಟುಕೊಂಡಿದ್ದವು. ಎಂಐ, ವೀವೋ,ಒಪ್ಪೊ ಮತ್ತಿತರೆ ಕಂಪನಿಗಳು ಭಾರತವನ್ನು ಬಹುವಾಗಿ ನೆಚ್ಚಿಕೊಂಡಿವೆ. ಆದರೆ ಯಾವಾಗ ಭಾರತ ಮೊದಲ ಹಂತವಾಗಿ ಅಷ್ಟೂ ಆ್ಯಪ್‌ಗಳಿಗೆ ಗೇಟ್ಪಾಸ್ ನೀಡಿತೋ ಅಲ್ಲಿಗೆ ಕಮ್ಯುನಿಸ್ಟ್ ಕಂಟ್ರಿ ಅಲ್ಲಾಡಿಹೋಗಿದೆ. “ಇದು ಅತ್ಯಂತ ಅನಪೇಕ್ಷಣೀಯ ಕ್ರಮ” ಎಂದು ಚೀನಾ ನೀಡಿರುವ ಮೊತ್ತಮೊದಲ ಪ್ರತಿಕ್ರಿಯೆ. ಆದರೆ ಮುಖಮುಚ್ಚಿಕೊಳ್ಳುವ ತಂತ್ರಗಳಲ್ಲಿ ಎತ್ತಿದ ಕೈ ಆಗಿರುವ ಆ ದೇಶದ ವಿದೇಶಾಂ ಇಲಾಖೆ ಕೊಟ್ಟಿರುವ ಹೇಳಿಕೆ ಮತ್ತಷ್ಟು ವಿಚಿತ್ರವಾಗಿದೆ.
ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲಿಝಿಯಾನ್ ಹೀಗೆ ಹೇಳಿದ್ದಾರೆ. “ಚೀನಾ ಸರ್ಕಾರವು ಯಾವಾಗಲೂ ತನ್ನ ಉದ್ಯಮಿಗಳಿಗೆ ಜಾಗತಿಕ ಮತ್ತು ಆಯಾ ದೇಶಗಳ ಅಂದರೆ, ಸ್ಥಳೀಯ ಕಾನೂನು-ನಿಯಮಗಳನ್ನು ಪಾಲಿಸುವಂತೆ ಸೂಚಿಸುತ್ತದೆ. ಜತೆಗೆ ಹೂಡಿಕೆದಾರರ ಹಿತಾಸಕ್ತಿ ರಕ್ಷಿಸುವುದು ಭಾರತ ಸರ್ಕಾರದ ಹೊಣೆಯಾಗಿದೆ” ಎಂದಿದ್ದಾರೆ. ಅವರ ಮಾತನ್ನು ಭಾರತವಾಗಲಿ, ದೇಶಿಯ ಮೊಬೈಲ್ ಮಾರುಕಟ್ಟೆಯಾಗಲಿ ಇನ್ನವೇ ಕೈಗಾರಿಕೋದ್ಯಮಿಗಳಾಗಿ ಕೇಳುವ ಆಸಕ್ತಿಯನ್ನೇ ತೋರಿಲ್ಲ.
ಮತ್ತೊಂದೆಡೆ ಭಾರತದ ಜಾಲತಾಣಗಳಲ್ಲಿ ಚೀನಾ ಆ್ಯಪ್‌ಗಳಿಗೆ ಭರ್ಜರಿ ಮಂಗಳಾರತಿ ಆಗುತ್ತಿದೆ. “ಟಿಕ್‌ಟಾಕ್ ಹುಟ್ಟು ಸೆಪ್ಟೆಂಬರ್ 2007. ಸಾವು 29ನೇ ಜೂನ್ 2020, ಅದು ಸತ್ತ ಸ್ಥಳ: ಭಾರತ”, “ಟಿಕ್‌ಟಾಕ್ ಹೋಯ್ತು, ನಮ್ಮಕ್ಕಳ ಪ್ರಾಣ ಉಳೀತು”, “ಟಿಕ್‌ಟಾಕ್ ಮರಗಯಾ, ದೇಶ ಬಚಗಯ”.. ಇಂಥ ಅನೇಕ ಕಾಮೆಂಡುಗಳು ಟ್ವಿಟ್ಟರ್, ಇನ್ಸಸ್ಟಾಗ್ರಾಂಗಳಲ್ಲಿ ಮಜಾ ಕೊಡುತ್ತಿವೆ. ಜತೆಗೆ ಹುಟ್ಟಿದ ಮೂರೇ ವರ್ಷಗಳಲ್ಲಿ ಸತ್ತ ಟಿಕ್ ಟಾಕ್ ಎಂದ ಸ್ಲೋಗನ್ ಕೂಡ ಮಾರ್ದನಿಸಿದೆ.
ಮೊದಲಿನಿಂದಲೂ ಬೇಡಿಕೆ ಇತ್ತು:
ಗಾಲ್ವಾನ್ ಕಣಿವೆ ಗಲಾಟೆ ಮುಂಚಿನಿಂದಲೇ ಚೀನಾ ವಸ್ತುಗಳ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿತ್ತು. ಆ ದೇಶದ ಸ್ಮಾರ್ಟ್ ಫೋನುಗಳು ಭಾರತದ ರಕ್ಷಣೆ ಹಾಗೂ ಹಿತಾಸಕ್ತಿಗೆ ತೀವ್ರ ಬೆದರಿಕೆ ಒಡ್ಡುವ ರೀತಿಯಲ್ಲಿವೆ. ಮುಖ್ಯವಾಗಿ ಭಾರತದ ಮೊಬೈಲ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ ಎಂಬ ಆರೋಪವೂ ಚೀನಾ ಮೇಲಿದೆ. ಹಾಗೆಯೇ, ವ್ಯಾಪಾರ, ವಾಣಿಜ್ಯ ಹಾಗೂ ರಕ್ಷಣಾ ಉದ್ದೇಶಗಳಿಗೆ ಈ ಮಾಹಿತಿಯನ್ನು ದುರ್ಬಳೆ ಮಾಡಿಕೊಳ್ಳುತ್ತಿದೆ ಎಂಬ ಆತಂಕವೂ ಇದೆ. ದೋಕ್ಲಾಂ ಬಿಕ್ಕಟ್ಟು ಉಂಟಾದಾಗಲೇ ಚೀನಿ ವಸ್ತುಗಳನ್ನು ಬಾಯ್ಕಾಟ್ ಮಾಡುವ ಅಭಿಯಾನ ದೇಶಾದ್ಯಂತ ಬಿರುಸಾಗಿ ಆರಂಭವಾಗಿತ್ತು. ಅದಕ್ಕೆ ಈಗ ಕ್ಲೈಮ್ಯಾಕ್ಸ್ ಟಚ್ ನೀಡಲಾಗುತ್ತಿದೆ.
ನಮಗೆ ಭಯವೇಕೆ?:
ಭಾರತದಲ್ಲಿ ಇಂಟರ್ನೆಟ್ ಬಳಕೆದಾರರಿಗೆ ಖಾಸಗಿತನವಿದೆ. ಐಪಿ ಅಡ್ರೆಸ್ಸನ್ನು ಹೈಡ್ ಮಾಡಿ ಗುರುತು, ಬಳಕೆದಾರನ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಡುವ ವ್ಯವಸ್ಥೆ ನಮ್ಮಲ್ಲಿದೆ. ಚೀನಾದಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದ್ದು, ಅಲ್ಲಿ ಈ ರೀತಿ ನಿರ್ಬಂಧಿಸುವ ಕಾನೂನು ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅಲ್ಲಿ ವ್ಯಕ್ತಿ ಸ್ವಾತಂತ್ರ್ಯ ಎಂಬುದಕ್ಕೆ ಮೂರುಕಾಸಿನ ಬೆಲೆ ಇಲ್ಲ. ಆ ದೇಶವು ಅತ್ಯಂತ ಕರಾಳವಾದ ಆನ್ಲೈನ್ ಸೆನ್ಸಾರ್ಶಿಪ್ ಹೊಂದಿದ್ದು, ತನಗೆ ಇಷ್ಟವಲ್ಲದ ಯಾವುದೇ ಸುದ್ದಿ ಹೊರಬರದಂತೆ ಸರಕಾರ ನೋಡಿಕೊಳ್ಳಲಿದೆ. ಆದರೆ ಭಾರತದಲ್ಲಿ ಇಂಥ ಯಾವುದೇ ವ್ಯವಸ್ಥೆ ಇಲ್ಲದಿರುವುದರ ಲಾಭವನ್ನು ಪಡೆಯಲು ಆ ದೇಶ ಹೊಂಚು ಹಾಕುತ್ತಿದೆ.
ಚೀನಾಗೆ ನಡುಕವೇಕೆ:
59 ಆ್ಯಪ್‌ಗಳನ್ನು ನಿಷೇಧದ ಸುದ್ದಿ ಚೀನಾದಲ್ಲಿ ಮಾರ್ದನಿಸಿದೆ. ಅಲ್ಲಿನ ಸಾಮಾಜಿಕ ಜಾಲತಾಣ ಮಾಧ್ಯಮ Weibo ದಲ್ಲಿ ಇದು ಕಳೆದ ಎರಡು ದಿನಗಳಿಂದ ಟ್ರೆಂಡಿಂಗ್ ನಲ್ಲಿದೆ. #Indiabans59Chineseapps ಹೆಸರಿನ ಹ್ಯಾಶ್ ಟ್ಯಾಗ್ Weibo ಗೋಡೆಯ ಮೇಲೆ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಭಾರತದ ನಿರ್ಧಾರದಿಂದ ಅಲ್ಲಿನ ಸಾಮಾಜಿಕ ಮಾಧ್ಯಮಗಳಲ್ಲಿ ಮೈಪರಚಿಕೊಳ್ಳಲಾಗುತ್ತಿದೆ. ಅಸಹನೆ, ಹತಾಶೆಯ ಪೋಸ್ಟುಗಳಿಂದ Weibo ತುಂಬಿಹೋಗಿದೆ. ಕೋವಿಡ್ ೧೯ರಿಂದ ಅಲ್ಲಿ ನಿರುದ್ಯೋಗ ಗಗನಮುಖಿಯಾಗಿದೆ. ಇದೀಗ ಭಾರತ ಕೊಟ್ಟ ಶಾಕಿನಿಂದ ಅದು ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.
ಭಾರತ ಸ್ಟ್ರಾಂಗು ಗುರೂ:
ಭಾರತದ ನವಮಾಧ್ಯಮ ಜಗತ್ತಿನಲ್ಲಿಯೇ ಅತಿ ದೊಡ್ಡ ಮಾಧ್ಯಮ ಕ್ಷೇತ್ರವಾಗಿದೆ. ಲಭ್ಯವಿರುವ ಮಾಹಿತಿಯಂತೆ ನಮ್ಮ ದೇಶದಲ್ಲಿ 5,000ಕ್ಕೂ ಹೆಚ್ಚು ಸುದ್ದಿಪತ್ರಿಕೆಗಳಿವೆ. 1000ಕ್ಕೂ ಹೆಚ್ಚು ಮ್ಯಾಗಝಿನ್ ಗಳಿವೆ. 450 ಸುದ್ದಿ ವಾಹಿನಿಗಳಿವೆ. 200 ಕ್ಕೂ ಹೆಚ್ಚು ನ್ಯೂಸ್ ಪೋರ್ಟಲ್ಲುಗಳಿವೆ. ಒಂದು ಅಂದಾಜಿನ ಪ್ರಕಾರ 72,000 ಕೋಟಿಯಷ್ಟು ವಾರ್ಷಿಕ ಜಾಹೀರಾತು ಆದಾಯವಿದೆ. ಚಿಕ್ಕಪ್ರಮಾಣದ ಭಾರತೀಯ ಆನ್ಲೈನ್, ಮನರಂಜನೆ ಮತ್ತು ವಿಡಿಯೋ ಮಾರುಕಟ್ಟೆ ಶರವೇಗದಲ್ಲಿ ಬೆಳೆಯುತ್ತಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿವೆ. 2020ರ ಹೊತ್ತಿಗೆ ಮಾಧ್ಯಮ- ಮನರಂಜನೆ ಕ್ಷೇತ್ರದ ಗಳಿಕೆ ಸುಮಾರು 2 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆ ಇದೆ. 2023ರ ಹೊತ್ತಿಗೆ ವಿಡಿಯೋ ಚಂದಾದಾರರ ಸಂಖ್ಯೆಯೇ 500 ಮಿಲಿಯನ್ ದಾಟಲಿದೆ. ಇದು ಜಗತ್ತಿನಲ್ಲೇ 2ನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ ಎಂದು ರಾಜ್ಯ ಐಟಿ-ಬಿಟಿ ಇಲಾಖೆಯ ಆಯುಕ್ತ ಪ್ರದೀಪ್ ಪ್ರಭಾಕರ್ ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ತಿಳಿಸಿದರು.
ಅಲ್ಲದೆ, ಭಾರತದಲ್ಲಿ ಪ್ರಸಕ್ತ 60 ಕೋಟಿ ಜನ ಇಂಟರ್ನೆಟ್ ಬಳಕೆದಾರರಿದ್ದು, ಜತೆಯಲ್ಲಿಯೇ ಸ್ಮಾರ್ಟ್ ಫೋನುಗಳ ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ. ಇದು ಮುಂದಿನ ದಿನಗಳಲ್ಲಿ ನವಮಾಧ್ಯಮಗಳ ಅದರಲ್ಲೂ ವಿಡಿಯೋ, ನ್ಯೂಸ್, ಮನರಂಜನೆ ವಿಷಯಗಳಿಗೆ ಭಾರೀ ಬೇಡಿಕೆ ಬರಲಿದೆ. ಹೊಸ ತಲೆಮಾರಿನ ಪ್ರತಿಭಾವಂತರಿಗೆ ಇದು ಸುವರ್ಣಾವಕಾಶವಾಗಲಿದೆ. ಕೋವಿಡ್ ನಂತರ ಮುದ್ರಣ ಮಾಧ್ಯಮ ಕೊಂಚ ಸಂಕಷ್ಟಕ್ಕೆ ಸಿಲುಕಿದರೂ ಅದು ಕೂಡ ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಪಟ್ಟಿದ್ದಾರೆ.
ಇಮಿಡಿಯಟ್ ಇಫೆಕ್ಟ್:
ಅತ್ತ ಜೂನ್ 29ರಂದು ಕೇಂದ್ರ ಸರಕಾರದ ಅದೇಶ ಹೂರಬೀಳುತ್ತಿದ್ದಂತೆಯೇ ಇತ್ತ ಚೀನಾದ ಆ್ಯಪ್‌ಗಳು ಭಾರತೀಯರ ಮೊಬೈಲುಗಳಿಂದ ಜುಲೈ ೧ಕ್ಕೆಲ್ಲ ಕಣ್ಮರೆಯಾಗುತ್ತಿವೆ. ಜೂ.30 ರಿಂದ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ಗಳಿಂದ ಎಲ್ಲವೂ ಕಣ್ಮರೆಯಾಗಿವೆ. ಎಲ್ಲಕ್ಕಿಂತ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿ ಅಪಾರ ಸಾವು-ನೋವು, ಸಾಮಾಜಿಕ, ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿದ್ದ ಟಿಕ್‌ಟಾಕ್ ತೀವ್ರ ಶಾಕ್ ಗೆ ಗುರಿಯಾಗಿದೆ. “ಟಿಕ್ ಟಾಕ್ ಸಂಸ್ಥೆಯು ಭಾರತದ, ಅಂದರೆ ನಮ್ಮ ಗ್ರಾಹಕರ ದತ್ತಾಂಶವನ್ನು ಚೀನಾ ಸೇರಿ ಯಾವುದೇ ವಿದೇಶದ ಜತೆ ಹಂಚಿಕೊಳ್ಳುತ್ತಿಲ್ಲ. ನಾವು ಈ ನೆಲದ ಕಾನೂನನ್ನು ಪಾಲಿಸುತ್ತೇವೆ ಮತ್ತು ಗೌರವಿಸುತ್ತೇವೆ” ಎಂದು ಆ ಕಂಪನಿಯ ಭಾರತೀಯ ಮುಖ್ಯಸ್ಥ ನಿಖಿಲ್ ಗಾಂಧಿ ಪ್ರತಿಕ್ರಿಸಿದ್ದಾರೆ.
****
ಉಳಿದ ಲೆಕ್ಕ ಹೇಗೆ?:
ನಿಷೇಧದ ಬೆನ್ನಲ್ಲೇ ಈ ಕಂಪನಿಗಳು ಹೂಡಿಕೆ ಮತ್ತಿತರೆ ಅಂಶಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಒಂದು ವೇಳೆ ಭವಿಷ್ಯದಲ್ಲಿ ಈ ಆ್ಯಪ್‌ಗಳ ಮೇಲೆ ಹೇರಿರುವ ನಿಷೇಧವನ್ನು ರದ್ದು ಮಾಡದಿದ್ದರೆ ಅವುಗಳ ಮಾಲೀಕತ್ವದ ಕಂಪನಿಗಳು ಭಾರತದಲ್ಲಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಖಚಿತ. ಹಾಗೇನಾದರೂ ಆದರೆ ಆ ಕಂಪನಿಗಳು ಹೂಡಿರುವ ಬಂಡವಾಳವನ್ನು ಹಿಂತೆಗೆಯಲಿವೆ. ಅದಕ್ಕೆ ಕೇಂದ್ರ ಸೊಪ್ಪು ಹಾಕುವ ಸಾಧ್ಯತೆ ಇಲ್ಲ.
ಇದೇ ಟಿಕ್‌ಟಾಕ್ ಆ್ಯಪ್‌ನ ಮಾಲೀಕತ್ವದ ಬೈಟ್‌ಡ್ಯಾನ್ಸ್ ಕಂಪನಿ ಭಾರತದಲ್ಲಿ 100 ಕೋಟಿ ಡಾಲರ್, ಅಂದರೆ, ಸುಮಾರು 75,500 ಕೋಟಿಯಷ್ಟು ವಿಸ್ತರಣಾ ಯೋಜನೆ ಹೊಂದಿತ್ತು. ಇದಕ್ಕಾಗಿ ಭಾರತದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲಿತ್ತು. ಈಗ ಇದೆಲ್ಲಕ್ಕೂ ತಡೆ ಬಿದ್ದಿದೆ. ಜತೆಗೆ, ವಿಚಾಟ್ ಆ್ಯಪ್‌ನ ಟೆನ್‌ಸೆಂಟ್ ಕಂಪನಿ ಭಾರತದಿಂದ ಹೊರಹೋಗುವ ನಿರೀಕ್ಷೆ ಇದೆ. ನಮ್ಮಲ್ಲಿ ಅದರ ಗೇಮಿಂಗ್ ಆ್ಯಪ್ ‘ಪಬ್‌ಜಿ’ ಬಿಟ್ಟರೆ ಬೇರೆ ಆ್ಯಪ್‌ಗಳು ಅಷ್ಟೇನೂ ಜನಪ್ರಿಯವಲ್ಲ. ಈಗಾಗಲೇ ಅದರ ‘ಕ್ಲಾಶ್ ಆಫ್ ಕಿಂಗ್ಸ್’ ಹಾಗೂ ‘ಮೊಬೈಲ್ ಲೆಜೆಂಡ್ಸ್’ ಗೇಮಿಂಗ್ ಆ್ಯಪ್‌ಗಳನ್ನು ನಿಷೇಧಿಸಿದೆ. ಜತೆಗೆ ‘ಪಬ್‌ಜಿ’ ಮೇಲೆಯೂ ನಿಷೇಧದ ತೂಗುಕತ್ತಿ ಇದೆ.
ಗ್ಲೋಬಲ್ ಟೈಮ್ಸ್ ಎಂಬ ಗೊಸುಂಬೆ:
ಇದೇ ವೇಳೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆ ಭಾರತದ ವಿರೋಧಿ ಭಾವನೆಯನ್ನು ವ್ಯಾಪಕವಾಗಿ ಹರಡುತ್ತಿದೆ. ಪ್ರತಿನಿತ್ಯವೂ ಅದು ಭಾರತದ ವಿರುದ್ಧ ಅಗ್ರಲೇಖನಗಳನ್ನು ಬರೆಯುತ್ತಿರುವ ಮಾಹಿತಿ ಇದೆ. ಇನ್ನೊಂದೆಡೆ ಬಂಡವಾಳವನ್ನು ವಾಪಸ್ ಪಡೆಯಿರಿ ಎಂದು ತನ್ನ ದೇಶದ ಉದ್ದಿಮೆದಾರರಿಗೆ ಸಲಹೆ ನೀಡುತ್ತಿದೆ. ಹೇಳೀಕೇಳಿ ಇದು ಕಮ್ಯುನಿಸ್ಟ್ ಸರಕಾರದ ಅಧಿಕೃತ ನಾಲಗೆ ಎಂದೇ ಹೇಳಬೇಕು. “ನಮ್ಮ ನೆರೆಯ ದೇಶದಲ್ಲಿ ನಮ್ಮ ದೇಶ ಮತ್ತು ನಮ್ಮ ಉತ್ಪನ್ನಗಳ ಮೇಲೆ ದಿನೇದಿನೆ ವಿರೋಧಿ ಭಾವನೆ ಹೆಚ್ಚುತ್ತಿದೆ. ನಮ್ಮ ಕಂಪನಿಗಳು ಹೂಡಿರುವ ಬಂಡವಾಳ, ಭಾರತದಲ್ಲಿ ಕೆಲಸ ಮಾಡುತ್ತಿರುವ ಚೀನಿಯರ ಸುರಕ್ಷತೆಯೂ ಆಯಾ ಕಂಪನಿಗಳ ಜವಾಬ್ದಾರಿಯಾಗಿದೆ. ನಮಗೆ ಭಾರತದ ಜತೆಗಿನ ವಹಿವಾಟು ಅನಿವಾರ್ಯವಲ್ಲ. ಆದ್ದರಿಂದ ಭಾರತದಲ್ಲಿ ಹೂಡಿರುವ ಬಂಡವಾಳವನ್ನು ತೆಗೆಯುವ ಬಗ್ಗೆ ಯೋಚಿಸಿ. ಆ ಬಂಡವಾಳವನ್ನು ಆಗ್ನೇಯ ಏಷ್ಯಾದ ಇತರೆ ದೇಶಗಳಲ್ಲಿ ಹೂಡಿಕೆ ಮಾಡಬಹುದು” ಎಂದು ಅ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಪುಸಲಾಯಿಸಿತ್ತು.
ಟಿಕ್‌ಟಾಕ್ ಕೆಲ ಕೆಟ್ಟ ನೆನಪುಗಳು:
ಟಿಕ್‌ಟಾಕ್ ವಿಡಿಯೋ ಆ್ಯಪ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಪತ್ನಿಯನ್ನು ಬೈದಿದ್ದಕ್ಕೆ ಮನನೊಂದ ಆಕೆ , ವಿಷ ಸೇವಿಸೋದನ್ನೂ ಟಿಕ್ಟಾಕ್ನಲ್ಲೇ ಹಂಚಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ತಮಿಳುನಾಡಿನ ಅರಿಯಲೂರ್ನಲ್ಲಿ ನಡೆದಿತ್ತು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಯುವಕನೊಬ್ಬ ಟಿಕ್‌ಟಾಕ್ ಬ್ಯಾಕ್ ಪ್ಲಿಪ್ ಮಾಡಲು ಹೋಗಿ ತನ್ನ ಕುತ್ತಿಗೆಯನ್ನು ಮುರಿದುಕೊಂಡಿದ್ದ. ಟಿಕ್‌ಟಾಕ್ ನಿಂದಲೇ ಜನಪ್ರಿಯವಾಗಿದ್ದ ಯುವತಿಯೊಬ್ಬಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದನ್ನು ಬಳಸುವ ಅನೇಕರು ಜನಪ್ರಿಯತೆಯ ವ್ಯಸನ, ಖಿನ್ನತೆಯಿಂದ ಬಳಲುತ್ತಿದ್ದರು ಮಾನಸಿಕ ವೈದ್ಯರೇ ಹೇಳಿದ್ದಾರೆ.
****
ಮೇಲಿನ ಚಿತ್ರ: ಟಿಕ್ ಟಾಕ್ ಬ್ಯಾನ್ ಆದ ಮೇಲೆ ಆ ಕಂಪನಿ ನೀಡಿರುವ ಹೇಳಿಕೆ.
Comments 2