ಒಂದೆಡೆ ಕೋವಿಡ್-19 ಸೋಂಕಿತರಿಗೆ ಭಯವಿಲ್ಲ, ಸರಕಾರವಿದೆ. ಧೈರ್ಯವಾಗಿರಿ ಎಂದು ಸರಕಾರ ಜನರಿಗೆ ಅಭಯ ನೀಡುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳು ಅದಕ್ಕೆ ಉಲ್ಟಾ ದಿಕ್ಕಿನಲ್ಲಿದ್ದಾರೆ. ಸೋಂಕಿತರ ಸೇವೆಗಾಗಿ ಸದುದ್ದೇಶದಿಂದ ಶುರುವಾದ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಅವ್ಯವಸ್ಥೆಯೇ ತಾಂಡವಾಡುತ್ತಿದೆ.
ಈ ಅವ್ಯವಸ್ಥೆ ಯಾವ ಪರಿ ಇದೆ ಎಂದರೆ, ಒಳಗೆ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಬಳಿಗೆ ವೈದ್ಯರಾಗಲಿ, ಅಧಿಕಾರಿಗಳಾಗಲಿ, ಇತರೆ ಅರೆ ವೈದ್ಯಕೀಯ ಸಿಬ್ಬಂದಿಯಾಗಲಿ ಸುಳಿಯುವುದೇ ಇಲ್ಲ. ನೀಡಲಾಗುತ್ತಿರುವ ಆಹಾರವನ್ನು ತಿನ್ನಲಾಗದ ಸ್ಥಿತಿ. ಇನ್ನು ಔಷಧೋಪಚಾರ, ಮೆಡಿಸಿನ್ ಮಹಿತಿ, ಸ್ವಚ್ಛತೆ, ಹಾಸಿಗೆಗಳ ನಿರ್ವಹಣೆ ಬಗ್ಗೆಯಂತೂ ಕೇಳುವ ಹಾಗೆಯೇ ಇಲ್ಲ.
ಇಡೀ ದೇಶದಲಲ್ಲಿಯೇ ಕೋವಿಡ್ ಮಹಾಮಾರಿಯನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಸ್ವತಃ ವೈದ್ಯರೂ ಆಗಿರುವ ಡಾ. ಕೆ. ಸುಧಾಕರ್ ಹೇಳಿಕೊಂಡಿದ್ದರು. ಈಗ ನೋಡಿದರೆ ಈ ಸ್ಥಿತಿ.
ಗೊತ್ತಾಗಿದ್ದು ಹೇಗೆ?:
ಬೆಂಗಳೂರಿನ ಹೊಸ ಏರ್’ಪೋರ್ಟ್ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ) ದಲ್ಲಿ ಸ್ಥಾಪಿಸಲಾಗಿರುವ 712 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರಕ್ಕೆಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದಾಗ ಇದು ಬೆಳಕಿಗೆ ಬಂದಿತು. ನಗರದ ಕೋವಿಡ್ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಅಲ್ಲಿನ ಅವ್ಯಸ್ಥೆಗಳ ಕರ್ಮಕಾಂಡವನ್ನು ಕಂಡು ಹೌಹಾರಿದ ಪ್ರಸಂಗವೂ ನಡೆಯಿತು.
ಸೋಂಕಿಗೆ ಹೆದರಿರುವ ವೈದ್ಯರು, ಕಂದಾಯ, ಬಿಬಿಎಂಪಿ ಅಧಿಕಾರಿಗಳ ಪರಮ ನಿರ್ಲಕ್ಷ್ಯದಿಂದ ರೋಗಿಗಳು ನರಕ ಸದೃಶ್ಯ ಯಾತನೆ ಅನುಭವಿಸುತ್ತಿರುವುದನ್ನು ಕಣ್ಣಾರೆ ಕಂಡ ಅವರು, ಅಧಿಕಾರಿಗಳ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮತ್ತಷ್ಟು ನಿಗಾ ಇಟ್ಟ ಸಿಕೆನ್ಯೂಸ್ ನೌ ಕಣ್ಣಿಗೆ ಮತ್ತಷ್ಟು ದೃಶ್ಯಗಳು ಬಿದ್ದವಲ್ಲದೆ, ಪ್ರತಿ ಹಂತದಲ್ಲೂ ನಿರ್ಲಕ್ಷ್ಯತೆಯ ಪಮರಮಾವಧಿ ಎದ್ದು ಕಾಣಿಸಿತು.
ಚಿಕಿತ್ಸೆ, ಔಷಧೋಪಚಾರ, ಸ್ವಚ್ಛತೆ, ಊಟದ ವ್ಯವಸ್ಥೆ, ಶೌಚಾಲಯದ ನೈರ್ಮಲ್ಯ, ಹಾಸಿಗೆಯ ಮೇಲಿನ ಬಟ್ಟೆ ಬದಲಿಸುವುದೂ ಸೇರಿದಂತೆ ಯಾವುದೇ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಅಧಿಕಾರಿಗಳು ಮತ್ತು ವೈದ್ಯರ ಅಸಡ್ಡೆಯಿಂದ ರೋಗಿಗಳು ನರಳುವಂತೆ ಆಗಿದೆ. ಇದೆಲ್ಲವನ್ನೂ ಪ್ರತ್ಯಕ್ಷವಾಗಿ ಗಮನಿಸಿದ ಡಿಸಿಎಂ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಣ್ಣೀರಿಟ್ಟ ಸೋಂಕಿತರು:
ಜಿಕೆವಿಕೆ ಆರೈಕೆ ಕೇಂದ್ರದಲ್ಲೇ ಆ ಕ್ಷಣದಲ್ಲಿಯೇ ಸೋಂಕಿತರ ಜತೆ ವಿಡಿಯೋ ಸಂವಾದ ನಡೆಸಿದ ಉಪ ಮುಖ್ಯಮಂತ್ರಿ ಮುಂದೆ ತಮಗಾಗುತ್ತಿರುವ ಅಪಮಾನ, ತೊಂದರೆಗಳನ್ನು ರೋಗಿಗಳು ಎಳೆಎಳೆಯಾಗಿ ಬಿಡಿಸಿಟ್ಟರು. ವೈದ್ಯರು ಒಳಕ್ಕೇ ಬರುತ್ತಿಲ್ಲ. ನಮ್ಮ ಹತ್ತಿರಕ್ಕೂ ಸುಳಿಯುತ್ತಿಲ್ಲ. ನಮ್ಮ ಯಾವ ಸಮಸ್ಯೆಗೂ ಸ್ಪಂದಿಸುತ್ತಿಲ್ಲ. ಪ್ರಶ್ನೆಗಳಿಗೆ ಉತ್ತರ ಕೊಡುತ್ತಿಲ್ಲ. ನಮ್ಮನ್ನು ತೀರಾ ನಿರ್ಲಕ್ಷ್ಯ, ಅಸಡ್ಡೆಯಿಂದ ನೋಡಲಾಗುತ್ತಿದೆ ಎಂದು ಕಣ್ಣೀರು ಹಾಕಿದರು.
ಸಕಾಲಕ್ಕೆ ಆಹಾರ ಮತ್ತು ಔಷಧಗಳ್ನು ಸಿಗುತ್ತಿಲ್ಲ. ಹಸಿವಿನಿಂದ ಒದ್ದಾಡಬೇಕಾದ ಸ್ಥಿತಿ ಇದೆ. ಹಾಸಿಗೆಗಳ ಮೇಲಿನ ಬೆಡ್’ಶೀಟುಗಳನ್ನು ಬದಲಿಸುತ್ತಿಲ್ಲ. ಶೌಚಾಲಯಗಳನ್ನು ಕ್ಲೀನ್ ಮಾಡಿ ದಿನಗಳೇ ಕಳೆದಿವೆ. ಶೌಚಕ್ಕೆ ಹೋಗಬೇಕಾದರೆ ಹೆದರಿಕೆಯಾಗುತ್ತಿದೆ. ಬಿಸಿನೀರಿನ ವ್ಯವಸ್ಥೆ ಇಲ್ಲ. ರೋಗದಿಂದ ನರಳುತ್ತಿರುವ ನಮ್ಮನ್ನು ಇಲ್ಲಿ ತೀರಾ ನಿಕೃಷ್ಟವಾಗಿ ನೋಡಲಾಗುತ್ತಿದೆ. ಮೊದಲೇ ಸೋಂಕಿನಿಂದ ನರಳುತ್ತಿರುವ ನಾವು ಈಗ ಮತ್ತಷ್ಟು ಡಿಪ್ರೆಷನ್ನಿಗೆ ಹೋಗುವಂತೆ ಆಗಿದೆ. ಈ ಮಾತುಗಳನ್ನು ಕೇಳಿಸಿಕೊಂಡ ಡಿಸಿಎಂ ತೀವ್ರ ವ್ಯಾಕುಲಕ್ಕೆ ಒಳಗಾದರಲ್ಲದೆ, ಎಂದೂ ಕೋಪಗೊಳ್ಳದ ಅವರು ವೈದ್ಯರು ಮತ್ತು ಅಧಿಕಾರಿಗಳ ಮೇಲೆ ಹರಿಹಾಯ್ದರು. ಜತೆಗೆ ಕೆಂಡಾಮಂಡಲಗೊಂಡರು.
ನಾಪತ್ತೆಯಾಗಿದ್ದ ಲೇಡಿ ಡಾಕ್ಟರ್!!:
ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನಿಯೋಜನೆಗೊಂಡು ಜಿಕೆವಿಕೆ ಕೋವಿಡ್ ಕೇರ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಡಿಕಲ್ ನೋಡೆಲ್ ಅಧಿಕಾರಿ ಡಾ. ಸೌಮ್ಯಾ ಎಂಬುವವರು ಡಿಸಿಎಂ ಅವರು ಆ ಕೇಂದ್ರಕ್ಕೆ ಬಂದಾಗ ಅಲ್ಲಿರಲೇ ಇಲ್ಲ. ಸ್ವಲ್ಪಹೊತ್ತಿನ ನಂತರ ಬಂದ ಅವರನ್ನು ಡಿಸಿಎಂ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮುಖ್ಯ ವೈದ್ಯೆಯಾಗಿದ್ದರೂ ಇವರು ಕೇರ್ ಸೆಂಟರಿನ ಒಳಕ್ಕೇ ಹೋಗುತ್ತಿಲ್ಲವೆಂದು ಅಲ್ಲಿನ ರೋಗಿಗಳು ದೂರಿದರು. ಸಂಜೆ ಒಳಗಾಗಿ ಇವರ ವಿರುದ್ಧ ಕ್ರಮ ಜರುಗಿಸುವಂತೆ ನಗರದ ಕೋವಿಡ್ ಉಸ್ತುವಾರಿ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಡಿಸಿಎಂ ಸೂಚನೆ ನೀಡಿದರು. ಇದೇ ಕೇಂದ್ರದ ವ್ಯವಸ್ಥಾಪಕ ಅಧಿಕಾರಿ ಆಗಿರುವ ತಹಸೀಲ್ದಾರ್ ಡಾ. ಗಣೇಶ್ ಅವರಿಗೂ ಡಿಸಿಎಂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇಡೀ ಕೇಂದ್ರದ ಸಂಪೂರ್ಣ ಉಸ್ತುವಾರಿಯೂ ಆಗಿರುವ ಬಿಬಿಎಂಪಿ ಜಂಟಿ ಆಯುಕ್ತ ಅಶೋಕ್ ಮೇಲೆಯೂ ಡಿಸಿಎಂ ಸಿಡಿಮಿಡಿಗೊಂಡರಲ್ಲದೆ, ಮನುಷ್ಯತ್ವ ಮರೆತು ವರ್ತಿಸುತ್ತಿರುವ ನಿಮ್ಮನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು.
ವೈದ್ಯರು, ಅಧಿಕಾರಿಗಳ ಜತೆ ಮುಖಾಮುಖಿ ಮಾತುಕತೆ ನಡೆಸಿದ ಅವರು, ವೈದ್ಯರಾದವರು ನೇರವಾಗಿ ರೋಗಿ ಬಳಿಗೆ ತೆರಳಿ ಚಿಕಿತ್ಸೆ ನೀಡಬೇಕು. ಅದೂ ಆಗಲಿಲ್ಲ ಎಂದರೆ ಆನ್’ಲೈನ್’ನಲ್ಲಿ ಅವರಿಗೆ ಬೇಕಾದ ಎಲ್ಲ ಸೂಚನೆಗಳನ್ನು ಕೊಡಬೇಕು. ಇಡೀ ರಾಜ್ಯ, ದೇಶ ಮತ್ತು ಜಗತ್ತನ್ನೇ ಪೀಡಿಸುತ್ತಿರುವ ಈ ಮಾರಿಯನ್ನು ನಿವಾರಿಸಲು ಪ್ರತಿಯೊಬ್ಬರೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಜೀವ ರಕ್ಷಿಸಬೇಕಾದ ವೈದ್ಯರೇ ಹೀಗೆ ಕೈಚೆಲ್ಲಿದರೆ ಗತಿ ಏನು ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಆದರೆ, ಇದೇ ಕ್ಯಾಂಪಸ್ಸಿನ ತೋಟಗಾರಿಕಾ ವಿಭಾಗದಲ್ಲಿ ನಡೆಯುತ್ತಿರವ ಮತ್ತೊಂದು ಆರೈಕೆ ಕೇಂದ್ರ ಉತ್ತಮವಾಗಿದ್ದು, ಅಲ್ಲಿನ ವ್ಯವಸ್ಥೆ ಬಗ್ಗೆ ಡಿಸಿಎಂ ತೃಪ್ತಿ ವ್ಯಕ್ತಪಡಿದರು. ವೈದ್ಯರು, ನರ್ಸುಗಳು, ಸ್ವಚ್ಛತಾ ಸಿಬ್ಬಂದಿ, ಊಟ, ಔಷಧಿ, ಚಿಕಿತ್ಸೆ ಯಾವುದರ ಬಗ್ಗೆಯೂ ಅಲ್ಲಿ ದೂರುಗಳು ಬರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರನ್ನು ಡಿಸಿಎಂ ಮನಸಾರೆ ಶ್ಲಾಘಿಸಿದರು.
ಹೆಚ್ಚುತ್ತಿರುವ ಟೀಕೆ:
ಇದೇ ವೇಳೆ ಇತರೆ ಕೋವಿಡ್ ಕೇಂದ್ರಗಳು ಹೇಗೆ ನಿರ್ವಹಿಸುತ್ತಿವೆ ಎಂಬ ಪ್ರಶ್ನೆಯೂ ಎದುರಾಗಿದೆ. ಕೇವಲ 712 ಹಾಸಿಗೆಗಳ ಇರುವ ಜಿಕೆವಿಕೆ ಆರೈಕೆ ಕೇಂದ್ರವನ್ನೇ ಸಮರ್ಪಕವಾಗಿ ನಿರ್ವಹಿಸಲಾಗದ ಅಧಿಕಾರಿಗಳು, 10,100 ಹಾಸಿಗೆಗಳು ಹೊಂದಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಎಂಎಸ್) ದಲ್ಲಿ ಸ್ಥಾಪಿಸಲಾಗಿರುವ ಜಗತ್ತಿನ ಅತಿದೊಡ್ಡ ಕೋವಿಡ್ ಕೇರ್ ಸೆಂಟರಿನ ಪರಿಸ್ಥಿತಿ ಏನು ಎಂಬ ಪ್ರಶ್ನೆ ಎದುರಾಗಿದೆ.
ಈ ಬಗ್ಗೆ ಡಾ. ಅಶ್ವತ್ಥನಾರಾಣ ಅವರ ಗಮನ ಸೆಳೆದಾಗ, ’ಜಿಕೆವಿಕೆಯಲ್ಲಿ ಕಂಡ ದೃಶ್ಯಗಳು ನನ್ನ ಮನಕಲಕಿವೆ. ಮತ್ತೆ ಇದೆಲ್ಲ ರಿಪೀಟ್ ಆಗಲು ಬಿಡುವುದಿಲ್ಲ. ಸರಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಿದೆ. ನಾಳೆಹೊತ್ತಿಗೆ ಜಿಕೆವಿಕೆ ಕೇಂದ್ರ ಉತ್ತಮವಾಗಿರುತ್ತದೆ. ಎಲ್ಲ ಕೇಂದ್ರಗಳಿಗೂ ದಿಢೀರ್ ಬೇಟಿ ನೀಡಿ ಪರಶೀಲನೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಮೈಮರೆಯಲು ಬಿಡುವುದಿಲ್ಲ’ ಎಂದರು ಅವರು.
ಅಂದಹಾಗೆ ಬೆಂಗಳೂರಿನಲ್ಲಿ ಜಿಕೆವಿಕೆ ಸೇರಿ ಹಜ್ ಭವನ, ರವಿಶಂಕರ ಗುರೂಜಿ ಆಶ್ರಮ, ಆಯುರ್ವೇದ ಆಸ್ಪತ್ರೆ, ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್’ಗಳಲ್ಲಿ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಬಿಐಎಂಎಸ್ ಕೇಂದ್ರ ಸಜ್ಜಾಗಿದ್ದು, ಇನ್ನಷ್ಟೇ ಆರಂಭವಾಗಬೇಕಿದೆ. ಅಕ್ಟೋಬರ್ ಹೊತ್ತಿಗೆ ಸೋಂಕಿತರ ಸಂಖ್ಯೆ ಬ್ಲಾಸ್ಟ್ ಆಗುತ್ತದೆ ಎಂದು ಈಗಾಗಲೇ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಎಚ್ಚರಿಕೆ ನೀಡಿದ್ದು, ಅದರಂತೆ ಸರಕಾರವೇನೋ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಹೊಸದಾಗಿ ಜಾರಿ ಮಾಡಿರುವ ಲಾಕ್’ಡೌನ್ ನಡುವೆಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಗುರುವಾರ (ಜುಲೈ 16) ಒಂದೇ ದಿನ 104 ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ. 4,169 ಜನರಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 2,334 ಜನರಿಗೆ ಮಹಾಮಾರಿ ವಕ್ಕರಿಸಿದೆ. 70 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ ಪರಿಸ್ಥಿತಿ ಕೈಮೀರುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರ ಮಾತಿನಲ್ಲೇ ಹೇಳುವುದಾದರೆ, “ಪರಿಸ್ಥಿತಿ ಹೀಗೆಯೇ ಮುಂದುವರೆದರೆ ದೇವರೇ ಗತಿ” ಎಂದು ಕೈಚೆಲ್ಲುವ ರೀತಿಯಲ್ಲಿ ಮಾತನಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ:
ಕೋವಿಡ್ ಸೋಂಕಿರಿಗೆ ಚಿಕಿತ್ಸೆ ನೀಡದ, ಪರಿಸ್ಥಿತಿ ದುರ್ಲಾಭ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸರಕಾರ ಮುಂದಾಗಿದೆ ಈಗಾಗಲೇ ವಿಕ್ರಂ ಆಸ್ಪತ್ರೆ, ಜಯನಗರದ ಅಪೋಲೋ ಆಸ್ಪತ್ರೆಗೆ ನೊಟೀಸ್ ನೀಡಲಾಗಿದೆ. ಇನ್ನು ಕೆಲ ಆಸ್ಪತ್ರೆಗಳು ರೋಗಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜತೆಗೆ ಸರಕಾರಕ್ಕೆ ನೀಡಬೇಕಾದ ಶೇ.50ರಷ್ಟು ಬೇಡ್’ಗಳನ್ನು ನೀಡದೇ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಸರಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ. ಇಂಥ ಆಸ್ಪತ್ರೆಗಳ ಮಾನ್ಯತೆ ರದ್ದು ಮಾಡುವುದರ ಜತೆಗೆ, ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ಶ್ರೀರಾಮುಲು ಹೇಳಿಕೆಗೆ ಅಪಾರ್ಥ ಬೇಡ:
ಸೋಂಕಿತರ ಸಂಖ್ಯೆ ಹೀಗೆಯೇ ಬೆಳೆಯುತ್ತ ಹೋದರೆ ಮುಂದೆ ದೇವರೇ ಕಾಪಾಡಬೇಕು ಎಂದಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಅವರು ಹೇಳಿದ್ದಿಷ್ಟು..
’ನಾವೆಲ್ಲರೂ ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲೆಡೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದು ವೇಳೆ ಹಾಗೆ ಆಗದೇ ಇದ್ದಿದ್ದರೆ ನಿಜವಾಗಿಯೂ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಇಡೀ ದೇಶದಲ್ಲಿಯೇ ನಮ್ಮ ವ್ಯವಸ್ಥೆ ಅತ್ಯುತ್ತಮವಾಗಿದೆ. ನಮ್ಮೆಲ್ಲ ಕಾರ್ಯಗಳಿಗೆ ದೇವರ ದಯೆ ಇರಲಿ ಎನ್ನುವ ಅರ್ಥದಲ್ಲಿ ಶ್ರೀರಾಮುಲು ಹೇಳಿರಬಹುದು. ಅದಕ್ಕೆ ಅನ್ಯತಾ ಅರ್ಥ ಕಲ್ಪಿಸುವುದು ಬೇ’ ಎಂದು ಡಿಸಿಎಂ ಮಾಧ್ಯಮಗಳಿಗೆ ಮನವಿ ಮಾಡಿದರು.
ಸಿದ್ದು ಮೇಲೆ ಪ್ರಹಾರ:
ಕೋವಿಡ್ ನಿರ್ವಹಣೆಗಾಗಿ ನಡೆದಿರುವ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಪಕ್ಷ ನಾಯಕರು ಕೋವಿಡ್’ನಲ್ಲೂ ’ಕಲ್ಲು’ ಹುಡುಕುತ್ತಿದ್ದಾರೆ. ಜನರ ಬಗ್ಗೆ ಕಾಳಜಿ ತೋರುವ ಬದಲು ಗೊಂದಲು ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಖರ್ಚಾಗಿರುವ ಪ್ರತಿ ಪೈಸೆಯ ಲೆಕ್ಕವನ್ನೂ ನಾವು ಕೊಡುತ್ತೇವೆ ಎಂದು ಡಿಸಿಎಂ ಉತ್ತರಿಸಿದರು.
ರಾಜಕೀಯ ತಿಕ್ಕಾಟ ಆರಂಭ:
ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟ ಆರಂಭವಾಗಿದ್ದು, ದೇವರ ಮೇಲೆ ಭಾರ ಹಾಕಿದ ಸಚಿವ ಶ್ರೀರಾಮುಲು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರದಿಂದ ಅದರಲ್ಲೂ ಶ್ರೀರಾಮುಲು ಅವರಿಂದ ಸಾಧ್ಯವಿಲ್ಲ. ಅವರ ಹೇಳಿಕೆ ಜನರಿಗೆ ದಿಗ್ಭ್ರಮೆ ಉಂಟು ಮಾಡಿದೆ. ಸರಕಾರವೇ ಹೀಗೆ ಹೇಳಿದ ಮೇಲೆ ಉಳಿದಿದ್ದು ಏನಿದೆ? ಕೂಡಲೇ ಸರಕಾರ ಕೆಳಗಿಳಿದು ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡುವಂತೆ ಅವರು ಆಗ್ರಹಿಸಿರುವುದ ಬಿಜೆಪಿಗೆ ಮೈಪರಚುಕೊಳ್ಳುವಂತೆ ಮಾಡಿದೆ.
ಇನ್ನೊಂದೆಡೆ ಬಿಜೆಪಿ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದೆ. ನಾನು ದೇವರ ಮೇಲೆ ಭಾರ ಹಾಕಿದ್ದು ನಮ್ಮ ಕೈಯ್ಯಲ್ಲಿ ಏನೂ ಆಗಲ್ಲ ಎಂಬ ಅರ್ಥದಲ್ಲಿ ಅಲ್ಲ. ನಮ್ಮ ಕೆಲಸಕ್ಕೆ ದೇವರ ಕೃಪೆ ಇರಲಿ ಎಂತ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸ್ವತಃ ಶ್ರೀರಾಮುಲು ಅವರೇ ಮನವಿ ಮಾಡಿದ್ದಾರೆ.
ಶ್ರೀರಾಮುಲು ನೆರವಿಗೆ ಡಿಸಿಎಂ:
ಇನ್ನೊಂದೆಡೆ ಶ್ರೀರಾಮುಲು ನೆರವಿಗೆ ಡಿಸಿಎಂ ಅಶ್ವತ್ಥನಾರಾಣ ಧಾವಿಸಿದ್ದಾರೆ. “ನಾವೆಲ್ಲರೂ ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲೆಡೆ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದು ವೇಳೆ ಹಾಗೆ ಆಗದೇ ಇದ್ದಿದ್ದರೆ ನಿಜವಾಗಿಯೂ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಇಡೀ ದೇಶದಲ್ಲಿಯೇ ನಮ್ಮ ವ್ಯವಸ್ಥೆ ಅತ್ಯುತ್ತಮವಾಗಿದೆ. ನಮ್ಮೆಲ್ಲ ಕಾರ್ಯಗಳಿಗೆ ದೇವರ ದಯೆ ಇರಲಿ ಎನ್ನುವ ಅರ್ಥದಲ್ಲಿ ಶ್ರೀರಾಮುಲು ಹೇಳಿರಬಹುದು. ಅದಕ್ಕೆ ಅನ್ಯತಾ ಅರ್ಥ ಕಲ್ಪಿಸುವುದು ಬೇ” ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
***
Lead photo courtesy: gkvk