• About
  • Advertise
  • Careers
  • Contact
Sunday, May 10, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home GUEST COLUMN

ಅಯೋಧ್ಯಾ ಆಂದೋಲನ: ಭಾರತದ ಅಂತರಾತ್ಮದ ಧ್ವನಿ

cknewsnow desk by cknewsnow desk
August 29, 2021
in GUEST COLUMN, NATION
Reading Time: 6 mins read
1
ಅಯೋಧ್ಯಾ ಆಂದೋಲನ: ಭಾರತದ ಅಂತರಾತ್ಮದ ಧ್ವನಿ
999
VIEWS
FacebookTwitterWhatsuplinkedinEmail

  • ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿ ಆಗಿದೆ. ಇನ್ನು ಅದರ ಸಾಕ್ಷಾತ್ಕಾರವಷ್ಟೇ ಬಾಕಿ. ಇಡೀ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಮುಗಿದು, ಮಂದಿರವೂ ಭಕ್ತರಿಗೆ ತೆರೆದುಕೊಳ್ಳಲಿ ಎಂಬುದು ಭಾರತೀಯರೆಲ್ಲರ ಆಕಾಂಕ್ಷೆ. ಆದರೆ, ಈ ಮಂದಿರಕ್ಕಾಗಿ ನಡೆದ ಹೋರಾಟ, ಅದರಲ್ಲೂ ಮಾಜಿ ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ ನಡೆಸಿದ ರಾಮ ರಥಯಾತ್ರೆ ಅತಿದೊಡ್ಡ ಮೈಲುಗಲ್ಲು. ಈ ವಿಷಯದಲ್ಲಿ ಕೆಲ ಪ್ರಧಾನ ಮಂತ್ರಿಗಳು ಮಾಡಿದ್ದೇನು? ಮಂದಿರದ ಸುತ್ತ ನಡೆದ ರಾಜಕೀಯವೇನು? ಅದೆಲ್ಲವನ್ನು ಸ್ವತಃ ಆಡ್ವಾಣಿ ಅವರು ತಮ್ಮ My Country My Lifeಕೃತಿಯಲ್ಲಿ ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ. ಕೆ.ವಿ.  ರಾಧಾಕೃಷ್ಣ ಅವರ ಅಜರಾಮರ ಅಯೋಧ್ಯೆ ಕೃತಿಗಾಗಿ ಆ ಬರಹವನ್ನು ಕನ್ನಡದ ಬಹುಮುಖ್ಯ ಅನುವಾದಕರಲ್ಲಿ ಒಬ್ಬರಾದ ಬಿ.ಎಸ್. ಜಯಪ್ರಕಾಶ ನಾರಾಯಣ ಕನ್ನಡೀಕರಿಸಿದ್ದಾರೆ. ಅದನ್ನು ಸಿಕೆನ್ಯೂಸ್ ನೌ.ಕಾಂ ಯಥಾವತ್ತಾಗಿ ಪ್ರಕಟಿಸಿದೆ. ಓದು ದೀರ್ಘವಾದರೂ ಅನೇಕ ಕಟುಸತ್ಯಗಳನ್ನು ಈ ಲೇಖನ ಹೊರಗೆಡುಹುತ್ತದೆ.

  • ಕೆ.ವಿ.  ರಾಧಾಕೃಷ್ಣ ಅವರ ‘ಅಜರಾಮರ ಅಯೋಧ್ಯೆ’

  • ಮೋದಿ ಅವರಿಂದ ಮಂದಿರಕ್ಕೆ ಭೂಮಿಪೂಜೆ.

ಅಯೋಧ್ಯಾ ಆಂದೋಲನವು ನನ್ನ ರಾಜಕೀಯ ಜೀವನಕ್ಕೆ ಅತ್ಯಂತ ನಿರ್ಣಾಯಕ ತಿರುವನ್ನು ತಂದುಕೊಟ್ಟ ಘಟನೆಯಾಗಿದೆ ಎಂದು ನಾನು ನಂಬಿದ್ದೇನೆ. 1990ರಲ್ಲಿ ಗುಜರಾತಿನ ಸೋಮನಾಥದಿಂದ ಉತ್ತರಪ್ರದೇಶದ ಅಯೋಧ್ಯೆಯವರೆಗೆ ನಡೆದ ರಾಮ ರಥಯಾತ್ರೆಯಲ್ಲಿ ನಾನು ನಿರ್ದಿಷ್ಟವಾದ ಕರ್ತವ್ಯವನ್ನು ನೆರವೇರಿಸ ಬೇಕೆನ್ನುವುದು ವಿಧಿಯ ಸಂಕಲ್ಪವಾಗಿತ್ತು. ನಾನು ಇದನ್ನು ಬದ್ಧತೆ ಮತ್ತು ಪ್ರಾಮಾಣಿಕತೆಗಳಿಂದ ನನ್ನ ಕೈಲಾದಷ್ಟು ಮಟ್ಟಿಗೆ ನಿರ್ವಹಿಸಿದೆ. ಈ ಮೂಲಕ ನಾನು ಆಧುನಿಕ ಭಾರತವನ್ನು ಸಾಕ್ಷಾತ್ಕರಿಸಿಕೊಂಡೆ. ಅಯೋಧ್ಯಾ ಆಂದೋಲನವು ನನ್ನ ಪಾಲಿಗೆ ತೀವ್ರ ಚಟುವಟಿಕೆ ಮತ್ತು ಒಳತೋಟಿಗಳ ಕಾಲಘಟ್ಟವಾಗಿತ್ತು.

ಅಯೋಧ್ಯಾ ಆಂದೋಲನದ ಬಗ್ಗೆ ಹಲವು ಪ್ರಶ್ನೆಗಳಿವೆ. ಮುಖ್ಯವಾಗಿ, ಅಯೋಧ್ಯೆಯಲ್ಲಿ ಈಗಾಗಲೇ ಇದ್ದ ದೇವಸ್ಥಾನದ ಪುನಾ ರ್ನಿರ್ಮಾಣವನ್ನು ಮಾಡುವ ಬದಲು ಹೊಸದಾಗಿಯೇ ಮಂದಿರವನ್ನು ಕಟ್ಟಬೇಕೆಂಬ ಕೂಗಿಗೆ ಅದುವರೆಗೂ ಇಡೀ ಹಿಂದೂ ಸಮಾಜದಿಂದ ಯಾರೂ ಕಂಡೂ ಕೇಳರಿಯದಂತಹ ಬೆಂಬಲ ವ್ಯಕ್ತವಾಗಿದ್ದೇಕೆ? ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಅಭೂತಪೂರ್ವವಾದ ಅಖಿಲ ಭಾರತೀಯ ವ್ಯಾಪ್ತಿಯ ಸಾಮೂಹಿಕ ಚಳವಳಿಯಾಗಿದ್ದೇಕೆ? ಶಾಂತಿಯುತವಾಗಿ, ಕಾನೂನುಬದ್ಧವಾಗಿ ಮತ್ತು ಸಂಬಂಧಿಸಿದ ಎಲ್ಲರಿಗೂ ಸಮಾಧಾನವಾಗುವಂತೆ ಬಗೆಹರಿಸಬಹುದಾಗಿದ್ದ ರಾಮ ಜನ್ಮಭೂಮಿ ವಿವಾದಕ್ಕೆ ಅನಗತ್ಯವಾಗಿ ಹಿಂದೂ ವರ್ಸಸ್ ಮುಸ್ಲಿಂ ಸಂಘರ್ಷ ಎಂದು ಬಣ್ಣ ಬಳಿದಿದ್ದೇಕೆ? 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ನೆಲಕ್ಕುರುಳಿಸಿದ ಘಟನೆಯ ಹಿಂದೆ ಕಾಂಗ್ರೆಸ್ಸಿನ ಕೈವಾಡವಿಲ್ಲವೇ? ಹಾಗೆಯೇ, ಅಯೋಧ್ಯೆಯಲ್ಲಿ ರಾಮನಿಗೊಂದು ತಾತ್ಕಾಲಿಕ ಮಂದಿರನವನ್ನು ನಿರ್ಮಿಸಿದ್ದರ ಹಿಂದೆಯೂ ಕಾಂಗ್ರೆಸ್ ಪಕ್ಷದ ಪಾತ್ರವಿಲ್ಲವೇ? ಎನ್ನುವ ಪ್ರಶ್ನೆಗಳು ಇಲ್ಲಿ ಅಡಗಿವೆ.

ಸೋಮನಾಥದ ಸ್ಫೂರ್ತಿ

ಸೋಮನಾಥ ದೇಗುಲ

ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಆಗ್ರಹಿಸಿ ನಡೆದ ಚಳವಳಿಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ, ಭಾರತವು ಸ್ವಾತಂತ್ರ್ಯವನ್ನು ಗಳಿಸಿಕೊಂಡ ಹೊಸತರಲ್ಲೇ ನಡೆದ ಸೋಮನಾಥ ದೇಗುಲದ ಪುನಾ ರ್ನಿರ್ಮಾಣದ ಚಾರಿತ್ರಿಕ ಘಟನೆಯ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಮಗೆ ಭಾರತದ ಸೋಲು-ಗೆಲುವುಗಳ ಮತ್ತು ನಮ್ಮ ದೇಶವು ಪ್ರದರ್ಶಿಸಿದ ರಾಷ್ಟ್ರೀಯ ಸಂಕಲ್ಪದ ಅಗಾಧತೆ ಎಂಥದ್ದೆನ್ನುವುದು ಗೊತ್ತಾಗುವುದಿಲ್ಲ. ಅಂದಂತೆ, ನನ್ನ ಪ್ರಾಯದ ದಿನಗಳಲ್ಲಿ ನಾನೊಂದು ಪುಸ್ತಕವನ್ನು ಓದಿದ್ದೆ. ಅದಾವುದೆಂದರೆ, ಭಾರತೀಯ ವಿದ್ಯಾ ಭವನದ ಸ್ಥಾಪಕರೂ ನೆಹರು ಸಂಪುಟದಲ್ಲಿ ಸಚಿವರೂ ಆಗಿದ್ದ ಕೆ.ಎಂ.ಮುನ್ಷಿಯವರ ’ಜೈ ಸೋಮನಾಥ್’ ಎನ್ನುವ ಐತಿಹಾಸಿಕ ಕಾದಂಬರಿ. ಇದು ನನ್ನ ಮೇಲೆ ಬೀರಿದ ಪ್ರಭಾವ ಅಗಾಧ. ಅಪ್ಪಟ ಗಾಂಧೀವಾದಿಯೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಗುಜರಾತಿನ ಮುನ್ಷಿಯವರು ಬಹುದೊಡ್ಡ ವಿದ್ವಾಂಸರೂ ಆಗಿದ್ದರು. ದೇಶದ ಇಂಗ್ಲಿಷ್ ಓದುಗರ ವಲಯದಲ್ಲಿ ಅಪಾರ ಮನ್ನಣೆಗೆ ಪಾತ್ರವಾಗಿರುವ ರಮೇಶ್ ಮೆನನ್ ತಮ್ಮ ’ಶಿವ: ಶಿವಪುರಾಣ ರೀಟೋಲ್ಡ್’ ಕೃತಿಯಲ್ಲಿ ಕೂಡ ಭಾರತದ ಉದ್ದಗಲಕ್ಕೂ ದೇವಸ್ಥಾನಗಳು ಬೀರಿಕೊಂಡು ಬರುತ್ತಿರುವ ಪ್ರಭಾವ-ಪರಿಣಾಮಗಳನ್ನು ತುಂಬಾ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

ಇಂತಹ ಸಾವಿರಾರು ಪುಣ್ಯಸ್ಥಳಗಳು ನಮ್ಮಲ್ಲಿವೆ. ಆದರೆ, ಇವುಗಳ ಪೈಕಿ ಭಾರತದ ಚಿರಂತನತೆಯನ್ನು ಸೋಮನಾಥದಷ್ಟು ಅನನ್ಯವಾಗಿ, ಅದರ ಚಾರಿತ್ರಿಕತೆಯೊಂದಿಗೆ ಒಳಗೊಂಡಿರುವ ಕ್ಷೇತ್ರ ಇನ್ನೊಂದಿಲ್ಲ. ಟರ್ಕಿಯ ಸುಲ್ತಾನ ಮಹಮದ್ ಘಜ್ನಿಯು ಸೋಮನಾಥ ಮತ್ತು ಭಾರತದ ಇತರ ಸ್ಥಳಗಳಲ್ಲಿನ ಭವ್ಯ ಮಂದಿರಗಳ ಮೇಲೆ ನಡೆಸಿದ ಅವ್ಯಾಹತ ದಾಳಿಗಳ ಬಗ್ಗೆ ಬಿ.ಆರ್. ಅಂಬೇಡ್ಕರ್ ಕೂಡ ತಮ್ಮ ಮಹತ್ವದ ಕೃತಿಯಾದ ’ಪಾಕಿಸ್ತಾನ್ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ’ದಲ್ಲಿ ಉಲ್ಲೇಖಿಸಿದ್ದಾರೆ. 1001ರಿಂದ 1026ರ ನಡುವೆ ಭಾರತದ ಮೇಲೆ ಒಟ್ಟು 17 ಬಾರಿ ಎರಗಿದ ಘಜ್ನಿಗೆ ಸೋಮನಾಥದ ಮೇಲೆ ನಿರ್ದಿಷ್ಟವಾಗಿ ಕಣ್ಣಿತ್ತು. ಆತನು 1024ರಲ್ಲಿ ಈ ದೇವಾಲಯದ ಮೇಲೆ ನಡೆಸಿದ ದಾಳಿಯ ಸಂದರ್ಭದಲ್ಲಿ, ಈ ದೇಗುಲವನ್ನು ರಕ್ಷಿಸಿಕೊಳ್ಳಲು 50 ಸಾವಿರ ಹಿಂದೂಗಳು ತಮ್ಮ ಪ್ರಾಣವನ್ನೇ ಸಮರ್ಪಿಸಿದರೆಂದು ಸ್ವತಃ ಮುಸ್ಲಿಂ ಇತಿಹಾಸಕಾರರ ದಾಖಲೆಗಳೇ ಹೇಳುತ್ತವೆ. ಇಂತಹ ಸೋಮನಾಥದ ಮೇಲೆ ಮೊಘಲ್ ದೊರೆಗಳ ಕಟ್ಟಕಡೆಯ ಬರ್ಬರ ದಾಳಿ ನಡೆದಿದ್ದು 1706ರಲ್ಲಿ. ಸೋಮನಾಥದ ದೇವಾಲಯದ ಮೇಲೆ ಇನ್ನೆಂದಿಗೂ ಅದರ ಲವಲೇಶದಷ್ಟೂ ಗುರುತು ಸಿಕ್ಕದಂತೆ ದಾಳಿ ಮಾಡಿ, ಅದನ್ನು ನಾಮಾವಶೇಷ ಮಾಡಬೇಕು’ ಎಂದು ಔರಂಗಜೇಬ್ ಹೊರಡಿಸಿದ್ದ ಕಟ್ಟಪ್ಪಣೆಯಂತೆ, ಗುಜರಾತಿನಲ್ಲಿ ಅವನ ಪರವಾಗಿ ಆಳ್ವಿಕೆ ನಡೆಸುತ್ತಿದ್ದ ರಾಜಕುಮಾರ ಅಝಂ ಈ ಆಕ್ರಮಣವನ್ನು ನಡೆಸಿದ್ದ. ಒಂದೇ ಮಾತಿನಲ್ಲಿ ಹೇಳುವುದಾದರೆ, ಸೋಮನಾಥ ದೇಗುಲವು ಹೇಗೆ ಮುಸ್ಲಿಂ ಆಕ್ರಮಣಕಾರರ ಧಾರ್ಮಿಕ ದ್ವೇಷ ಮತ್ತು ಹಿಂಸೆಗಳಿಗೆ ಸಂಕೇತವಾಗಿದೆಯೋ ಹಾಗೆಯೇ ಹೊರಗಿನ ದಾಳಿಕೋರರ ವಿರುದ್ಧ ದೇಶದ ಜನರು ಒಟ್ಟಾಗಿ ತೋರಿಸಿದ ಪ್ರತಿರೋಧದ ಸ್ಫೂರ್ತಿದಾಯಕ ಸಂಕೇತವೂ ಆಗಿದೆ. ಇಲ್ಲಿ ’ಹೊರಗಿನ ಆಕ್ರಮಣಕಾರರು’ ಎಂದರೆ ಮುಸ್ಲಿಮರೆಂದಲ್ಲ. ಹಾಗೆಯೇ, ಘಜ್ನಿ ಮತ್ತು ಔರಂಗಜೇಬ್ ಇಬ್ಬರೂ ಮುಸ್ಲಿಮರಾಗಿದ್ದರೆಂಬ ಕಾರಣಕ್ಕೆ ಮಾತ್ರವೇ ಅವರು ನಡೆಸಿದ ಕುಕೃತ್ಯಗಳು ನಮಗೆ ಹೊರಗಿನವರ ದುರಾಕ್ರಮಣವೆಂದು ಭಾರತ ಯಾವತ್ತೂ ಭಾವಿಸಿಲ್ಲ. ಏಕೆಂದರೆ, ಭಾರತದ ಮುಸ್ಲಿಮರ ಪೈಕಿ ಶೇಕಡ 90ರಷ್ಟು ಮಂದಿಯ ಪೂರ್ವಜರೆಲ್ಲ ಅಪ್ಪಟ ಭಾರತೀಯರೇ ಆಗಿದ್ದು, ಇವರೆಲ್ಲ ಆ ಧರ್ಮಕ್ಕೆ ಮತಾಂತರ ಗೊಂಡಿದ್ದಾರಷ್ಟೆ. ಘಜ್ನಿ ಮತ್ತು ಔರಂಗಜೇಬರ ಬರ್ಬರ ದಾಳಿಗಳು ನಮಗೆ ಅನ್ಯರ ಆಕ್ರಮಣವಾಗಿ ಕಾಣಲು ಕಾರಣವೇನೆಂದರೆ, ಅವೆಲ್ಲವೂ ಭಾರತದ ರಾಷ್ಟ್ರೀಯ ಧಾರೆಯಾದ ಸಹಿಷ್ಣುತೆ ಮತ್ತು ಸರ್ವಧರ್ಮ ಸಮಭಾವಗಳನ್ನು ಉಲ್ಲಂಘಿಸಿದ್ದವು. ಮುಖ್ಯವಾಗಿ, ಹೀಗೆ ದೇವಾಲಯಗಳನ್ನು ಧ್ವಂಸ ಮಾಡುವ ಮೂಲಕ ಇಲ್ಲಿಯ ಹಿಂದೂಗಳನ್ನು ಅವಮಾನಿಸುವುದು ಮತ್ತು ಈ ಮೂಲಕ ಭಾರತದಾದ್ಯಂತ ಇಸ್ಲಾಂನ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವುದು ಅವರ ಮೂಲೋದ್ದೇಶಗಳಾಗಿದ್ದವು.’

ದೇಗುಲಗಳೆಂಬ ಜೀವನಾಡಿಗಳು

ಭಾರತದಲ್ಲಿನ ಸಾವಿರಾರು ದೇವಾಲಯಗಳು ಮತ್ತೆಮತ್ತೆ ಹೀಗೆ ಅನ್ಯರ ಆಕ್ರಮಣಕ್ಕೆ ಒಳಗಾದರೂ ಪುನಃಪುನಃ ಪುಟಿದೆದ್ದು ನಿಂತಿರುವುದರ ಹಿಂದಿರುವ ದೇಶದ ಆಳವಾದ ವಿವೇಕದ ಶಕ್ತಿ ಮತ್ತು ಸ್ವಾರಸ್ಯ ಏನೆಂಬುದನ್ನು ಸ್ವಾಮಿ ವಿವೇಕಾನಂದರು ಕೂಡ ಮುಕ್ತವಾಗಿ ಕೊಂಡಾಡಿದ್ದಾರೆ. “ಸೋಮನಾಥವೂ ಸೇರಿದಂತೆ ದಕ್ಷಿಣ ಭಾರತದ ಪುರಾತನ ದೇವಾಲಯಗಳು ವಿದೇಶಿ ದಾಳಿಕೋರರಿಂದ ಒಂದರ ಹಿಂದೊಂದರಂತೆ ದಾಳಿಗೊಳಗಾಗಿವೆ. ಆದರೆ, ಈ ಎಲ್ಲ ದೇವಸ್ಥಾನಗಳೂ ಅಷ್ಟೇ ಕ್ಷಿಪ್ರವಾಗಿ ಮತ್ತೆ ಭವ್ಯವಾಗಿ ತಲೆಯೆತ್ತಿ ನಿಂತಿವೆ. ಇವು ನಮ್ಮೆಲ್ಲರಿಗೂ ಅಪಾರವಾದ ತಿಳಿವಳಿಕೆಯನ್ನು ಸಾರುತ್ತಿದ್ದು, ಇತಿಹಾಸದ ಅಗಾಧ ಅರಿವನ್ನು ಮೂಡಿಸುತ್ತಿವೆ. ಈ ಜ್ಞಾನವು ಇತಿಹಾಸವನ್ನು ಕುರಿತ ಯಾವ ಪುಸ್ತಕಗಳಲ್ಲೂ ಇಷ್ಟೊಂದು ಸಮೃದ್ಧವಾಗಿ ಸಿಕ್ಕುವುದಿಲ್ಲ. ನೂರಾರು ದಾಳಿಗಳನ್ನು ಜೀರ್ಣಿಸಿಕೊಂಡು, ಮತ್ತೆ ಅನುಪಮವಾಗಿ ವಿರಾಜಿಸುತ್ತಿರುವ ಈ ದೇವಸ್ಥಾನಗಳು ನಮ್ಮ ದೇಶದ ಮನೋಬಲ ಮತ್ತು ಜೀವನಾಡಿಯಾಗಿವೆ. ನೀವು ಇವುಗಳಿಂದ ಪಾಠ ಕಲಿತು, ಮುಂದಡಿ ಇಡಿ. ಇವು ನಿಮ್ಮನ್ನು ವೈಭವದ ಶಿಖರಕ್ಕೆ ಕೊಂಡೊಯುತ್ತವೆ’’ ಎನ್ನುವುದು ಅವರ ಮಾತುಗಳಾಗಿವೆ.

ಅಂದಂತೆ, ಸೋಮನಾಥವು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬೆನ್ನಲ್ಲಿಯೇ ವಿವಾದದ ಗೂಡಾಯಿತು. ಇದಕ್ಕೆ ಕಾರಣ ಗುಜರಾತಿನ ಜುನಾಗಢ ಪ್ರಾಂತ್ಯದ ಚುಕ್ಕಾಣಿ ಹಿಡಿದಿದ್ದ ಮುಸ್ಲಿಂ ನವಾಬ. ಏಕೆಂದರೆ, ಈತ ಜುನಾಗಢವನ್ನು ಪಾಕಿಸ್ತಾನದಲ್ಲಿ ವಿಲೀನಗೊಳಿಸುತ್ತೇನೆಂದು ಘೋಷಿಸಿದ. ವಾಸ್ತವವೆಂದರೆ, ಸೋಮನಾಥವನ್ನೂ ಒಳಗೊಂಡಿದ್ದ ಜುನಾಗಢ ಪ್ರಾಂತ್ಯದ ಆಗಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 80ರಷ್ಟು ಮಂದಿ ಹಿಂದೂಗಳೇ ಆಗಿದ್ದರು. ನವಾಬನ ಈ ನಿರ್ಧಾರ ಸಹಜವಾಗಿಯೇ ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸಿತು. ಕೂಡಲೇ ನವಾಬನ ವಿರುದ್ಧ ದಂಗೆ ಎದ್ದ ಜುನಾಗಢದ ಹಿಂದೂಗಳು ಸ್ಥಳೀಯ ಕಾಂಗ್ರೆಸ್ ನಾಯಕ ಸಮಲ್‌ದಾಸ್ ಗಾಂಧಿಯ ನೇತೃತ್ವದಲ್ಲಿ ಪರ್ಯಾಯ ಸರಕಾರವನ್ನೇ ಸ್ಥಾಪಿಸಿದರು. ಇದರಿಂದ ಬೆಚ್ಚಿಬಿದ್ದ ನವಾಬ, ಕೊನೆಗೆ ಬೇರೆ ದಾರಿಯಿಲ್ಲದೆ ಪಾಕಿಸ್ತಾನಕ್ಕೆ ಕಾಲ್ಕಿತ್ತ. ಬಳಿಕ, ಸಮಲ್‌ದಾಸ್ ಗಾಂಧಿ ಮತ್ತು ಜುನಾಗಢದ ಆಗಿನ ದಿವಾನರಾಗಿದ್ದ ಸರ್ ಶಾ ನವಾಝ್ ಭುಟ್ಟೋ ಇಬ್ಬರೂ ತಮ್ಮ ಪ್ರಾಂತ್ಯವನ್ನು ಬಹುಜನರ ಇಚ್ಛೆಯಂತೆ ಭಾರತದಲ್ಲಿ ವಿಲೀನಗೊಳಿಸಿದರು. ಇದರ ಸ್ಫೂರ್ತಿದಾಯಕ ವೃತ್ತಾಂತವನ್ನು ತಿಳಿಯಲು ಆಸಕ್ತಿ ಹೊಂದಿರುವವರು ಕೆ.ಎಂ.ಮುನ್ಷಿಯವರ ಇನ್ನೊಂದು ಮಹತ್ಕೃತಿಯಾದ ’ಪಿಲಿಗ್ರಿಮೇಜ್ ಟು ಫ್ರೀಡಂ’ ಕೃತಿಯನ್ನು ಓದಬಹುದು. ಜುನಾಗಢ ಪ್ರಾಂತ್ಯವು ಹೀಗೆ ಭಾರತದ ಭಾಗವಾದ ನಾಲ್ಕು ದಿನಗಳಿಗೆ ಸರಿಯಾಗಿ, ಅಂದರೆ 1947ರ ನವೆಂಬರ್ 9ರಂದು ಸರ್ದಾರ್ ವಲ್ಲಭಭಾಯಿ ಪಟೇಲರು ಸೋಮನಾಥವೂ ಒಂದು ಭಾಗವಾಗಿದ್ದ ಗುಜರಾತಿನ ಸೌರಾಷ್ಟ್ರ ಪ್ರಾಂತ್ಯಕ್ಕೆ ಭೇಟಿ ನೀಡಿದರು. ಆಗ ನೆಹರು ಸಂಪುಟದಲ್ಲಿ ಲೋಕೋಪಯೋಗಿ ಮತ್ತು ನಿರಾಶ್ರಿತರ ಪುನರ್ವಸತಿ ಖಾತೆಗಳ ಮಂತ್ರಿಯಾಗಿದ್ದ ಎನ್.ವಿ.ಗಾಡ್ಗೀಳರು ಕೂಡ ಪಟೇಲರ ಜತೆಗಿದ್ದರು. ಸೌರಾಷ್ಟ್ರಕ್ಕೆ ಬಂದಿಳಿದ ಈ ಇಬ್ಬರು ನಾಯಕರಿಗೂ ಅಲ್ಲಿಯ ಜನ ಅಭೂತಪೂರ್ವ ಸ್ವಾಗತ ಕೋರಿದರು. ಬಳಿಕ ತಮ್ಮ ಗೌರವಾರ್ಥವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪಟೇಲರು, ಸೋಮನಾಥ ದೇಗುಲವನ್ನು ಭಾರತ ಸರಕಾರವೇ ಪುನರ್ನಿರ್ಮಿಸಲಿದ್ದು, ಅಲ್ಲಿ ಜ್ಯೋತಿರ್ಲಿಂಗವನ್ನು ಮತ್ತೆ ಪ್ರತಿಷ್ಠಾಪಿಸಲಿದೆ ಎಂದು ಘೋಷಣೆ ಮಾಡಿದರು. ಆ ಸಂದರ್ಭದಲ್ಲಿ ನೆಹರು ಮಂತ್ರಿಮಂಡಲದಲ್ಲಿ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಸೋಮನಾಥ ದೇಗುಲವನ್ನು ಭಾರತೀಯ ಪುರಾತತ್ತ್ವ ಇಲಾಖೆಗೆ ಹಸ್ತಾಂತರಿಸಬೇಕು. ಇದರಿಂದ ನಾವು ಇದನ್ನು ಐತಿಹಾಸಿಕ ಸ್ಮಾರಕವಾಗಿ ಸಂರಕ್ಷಿಸಬಹುದು’’ ಎಂದು ಸಲಹೆ ನೀಡಿದರು. ಪಟೇಲರು ಇದನ್ನು ಬಿಲ್‌ಕುಲ್ ಒಪ್ಪದೆ, ಸೋಮನಾಥ ಮಂದಿರದೊಂದಿಗೆ ಹಿಂದೂಗಳಿಗೆ ಶತಶತಮಾನಗಳಿಂದಲೂ ಇರುವ ಗಾಢಸಂಬಂಧವನ್ನು ಪ್ರತಿಪಾದಿಸಿದರು.

ಸರ್ದಾರ್ ಪಟೇಲರ ಸಂಕಲ್ಪ

ಇದಾದ ನಂತರ, ಪಟೇಲರ ದೃಢಸಂಕಲ್ಪದಿಂದಾಗಿ ಸೋಮನಾಥ ಮಂದಿರದ ಪುನರ್ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ನೆಹರು ಸಂಪುಟದ ಅನುಮೋದನೆಯೂ ದೊರೆಯಿತು. ಈ ನಿರ್ಧಾರವನ್ನು ಸ್ವತಃ ಮಹಾತ್ಮ ಗಾಂಧೀಜಿ ಕೂಡ ಸಂಪೂರ್ಣವಾಗಿ ಬೆಂಬಲಿಸಿದ್ದರು ಎನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಆದರೆ ಅವರು, “ಸೋಮನಾಥ ದೇಗುಲದ ಮರುನಿರ್ಮಾಣವು ಸಾರ್ವಜನಿಕ ದೇಣಿಗೆಯ ಮೂಲಕ ನಡೆಯಲಿ. ಇದಕ್ಕೆ ಸರಕಾರದ ದುಡ್ಡನ್ನು ಬಳಸುವುದು ಬೇಡ,’’ ಎಂಬ ಒಂದು ಷರತ್ತನ್ನು ಹಾಕಿದ್ದರಷ್ಟೆ. ಸೋಮನಾಥ ಪುನರ್ನಿರ್ಮಾಣದ ವಿದ್ಯಮಾನದಲ್ಲಿ ಕೆ.ಎಂ.ಮುನ್ಷಿಯವರು ಮತ್ತೊಮ್ಮೆ ಕಾಣಿಸಿಕೊಂಡಿದ್ದು ಈ ಕಾಲಘಟ್ಟದಲ್ಲೇ. ಅಂದರೆ, ಅವರು ಇಲ್ಲಿ ಕೇವಲ ಚರಿತ್ರಕಾರರಾಗಿ ಬರಲಿಲ್ಲ. ಬದಲಿಗೆ, ತಾವೇ ಮುಂಚೂಣಿಯಲ್ಲಿ ನಿಂತು, ಎದುರಿಗೆ ಬಂದ ಅಡೆತಡೆಗಳಿಗೆಲ್ಲ ಎದೆಯೊಡ್ಡಿ, ಕೊನೆಗೆ ಸ್ವತಃ ಹೊಸ ಇತಿಹಾಸವನ್ನೇ ಸೃಷ್ಟಿಸಿದರು! ನೆಹರು ಸಂಪುಟದಲ್ಲಿ ಆಹಾರ ಮತ್ತು ಕೃಷಿ ಸಚಿವರಾಗಿದ್ದ ಮುನ್ಷಿಯವರು, ಸರಕಾರವು ರಚಿಸಿದ ’ಸೋಮನಾಥ ದೇಗುಲ ಪುನರ್ನಿರ್ಮಾಣ ಉಸ್ತುವಾರಿ ಸಮಿತಿ’ಯ ಅಧ್ಯಕ್ಷರೂ ಆದರು. ವಲ್ಲಭಬಾಯಿ ಪಟೇಲರು ಇನ್ನೂ ಹೆಚ್ಚು ದಿನ ನಮ್ಮೊಂದಿಗಿದ್ದಿದ್ದರೆ ಮುನ್ಷಿಯವರ ಪಾಲಿನ ಕೆಲಸ ಸುಲಭವಾಗುತ್ತಿತ್ತು. ಆದರೆ, ಪಟೇಲರು 1950ರ ಡಿಸೆಂಬರ್ 15ರಂದು ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿ ಹೋದರು. ಇಲ್ಲಿಂದ ಮುಂದಕ್ಕೆ ಮುನ್ಷಿಯವರಿಗೆ ವಿಪರೀತ ಕಷ್ಟಗಳು ಎದುರಾಗತೊಡಗಿದವು. ಏಕೆಂದರೆ, ಅದುವರೆಗೂ ಕೇವಲ ಎಡಪಂಥೀಯ ಬುದ್ಧಿಜೀವಿಗಳು ಮತ್ತು ಸರಕಾರದ ಹೊರಗಿದ್ದವರು ಮಾತ್ರ ಸೋಮನಾಥ ಮಂದಿರದ ಪುನರ್ನಿರ್ಮಾಣವನ್ನು ವಿರೋಧಿಸುತ್ತಿದ್ದರು. ಈಗ ಅವರೊಂದಿಗೆ ಸ್ವತಃ ಜವಾಹರಲಾಲ್ ನೆಹರು ಕೂಡ ಸೇರಿಕೊಂಡು, ಸೋಮನಾಥ ಮಂದಿರ ಪುನರ್ನಿರ್ಮಾಣದ ಕೆಲಸವು ಜಾತ್ಯತೀತ ತತ್ತ್ವದ ಉಲ್ಲಂಘನೆ ಎನ್ನುವ ವಾದವನ್ನು ತೇಲಿಬಿಡಲು ಶುರು ಮಾಡಿದರು! ಇದರ ಪರಿಣಾಮವಾಗಿ ಮುನ್ಷಿಯವರು ಒಬ್ಬೊಂಟಿಯಾದರು. ನಿಜ ಹೇಳಬೇಕೆಂದರೆ, ನೆಹರು ಸಂಪುಟದಲ್ಲಿದ್ದ ಅನೇಕ ಸಚಿವರು ಖಾಸಗಿಯಾಗಿ ಸೋಮನಾಥ ಪುನರ್ನಿರ್ಮಾಣದ ಪರವಾಗಿದ್ದರೂ ಬಹಿರಂಗವಾಗಿ ಅವರ‍್ಯಾರೂ ಅದನ್ನು ಹೇಳುತ್ತಿರಲಿಲ್ಲ. ಆ ದಿನಗಳಲ್ಲಿ ನಡೆದ ಒಂದು ಸಂಪುಟ ಸಭೆಯ ನಂತರವಂತೂ ನೆಹರು ಅವರು ಮುನ್ಷಿಯವರಿಗೆ, “ಈ ಸೋಮನಾಥ ಪುನರ್ನಿರ್ಮಾಣದ ಕೆಲಸವನ್ನು ನಾನು ಒಪ್ಪುವುದಿಲ್ಲ. ಇದೆಲ್ಲ ಹಿಂದೂ ಪುನರುತ್ಥಾನದ ಕೆಲಸವಷ್ಟೆ,’’ ಎಂದು ಹೇಳಿದ್ದುಂಟು. ಇದನ್ನು ಒಪ್ಪದ ಮುನ್ಷಿಯವರು, ಆ ಸಂಪುಟ ಸಭೆಯ ಮರುದಿನವೇ -ಅಂದರೆ 1951ರ ಏಪ್ರಿಲ್ 24ರಂದು- ನೆಹರು ಅವರಿಗೆ ತಕ್ಕ ಪ್ರತ್ಯುತ್ತರ ಬರೆದು, ಸೋಮನಾಥದ ಪುನರ್ನಿರ್ಮಾಣವು ಭಾರತದ ಸಾಮೂಹಿಕ ಜಾಗೃತಿಯ ಭಾಗವೆಂದು ಬಣ್ಣಿಸಿದರು. ಅಲ್ಲದೆ, ಸೋಮನಾಥ ದೇಗುಲವನ್ನು ಅಲ್ಲಿನ ಪುರಾತನ ಸಂಪ್ರದಾಯದಂತೆ ಹಿಂದೂಯೇತರರಿಗೂ ಮುಕ್ತವಾಗಿ ತೆರೆಯಲಾಗುವುದು. ಶತಶತಮಾನ ಗಳಿಂದಲೂ ದೇವಸ್ಥಾನಗಳಿಗೆ ಭಕ್ತಿ-ಶ್ರದ್ಧೆಗಳಿಂದ ನಡೆದುಕೊಂಡು ಬರುತ್ತಿರುವ ಭಾರತೀಯರ ನಂಬಿಕೆಗಳನ್ನು ಬುಡಮೇಲು ಮಾಡುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇಂತಹ ಅರ್ಥಹೀನ ಸ್ವಾತಂತ್ಯಕ್ಕೆ ನಾನು ಬೆಲೆಯನ್ನೂ ಕೊಡುವುದಿಲ್ಲ. ಸೋಮನಾಥ ಮಂದಿರದ ಪುನರ್ನಿರ್ಮಾಣವು ಭಾರತೀಯರಿಗೆ ಮತ್ತೊಮ್ಮೆ ಶುದ್ಧವಾದ ಧರ್ಮದ ಪರಿಕಲ್ಪನೆಯನ್ನು ಒದಗಿಸುತ್ತದೆ ಎನ್ನುವುದರಲ್ಲಿ ನನಗೆ ಅನುಮಾನವಿಲ್ಲ. ಜೊತೆಗೆ, ದೇಶವು ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡಿರುವ ಈ ಸಂದರ್ಭದಲ್ಲಿ ನಮ್ಮ ಜನರಿಗೆ ಅಗತ್ಯವಾಗಿರುವ ಶಕ್ತಿ-ಸಾಮರ್ಥ್ಯಗಳನ್ನೂ ಇದು ದಯಪಾಲಿಸಲಿದೆ,’’ ಎಂದು ಮುನ್ಷಿಯವರು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದರು. ನಿಜಕ್ಕೂ ಅದೊಂದು ಪ್ರಚಂಡ ಧೈರ್ಯದಿಂದ ಬರೆದ ಪತ್ರವೆನ್ನುವುದು ನಿಸ್ಸಂಶಯ!

ಬಾಬು ರಾಜೇಂದ್ರ ಪ್ರಸಾದರ ಮಾತು

ಮುನ್ಷಿಯವರು ಸೋಮನಾಥ ಪುನರ್ನಿರ್ಮಾಣದ ಸಾಹಸವನ್ನು ಹೇಗೆ ಪೂರೈಸಿದರು ಎನ್ನುವುದನ್ನು ಅವರ ಮಗದೊಂದು ಆಸಕ್ತಿದಾಯಕ ಕೃತಿಯಾದ ‘ಸೋಮನಾಥ: ದಿ ಶ್ರೈನ್ ಎಟರ್ನಲ್’ನಲ್ಲಿ ಗಮನಿಸಬಹುದು. ಮುನ್ಷಿಯವರ ’ಪಿಲಿಗ್ರಿಮೇಜ್ ಟು ಫ್ರೀಡಂ’ನಲ್ಲೂ ಸೋಮನಾಥಕ್ಕೆ ಸಂಬಂಧಿಸಿದಂತೆ ಹಲವು ಅಧ್ಯಾಯಗಳಿವೆ. ಇಷ್ಟೇ ಅಲ್ಲ, ಜಾತ್ಯತೀತತೆಯ ಸೋಗಿನಲ್ಲಿ ಹಿಂದೂ ನಂಬಿಕೆಗಳಿಗೆ ಚ್ಯುತಿ ತರುವ ಯತ್ನದ ವಿರುದ್ಧ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಎದುರಾದ ಅಡ್ಡಿ-ಆತಂಕಗಳನ್ನೆಲ್ಲ ನಿವಾರಿಸಿಕೊಂಡು, ಅಂತೂ ಇಂತೂ ಪೂರ್ಣವಾದ ಸೋಮನಾಥ ದೇಗುಲವನ್ನು ಆಗಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಉದ್ಘಾಟಿಸಬೇಕೆಂದು ಮುನ್ಷಿಯವರು ನಿರ್ಧರಿಸಿದರು. ಆದರೆ ಸೋಮನಾಥ ದೇಗುಲದ ಉದ್ಘಾಟನೆಗೆ ಪ್ರಸಾದ್ ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ, ಇದಕ್ಕೆ ನೆಹರು ಏನಾದರೂ ಕ್ಯಾತೆ ತೆಗೆಯುತ್ತಾರೋ ಏನೋ ಎನ್ನುವ ಆತಂಕ ಆಗ ಮುನ್ಷಿಯವರಲ್ಲಿತ್ತು. ಆದರೆ, ಪ್ರಸಾದ್ ಅವರು’

ನಾನು ಕೇವಲ ಸೋಮನಾಥ ದೇಗುಲವನ್ನಷ್ಟೇ ಅಲ್ಲ, ಯಾರಾದರೂ ಪ್ರೀತಿಯಿಂದ ಒಂದು ಮಸೀದಿಯನ್ನೋ, ಇನ್ನೊಂದು ಚರ್ಚನ್ನೋ ಉದ್ಘಾಟಿಸಲು ಕರೆದರೆ ಅದನ್ನೂ ನೆರವೇರಿಸುತ್ತೇನೆ. ನಮ್ಮ ದೇಶವು ಅಧಾರ್ಮಿಕವೂ ಅಲ್ಲ, ಧರ್ಮವಿರೋಧಿಯೂ ಅಲ್ಲ. ಇದೇ ನಮ್ಮ ದೇಶದ ಜಾತ್ಯತೀತತೆಯ ನಿಜವಾದ ಬುನಾದಿ..’’

ಎಂದು ಹೇಳಿ, ಮುನ್ಷಿಯವರ ಆಹ್ವಾನವನ್ನು ಕೂಡಲೇ ಒಪ್ಪಿಕೊಂಡರು. ಅಂದಂತೆ, ಮುನ್ಷಿಯವರು ಅಂದುಕೊಂಡಿದ್ದಂತೆಯೇ ಸೋಮನಾಥ ದೇಗುಲವನ್ನು ಉದ್ಘಾಟಿಸಲು ಒಪ್ಪಿಕೊಂಡ ಬಾಬು ರಾಜೇಂದ್ರ ಪ್ರಸಾದ್ ಅವರ ವಿರುದ್ಧ ನೆಹರು ತಕರಾರು ತೆಗೆದರು. ಆದರೆ ಆಗಿನ ರಾಷ್ಟ್ರಪತಿಗಳು ಈ ಅತಾರ್ಕಿಕ ತಕರಾರಿಗೆ ಸೊಪ್ಪು ಹಾಕದೆ, ದೇಗುಲದ ಉದ್ಘಾಟನೆಯನ್ನು ನೆರವೇರಿಸಿ, “ಸೋಮನಾಥ ದೇಗುಲವು ಭಾರತದ ರಾಷ್ಟ್ರೀಯ ನಂಬಿಕೆಯ ಪ್ರತೀಕ’’ ಎಂದು ಕೊಂಡಾಡಿದರು. ಆಶ್ಚರ್ಯವೆಂದರೆ, ಸೋಮನಾಥ ದೇಗುಲವನ್ನು ಪುನರ್ನಿರ್ಮಿಸಿದ್ದನ್ನು ವಿರೋಧಿಸಿ ಪಾಕಿಸ್ತಾನದ ಕರಾಚಿಯಲ್ಲಿ ಒಂದು ದೊಡ್ಡ ಸಾರ್ವಜನಿಕ ಸಭೆ ನಡೆದು, ಅಲ್ಲಿ ಭಾರತ ಸರಕಾರದ ವಿರುದ್ಧ ಖಂಡನೆ ವ್ಯಕ್ತವಾಗಿತ್ತು! ಒಟ್ಟಿನಲ್ಲಿ ಹತ್ತುಹಲವು ದೃಷ್ಟಿಗಳಿಂದ ಸೋಮನಾಥ ಮಂದಿರಕ್ಕೆ ಈಗಲೂ ಅನನ್ಯವಾದ ಸ್ಥಾನವಿದೆ.

ನಮ್ಮ ಪಕ್ಷವು ಕೈಗೊಂಡ ರಾಮ ರಥಯಾತ್ರೆಯನ್ನು ನಾನು ಮುನ್ನಡೆಸುವುದರ ಹಿಂದೆ ಇದ್ದ ಕಾರಣಗಳೇನೇನು ಎನ್ನುವುದನ್ನು ಜನರಿಗೆ ಅರುಹಲು ನಾನು ಸೋಮನಾಥ ಮಂದಿರದ ಧ್ವಂಸ ಮತ್ತು ಅದರ ಪುನರ್ನಿರ್ಮಾಣದ ವೃತ್ತಾಂತವನ್ನು ಹೇಳಬೇಕಾಯಿತು. 1980ರ ದಶಕದ ಮಧ್ಯಭಾಗದಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ ವಿಚಾರವು ರಾಷ್ಟ್ರ ರಾಜಕಾರಣದ ಕೇಂದ್ರಸ್ಥಾನಕ್ಕೆ ಬಂತಲ್ಲವೇ? ಆಗ ನನ್ನಲ್ಲಿ ಸೋಮನಾಥ ಮಂದಿರದ ಪುನರ್ನಿರ್ಮಾಣದ ಕನಸನ್ನು ನನಸಾಗಿಸುವಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಬಾಬು ರಾಜೇಂದ್ರ ಪ್ರಸಾದ್ ಮತ್ತು ಕೆ.ಎಂ.ಮುನ್ಷಿಯವರು ಆಡಿದ ನುಡಿಗಳೆಲ್ಲವೂ ಪ್ರತಿಧ್ವನಿಸತೊಡಗಿದವು. ವಾಸ್ತವವಾಗಿ, ಅಯೋಧ್ಯಾ ಆಂದೋಲನವು ಹತ್ತು ಹಲವು ವಿಧಗಳಲ್ಲಿ ಸೋಮನಾಥ ಪುನರ್ನಿರ್ಮಾಣದ ಮುಂದುವರಿಕೆಯೇ ಆಗಿತ್ತು.

ರಥಯಾತ್ರೆಯ ನಿರ್ಧಾರ

1990ರಲ್ಲಿ ನಾನು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷನಾಗಿದ್ದೆ. ಆಗ ನಮ್ಮ ಪಕ್ಷವು ನನ್ನ ನೇತೃತ್ವದಲ್ಲೇ ಅಯೋಧ್ಯಾ ಆಂದೋಲನಕ್ಕಾಗಿ ಸಾರ್ವಜನಿಕ ಬೆಂಬಲವನ್ನು ಕ್ರೋಡೀಕರಿಸಲು ರಾಮ ರಥಯಾತ್ರೆಯನ್ನು ನಡೆಸಬೇಕೆಂಬ ತೀರ್ಮಾನವನ್ನು ಕೈಗೊಂಡಿತು. ಆ ಕ್ಷಣದಲ್ಲೇ ನಾನು, ಏನೇ ಆಗಲಿ, ಸೋಮನಾಥದಿಂದಲೇ ನಾನು ಈ ಐತಿಹಾಸಿಕ ರಥಯಾತ್ರೆಯನ್ನು ಆರಂಭಿಸಬೇಕು ಎಂದು ಸಂಕಲ್ಪ ಮಾಡಿದೆ. ದೇಶದ ರಾಜಕೀಯ ಮತ್ತು ಬೌದ್ಧಿಕ ಪಾಳೆಯಗಳ ಧ್ರುವೀಕರಣಕ್ಕೆ ಕಾರಣವಾದ ಅಯೋಧ್ಯಾ ಆಂದೋಲನಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ನಾನು ಸದಾ ಸೋಮನಾಥವನ್ನು ಉಲ್ಲೇಖಿಸುತ್ತಲೇ ಇದ್ದೆ. ವಾಸ್ತವವಾಗಿ ಇಂತಹ ಧ್ರುವೀಕರಣವು 1950ರ ದಶಕದಿಂದಲೂ ದೇಶದಲ್ಲಿತ್ತು. ಆದರೆ, ಅಯೋಧ್ಯಾ ಆಂದೋಲನವು ಇದನ್ನು ಮತ್ತಷ್ಟು ವಿಸ್ತೃತಗೊಳಿಸಿತು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ವಿವಾದಿತ ಬಾಬರಿ ಮಸೀದಿಯು ನೆಲಕ್ಕುರುಳಿದ್ದು ದುರದೃಷ್ಟಕರ ಘಟನೆ ಎನ್ನುವುದೇನೋ ನಿಜ. ಆದರೆ, ಇದಕ್ಕೆ ಕಾರಣವಾದ ಅಂಶಗಳು ಯಾವುವು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ ಎನ್ನುವುದು ದೃಢವಾಗುತ್ತದೆ. ರಾಮ ಜನ್ಮಭೂಮಿಯಾದ ಅಯೋಧ್ಯೆಯ ಬಗ್ಗೆ ಹಿಂದೂಗಳಲ್ಲಿ ಶತಶತಮಾನಗಳಿಂದ ಮಡುಗಟ್ಟಿದ್ದ ನಂಬಿಕೆಯು ಅಂದು ಆಸ್ಫೋಟಿಸಿ, ವಿವಾದಿತ ಜಾಗವು ನೆಲಸಮವಾಯಿತು. ಜೊತೆಗೆ, ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯೊಂದಿಗೆ ತಾತ್ಕಾಲಿಕ ದೇವಸ್ಥಾನದ ನಿರ್ಮಾಣಕ್ಕೂ ಅದು ದಾರಿ ಮಾಡಿಕೊಟ್ಟಿತು. ವ್ಯಂಗ್ಯವೆಂದರೆ, ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಅಯೋಧ್ಯೆಯ ವಿವಾದಿತ ಜಾಗದಲ್ಲಿ ಇದ್ದಿದ್ದು ಮಸೀದಿ. ಅಲ್ಲಿ ಮಂದಿರ ತಲೆಯೆತ್ತಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ” ಎಂದು ಹೇಳತೊಡಗಿತು. ಆದರೆ, ಅದೇ ಪಕ್ಷವು ಉದ್ದೇಶಪೂರ್ವಕವಾಗಿಯೋ ಅಸಹಾಯಕತೆ ಯಿಂದಲೂ ಕೊನೆಗೆ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ತಾತ್ಕಾಲಿಕ ಮಂದಿರ ನಿರ್ಮಿಸಲು ಅನುಮತಿ ಕೊಟ್ಟಿತಲ್ಲದೆ, ನಿತ್ಯಪೂಜೆಗೂ ಅವಕಾಶ ಮಾಡಿಕೊಟ್ಟಿತು. ಇದನ್ನು ಆಗಿನ ಪ್ರಧಾನಮಂತ್ರಿ ಯವರ ಜಾಣತನವೆನ್ನಬೇಕೋ, ಅಥವಾ ಆ ದೇವರೇ ಇದರಲ್ಲಿ ಮಧ್ಯೆ ಪ್ರವೇಶಿಸಿದ ಎನ್ನಬೇಕೋ ನನಗೆ ಗೊತ್ತಿಲ್ಲ.

ಯಾವುದೇ ದೊಡ್ಡ ಚಳವಳಿಯಾದರೂ ಅದರ ಆಂತರ್ಯದಲ್ಲಿ ಅಲ್ಲಿನ ಜನರ ಆಶೋತ್ತರಗಳು, ಮಹದಾಸೆಗಳು ಮತ್ತು ಶಕ್ತಿಗಳ ಸಂಚಯವಾಗುತ್ತದೆ. ಆದರೆ, ಒಂದು ಇಡೀ ದೇಶದ ಆತ್ಮವೆನಿಸಿಕೊಂಡಿರುವ ಶಕ್ತಿಯೊಂದಿಗೆ ಈ ಉತ್ಕಟತೆ ಮತ್ತು ಪ್ರಚಂಡ ಚೈತನ್ಯಗಳು ಕೂಡಿಕೊಳ್ಳುವುದು ತುಂಬಾ ಅಪರೂಪ. ಇವೆರಡೂ ಕೂಡಿಬಂದರೆ ಒಂದು ದೇಶದ ಇತಿಹಾಸವು ನಿಜವಾದ ಅರ್ಥದಲ್ಲಿ ಆ ಅಗಾಧ ಶಕ್ತಿಯು ಹೊಸ ಚರಿತ್ರೆಯನ್ನೇ ಸೃಷ್ಟಿಸುತ್ತದೆ ಎನ್ನುವುದು ಸಂಶಯಾತೀತ. ಇಂತಹ ಒಂದು ವಿದ್ಯಮಾನವನ್ನು ಮಾತ್ರ ನಿಜವಾದ ಚಳವಳಿ ಎಂದು ಕರೆಯಬಹುದು. ನನ್ನ ನೇತೃತ್ವದಲ್ಲಿ ನಡೆದ ರಾಮ ರಥಯಾತ್ರೆಯು ಇಂಥದ್ದೊಂದು ಅಪೂರ್ವವಾದ ಸಾಮೂಹಿಕ ಆಂದೋಲನವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಲ್ಲಾಮಾ ಇಕ್ಬಾಲ್’ರ ಪದ್ಯ

ರಾಮ ಜನ್ಮಭೂಮಿ ಆಂದೋಲನಕ್ಕೆ ಇಡೀ ದೇಶದ ಉದ್ದಗಲಕ್ಕೂ ಅಷ್ಟೊಂದು ದೊಡ್ಡ ಮಟ್ಟದ ಬೆಂಬಲ ಸಿಕ್ಕಿದ್ದೇಕೆ? ಈ ಚಳವಳಿಯು ಅಖಂಡ ಭಾರತವನ್ನೆಲ್ಲ ಆವರಿಸಿಕೊಂಡಿದ್ದೇಕೆ? ಈ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕೆಂದರೆ, ಭಾರತದ ಜನಜೀವನದಲ್ಲಿ ರಾಮ ಮತ್ತು ರಾಮಾಯಾಣಗಳಿಗೆ ಇರುವ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ರಾಮಾಯಣ ಮತ್ತು ಮಹಾಭಾರತಗಳು ಶತಶತಮಾನಗಳಿಂದಲೂ ಭಾರತದ ಸಾಂಸ್ಕೃತಿಕ ಚಹರೆಗಳನ್ನು ಮತ್ತು ಇಲ್ಲಿನ ಮೌಲ್ಯ ವ್ಯವಸ್ಥೆಗಳನ್ನು ರೂಪಿಸಿವೆ. ಹಾಗೆಯೇ, ರಾಮನು ಆದರ್ಶ ಆಳ್ವಿಕೆಗೆ ಇನ್ನೊಂದು ಹೆಸರಾಗಿದ್ದು, ರಾಮರಾಜ್ಯ ಎನ್ನುವ ಪರಿಕಲ್ಪನೆ ನಮಗೆ ಅವನಿಂದ ಹರಿದುಬಂದಿದೆ. ಸ್ವತಃ ಮಹಾತ್ಮ ಗಾಂಧಿಯವರಂಥ ದೊಡ್ಡ ವ್ಯಕ್ತಿಯೇ ರಾಮರಾಜ್ಯದ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದರು. ಪುನಃ ರಾಮಾಯಣದತ್ತ ಹೊರಳುವುದಾದರೆ ಅಲ್ಲಿನ ಪ್ರತಿಯೊಂದು ಪಾತ್ರವೂ- ರಾಮ, ಸೀತೆ, ಲಕ್ಷ್ಮಣ, ಕೌಸಲ್ಯೆ, ಆಂಜನೇಯ, ದಶರಥ, ಲವ-ಕುಶ, ರಾವಣ, ಶಬರಿ, ಶ್ರವಣಕುಮಾರ, ಅಹಲ್ಯೆ, ಸುಗ್ರೀವ, ವಿಭೀಷಣ- ಭಾರತೀಯರ ಹೃದಯಗಳಲ್ಲಿ ಯುಗಯುಗಳಿಂದಲೂ (ಕನಿಷ್ಠಪಕ್ಷ ತ್ರೇತಾಯುಗದಿಂದ) ಚಿರಸ್ಥಾಯಿಯಾಗಿವೆ. ರಾಮಾಯಣವನ್ನು ಬರೆದ ವಾಲ್ಮೀಕಿಯೂ ಇದಕ್ಕೆ ಹೊರತಲ್ಲ. ರಾಮಾಯಣವಿಲ್ಲದ ಒಂದೇಒಂದು ಭಾರತೀಯ ಭಾಷೆಯಾಗಲಿ, ಜನಪದ ಸಂಪ್ರದಾಯವಾಗಲಿ ನಮ್ಮಲ್ಲಿಲ್ಲ; ರಾಮನ ಹೆಸರಿಲ್ಲದ ಒಂದೇಒಂದು ಬುಡಕಟ್ಟಾಗಲಿ, ಜಾತಿಯಾಗಲಿ ಇಲ್ಲಿಲ್ಲ; ರಾಮನ ಮಹಿಮೆಯನ್ನು ಕೊಂಡಾಡದ ಕವಿಯಾಗಲಿ, ಸಂತನಾಗಲಿ ಎಲ್ಲೂ ಕಂಡುಬಂದಿಲ್ಲ. ಈ ಮಾತು ತುಳಸೀದಾಸರಿಂದ ಹಿಡಿದು ಸೂರದಾಸರವರೆಗೆ, ಕಬೀರನಿಂದ ಹಿಡಿದು ತುಕಾರಾಮನವರೆಗೆ, ಅಸ್ಸಾಮಿನ ಶಂಕರದೇವನಿಂದ ಹಿಡಿದು ತಮಿಳುನಾಡಿನ ಕಂಬ ಕವಿಯವರೆಗೆ ಸತ್ಯ; ಸಿಖ್ಖರು, ಬೌದ್ಧರು, ಜೈನರು ಮತ್ತು ಆರ್ಯ ಸಮಾಜದವರು ಕೂಡ ತಮ್ಮತಮ್ಮದೇ ಆದ ರಾಮನ ರೂಪ ಮತ್ತು ರಾಮಾಯಣದ ಆವೃತ್ತಿಗಳನ್ನು ಅನುಸರಿಸುತ್ತಾರೆ. ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ್ ಸಾಹಿಬ್’ನಲ್ಲಿ ರಾಮನ ಹೆಸರು 2,400 ಸಲ ಬರುತ್ತದೆ!

  • ದೇಶ ವಿಭಜನೆಗೆ ಮೊದಲು ದೇಶದಾದ್ಯಂತ ಮನೆಮಾತಾಗಿದ್ದ ಹೆಸರಾಂತ ಉರ್ದು ಮತ್ತು ಪರ್ಷಿಯನ್ ಕವಿ ಅಲ್ಲಾಮಾ ಇಕ್ಬಾಲ್ ಅವರು ರಾಮನನ್ನು ಭಾರತದ ಆಧ್ಯಾತ್ಮಿಕ ನಾಯಕ’ (ಇಮಾಂ-ಇ-ಹಿಂದ್) ಎಂದು ವರ್ಣಿಸಿ, ರಾಮನ ಗುಣಗಾನ ಮಾಡಿ ಒಂದು ಅದ್ಭುತವಾದ ಪದ್ಯವನ್ನೇ ಬರೆದಿದ್ದರು. ಆ ಪದ್ಯ ಹೀಗಿದೆ ನೋಡಿ…

“ಭಾರತವೆಂಬ ಬೋಗುಣಿಯು
ತುಂಬಿ ತುಳುಕುತ್ತಿದೆ ಸದಾ ಸತ್ಯದಿಂದ;

ಪಶ್ಚಿಮದ ತತ್ತ್ವಜ್ಞಾನಿಗಳು ಕೂಡ
ಭಾರತದ ಶ್ರದ್ಧಾವಂತ ಭಕುತರೇ ಅಹುದು.

ಈಕೆಯ ನಿಗೂಢ ಜಗತ್ತಿನಿಂದ
ಅರಿಯಬೇಕಾದ್ದು ಯಥೇಚ್ಛ
ಮಿನುಗುತ್ತಿವೆ ಅಂಬರದಲಿ ಈ ನೆಲದ ತಾರೆಗಳು

ಆಳಿದ್ದಾರೆ ಈ ನೆಲವನ್ನು ಲೆಕ್ಕವಿಲ್ಲದಷ್ಟು ದೊರೆಗಳು
ಆದರೂ ಯಾರೂ ಸಾಟಿಯಿಲ್ಲ ನಮ್ಮ ರಾಮನಿಗೆ;

ಅರಿತವರೆಲ್ಲರೂ ಅರುಹುವರು
ರಾಮನೇ ಈ ನೆಲದ ಆಧ್ಯಾತ್ಮಿಕ ನಾಯಕನೆಂದು

ಅವನ ದೀಪ ಕೊಟ್ಟಿದೆ ತಿಳಿವಿನ ಬೆಳಕನ್ನು
ಅದು ಕೈಹಿಡಿದು ನಡೆಸುತ್ತಲೇ ಇದೆ, ನೆನಪಿರಲಿ,

ಇಡೀ ಮನುಕುಲವನ್ನು
ರಾಮನೆಂದರೆ ಧೀರ,
ರಾಮನೆಂದರೆ ಶೂರ,

ಹಿಡಿದಿರುವನು ಕುಶಲನಾಗಿ ಖಡ್ಗವನ್ನು
ಉಂಟು ಅತಿದೀನರೆಡೆಗೆ ಅವನ ಅನುಪಮ ಒಲವು
ಪ್ರೀತಿ, ಒಲಮೆಗಳಲ್ಲವನದು ಸಾಟಿಯಿಲ್ಲದ ಚೆಲುವು’’

(ರಾಮನ ಬಗ್ಗೆ ಇಂಥದ್ದೊಂದು ಸುಂದರವಾದ ಕವಿತೆಯನ್ನು ಬರೆದ ಇಕ್ಬಾಲ್, ಆಮೇಲಾಮೇಲೆ ದೇಶ ವಿಭಜನೆಯ ಪರವಾಗಿ ನಿಂತರೆನ್ನುವುದು ಬೇರೆ ಮಾತು. ಅಲ್ಲದೆ, ದೇಶ ಇಬ್ಭಾಗವಾದ ಮೇಲೆ ಅವರು ಪಾಕಿಸ್ತಾನಕ್ಕೂ ತೆರಳಿದರು. ಆ ದೇಶವು ಅವರನ್ನು ತನ್ನ ’ರಾಷ್ಟ್ರಕವಿ’ ಎಂದು ಕರೆಯಿತು. ಭಾರತವು ’ಸಾರೇ ಜಹಾಂಸೇ ಅಚ್ಛಾ, ಹಿಂದೂಸ್ತಾನ್ ಹಮಾರಾ ಹಮಾರಾ’ ಎನ್ನುವ ಅನುಪಮ ಗೀತೆಗಾಗಿ ಇಕ್ಬಾಲ್ ಅವರನ್ನು ಇಂದಿಗೂ ಹೆಮ್ಮೆ-ಅಭಿಮಾನಗಳಿಂದ ನೆನಪಿಸಿಕೊಳ್ಳುತ್ತದೆ ಎನ್ನುವುದು ಸತ್ಯ).

ಗಾಂಧೀಜಿ ರಾಮರಾಜ್ಯ

ಮಹಾತ್ಮ ಗಾಂಧೀಜಿ ಕೂಡ ರಾಮ ನಾಮಸ್ಮರಣೆಯನ್ನು ಎಂದಿಗೂ ತಪ್ಪಿಸಿದವರಲ್ಲ. ರಾಮ ಅವರ ಪ್ರತಿಯೊಂದು ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿದ್ದ. (ರಾಮ ನಾಮದ ಮಹಿಮೆ ಎಷ್ಟೆಂಬುದನ್ನು ಸ್ವತಃ ಅವರು ತಮ್ಮ ಆತ್ಮಕಥೆ ’ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರೂತ್’ನಲ್ಲೂ ಬರೆದಿದ್ದಾರೆ). ನಿಜ ಹೇಳಬೇಕೆಂದರೆ, ಅವರು ರಾಮನನ್ನು ಕೇವಲ ಹಿಂದೂ ದೈವವಾಗಿ ಭಾವಿಸಿರಲಿಲ್ಲ. ಬದಲಿಗೆ, ರಾಮನು ಅವರ ದೃಷ್ಟಿಯಲ್ಲಿ ವಿಶ್ವಭ್ರಾತೃತ್ವದ ಮತ್ತು ಭಾರತದ ಮಟ್ಟಿಗೆ ರಾಷ್ಟ್ರೀಯ ಏಕತೆಯ ಶಕ್ತಿಯಾಗಿದ್ದ. ಅವರ ಯಾವುದೇ ಒಂದು ಪ್ರಾರ್ಥನಾ ಸಭೆಯು ಶ್ರೀ ರಾಮ್‌ಧನ್ ಅವರ ರಚನೆಯಾದ ’ರಘುಪತಿ ರಾಘವ ರಾಜಾರಾಮ್, ಪತಿತಪಾವನ ಸೀತಾರಾಮ್, ಈಶ್ವರ ಅಲ್ಲಾಹ್ ತೇರೋನಾಮ್, ಸಬ್‌ಕೋ ಸನ್ಮತಿ ದೇ ಭಗವಾನ್’ ಎನ್ನುವ ಉದಾರ ಸ್ತುತಿಯು ಪಠಣವಿಲ್ಲದೆ ಮುಗಿಯುತ್ತಿರಲಿಲ್ಲ. ಇದಕ್ಕಾಗಿ ಕೆಲವು ಮಾಕ್ಸ್’ವಾದಿಗಳು ಮತ್ತು ಮುಸ್ಲಿಮರು ಇಂದಿಗೂ ಗಾಂಧೀಜಿಯವರು ರಾಮರಾಜ್ಯ ಪರಿಕಲ್ಪನೆಗೆ ಒತ್ತು ಕೊಡುವ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಗೆ ಹಿಂದೂ ಬಣ್ಣವನ್ನು ಬಳಿದರು,” ಎಂದು ಟೀಕಿಸುತ್ತಾರೆ. ಆದರೆ ಸ್ವತಃ ಗಾಂಧೀಜಿಯವರೇ ತಮ್ಮ ರಾಮರಾಜ್ಯದ ಕಲ್ಪನೆಯ ಹಿಂದಿರುವ ಘನವಾದ ತತ್ತ್ವವನ್ನು ಸ್ಪಷ್ಟಪಡಿಸುತ್ತ “ನನ್ನ ಕಲ್ಪನೆಯ ರಾಮರಾಜ್ಯವೆಂದರೆ ಅದು ಹಿಂದೂಗಳ ಪ್ರಭುತ್ವವಲ್ಲ. ಬದಲಿಗೆ, ಅದೊಂದು ದಿವ್ಯವಾದ ವ್ಯವಸ್ಥೆ…. ಅದು ದೇವಾನುದೇವತೆಗಳಿರುವ ಸಾಮ್ರಾಜ್ಯ,’’ ಎಂದಿದ್ದರು.

ಒಟ್ಟಿನಲ್ಲಿ ರಾಮನೆಂದರೆ ಭಾರತದ ಅಸ್ಮಿತೆ, ಇಲ್ಲಿನ ಏಕತೆ ಮತ್ತು ಅಖಂಡತೆಯ ಸಂಕೇತ. ಹಲವು ವಿಧಗಳಲ್ಲಿ ರಾಮನು ಭಾರತೀಯರ ಹಂಬಲವಾದ ಉನ್ನತ ಮೌಲ್ಯಗಳುಳ್ಳ ಬಾಳ್ವೆಗೊಂದು ಆದರ್ಶ. ಹೀಗಾಗಿ ಅಯೋಧ್ಯೆಯು ಯುಗಯುಗಾಂತರ ಗಳಿಂದಲೂ ಭಾರತೀಯರ ಶ್ರದ್ಧೆ, ಭಕ್ತಿ ಮತ್ತು ನಂಬಿಕೆಗಳ ಪೂಜ್ಯಸ್ಥಾನವಾಗಿರುವುದು ಅತ್ಯಂತ ಸಹಜವಾಗಿದೆ. ಇದರಲ್ಲಿ ಆಶ್ಚರ್ಯದಿಂದ ಹುಬ್ಬೇರಿಸುವಂಥದ್ದಾಗಲಿ, ಅನುಮಾನದಿಂದ ಪ್ರಶ್ನಿಸುವುದಾಗಲಿ, ಅತಾರ್ಕಿಕ ವಾದಗಳನ್ನೂ ಹೂಡಿ ನಿರಾಕರಿಸುವಂಥದ್ದಾಗಲಿ ಏನೇನೂ ಇಲ್ಲ.

ಅಯೋಧ್ಯೆ ಮತ್ತು ಸೋಮನಾಥ

ವಾಸ್ತವವಾಗಿ, ಸೋಮನಾಥಕ್ಕೂ ಅಯೋಧ್ಯೆಗೂ ಹಲವು ಹೋಲಿಕೆಗಳಿವೆ. ಮುಖ್ಯವಾಗಿ, ಸೋಮನಾಥದ ಮೇಲೆ ಹೊರಗಿನ ದಾಳಿಕೋರರ ವಕ್ರದೃಷ್ಟಿ ಬಿದ್ದಂತೆಯೇ ಅಯೋಧ್ಯೆಯೂ ವಿದೇಶೀ ಆಕ್ರಮಣಕಾರನ ದಾಳಿಗೆ ತುತ್ತಾಯಿತು. ಅಯೋಧ್ಯೆಯ ಮೇಲೆ ಹೀಗೆ ಕ್ರೌರ್ಯದಿಂದ ಎರಗಿದವನು ಬಾಬರ್. ಇವನೇ ಭಾರತವನ್ನು ಶತಮಾನಗಳ ಕಾಲ ಆಳಿದ ಮೊಘಲ್ ಸಾಮ್ರಾಜ್ಯ ಸಂಸ್ಥಾಪಕ. 1528ರಲ್ಲಿ ಈತ ತನ್ನ ದಂಡನಾಯಕನಾಗಿದ್ದ ಮೀರ್ ಬಾಖಿಗೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕಟ್ಟುವಂತೆ ಆದೇಶಿಸಿದ. ಈತ ಅಯೋಧ್ಯೆಯ ರಾಮ ಜನ್ಮಸ್ಥಾನದಲ್ಲಿದ್ದ ದೇಗುಲವನ್ನು ಧ್ವಂಸ ಮಾಡಿ, ಅಲ್ಲೊಂದು ಮಸೀದಿ ಕಟ್ಟಿದ ಎಂದು ಹಿಂದೂಗಳು ಇಂದಿಗೂ ಗಾಢವಾಗಿ ನಂಬಿದ್ದಾರೆ. ಸ್ವತಃ ಮುಸ್ಲಿಂ ಇತಿಹಾಸಕರರು/ಪ್ರವಾಸಿಗಳ ಬರಹಗಳಲ್ಲೇ ಮೊಘಲರು ಅಯೋಧ್ಯೆಯ ಮೇಲೆ ನಡೆಸಿದ ದುರಾಕ್ರಮಣಗಳು ದಾಖಲಾಗಿವೆ. ಆಸಕ್ತರು ಬೇಕಾದರೆ 16ನೇ ಶತಮಾನದ ಉತ್ತರಾರ್ಧದಲ್ಲಿ ಅಬುಲ್ ಫಝಲ್ ಬರೆದ ’ಐನ್-ಇ-ಅಕ್ಬರಿ’, ಬಹದ್ದೂರ್ ಶಾ ಇಬನ್ ಆಲಂಗೀರ್‌ನ ಮಗಳು 17ನೇ ಶತಮಾನದಲ್ಲಿ ರಚಿಸಿರುವ ’ಸಫೀಹಾ ಚಾಹಲ್ ನಾಸಿಯಾ ಬಹದ್ದೂರ್ ಶಾಹಿ’ ಕೃತಿಯನ್ನು, ಮಿರ್ಜಾ ಜಾನ್ 1856ರಲ್ಲಿ ಬರೆದಿರುವ `ಹಾದಿಕಾ-ಐ-ಶಾಹಾದಾ’ ಗ್ರಂಥವನ್ನು ನೋಡಬಹುದು. ಈ ಗ್ರಂಥಗಳಲ್ಲೆಲ್ಲ ಹಿಂದೂಗಳ ಪವಿತ್ರಸ್ಥಾನಗಳ ಮೇಲೆ ಮೊಘಲರು ನಡೆಸಿದ ಘೋರ ದಾಳಿಗಳನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ದಾಖಲಿಸಲಾಗಿದೆ.

ಮಸೀದಿಗೂ ಮುನ್ನ ದೇಗುಲವಿತ್ತು

ಅಯೋಧ್ಯೆಯಲ್ಲಿ ನಡೆದಿರುವ ಅನೇಕ ಪುರಾತತ್ತ್ವ ಅಧ್ಯಯನಗಳು ಕೂಡ ಅಲ್ಲಿದ್ದ ವಿವಾದಿತ ಬಾಬರಿ ಮಸೀದಿಯೂ ತಲೆಯೆತ್ತುವುದಕ್ಕೂ ಮೊದಲು ಆ ಸ್ಥಳದಲ್ಲಿ ಹಿಂದೂ ದೇಗುಲವಿತ್ತು ಎನ್ನುವುದನ್ನು ಸಾಬೀತುಪಡಿಸಿವೆ. 1992ರ ಡಿಸೆಂಬರ್ 6ಕ್ಕೂ ಮೊದಲು ಅಯೋಧ್ಯೆಯ ರಾಮ ಜನ್ಮಭೂಮಿಗೆ ಭೇಟಿ ನೀಡುತ್ತಿದ್ದವರೆಲ್ಲರೂ ಎರಡು ಅಂಶಗಳನ್ನು ಕಂಡು ಚಕಿತರಾಗುತ್ತಿದ್ದರು. ಮೊದಲನೆಯದಾಗಿ, ಹಿಂದೂ ದೇಗುಲಗಳು, ಆಶ್ರಮಗಳು, ಮಠಮಂದಿರಗಳು ಮತ್ತು ಇನ್ನಿತರ ಧಾರ್ಮಿಕ ಶ್ರದ್ಧಾಕೇಂದ್ರಗಳ ನಟ್ಟನಡುವೆ, ಹಿಂದೂಗಳ ಪಾಲಿಗೆ ಪರಮಪವಿತ್ರವಾಗಿರುವ ಅಯೋಧ್ಯೆಯಲ್ಲಿ ಹೀಗೆ ಮಸೀದಿಯೊಂದು ಇರುವುದು ಪ್ರತಿಯೊಬ್ಬರಿಗೂ ಅಸಹಜವಾಗಿ ಕಾಣುತ್ತಿತ್ತು. ಎರಡನೆಯದಾಗಿ, ವಿವಾದಿತ ಬಾಬರಿ ಮಸೀದಿಯ ಒಳಭಾಗದಲ್ಲಿ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಪ್ರಸ್ತುತಪಡಿಸುವ ಚಿಹ್ನೆಗಳು ಮತ್ತು ಹಿಂದೂ ವಾಸ್ತುಶಿಲ್ಪದ ಚಹರೆಗಳು ಢಾಳಾಗಿಯೇ ಇದ್ದವು. ಇದಲ್ಲದೆ, ಬಾಬರಿ ಮಸೀದಿಯ ಒಳಾಂಗಣದಲ್ಲಿದ್ದ ಕೃಷ್ಣಶಿಲೆಯ ಹದಿನಾಲ್ಕು ಸ್ತಂಭಗಳ ಮೇಲೆಲ್ಲ ಹಿಂದೂ ಧಾರ್ಮಿಕ ಕೆತ್ತನೆಗಳಿದ್ದವು. ಭಾರತದ ಮಧ್ಯಕಾಲೀನ ಯುಗದಲ್ಲಿ ತಲೆಯೆತ್ತಿರುವ ನೂರಾರು ಮಸೀದಿಗಳಲ್ಲಿ ಕೂಡ ಇಂತಹುದೇ ಕಂಬಗಳನ್ನು ನೋಡಬಹುದು. 1970ರ ದಶಕದಲ್ಲಿ ಭಾರತೀಯ ಪುರಾತತ್ತ್ವ ಇಲಾಖೆಯು ಪ್ರೊ.ಬಿ.ಬಿ.ಲಾಲ್ ಅವರ ನೇತೃತ್ವದಲ್ಲಿ ನಡೆಸಿದ ಅಧ್ಯಯನ ಕೂಡ “ಬಾಬರಿ ಮಸೀದಿಯಲ್ಲಿರುವ ವಿಶಾಲವಾದ ಸ್ತಂಭಗಳ ಸಾಲುಗಳನ್ನು ನೋಡಿದರೆ ಇಲ್ಲಿ ಮಸೀದಿಯು ನಿರ್ಮಾಣವಾಗುವುದಕ್ಕಿಂತ ಮೊದಲೇ ಇಲ್ಲಿ ಇನ್ನೊಂದು ಬೃಹತ್ತಾದ ರಚನೆ ಇತ್ತು ಎನಿಸುತ್ತದೆ,’’ ಎಂದು ಸಾರಿತು. ಇದಾದ ಬಳಿಕವೂ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟಿನ ಆದೇಶದ ಮೇರೆಗೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಮತ್ತಷ್ಟು ಪುರಾತತ್ವ ಸಮೀಕ್ಷೆಗಳು ನಡೆದವು. ಆ ಸಂದರ್ಭಗಳಲ್ಲಿ ರಾಮ ಜನ್ಮಭೂಮಿ ಪರಿಸರದಲ್ಲಿ ಸಿಕ್ಕಿರುವ ಹಿಂದೂ ದೇವರ ವಿಗ್ರಹಗಳು, ಸಂಸ್ಕೃತ ಶಾಸನಗಳು ಅಲ್ಲಿ ಬಾಬರಿ ಮಸೀದಿ ನಿರ್ಮಿಸುವುದಕ್ಕೂ ಮೊದಲು ಒಂದು ದೇವಸ್ಥಾನವಿತ್ತು ಎನ್ನುವುದನ್ನೇ ಹೇಳುತ್ತವೆ. ಅಯೋಧ್ಯೆಯ ಬಗ್ಗೆ ವ್ಯಾಪಕ ಅಧ್ಯಯನ ಕೈಗೊಂಡು, ಹಲವು ಆಚಾರ್ಯ ಕೃತಿಗಳನ್ನು ಬರೆದಿರುವ ಬೆಲ್ಜಿಯಂನ ವಿದ್ವಾಂಸ ಡಾ.ಕೊಯೆನ್ರಾಡ್ ಎಲ್ಸ್ಟ್ ಕೂಡ ಅಯೋಧ್ಯೆಯಲ್ಲಿ ಹಿಂದೂಗಳಿಗೆ ಆಗಿರುವ ಅನ್ಯಾಯ ಮತ್ತು ಅಲ್ಲಿ ಮುಸ್ಲಿಮರು ನಡೆಸಿರುವ ಅಟಾಟೋಪಗಳ ಬಗ್ಗೆ ದೃಢವಾಗಿ ಹೇಳುತ್ತಲೇ ಬಂದಿದ್ದಾರೆ.

400 ವರ್ಷಗಳ ಹೋರಾಟ

ರಾಮ ಜನ್ಮಭೂಮಿಯನ್ನು ತಮ್ಮದನ್ನಾಗಿಸಿಕೊಳ್ಳಲು ಹಿಂದೂಗಳು ನಡೆಸುತ್ತಿರುವ ಹೋರಾಟ ಕೇವಲ ಈಗಿನದಲ್ಲ. ಇದಕ್ಕೆ ಕನಿಷ್ಠಪಕ್ಷ 400 ವರ್ಷಗಳ ದೀರ್ಘ ಇತಿಹಾಸವಿದೆ. ಹಿಂದೂಗಳ ನಿತ್ಯಜೀವನದಲ್ಲಿ ರಾಮ ಜನ್ಮಭೂಮಿಗಿರುವ ಧಾರ್ಮಿಕ ಮಹತ್ವದ ದೃಷ್ಟಿಯಿಂದ ನೋಡಿದರೆ ಈ ಹೋರಾಟವು ಅತ್ಯಂತ ಸಹಜವೇ ಆಗಿದೆ. ನಿಜ ಹೇಳಬೇಕೆಂದರೆ ಅಯೋಧ್ಯೆಯು ಮುಸ್ಲಿಮರ ಪಾಲಿಗೆ ಧಾರ್ಮಿಕವಾಗಿಯೇ ಆಗಲಿ, ಸಾಂಸ್ಕೃತಿಕವಾಗಿಯೇ ಆಗಲಿ ಮಹತ್ವದ ಸ್ಥಳವೇ ಅಲ್ಲ. ಆದರೆ ಹಿಂದೂಗಳು ಯುಗಯುಗಗಳಿಂದಲೂ ಅಯೋಧ್ಯೆಗೆ ಯಾತ್ರೆ ಹೋಗುತ್ತಿದ್ದಾರೆ. ಈ ದೇಶವನ್ನು ಮುಸ್ಲಿಮರೇ ಆಳುತ್ತಿದ್ದ ಕಾಲದಲ್ಲೂ ಹಿಂದೂಗಳ ಈ ಯಾತ್ರೆ ಅಬಾಧಿತವಾಗಿ ನಡೆದಿದೆ. ಅಯೋಧ್ಯೆಯು ಮುಸ್ಲಿಮರ ಪಾಲಿಗೇನಿದ್ದರೂ ಮಧ್ಯಕಾಲೀನ ಯುಗದಲ್ಲಿ ಒಬ್ಬ ಮುಸ್ಲಿಂ ದಾಳಿಕೋರ ನಡೆಸಿದ ಆಕ್ರಮಣದ ಒಂದು ಸಂಕೇತವಷ್ಟೆ. ಇವೆಲ್ಲವೂ ಹಿಂದೂಗಳ ವಾದಕ್ಕೆ ಪುಷ್ಟಿ ಕೊಡುತ್ತವೆ. ಹೀಗಾಗಿ, ಹಿಂದೂಗಳ ಪಾಲಿಗೆ ಪುಣ್ಯಕರವಾದ ರಾಮ ಜನ್ಮಭೂಮಿ ಪರಿಸರದಲ್ಲಿ ಬಾಬರಿ ಮಸೀದಿ ಇರುವುದನ್ನು ಒಪ್ಪುವುದು ಸಾಧ್ಯವಿಲ್ಲ. ಅಲ್ಲದೆ, ಈ ಮಸೀದಿಯು ಇನ್ನೊಂದು ದೃಷ್ಟಿಯಿಂದ ರಾಷ್ಟ್ರೀಯ ದಾಸ್ಯದ ಸಂಕೇತವೂ ಆಗಿತ್ತು. ನಿಜ ಹೇಳಬೇಕೆಂದರೆ, ಅಯೋಧ್ಯೆಯಲ್ಲಿ ಮಾತ್ರವಲ್ಲ, ಹಿಂದೂಗಳಿಗೆ ಪವಿತ್ರವೆನಿಸಿರುವ ಇನ್ನೆರಡು ಕ್ಷೇತ್ರಗಳಾದ ಮಥುರೆಯ ಕೃಷ್ಣ ಜನ್ಮಭೂಮಿ ಮತ್ತು ಕಾಶಿಯ ವಿಶ್ವನಾಥ ದೇವಸ್ಥಾನಗಳ ಮೇಲೂ ಮುಸ್ಲಿಂ ದಾಳಿಕೋರರು ನಡೆಸಿದ ದಾಳಿಗೆ ಸಾಕ್ಷಿಗಳಿವೆ. ಅಯೋಧ್ಯೆಗಾಗಿ ನಡೆದ ಆಂದೋಲನವು ಆರೆಸ್ಸೆಸ್-ವಿಎಚ್‌ಪಿ-ಬಿಜೆಪಿಗಳ ಹುನ್ನಾರ ಎಂದು ಆರೋಪಿಸುವವರು ನಮ್ಮ ದೇಶದಲ್ಲಿ ನಡೆದಿರುವ ನಿಜವಾದ ಈ ಚರಿತ್ರೆಯನ್ನು ತಿಳಿದುಕೊಳ್ಳಬೇಕು.

ಇಷ್ಟರ ಮಧ್ಯೆ 1855 ಮತ್ತು 1934ರಲ್ಲಿ ಕೂಡ ರಾಮ ಜನ್ಮಭೂಮಿಯ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಎರಡು ದೊಡ್ಡ ಬಡಿದಾಟಗಳಾಗಿವೆ. “1855ರಲ್ಲಿ ರಾಮ ಜನ್ಮಭೂಮಿಯ ಮೇಲೆರಗಿ ಅದನ್ನು ವಶಪಡಿಸಿಕೊಂಡ ಮುಸ್ಲಿಮರು, ಅಲ್ಲಿನ ಹನುಮಾನ್ ಘರಿ ದೇಗುಲದ ಮೇಲೂ ದಾಳಿ ಮಾಡಿದರು. ಆದರೆ, ದೊಡ್ಡ ಮಟ್ಟದಲ್ಲಿ ತಿರುಗಿಬಿದ್ದ ಹಿಂದೂಗಳು ಮುಸ್ಲಿಮರನ್ನು ಅಲ್ಲಿಂದ ಒಡೆದೋಡಿಸಿದರು….” ಎನ್ನುತ್ತದೆ ಆ ವರ್ಷದ ಫೈಜಾಬಾದ್ ಜಿಲ್ಲಾ ಗೆಝಿಟಿಯರ್. 1934ರಲ್ಲಿ ನಡೆದ ಶಸ್ತ್ರಸಹಿತ ಸಂಘರ್ಷದ ಸಮಯದಲ್ಲಿ ರಾಮ ಜನ್ಮಭೂಮಿ ಪರಿಸರಕ್ಕೆ ತೀವ್ರ ಹಾನಿಯುಂಟಾಗಿ, ಹಲವರು ತಮ್ಮ ಪ್ರಾಣವನ್ನೇ ತೆತ್ತರು. ಇದರ ಪರಿಣಾಮವಾಗಿ 1950ರವರೆಗೂ ಅಲ್ಲಿ ಬೀಗ ಹಾಕಲಾಗಿತ್ತು. ಇಷ್ಟರ ಮಧ್ಯೆಯೂ ಹಿಂದೂಗಳು ತಮ್ಮ ಪೂಜಾಕೈಂಕರ್ಯಗಳನ್ನು ನಡೆಸಿಕೊಂಡೇ ಬರುತ್ತಿದ್ದರು.

1936ರಿಂದ 1949ರ ನಡುವೆ ಅಯೋಧ್ಯೆಯ ರಾಮ ಜನ್ಮಭೂಮಿಯು ದೇವಸ್ಥಾನದ ಮಾನ್ಯತೆಯನ್ನೇ ಪಡೆದಿತ್ತು. ಅಲ್ಲದೆ, ಇದಾದ ಬಳಿಕ ಕೆಲವು ಮುಸ್ಲಿಮರು ಅಲಹಾಬಾದ್ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಹಾಕಿದರು. ಇದನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯವು 1955ರ ಏಪ್ರಿಲ್‌ನಲ್ಲಿ ಜನ್ಮಭೂಮಿಯಲ್ಲಿ ಹಿಂದೂಗಳಿಗಿರುವ ಪೂಜೆಯ ಹಕ್ಕನ್ನು ಎತ್ತಿ ಹಿಡಿಯಿತು. ಇಷ್ಟರ ಮಧ್ಯೆ ದೇಶಕ್ಕೆ ಸ್ವಾತಂತ್ರ್ಯ ಬಂದ ಕೂಡಲೇ, ನೆಹರು ಅವರ ಸರಕಾರ ಅಸ್ತಿತ್ವಕ್ಕೆ ಬಂತು. ಆಗ, ಅಂದರೆ 1949ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಗೋವಿಂದವಲ್ಲಭ ಪಂತ್ ಅವರಿಗೂ ರಾಮ ಜನ್ಮಭೂಮಿ ವಿವಾದವನ್ನು ಬಗೆಹರಿಸಬೇಕೆಂಬ ಒಲವಿತ್ತು. ಆದರೆ, ಪ್ರಧಾನಿ ನೆಹರು ಅವರು ಎಂದಿನಂತೆ ಬೇರೆ ದಾರಿಯನ್ನು ತುಳಿದರು. ಆಗ ಗೃಹ ಸಚಿವರಾಗಿದ್ದ ವಲ್ಲಭಭಾಯಿ ಪಟೇಲರು ವಿವಾದವನ್ನು ಪರಿಹರಿಸಲು ಒಂದು ಸೂತ್ರವನ್ನು ರೂಪಿಸಿ, 1950ರ ಜನವರಿ 9ರಂದು ಪತ್ರ ಬರೆದರು. ನೆಹರು ಅವರೇನಾದರೂ ಅದನ್ನು ಅನುಸರಿಸಿದ್ದಿದ್ದರೆ ಅಯೋಧ್ಯೆ ವಿವಾದ ಅಂದೇ ಬಗೆಹರಿಯುತ್ತಿತ್ತು. ಏಕೆಂದರೆ, ಪಟೇಲರು ಮುಂದಿಟ್ಟಿದ್ದ ಆ ಸೂತ್ರವು ಪರಿಪೂರ್ಣವಾಗಿತ್ತು.

ರಾಮ ಜನ್ಮಭೂಮಿಗಾಗಿ ಹಿಂದೂಗಳ ನಿರ್ಣಾಯಕ ಹೋರಾಟ ಶುರುವಾಗಿದ್ದು 1980ರ ದಶಕದ ಪೂರ್ವಾರ್ಧದ ಕೊನೆಯಲ್ಲಿ. ಭಾರತೀಯ ಜನತಾ ಪಾರ್ಟಿಯು ಈ ಆಂದೋಲನಕ್ಕೆ ತನ್ನ ಬೆಂಬಲವನ್ನು ಘೋಷಿಸಲು ತೀರ್ಮಾನಿಸಿದ್ದು ಇದಾದ ಐದು ವರ್ಷಗಳ ನಂತರ, ಅಂದರೆ 1989ರಲ್ಲಿ. ಇದಕ್ಕೂ ಮೊದಲು, ಅಂದರೆ 1951ರಿಂದ 1986ರವರೆಗೆ ಜನ್ಮಭೂಮಿಯ ವಿಚಾರವು ತೀರಾ ಸ್ಥಳೀಯವಾದ ಒಂದು ವಿಚಾರವಾಗಿತ್ತು. ಅಷ್ಟು ವರ್ಷಗಳ ಕಾಲ ಜನ್ಮಭೂಮಿ ಪರಿಸರಕ್ಕೆ ಬೀಗ ಹಾಕಲಾಗಿತ್ತು. ನಿಜ ಹೇಳಬೇಕೆಂದರೆ, ಸ್ವತಃ ನಾನು 1952ರಿಂದಲೇ ರಾಜಕೀಯ ಕಾರ್ಯಕರ್ತನಾಗಿದ್ದರೂ 1989ರವರೆಗೂ ಇದರ ಬಗ್ಗೆ ಮಾತನಾಡಲು ನನಗೂ ಸರಿಯಾದ ಅವಕಾಶವೇ ಸಿಕ್ಕಿರಲಿಲ್ಲ. ಅಂದಂತೆ, 1952ರಿಂದ 1986ರ ನಡುವೆ ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರ ನಡೆಸುತ್ತಿತ್ತು.

ಜನ್ಮಭೂಮಿಗೆ ಸಂಬಂಧಿಸಿದಂತೆ ಮೊಟ್ಟಮೊದಲ ಬಾರಿಗೆ ಸಾಮೂಹಿಕ ಆಂದೋಲನದ ವಿಚಾರ ಪ್ರಸ್ತಾಪಕ್ಕೆ ಬಂದಿದ್ದು 1983ರಲ್ಲಿ; ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ನಡೆದ ರಾಜಕೀಯೇತರ ಸಾರ್ವಜನಿಕ ಸಭೆಯಲ್ಲಿ. ಈ ಸಭೆಯಲ್ಲಿ ಹಿರಿಯ ಗಾಂಧೀವಾದಿ ಮತ್ತು ನೆಹರು-ಶಾಸ್ತ್ರೀ-ಇಂದಿರಾ ಗಾಂಧಿಯವರ ಸರಕಾರಗಳಲ್ಲಿ ಸಚಿವರಾಗಿದ್ದ ಗುಲ್ಜಾರಿಲಾಲ್ ನಂದಾ, ಆರೆಸ್ಸೆಸ್‌ನ ಹಿರಿಯ ಮುಖಂಡ ಪ್ರೊ.ರಾಜೇಂದ್ರ ಸಿಂಗ್ (ರಜ್ಜು ಭಯ್ಯಾ), ಉತ್ತರ ಪ್ರದೇಶದ ಮಾಜಿ ಕಾಂಗ್ರೆಸ್ ಸಚಿವ ದವದಯಾಳ್ ಖನ್ನಾ ಮತ್ತು 1949ರಿಂದಲೂ ಜನ್ಮಭೂಮಿಯ ವಿಚಾರವಾಗಿ ಹೋರಾಟವನ್ನು ನಡೆಸುತ್ತಿದ್ದ ಪರಮಹಂಸ ರಾಮಚಂದ್ರದಾಸ್ ಮುಂತಾದವರು ಪಾಲ್ಗೊಂಡಿದ್ದರು. ಇದಾದ ಬಳಿಕ 1984ರ ಏಪ್ರಿಲ್‌ನಲ್ಲಿ ದೆಹಲಿಯ ಮೊತ್ತಮೊದಲ ಧರ್ಮಸಂಸದ್ ನಡೆದು, ಆ ವರ್ಷದ ಜೂನ್‌ನಲ್ಲಿ ’ರಾಮಜನ್ಮಭೂಮಿ ಮುಕ್ತಿಯಜ್ಞ ಸಮಿತಿ’ ಅಸ್ತಿತ್ವಕ್ಕೆ ಬಂತು. ಇದರ ಶ್ರೇಯಸ್ಸು ನಿಸ್ಸಂಶಯವಾಗಿಯೂ ವಿಶ್ವ ಹಿಂದೂ ಪರಿಷತ್ತಿಗೇ ಸಲ್ಲಬೇಕು. ಇಷ್ಟರ ಮಧ್ಯೆ ಜನ್ಮಭೂಮಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಕಾಂಗ್ರೆಸ್ ಸರಕಾರಗಳೇ!

ಕಾಂಗ್ರೆಸ್ ತಪ್ಪು ಹೆಜ್ಜೆಗಳು

ಇನ್ನೊಂದೆಡೆ, 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿ ಆ ಸೋಲಿನಿಂದ ಜರ್ಜರಿತವಾಗಿತ್ತು. ಆ ದಿನಗಳಲ್ಲಿ ರಾಮ ಜನ್ಮಭೂಮಿಯ ಸಲುವಾಗಿ ನಡೆಯುತ್ತಿದ್ದ ಯಾವ ಚಟುವಟಿಕೆ/ ಹೋರಾಟಗಳಲ್ಲೂ ಬಿಜೆಪಿ ಪಾಲಿಲ್ಲ. ಅಂದಂತೆ, 1989ರ ನವೆಂಬರ್ 10ರಂದು ನಡೆಸಬೇಕೆಂದು ನಿರ್ಧರಿಸಲಾಗಿದ್ದ ರಾಮಮಂದಿರ ಶಿಲಾನ್ಯಾಸಕ್ಕೆ ಅನುಮತಿ ಕೊಟ್ಟಿದ್ದು ಕೂಡ ರಾಜೀವ್ ಗಾಂಧಿಯವರ ನೇತೃತ್ವದ ಕೇಂದ್ರ ಮತ್ತು ಉತ್ತರಪ್ರದೇಶದಲ್ಲಿದ್ದ ಕಾಂಗ್ರೆಸ್ ಸರಕಾರಗಳೇ! ಇದರಂತೆ ಬಿಹಾರದ ನಿವಾಸಿಯಾದ ಕಾಮೇಶ್ವರ್ ಛೋಪಾಲ್ ಅವರು ರಾಮ ಜನ್ಮಭೂಮಿಯಲ್ಲಿ ಮಂದಿರದ ಮೊದಲ ಇಟ್ಟಿಗೆಯನ್ನಿಟ್ಟರು ಎನ್ನುವುದು ಗಮನಾರ್ಹ. ಆದರೆ, ಶಿಲಾನ್ಯಾಸಕ್ಕೆ ತಾನೇ ಕೊಟ್ಟಿದ್ದ ಅನುಮತಿಯನ್ನು ಇವೇ ಸರಕಾರಗಳು ಮರುದಿನವೇ ಹಿಂತೆಗೆದುಕೊಂಡು, ಜನ್ಮಭೂಮಿಯಲ್ಲಿ ಶುರುವಾಗಿದ್ದ ಕೆಲಸಗಳನ್ನೆಲ್ಲ ನಿಲ್ಲಿಸಬೇಕೆಂದು ಆಜ್ಞಾಪಿಸಿದವು. ವಿಚಿತ್ರವೆಂದರೆ, ಇದೇ ರಾಜೀವ್ ಗಾಂಧಿಯವರು 1989ರ ಮಹಾಚುನಾವಣೆಯ ಅಂಗವಾಗಿ ತಮ್ಮ ಪಕ್ಷದ ಪ್ರಚಾರಾಂದೋಲನವನ್ನು ಅಯೋಧ್ಯೆಯಿಂದಲೇ ಪ್ರಾರಂಭಿಸಿ, ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ’ರಾಮರಾಜ್ಯ’ವನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಕಾಂಗ್ರೆಸ್ ಪಕ್ಷವು ಅಯೋಧ್ಯೆಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ನಿಲುವನ್ನು ಹೊಂದಿರಲಿಲ್ಲ. ನಿಜ ಹೇಳಬೇಕೆಂದರೆ, ಅದು ಅವಕಾಶವಾದಿಯಾದ ನಿಲುವುಗಳನ್ನು ಅಳವಡಿಸಿಕೊಳ್ಳುತ್ತಿತ್ತು.

ರಾಜೀವ್ ಗಾಂಧಿಯವರ ನಿಧನದ ನಂತರವೂ ಆ ಪಕ್ಷವು ಇದೇ ಧೋರಣೆಯನ್ನು ಮುಂದುವರಿಸಿತು. ಇದರ ಮಧ್ಯೆ ರಾಜೀವ್ ಗಾಂಧಿಯವರ ಸರಕಾರವು ಶಾ ಬಾನೊ ಪ್ರಕರಣದಲ್ಲಿ ಮುಸ್ಲಿಮರ ಒತ್ತಡಕ್ಕೆ ಮಣಿದು, ಸುಪ್ರೀಂಕೋರ್ಟಿನ ತೀರ್ಪನ್ನೇ ಪಕ್ಕಕ್ಕೆ ಸರಿಸಿತು. ಅಯೋಧ್ಯೆ ವಿಚಾರವು ಅಖಿಲ ಭಾರತೀಯ ಸ್ವರೂಪವನ್ನು ಪಡೆದುಕೊಳ್ಳಲು ಇದು ಬಹುದೊಡ್ಡ ಕಾರಣವಾಯಿತು. ಶಾ ಬಾನೊ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಮಾಜ ಮತ್ತು ಸುಧಾರಣಾವಾದಿ ಮುಸ್ಲಿಮರಿಂದ ಎದುರಾದ ತೀವ್ರ ಪ್ರತಿರೋಧದಿಂದ ಕಂಗೆಟ್ಟ ರಾಜೀವ್ ಗಾಂಧಿಯವರು ಅಯೋಧ್ಯೆಯಲ್ಲಿನ ದೇವಾಲಯಗಳಿಗೆ ಹಾಕಿದ್ದ ಬೀಗವನ್ನು ತೆರೆಯಲು ತೀರ್ಮಾನಿಸಿದರು. ಇದೊಂದು ರಾಜಕೀಯ ಲೆಕ್ಕಾಚಾರವಾಗಿತ್ತು. ಇದರ ಫಲವಾಗಿ ಅಸ್ತಿತ್ವಕ್ಕೆ ಬಂದಿದ್ದೇ `ಅಖಿಲ ಭಾರತ ಬಾಬರಿ ಮಸೀದಿ ಕ್ರಿಯಾ ಸಮಿತಿ’! ಇದೇನೇ ಇರಲಿ, ಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ದೃಢವಾದ ನಿಲುವನ್ನು ಹೊಂದಿದ್ದರೆ, ಈ ವಿಷಯಕ್ಕೆ ಬಿಜೆಪಿ ತಲೆಹಾಕುವ ಪ್ರಮೇಯವೇ ಬರುತ್ತಿರಲಿಲ್ಲ ಎನ್ನುವುದಂತೂ ಸತ್ಯ. ಅಂದಂತೆ, ಮುಂದಿನ ದಿನಗಳಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಈ ದೇಶದ ಚುಕ್ಕಾಣಿ ಹಿಡಿದ ಮೇಲೆ ಹೇಳಿದಂತೆ “ಅಯೋಧ್ಯೆಯಲ್ಲಿ ರಾಮ ಮಂದಿರ ತಲೆಯೆತ್ತಬೇಕೆನ್ನುವುದು ಒಂದು ರಾಷ್ಟ್ರೀಯ ಆಕಾಂಕ್ಷೆ,” ಎನ್ನುವುದನ್ನು ನಾವ್ಯಾರೂ ಮರೆಯುವಂತಿಲ್ಲ. ಇನ್ನೊಂದೆಡೆ, ಒಂದು ಗುಂಪಿನ ಜನರು ಉದ್ದೇಶಪೂರ್ವಕವಾಗಿ “ಬಾಬರಿ ಮಸೀದಿಯ ವಿಚಾರವು ಭಾರತೀಯ ಮುಸ್ಲಿಮರ ಪಾಲಿಗೆ ನಿರ್ಣಾಯಕವಾಗಿದ್ದು, ಇದು ಅವರ ಅಳಿವು-ಉಳಿವಿನ ಸಂಗತಿಯಾಗಿದೆ,’’ ಎನ್ನುವಂತೆ ಬಿಂಬಿಸಲು ಶುರು ಮಾಡಿದರು. ಇದು ನಮಗೆ ಆಶ್ಚರ್ಯ ಮತ್ತು ಆಘಾತಗಳನ್ನು ಉಂಟುಮಾಡಿತು. ಅಲ್ಲಿಯವರೆಗೂ ಹಿಂದೂಗಳ ನ್ಯಾಯಬದ್ಧ ಬೇಡಿಕೆಯಾಗಿದ್ದ ರಾಮ ಜನ್ಮಭೂಮಿ ವಿಚಾರವು ಕೋಮು ಬಣ್ಣವನ್ನು ಪಡೆದುಕೊಂಡಿತು. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರವಾಯಿತು. ಇದಕ್ಕೆ ಅಖಿಲ ಭಾರತ ಬಾಬರಿ ಮಸೀದಿ ಕ್ರಿಯಾ ಸಮಿತಿಯು ನೀಡಿದ ಕೊಡುಗೆಯೂ ಸಾಕಷ್ಟಿದೆ. ಇದು ಯಾವ ಅತಿರೇಕಕ್ಕೆ ಹೋಯಿತೆಂದರೆ, ಈ ಸಮಿತಿಯು ದೇಶದ ಮುಸ್ಲಿಮರೆಲ್ಲರೂ 1987ರ ಜನವರಿ 26ರ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಬೇಕೆಂದು ಕರೆ ಕೊಟ್ಟಿತು! ಸ್ವತಃ ಮುಸ್ಲಿಮರ ಒಂದು ವರ್ಗವೂ ಸೇರಿದಂತೆ ದೇಶಾದ್ಯಂತ ಇದರ ವಿರುದ್ಧ ಆಕ್ರೋಶ ಭುಗಿಲೆದ್ದಿತು. ಇದರಿಂದ ಬೆಚ್ಚಿಬಿದ್ದ ಕ್ರಿಯಾಸಮಿತಿಯು ಕೊನೆಗೆ ಬೇರೆ ದಾರಿ ತೋಚದೆ ತನ್ನ ಕರೆಯನ್ನು ವಾಪಸ್ ತೆಗೆದುಕೊಂಡಿತು. ಇವೆಲ್ಲವನ್ನೂ ಗಮನಿಸಿದ ಭಾರತೀಯ ಜನತಾ ಪಾರ್ಟಿಯು ಅಯೋಧ್ಯೆ ಆಂದೋಲನವನ್ನು ಬೆಂಬಲಿಸಲು ತೀರ್ಮಾನಿಸಿತು. ನಮ್ಮ ಪಕ್ಷವು ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದ 1989ರ ಜೂನ್‌ನಲ್ಲಿ ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ನಡೆದ ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ. ಅಲ್ಲಿ ಪಕ್ಷವು ಅನುಮೋದಿಸಿದ ಈ ಸಂಬಂಧದ ನಿಲುವಳಿಯನ್ನು ಬರೆದವನು ಸ್ವತಃ ನಾನೇ!

ವಿ.ಪಿ. ಸಿಂಗ್ ಮಾಡಿದ್ದೇನು?

ಇಷ್ಟರಲ್ಲಿ 1989ರ ಮಹಾಚುನಾವಣೆಯ ಫಲಿತಾಂಶ ಹೊರಬಿದ್ದು, ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರವನ್ನು ಕಳೆದುಕೊಂಡಿತು. ಕಾಂಗ್ರೆಸ್ಸಿನ ಈ ಸೋಲಿಗೆ ಮುಖ್ಯವಾಗಿ ಮೂರು ಅಂಶಗಳು ಕಾರಣವಾಗಿದ್ದವು. ಅವೆಂದರೆ- ಬೊಫೋರ್ಸ್ ಹಗರಣ, ಶಾ ಬಾನೋ ಪ್ರಕರಣ ಮತ್ತು ರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೊಂದಿದ್ದ ಚಂಚಲ ನಿಲುವು. ಆಗ ಅಧಿಕಾರಕ್ಕೆ ಬಂದಿದ್ದು ವಿಶ್ವನಾಥ್ ಪ್ರತಾಪ್ ಸಿಂಗ್ (ವಿ.ಪಿ.ಸಿಂಗ್) ನೇತೃತ್ವದ ರಾಷ್ಟ್ರೀಯ ರಂಗ ಸರಕಾರ. ಇದಕ್ಕೆ ಬಿಜೆಪಿ ತನ್ನ ಬಾಹ್ಯ ಬೆಂಬಲವನ್ನು ನೀಡಿತ್ತು. ಇದೇ ರೀತಿಯಲ್ಲಿ ಎಡ್ರೆಪಕ್ಷಗಳು ಕೂಡ ವಿ.ಪಿ.ಸಿಂಗ್ ಸರಕಾರಕ್ಕೆ ತಮ್ಮ ಬೆಂಬಲ ಘೋಷಿಸಿದ್ದವು. ಅಂದಂತೆ, 1989ರ ಚುನಾವಣೆಯಲ್ಲಿ ಬಿಜೆಪಿ ರಾಮ ಮಂದಿರ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಈಗ ವಿ.ಪಿ.ಸಿಂಗ್ ಅವರು ಬಿಜೆಪಿ ಬೆಂಬಲವನ್ನು ಪಡೆದುಕೊಂಡಿದ್ದರು. ಅಂದಮೇಲೆ, ಜನ್ಮಭೂಮಿ ವಿಚಾರವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾದ ನೈತಿಕ ಹೊಣೆಗಾರಿಕೆ ಅವರದಾಯಿತು. ಬೇಸರದ ಸಂಗತಿಯೆಂದರೆ, ಅವರು ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳದೆ ಅಪಚಾರವೆಸಗಿದರು. ನಾನು ಇಲ್ಲೊಂದು ಸಂಗತಿಯನ್ನು ದಾಖಲಿಸಬೇಕು. ಆ ದಿನಗಳಲ್ಲಿ ಮುಂಬೈನ (ಆಗಿನ್ನೂ ಬಾಂಬೆ) ’ಎಕ್ಸ್’ಪ್ರೆಸ್ ಟವರ್’ನಲ್ಲಿ ಅಯೋಧ್ಯೆಗೆ ಸಂಬಂಧಿಸಿದಂತೆ ಒಂದು ಮಹತ್ತ್ವದ ಸಭೆ ನಡೆಯಿತು. ಅದರಲ್ಲಿ ಸ್ವತಃ ವಿ.ಪಿ.ಸಿಂಗ್ ಕೂಡ ಭಾಗವಹಿಸಿದ್ದರು. ಆ ಸಭೆಯಲ್ಲಿ ಮಾತನಾಡಿದ ಅವರು, “ಅರೆ, ಅಯೋಧ್ಯೆಯಲ್ಲಿ ಮಸೀದಿ ಎಲ್ಲಿದೆ ಸ್ವಾಮಿ? ಅಲ್ಲಿ ಈಗಾಗಲೇ ದೇವಸ್ಥಾನವಿದೆ..,” ಎಂದರು. ಆದರೆ, ಇದನ್ನು ಅವರು ಬಹಿರಂಗವಾಗಿ ಹೇಳುತ್ತಿರಲಿಲ್ಲ. ಇದು ನಮ್ಮ ದೇಶದ ರಾಜಕೀಯ ವ್ಯವಸ್ಥೆಗೇ ಅಂಟಿರುವ ಒಂದು ರೋಗ. ಅಯೋಧ್ಯೆಯ ನಿಜವಾದ ಇತಿಹಾಸವನ್ನು ಅರಿತಿದ್ದ ಇತರ ಪಕ್ಷಗಳ ಪ್ರಮುಖ ಮುಖಂಡರು ಕೂಡ ನೇಪಥ್ಯದಲ್ಲಿ ರಾಮ ಮಂದಿರದ ಪರವಾಗಿಯೇ ಮಾತನಾಡುತ್ತಿದ್ದರು. ಆದರೆ ಅವರು ಕೂಡ ಬಹಿರಂಗವಾಗಿ ಇದನ್ನು ಹೇಳಲು ಹಿಂದೇಟು ಹಾಕುತ್ತಿದ್ದರು.

ಹೀಗಿದ್ದಾಗ 1989ರ ಆಗಸ್ಟ್ 13ರಂದು ದೆಹಲಿಯಲ್ಲಿ ಡಾ.ಕೊಯೆನ್ರಾಡ್ ಎಲ್ಸ್ಟ್ ಅವರ ಮಹತ್ತ್ವದ ಕೃತಿಗಳಲ್ಲಿ ಒಂದಾದ `ರಾಮ ಜನ್ಮಭೂಮಿ ವರ್ಸಸ್ ಬಾಬರಿ ಮಸೀದಿ: ಎ ಕೇಸ್ ಸ್ಟಡಿ ಇನ್ ಹಿಂದೂ-ಮುಸ್ಲಿಂ ಕಾನ್ಫಿಲಿಕ್ಟ್’ನ ಲೋಕಾರ್ಪಣೆ ಸಮಾರಂಭ ನಡೆಯಿತು. ಇದರ ಲೋಕಾರ್ಪಣೆಯನ್ನು ನೆರವೇರಿಸಿದ್ದು ಸ್ವತಃ ನಾನೇ. ಆ ಸಂದರ್ಭದಲ್ಲಿ ಮಾತನಾಡಿದ ನಾನು, “ಮುಸ್ಲಿಮರು ರಾಮ ಜನ್ಮಭೂಮಿಯ ಮೇಲಿನ ತಮ್ಮ ಆಗ್ರಹವನ್ನು ಕೈಬಿಡುವುದಾದರೆ, ಮಥುರಾ ಮತ್ತು ಕಾಶಿಗಳ ಮೇಲಿನ ಹಕ್ಕಿನ ಆಗ್ರಹವನ್ನು ಕೈಬಿಡುವಂತೆ ಸ್ವತಃ ನಾನೇ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ ಮನವಿ ಮಾಡಿಕೊಳ್ಳುತ್ತೇನೆ” ಎಂದು ಭರವಸೆ ಕೊಟ್ಟೆ. ಆದರೆ, ಮುಸ್ಲಿಂ ಮುಖಂಡರು ಇದನ್ನು ತಿರಸ್ಕರಿಸಿದರು. ಆಗ ನನಗಾದ ನಿರಾಸೆ ಅಷ್ಟಿಷ್ಟಲ್ಲ. ಈ ಮೂಲಕ ಅಖಿಲ ಭಾರತ ಬಾಬರಿ ಮಸೀದಿ ಕ್ರಿಯಾ ಸಮಿತಿಯ ಮುಖಂಡರು ತಮ್ಮ ಅಸೂಕ್ಷ್ಮತೆ, ಮೂಲಭೂತವಾದಿ ಧೋರಣೆ ಮತ್ತು ಹಠಮಾರಿತನವನ್ನು ಪ್ರದರ್ಶಿಸಿದರು. ವಾಸ್ತವವಾಗಿ ನಮ್ಮ ದೇಶದ ಸಾಮಾನ್ಯ ಮುಸ್ಲಿಂ ನಾಗರಿಕರಾರಿಗೂ ವಿವಾದಿತ ಬಾಬರಿ ಮಸೀದಿಯ ಸ್ಥಳಾಂತರಿಸಿ, ಜನ್ಮಭೂಮಿಯಲ್ಲಿ ರಾಮ ಮಂದಿರವನ್ನು ಕಟ್ಟುವ ಬಗ್ಗೆ ಯಾವ ತಕರಾರೂ ಇರಲಿಲ್ಲ. ಆದರೆ, ಅಖಿಲ ಭಾರತ ಬಾಬರಿ ಮಸೀದಿ ಕ್ರಿಯಾ ಸಮಿತಿಯ ನಾಯಕರು ಈ ನಾಡಿಮಿಡಿತವನ್ನು ಅರಿಯದೆ ಹೋದರು. ಅವರ ಈ ಮೊಂಡುತನವು ನನ್ನಲ್ಲಿ ಕೋಪ ಹುಟ್ಟಿಸಿದ್ದಂತೂ ನಿಜ.

ಈ ದಿನಗಳಲ್ಲಿ ಕ್ಷಿಪ್ರಗತಿಯಲ್ಲಿ ಅನೇಕ ಚಟುವಟಿಕೆಗಳು ನಡೆಯತೊಡಗಿದವು. ವಿಎಚ್‌ಪಿ ನೇತೃತ್ವದಲ್ಲಿ ದೇಶದೆಲ್ಲೆಡೆ ಕರಸೇವಾ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ಇಡೀ ದೇಶದ ಮೂಲೆಮೂಲೆಗಳಲ್ಲೆಲ್ಲ ರಾಮನ ಹೆಸರು ಅನುರಣಿಸತೊಡಗಿತು. ಇವೆಲ್ಲವನ್ನೂ ನೋಡುತ್ತಿದ್ದ ನನಗೆ, “ಓಹೋ, ಇನ್ನೇನು ಸದ್ಯದಲ್ಲೇ ಒಂದು ಹೊಸ ಇತಿಹಾಸ ಸೃಷ್ಟಿಯಾಗಲಿದೆ” ಎನ್ನುವ ಅಂಶ ಹೊಳೆಯಿತು. ಇಷ್ಟರ ಮಧ್ಯೆಯೂ ಅಯೋಧ್ಯಾ ಆಂದೋಲನದಲ್ಲಿ ಬಿಜೆಪಿ ವಹಿಸಬಹುದಾದ ಪಾತ್ರವೇನು, ಪಕ್ಷದ ಅಧ್ಯಕ್ಷನಾಗಿ ನಾನು ಇದರಲ್ಲಿ ಮಾಡಬಹುದಾದ್ದೇನು ಎಂದು ನನ್ನ ಮನಸ್ಸು ತೀವ್ರವಾಗಿ ಚಿಂತಿಸುತ್ತಿತ್ತು. ಇಷ್ಟೇ ಅಲ್ಲ, ಈ ಆಂದೋಲನವು ಕೇವಲ ಅಯೋಧ್ಯೆಗೆ ಸೀಮಿತವಲ್ಲ ಅಥವಾ ಒಂದು ವಿವಾದಿತ ನಿವೇಶನದ ಮೇಲೆ ಪುನಃ ಹಿಂದೂಗಳು ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳುವುದಷ್ಟೇ ಇದರ ಅಂತಿಮ ಉದ್ದೇಶವಾಗಬಾರದು; ಬದಲಿಗೆ, ಹುಸಿ ಜಾತ್ಯತೀತತೆಯ ಮೇಲೆ ನಿಜವಾದ ಜಾತ್ಯತೀತ ತತ್ತ್ವದ ಗೆಲುವು ಇದಾಗಲಿದೆ ಎನ್ನುವುದು ನನಗೆ ಖಚಿತವಾಯಿತು. ಹಾಗೆಯೇ, ಈ ಆಂದೋಲನವು ನಮ್ಮ ಸಾಂಸ್ಕೃತಿಕ ಪರಂಪರೆಯೇ ಈ ದೇಶದ ಅಸ್ಮಿತೆಯ ನಿಜವಾದ ಮೂಲವಾಗಬೇಕು ಎನ್ನುವುದನ್ನು ಮರುಸ್ಥಾಪಿಸಬೇಕು ಎನ್ನುವುದು ಖಚಿತವಾಯಿತು.

ಮಹಾಜನ್ ಮತ್ತು ಅಯೋಧ್ಯೆ

ಒಂದೊಂದು ಕ್ಷಣವೂ ಹೀಗೆ, ತೀವ್ರವಾದ ಆಲೋಚನಾ ತರಂಗಗಳೊಂದಿಗೆ ಉರುಳುತ್ತಿತ್ತು. ಅದು 1990ರ ಸೆಪ್ಟೆಂಬರ್ ತಿಂಗಳ ಒಂದು ದಿನ ಸಂಜೆ. ನಾನು ಮತ್ತು ನನ್ನ ಪತ್ನಿ ಕಮಲಾ ನಮ್ಮ ದೆಹಲಿ ನಿವಾಸದಲ್ಲಿ ತುಸು ಲೋಕಾಭಿರಾಮವಾಗಿ ಕೂತಿದ್ದೆವು. ಆ ಕ್ಷಣಗಳಲ್ಲಿ, ಆಗ ಬಿಜೆಪಿಯ ನಾಲ್ವರು ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ಪ್ರಮೋದ್ ಮಹಾಜನ್ ನಮ್ಮ ಮನೆಗೆ ಬಂದಿಳಿದರು. ಹಾಗೆ ನೋಡಿದರೆ ಅದೊಂದು ಮಾಮೂಲಿ ಭೇಟಿಯಾಗಿತ್ತು. ಆದರೂ ಮಹಾಜನ್ ಅವರ ಮನಸ್ಸನ್ನು ಕೂಡ ಅಯೋಧ್ಯೆಯ ವಿಚಾರವೇ ಆಕ್ರಮಿಸಿಕೊಂಡಿತ್ತು ಎನ್ನುವುದು ಸುಳ್ಳಲ್ಲ. ಮಾತು ಶುರು ಮಾಡಿದ ಮಹಾಜನ್, ಉದ್ದೇಶಿತ ಕರಸೇವೆಯು ಇಡೀ ದೇಶದ ಆಸಕ್ತಿಯಾಗಿ ಪರಿಣಮಿಸಿ, ಎಲ್ಲೆಲ್ಲೂ ಜನರು ಇದರ ಬಗ್ಗೆಯೇ ಮಾತನಾಡುತ್ತಿರುವುದನ್ನು ಪ್ರಸ್ತಾಪಿಸಿದರು. ಸಾಮಾಜಿಕ-ರಾಜಕೀಯ ವಿಚಾರಗಳಿಗೆ ಬಂದರೆ, ಪ್ರತಿಯೊಂದು ಸಂಗತಿಯನ್ನೂ ಇತರರಿಗಿಂತ ಮೊದಲೇ ಸ್ಫುಟವಾಗಿ ಗ್ರಹಿಸುವ ಕುಶಾಗ್ರಮತಿ ಪ್ರಮೋದ್ ಮಹಾಜನ್ ಅವರಿಗಿತ್ತು.

ಮಹಾಜನ್ ಅವರ ಮಾತಿಗೆ ಉತ್ತರಿಸಿದ ನಾನು “ಮಹಾಜನ್, ಸೋಮನಾಥದಿಂದ ಅಯೋಧ್ಯೆಯವರೆಗೆ ನಾನು ಪಾದಯಾತ್ರೆ ನಡೆಸಬೇಕು ಎಂದುಕೊಂಡಿದ್ದೇನೆ. ಪ್ರಾಯಶಃ ಇದು ದೀನದಯಾಳ್ ಉಪಾಧ್ಯಾಯರ ಜನ್ಮದಿನವಾದ ಸೆಪ್ಟೆಂಬರ್ 25ರಂದು, ಇಲ್ಲದಿದ್ದರೆ ಮಹಾತ್ಮ ಗಾಂಧೀಜಿಯವರು ಹುಟ್ಟಿದ ದಿನವಾದ ಅಕ್ಟೋಬರ್ 2ರಂದು ಶುರುವಾಗಬಹುದು. ಒಟ್ಟಿನಲ್ಲಿ ಅಕ್ಟೋಬರ್ 30ರಂದು ಅಯೋಧ್ಯೆಯನ್ನು ತಲುಪಲಿದೆ” ಎಂದೆ.ರಾಜಕೀಯ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಚತುರರಾಗಿದ್ದ ಮಹಾಜನ್ ಕೂಡಲೇ, ನಾನು ಪಾದಯಾತ್ರೆಯನ್ನು ಕೈಗೊಂಡರೆ ಒಂದು ದಿನದಲ್ಲಿ ಎಷ್ಟು ದೂರವನ್ನು ಕ್ರಮಿಸಬಹುದು ಮತ್ತು ಈ ರಥಯಾತ್ರೆಯು ಯಾವ್ಯಾವ ಊರುಗಳನ್ನು ಹಾದು ಹೋಗಬೇಕು ಎಂದು ಲೆಕ್ಕ ಹಾಕತೊಡಗಿದರು. ಆದರೆ ಮರುಕ್ಷಣದಲ್ಲೇ ಅವರು “ಆಡ್ವಾಣಿಯವರೇ, ಪಾದಯಾತ್ರೆಯ ಆಲೋಚನೆಯೇನೋ ಚೆನ್ನಾಗಿದೆ. ಆದರೆ ನಿಮ್ಮ ಮನಸ್ಸಿನಲ್ಲಿರುವ ಉದ್ದೇಶಕ್ಕೆ ಇದರಿಂದ ಹೆಚ್ಚಿನ ಉಪಯೋಗವಿಲ್ಲ. ಪಾದಯಾತ್ರೆಯನ್ನು ಕೈಗೊಂಡರೆ ನೀವು ಅಬ್ಬಬ್ಬಾ ಎಂದರೆ ಗುಜರಾತಿನ ಒಂದು ಸಣ್ಣ ಭಾಗ, ಅಕ್ಕಪಕ್ಕದ ರಾಜಾಸ್ಥಾನ, ಮಧ್ಯಪ್ರದೇಶ, ದೆಹಲಿ ಮತ್ತು ಉತ್ತರ ಪ್ರದೇಶದ ಅರ್ಧಭಾಗವನ್ನು ಸಂಪರ್ಕಿಸಬಹುದಷ್ಟೆ” ಎಂದರು.

ಕೂಡಲೇ ನಾನು, ಪಾದಯಾತ್ರೆಗೆ ಪರ್ಯಾಯವಾದ ವಿಧಾನವನ್ನು ಹೇಳುವಂತೆ ಮಹಾಜನ್ ಅವರಿಗೆ ಸೂಚಿಸಿದೆ. ಜೊತೆಗೆ “ನೋಡಿ, ನನಗೆ ಕಾರಿನಲ್ಲಿ ಪ್ರಯಾಣ ಮಾಡುವುದೆಂದರೆ ಆಗುವುದಿಲ್ಲ. ಪ್ರಾಯಶಃ ಒಂದು ಜೀಪ್‌ನಲ್ಲಿ ಕುಳಿತುಕೊಂಡು ನನ್ನ ಯಾತ್ರೆಯನ್ನು ನಡೆಸಬಹುದೇನೋ?” ಎಂದು ಹೇಳಿದೆ. ಮಹಾಜನ್ ಅವರು ಕೂಡಲೇ “ಸರ್, ಒಂದು (ಆಧುನಿಕ) ರಥಯಾತ್ರೆ ಯಾಕಾಗಬಾರದು? ನಾವು ಒಂದು ಮಿನಿಬಸ್ಸನ್ನೋ ಮಿನಿಟ್ರಕ್ಕನ್ನೋ ತೆಗೆದುಕೊಂಡು, ಅದನ್ನು ರಥದಂತೆ ವಿನ್ಯಾಸಗೊಳಿಸಿ, ಈ ಯಾತ್ರೆಯನ್ನು ನಡೆಸಬಹುದು. ಇಷ್ಟಕ್ಕೂ ಇದು ಶ್ರೀರಾಮನಿಗೊಂದು ಮಂದಿರವನ್ನು ಕಟ್ಟುವ ಉದ್ದೇಶವುಳ್ಳದ್ದಾದ್ದರಿಂದ ಇದನ್ನು ರಾಮ ರಥಯಾತ್ರೆ ಎಂದೇ ಕರೆಯಬಹುದು” ಎಂದು ಸಲಹೆ ನೀಡಿದರು. ಇಷ್ಟೇ ಅಲ್ಲ, “ಆಡ್ವಾಣಿಯವರೇ, ನಿಮ್ಮ ಈ ರಥಯಾತ್ರೆಯು ದೇಶದ ಪಶ್ಚಿಮ, ದಕ್ಷಿಣ, ಮಧ್ಯ, ಉತ್ತರ ಮತ್ತು ಪೂರ್ವ ಭಾರತದ ಹೆಚ್ಚಿನ ರಾಜ್ಯಗಳಲ್ಲೆಲ್ಲ ಸಂಚರಿಸಬೇಕು. ಇದು ಎಲ್ಲೆಲ್ಲಿ ಹಾದು ಹೋಗಬೇಕು ಮತ್ತು ಇದಕ್ಕೆ ಬೇಕಾದ ಇತರ ಅನುಕೂಲಗಳೇನೇನು ಎನ್ನುವುದನ್ನೆಲ್ಲ ನಾನು ತೀರ್ಮಾನಿಸುತ್ತೇನೆ. ಅವೆಲ್ಲವನ್ನೂ ನೀವು ನನಗೆ ಬಿಡಿ. ನೀವು ಈ ರಥಯಾತ್ರೆಯನ್ನು ಯಾವಾಗ ಶುರು ಮಾಡಲಿದ್ದೀರಿ ಎನ್ನುವುದನ್ನು ಮಾತ್ರ ನನಗೆ ಹೇಳಿ, ಸಾಕು,’’ ಎಂದರು.

ನಾನು ಇದಕ್ಕೆ ಪ್ರತಿಯಾಗಿ “ಮಹಾಜನ್, ಈಗಾಗಲೇ ಸೆಪ್ಟೆಂಬರ್ ಬಂದಾಗಿದೆ. ದೀನದಯಾಳ್ ಉಪಾಧ್ಯಾಯರ ಜನ್ಮದಿನವಾದ ಸೆಪ್ಟೆಂಬರ್ 25ರಂದು ನಮ್ಮ ರಥಯಾತ್ರೆಯನ್ನು ಶುರು ಮಾಡೋಣವೆಂದರೆ, ಸಿದ್ಧತೆ ಮಾಡಿಕೊಳ್ಳಲು ಸಮಯ ಸಾಕಾಗುತ್ತದೆಯೇ?’’ ಎಂದೆ. ರಥಯಾತ್ರೆಯ ಚಿಂತನೆಯೂ ಅದು ಬೀರಬಹುದಾದ ಪರಿಣಾಮವೂ ನನಗೆ ಗೊತ್ತಾಗಿತ್ತು. ಆದರೂ ಇದಕ್ಕೆ ಬೇಕಾದ ಏರ್ಪಾಡು, ಸೌಲಭ್ಯ ಇತ್ಯಾದಿಗಳ ಬಗ್ಗೆ ನನಗೆ ಗೊಂದಲಗಳಿದ್ದವು. ಅಲ್ಲದೆ, ಇಂತಹ ರಥಯಾತ್ರೆಯು ನನ್ನ ಸ್ವಭಾವಕ್ಕೆ ಹಿಡಿಸುವುದಿಲ್ಲ ಎಂದೂ ಅನಿಸುತ್ತಿತ್ತು. ಆದರೂ ಇವೆಲ್ಲವನ್ನೂ ಹತ್ತಿಕ್ಕಿ ನನ್ನ ಮನಸ್ಸು ಆಳದಲ್ಲಿ ರಥಯಾತ್ರೆಗೆ ತುಡಿಯುತ್ತಿತ್ತು.


ಪ್ರಮೋದ್ ಮಹಾಜನ್ / @Rahul Pramod Mahajan

ಕೂಡಲೇ ನಾನು ಮಹಾಜನ್ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಮತ್ತು ಇತರ ಪ್ರಮುಖ ನಾಯಕರೆಲ್ಲರ ಸಭೆಯನ್ನು ಕರೆಯುವಂತೆ ಸೂಚಿಸಿದೆ. ಇದರಂತೆ ಅವರು ಸಭೆಯನ್ನು ಏರ್ಪಾಡು ಮಾಡಿದರು. ಅಲ್ಲಿ ನನ್ನ ರಥಯಾತ್ರೆಯ ಪ್ರಸ್ತಾವನೆಗೆ ಮಿಂಚಿನ ವೇಗದಲ್ಲಿ ಅತ್ಯಂತ ಉತ್ಸಾಹದ ಅನುಮೋದನೆ ಸಿಕ್ಕಿತು. 1990ರ ಸೆಪ್ಟೆಂಬರ್ 12ರಂದು ನಮ್ಮ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದ ನಾನು, ಸೆಪ್ಟೆಂಬರ್ 25ರಿಂದ ಆರಂಭಿಸಿ ಅಕ್ಟೋಬರ್ 30ರವರೆಗೆ 10,000 ಕಿಲೋಮೀಟರ್ ದೂರದ ರಥಯಾತ್ರೆಯನ್ನು ನಡೆಸುತ್ತಿರುವುದಾಗಿ ಘೋಷಿಸಿದೆ. ಅಕ್ಟೋಬರ್ 30ರಂದು ಅಯೋಧ್ಯೆಯಲ್ಲಿನ ಕರಸೇವೆಯನ್ನು ಸೇರಿಕೊಳ್ಳುವುದು ನಮ್ಮ ರಥಯಾತ್ರೆಯ ಗುರಿಯಾಗಿತ್ತು.

ಸೆಪ್ಟೆಂಬರ್ ತಿಂಗಳ ಕೊನೆಯ ಭಾಗವೆಂದರೆ ಗುಜರಾತಿನ ಸೌರಾಷ್ಟ್ರ ಸೀಮೆಯಲ್ಲಿ ಆಗ ತಾನೇ ಮುಂಗಾರು ಮುಗಿದು, ಚಳಿಗಾಲ ಶುರುವಾಗುವ ಹೊತ್ತು. ನಾನು ರಥಯಾತ್ರೆಯನ್ನು ಆರಂಭಿಸಲು ಸೋಮನಾಥಕ್ಕೆ ಬಂದಿಳಿದಾಗ ಅಲ್ಲಿದ್ದ ಈ ಸಂಕ್ರಮಣಾವಸ್ಥೆಯ ವಾತಾವರಣವು ಕವಲುದಾರಿಯಲ್ಲಿದ್ದ ನನ್ನ ರಾಜಕೀಯ ಜೀವನಕ್ಕೆ ಒಂದು ಒಳ್ಳೆಯ ರೂಪಕವಾಗಿತ್ತು. ನಾನು ಹಿಂದೆಂದೂ ಇಂಥದ್ದೊಂದು ಸಾಮೂಹಿಕ ಆಂದೋಲನದಂತಹ ಕಾರ್ಯಕ್ರಮ ವನ್ನು -ಅದೂ ಇಷ್ಟೊಂದು ನವೀನ ವಿಧಾನದಲ್ಲಿ- ಕೈಗೊಂಡಿರಲಿಲ್ಲ. ಈ ರಥಯಾತ್ರೆಯು ನನ್ನ ರಾಜಕೀಯ ಜೀವನದಲ್ಲಿ ಅತ್ಯಂತ ಮಹತ್ತ್ವದ ಘಟನೆಯೆಂಬುದು ನನಗೆ ಗೊತ್ತಿದ್ದರೂ ಸಹ ಮುಂದೆ ಏನು ಕಾದಿದೆಯೋ ಎನ್ನುವ ಬಗ್ಗೆ ಒಂದು ಸಣ್ಣ ಕಲ್ಪನೆಯೂ ನನಗಿರಲಿಲ್ಲ. “ಏನೇ ಆಗಲಿ, ನಾನು ನನ್ನ ಕರ್ತವ್ಯವನ್ನು ಮಾಡಬೇಕು. ಇದರ ಫಲಾಫಲಗಳ ಬಗ್ಗೆ ನಾನೇನೂ ಯೋಚಿಸಬಾರದು,’’ ಎನ್ನುವ ಭಾವನೆ ಮಾತ್ರ ಆಗ ನನ್ನಲ್ಲಿತ್ತು.

ಸೋಮನಾಥದಿಂದ ಆರಂಭ

ಇದೇ ಭಾವನೆಯಲ್ಲಿ ನಾನು 1990ರ ಸೆಪ್ಟೆಂಬರ್ 25ರಂದು ಸೋಮನಾಥದ ಜ್ಯೋತಿರ್ಲಿಂಗಕ್ಕೆ ಪೂಜೆ ನೆರವೇರಿಸಿದೆ. ಆಗ ನನ್ನೊಂದಿಗೆ ಪ್ರಮೋದ್ ಮಹಾಜನ್, ನರೇಂದ್ರ ಮೋದಿ, ಭಾರತೀಯ ಜನತಾ ಪಾರ್ಟಿಯ ಗುಜರಾತ್ ಘಟಕದ ಪ್ರಮುಖ ನಾಯಕರು ಮತ್ತು ನನ್ನ ಕುಟುಂಬದ ಸದಸ್ಯರು ಇದ್ದರು. ಜೊತೆಗೆ, ನಮ್ಮ ಪಕ್ಷದ ಉಪಾಧ್ಯಕ್ಷರುಗಳಾಗಿದ್ದ ರಾಜಮಾತೆ ವಿಜಯರಾಜೇ ಸಿಂಧಿಯಾ ಮತ್ತು ಸಿಕಂದರ್ ಬಖ್ತ್ ಅವರು ರಥಯಾತ್ರೆಗೆ ಹಸಿರು ನಿಶಾನೆ ತೋರಿಸಲು ಆಗಮಿಸಿದ್ದರು. ರಥವನ್ನೂ ಏರುವ ಮೊದಲು ನಾವೆಲ್ಲರೂ ಸೋಮನಾಥದ ದೇವಸ್ಥಾನದ ಮುಂಭಾಗದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದೆವು. ನಾನು ನನ್ನ ಮನಸ್ಸಿನಲ್ಲಿ ರಾಮ ಮಂದಿರ ನಿರ್ಮಾಣದ ಉದ್ದೇಶಕ್ಕಾಗಿ ಸಂಕಲ್ಪ ತೊಟ್ಟು, ಯೋಗದಾನ ಮಾಡಿದ ಪ್ರತಿಯೊಬ್ಬ ಮಹಾಮಹಿಮರಿಗೂ ಮನಸ್ಸಿನಲ್ಲೇ ಧನ್ಯವಾದಗಳನ್ನು ಸಮರ್ಪಿಸಿ, ಅವರೆಲ್ಲರಿಂದಲೂ ಸ್ಫೂರ್ತಿಯನ್ನು ಪಡೆದುಕೊಂಡೆ.

ಇದಾದ ಮೇಲೆ ನಾವೆಲ್ಲರೂ ಅಲ್ಲಿ ನೆರೆದಿದ್ದ ಸಾವಿರಾರು ಜನರ ಜಯಘೋಷಗಳ ನಡುವೆ ರಥವನ್ನೇರಿದೆವು. ಶಂಖನಾದ ಮತ್ತು ಜೈ ಶ್ರೀರಾಮ್ ಹಾಗೂ ‘ಮಂದಿರವಲ್ಲೇ ಕಟ್ಟುವೆವು’ ಎನ್ನುವ ಘೋಷಣೆಗಳ ಪ್ರಚಂಡ ಅನುರಣನದ ನಡುವೆ ಚೆಂಡುಹೂವಿನ ಮಾಲೆಗಳಿಂದ ಅಲಂಕೃತವಾಗಿದ್ದ ನಮ್ಮ ರಥವು ಮುಂದಕ್ಕೆ ಉರುಳತೊಡಗಿತು. ಜೊತೆಗೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡಿದ್ದ”ರಾಮ್ ನಾಮ್ ಜಾದೂ ಐಸಾ, ರಾಮ್ ನಾಮ್ ಮನ್ ಭಾಯೇ, ಮನ್ ಕೀ ಅಯೋಧ್ಯಾ ತಬ್ ತಕ್ ಸೂನೀ, ಜಬ್ ತಕ್ ರಾಮ್ ನಾ ಆಯೇ ರೇ” ಎನ್ನುವ ಹಾಡು ನಮ್ಮ ಯಾತ್ರೆಯುದ್ದಕ್ಕೂ ಥೀಮ್‌ಸಾಂಗ್ ಆಗಿ ಮೊಳಗತೊಡಗಿತು. ಅಂದಂತೆ, ಲತಾ ಮಂಗೇಶ್ಕರ್ ಅವರು ಸುಮಧುರವಾಗಿ ಹಾಡಿದ್ದ ಈ ಹಾಡನ್ನುಳ್ಳ ಅಡಕ ಮುದ್ರಿಕೆಯನ್ನು (ಕಾಂಪ್ಯಾಕ್ಟ್ ಡಿಸ್ಕ್) ನಮ್ಮ ರಥಯಾತ್ರೆಯು ಪ್ರಾರಂಭವಾಗುವ ಮುನ್ನಾ ದಿನ ನನಗೆ ತಂದುಕೊಟ್ಟಿದ್ದು ಹೆಸರಾಂತ ಹಿಂದಿ ಸಿನಿಮಾ ನಟ ಮನೋಜ್‌ ಕುಮಾರ್.

ಮುಂದಿನ ನಾಲ್ಕು ದಿನಗಳ ಕಾಲ ಗುಜರಾತಿನ ನೂರಾರು ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳಲ್ಲಿ ನಮ್ಮ ರಥಯಾತ್ರೆ ಸಾಗಿಬಂದಿತು. ಅಲ್ಲಿ ಸಿಕ್ಕಿದ ಸ್ವಾಗತವಂತೂ ಅದ್ಭುತವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲೂ ಜನರು ಸಾಲುಗಟ್ಟಿ ನಿಂತು ರಥಯಾತ್ರೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ದೊಡ್ಡದೊಡ್ಡ ನಗರಗಳಲ್ಲಂತೂ ಹತ್ತಾರು ಸಾವಿರ ಜನರು ಕಿಕ್ಕಿರಿದು ಸೇರುತ್ತಿದ್ದರು. ಇಲ್ಲೆಲ್ಲ ನಮ್ಮ ಯಾತ್ರೆಯು ನಿಗದಿತ ಸ್ಥಳವನ್ನು ತಲುಪುವುದಕ್ಕೇ ಗಂಟೆಗಟ್ಟಲೆ ಹಿಡಿಯುತ್ತಿತ್ತು. ಆಯಾ ದಿನದ ಕೊನೆಯ ಸಭೆಗಳು ಮುಗಿಯುವ ಹೊತ್ತಿಗಾಗಲೇ ನಡುರಾತ್ರಿ ಮೀರಿರುತ್ತಿತ್ತು.

ರಾಮ ರಥಯಾತ್ರೆಗೆ ಇಂಥದ್ದೊಂದು ಭವ್ಯವಾದ ಜನಸ್ಪಂದನ ಸಿಗಬಹುದೆಂದು ನಾನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಪಕ್ಷದ ವತಿಯಿಂದ ನನ್ನ ಜೊತೆಗಾರನಾಗಿ ನಿಯುಕ್ತರಾಗಿದ್ದ ಪ್ರಮೋದ್ ಮಹಾಜನ್ ಸಹ “ಆಡ್ವಾಣಿಯವರೇ, ಇದು ಗುಜರಾತು. ಇಲ್ಲಿಯ ಜನ ತುಂಬಾ ಸಂಪ್ರದಾಯ ನಿಷ್ಠರು ಮತ್ತು ಧರ್ಮಭೀರುಗಳು. ಹೀಗಾಗಿಯೇ ಇಲ್ಲಿ ನಮ್ಮ ರಥಯಾತ್ರೆಗೆ ಇಷ್ಟೊಂದು ಭರ್ಜರಿ ಸ್ಪಂದನ ಸಿಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿಯೂ ಇಂಥದ್ದೇ ಸ್ವಾಗತ ಸಿಗುತ್ತದೆಂದು ಅಂದುಕೊಳ್ಳಬೇಡಿ,’’ ಎಂದರು. ಆದರೆ, ಐದನೇ ದಿನ ನಮ್ಮ ರಥಯಾತ್ರೆಯು ಮಹಾರಾಷ್ಟ್ರವನ್ನು ಪ್ರವೇಶಿಸಿದಾಗ ಅವರ ಈ ಭವಿಷ್ಯವಾಣಿ ಸುಳ್ಳಾಯಿತು. ಏಕೆಂದರೆ, ಗುಜರಾತಿನಲ್ಲಿ ಸೇರುತ್ತಿದ್ದುದಕ್ಕಿಂತಲೂ ಇನ್ನೂ ಹೆಚ್ಚಿನ ಜನರು ಮಹಾರಾಷ್ಟ್ರದಲ್ಲಿ ಜಮಾಯಿಸತೊಡಗಿದರು.

ಅಲ್ಲಂತೂ ಎಲ್ಲೆಲ್ಲೂ ಸ್ವಾಗತ ಕಮಾನುಗಳನ್ನು ಕಟ್ಟಿ, ನಮ್ಮ ಮೇಲೆ ಪುಷ್ಪವೃಷ್ಟಿಯನ್ನು ಮಾಡಿ ಜನರು ನಮ್ಮ ರಥಯಾತ್ರೆಯನ್ನು ಬರಮಾಡಿಕೊಂಡರು. ಮಹಿಳೆಯರಂತೂ ಭಕ್ತಿ-ಶ್ರದ್ಧೆ-ಅಭಿಮಾನಗಳಿಂದ ಆರತಿ ಎತ್ತಿ ರಥಯಾತ್ರೆಯ ಭಾಗವಾಗುತ್ತಿದ್ದರು. ಇದಕ್ಕೆಲ್ಲ ಕಾರಣವಾಗಿದ್ದರು ಶ್ರೀರಾಮನೆಂಬ ಆ ದಿವ್ಯವಾದ ಶಕ್ತಿ. ಇಲ್ಲಿ ನಾನೇನಿದ್ದೂ ಆಧುನಿಕ ವಿನ್ಯಾಸದ ರಥಕ್ಕೆ ನೆಪಮಾತ್ರಕ್ಕೆ ಸಾರಥಿಯಾಗಿದ್ದೆನಷ್ಟೆ. ಇದು ಭಾರತದಲ್ಲಿ ಯುಗಯುಗಳಿಂದಲೂ ಬೇರೂರಿರುವ ಸಗುಣ ಪೂಜೆಯ ಮಹತ್ತ್ವವವನ್ನು ಸಾರುತ್ತಿತ್ತು. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಜನರೇ ಹೆಚ್ಚಾಗಿರುವ ಹಳ್ಳಿಗಳಲ್ಲಿ ರಥಯಾತ್ರೆಯು ಸಾಗಿಬರುತ್ತಿದ್ದಾಗ ಆ ಜನರೆಲ್ಲ ರಾಮನಿಗೆ ಭಕ್ತಿಭಾವದಿಂದ ನಡೆದುಕೊಳ್ಳುತ್ತಿದ್ದುದನ್ನು ನೋಡಿ ನನ್ನ ಹೃದಯ ತುಂಬಿಬರುತ್ತಿತ್ತು. ಪೇಟೆ-ಪಟ್ಟಣಗಳ ಜನರಲ್ಲಿದ್ದ ಭಕ್ತಿಭಾವಕ್ಕಿಂತಲೂ ಹಳ್ಳಿಗಾಡಿನ ಈ ಜನರಲ್ಲಿದ್ದ ಭಕ್ತಿಯು ಅಪ್ಪಟವಾಗಿತ್ತು. ಏಕೆಂದರೆ, ಮಹಾತ್ಮ ಗಾಂಧೀಜಿಯವರು ತಮ್ಮ `ಹಿಂದ್ ಸ್ವರಾಜ್’ ಕೃತಿಯಲ್ಲಿ ಹೇಳುವಂತೆ, ನಮ್ಮ ಗ್ರಾಮೀಣ ಜನರ ಮೇಲೆ ನಗರಜೀವನ, ವಾಣಿಜ್ಯೀಕರಣ ಮತ್ತು ಪರಸ್ಪರ ಸ್ಪರ್ಧೆಯ ಮನೋಭಾವಗಳು ಯಾವುದೇ ದುಷ್ಪರಿಣಾಮವನ್ನು ಬೀರಿಲ್ಲ. ಅದೆಷ್ಟೋ ಹಳ್ಳಿಗಳಲ್ಲಿ ಗ್ರಾಮಸ್ಥರು ಮೌನವಾಗಿ ಬಂದು, ನಮ್ಮ ರಥದ ಮುಂದೆ ನಿಂತು ಪೂಜೆ ಸಲ್ಲಿಸಿ, ನನ್ನನ್ನು ಅಭಿನಂದಿಸಿ, ತಮ್ಮ ಪಾಡಿಗೆ ತಾವು ತೆರಳುತ್ತಿದ್ದರು. ಇಂತಹ ಅನುಭವಗಳು ನನ್ನನ್ನು ನಿಜವಾದ ಅರ್ಥದಲ್ಲಿ ವಿನೀತನನ್ನಾಗಿಸುತ್ತಿದ್ದವು.

ಧರ್ಮವೇ ಭಾರತದ ಆತ್ಮ

ಈ ರಥಯಾತ್ರೆಯನ್ನು ಕೈಗೊಳ್ಳುವವರೆಗೂ ನನಗೆ ಧಾರ್ಮಿಕತೆಯು ನಮ್ಮ ದೇಶದ ಜನಜೀವನದಲ್ಲಿ ಇಷ್ಟೊಂದು ಆಳವಾಗಿ ಬೇರುಬಿಟ್ಟಿದೆ ಎನ್ನುವುದೇ ಗೊತ್ತಿರಲಿಲ್ಲ. ಸ್ವಾಮಿ ವಿವೇಕಾನಂದರು ಒಂದೆಡೆ “ಧರ್ಮವೇ ಭಾರತದ ನಿಜವಾದ ಆತ್ಮವಾಗಿದೆ. ಯಾವುದೇ ವಿಚಾರವನ್ನಾಗಲಿ, ಧಾರ್ಮಿಕ ನುಡಿಗಟ್ಟುಗಳಲ್ಲಿ ಹೇಳಿದರೆ ಅದನ್ನು ಭಾರತೀಯರೆಲ್ಲರೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ,’’ ಎಂದಿರುವ ಮಾತಿನ ಸಾಕ್ಷಾತ್ಕಾರ ನನಗೆ ಈ ರಥಯಾತ್ರೆಯಲ್ಲಾಯಿತು. ಇದರಿಂದಾಗಿ, ರಾಷ್ಟ್ರೀಯತೆಯ ವಿಚಾರವನ್ನು ನಾನು ಹೀಗೆ ಧರ್ಮದ ಪರಿಭಾಷೆಯಲ್ಲಿ ನಮ್ಮ ಜನರಿಗೆ ಹೇಳಬೇಕೆನ್ನುವುದೂ ಆಗ ಮಾತ್ರವೇ ಅದು ಪರಿಣಾಮಕಾರಿಯಾಗಿರುತ್ತದೆ ಎನ್ನುವುದೂ ನನಗೆ ಮನದಟ್ಟಾಯಿತು.

ಸಾಮಾನ್ಯವಾಗಿ ರಥಯಾತ್ರೆಯು ಸಾಗಿಹೋಗುತ್ತಿದ್ದ ಊರುಗಳಲ್ಲೆಲ್ಲ ನಮ್ಮ ವಾಹನದಲ್ಲಿ ವಿನ್ಯಾಸಗೊಳಿಸಿದ್ದ ತುಸು ಎತ್ತರದ ವೇದಿಕೆಯ ಮೇಲಿಂದಲೇ ನಾನು ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದೆ. ಈ ಭಾಷಣಗಳಲ್ಲೆಲ್ಲ ನಾನು ನಮ್ಮ ಯಾತ್ರೆಯ ಉದ್ದೇಶ ಮತ್ತು ಭಾರತೀಯ ಜನತಾ ಪಾರ್ಟಿಯು ಯಾವ ಕಾರಣಗಳಿಗಾಗಿ ಈ ಆಂದೋಲನದೊಂದಿಗೆ ಕೈಜೋಡಿಸಬೇಕಾದ ಪ್ರಮೇಯ ಸೃಷ್ಟಿಯಾಯಿತು ಎನ್ನುವುದನ್ನು ವಿವರಿಸುತ್ತಿದ್ದೆ. ರಥಯಾತ್ರೆಗೆ ಜನರ ಕಡೆಯಿಂದ ಸಿಕ್ಕುತ್ತಿದ್ದ ಸ್ಪಂದನವು ಧಾರ್ಮಿಕ ಸ್ವರೂಪದ್ದಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನನ್ನ ಭಾಷಣಗಳ ಮುಖ್ಯ ಉದ್ದೇಶವು ರಾಷ್ಟ್ರೀಯತೆಯೇ ಆಗಿತ್ತು. ಜಾತ್ಯತೀತತೆಯನ್ನು ಕೆಲವು ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿಕೊಂಡು ಯಾವ ರೀತಿಯಲ್ಲಿ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ನಾಗರಿಕತೆಯನ್ನು ಮರೆಮಾಚುತ್ತ ಅದನ್ನು ಹಿಂದಕ್ಕೆ ತಳ್ಳುತ್ತಿವೆ, ಇವುಗಳ ಹಿಂದೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಕುತಂತ್ರ ಹೇಗೆ ಕೆಲಸ ಮಾಡುತ್ತಿದೆ. ಎನ್ನುವುದನ್ನು ಕೂಡ ನಾನು ಭಾಷಣಗಳಲ್ಲಿ ಎತ್ತಿ ತೋರಿಸುತ್ತಿದ್ದೆ. ರಾಮನೆಡೆಗಿನ ಅಪಾರವಾದ ಭಕ್ತಿಯು ಹೇಗೆ ಜನರಲ್ಲಿ ಅಡಗಿರುವ ಶಕ್ತಿಯು ಪ್ರವಹಿಸುವಂತೆ ಮಾಡುತ್ತಿದೆ ಎನ್ನುವುದನ್ನು ಹೇಳುತ್ತಿದ್ದೆ. ಜೊತೆಗೆ, ಒಂದು ರಾಷ್ಟ್ರೀಯ ಹಿತದ ಉದ್ದೇಶಕ್ಕಾಗಿ ಜನರು ಜಾತಿಮತವೆನ್ನದೆ ಹೀಗೆ ಮುನ್ನುಗ್ಗಿ ಬರುತ್ತಿರುವುದಕ್ಕೆ ನಾನು ಎಲ್ಲೆಡೆಗಳಲ್ಲೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆ.

ಅಲ್ಲದೆ, ಭಾರತ ದೇಶದಲ್ಲಿರುವ ಮುಸ್ಲಿಮರು ಹೇಗೆ ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾರೆ, ಒಂದು ಕಾಲದಲ್ಲಿ ಭಾರತದ ಭಾಗವೇ ಆಗಿದ್ದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸಿಕೊಂಡರೂ ಭಾರತವು ಹೇಗೆ ಜಾತ್ಯತೀತ ರಾಷ್ಟ್ರವಾಗಿದೆ, ಹಿಂದೂ ಧರ್ಮದ ಆಳದಲ್ಲೇ ನಿಜವಾದ ಜಾತ್ಯತೀತ ಮೌಲ್ಯಗಳು ಹೇಗೆ ಅಂತರ್ಗತವಾಗಿವೆ ಎನ್ನುವುದನ್ನೆಲ್ಲ ನನ್ನ ಭಾಷಣಗಳಲ್ಲಿ ನಾನು ಹೇಳುತ್ತಿದ್ದೆ. ಜೊತೆಗೆ, ಅಯೋಧ್ಯೆಗೆ ಸಂಬಂಧಿಸಿದಂತೆ ಹಿಂದೂಗಳು ಹೊಂದಿರುವ ಭಾವನೆಗಳನ್ನು ಗೌರವಿಸುವಂತೆ ನಾನು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೆ. ನನ್ನ ಈ ಮಾತುಗಳನ್ನು ಜನರು ಕರತಾಡನದೊಂದಿಗೆ ಅನುಮೋದಿಸುತ್ತಿದ್ದರು. ಇಷ್ಟೆಲ್ಲ ವಿಚಾರಗಳನ್ನು ನಾನು ಸಾಮಾನ್ಯವಾಗಿ ಐದಾರು ನಿಮಿಷಗಳಲ್ಲಿ ಹೇಳುತ್ತಿದ್ದೆ. ಏಕೆಂದರೆ, ರಥಯಾತ್ರೆಯುದ್ದಕ್ಕೂ ನಾನು ದಿನವೊಂದಕ್ಕೆ ಏನಿಲ್ಲವೆಂದರೂ 20-25 ರೋಡ್‌ಶೋಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ಯಾತ್ರೆಯು ಸಾಗುತ್ತಿದ್ದ ದೊಡ್ಡದೊಡ್ಡ ನಗರಗಳಲ್ಲಿ ನಾನು ಹತ್ತಾರು ಸಾವಿರ ಜನರು ನೆರೆದಿರುತ್ತಿದ್ದ ಬೃಹತ್ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುತ್ತಿದ್ದೆ. ಇಷ್ಟು ಹೊತ್ತಿಗಾಗಲೇ ರಥಯಾತ್ರೆಗೆ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಾರ್ವಜನಿಕರಿಂದ ಸಿಗುತ್ತಿದ್ದ ಅಭೂತಪೂರ್ವ ಬೆಂಬಲದ ಬಗ್ಗೆ ಸುದ್ದಿ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡುತ್ತಿದ್ದವು. ಇವುಗಳ ಪರಿಣಾಮವಾಗಿ ಉಳಿದ ರಾಜ್ಯಗಳಲ್ಲಿ ನಮ್ಮ ರಥಯಾತ್ರೆಯ ಸಭೆಗಳಿಗೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಹರಿದು ಬರತೊಡಗಿದರು. ಹೆಚ್ಚಿನ ಕಡೆಗಳಲ್ಲಿ ಆಯಾ ದಿನದ ನಮ್ಮ ಕಟ್ಟಕಡೆಯ ಸಭೆ ಶುರುವಾಗುವ ಹೊತ್ತಿಗಾಗಲೇ ಬೆಳಗಿನ ಜಾವ ಎರಡು ಗಂಟೆ ದಾಟಿರುತ್ತಿತ್ತು. ನಮ್ಮ ರಥಯಾತ್ರೆಯು ಆಂಧ್ರಪ್ರದೇಶದಲ್ಲಿದ್ದಾಗಲಂತೂ ಒಂದು ದಿನ ನಮ್ಮ ಕೊನೆಯ ಸಭೆ ನಿಗದಿಯಾಗಿದ್ದ ಸ್ಥಳಕ್ಕೆ ಬಂದಾಗ ಆಗಲೇ ಬೆಳಗಿನ ಜಾವ ಐದು ಗಂಟೆ ಆಗಿಹೋಗಿತ್ತು! ಇದೇನೇ ಆದರೂ ಮರುದಿನದ ನಮ್ಮ ರಥಯಾತ್ರೆ ಮಾತ್ರ ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ಹೊರಡಲೇಬೇಕಾಗಿತ್ತು.

ಮುಸ್ಲಿಂ ವಿರೋಧಿಯಲ್ಲ

ನಾನು ಕೈಗೊಂಡ ಈ ರಥಯಾತ್ರೆಯು ಮುಸ್ಲಿಂ ವಿರೋಧಿಯಾಗಿತ್ತೇ? ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದರಲ್ಲಿ ಮುಸ್ಲಿಂ ವಿರೋಧಿ ಎಂದು ಕರೆಯಬಹುದಾದಂತಹ ಲವಲೇಶವೂ ಇರಲಿಲ್ಲ. ಆದರೆ, ರಥಯಾತ್ರೆಗೆ ಸಿಕ್ಕಿದ ಪ್ರಚಂಡ ಜನಸ್ಪಂದನ ದಿಂದ ಬೆಚ್ಚಿಬಿದ್ದ ನಮ್ಮ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಇಂಥದ್ದೊಂದು ಹುಸಿಪ್ರಚಾರವನ್ನು ಮಾಡತೊಡಗಿದರು. ಆದರೆ ಅದಕ್ಕೆ ಯಾವ ಆಧಾರವೂ ಇರಲಿಲ್ಲ. ಇದರ ಹಿಂದಿದ್ದುದು ದುರುದ್ದೇಶವಷ್ಟೆ. ಆಗ ನಾನು, ನನ್ನ ಭಾಷಣಗಳಲ್ಲಿ ತೃಣಮಾತ್ರದಷ್ಟು ಮುಸ್ಲಿಂ ವಿರೋಧಿ ಅಂಶವೇನಾದರೂ ಇದ್ದರೆ ಅದನ್ನು ತೋರಿಸಬೇಕೆಂದು ನನ್ನ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಸವಾಲೆಸೆದೆ. ನಮ್ಮ ಸಭೆಗಳಲ್ಲೆಲ್ಲಾದರೂ ಅನುಚಿತ ಘೋಷಣೆಗಳು ಕೇಳಿಬಂದರೆ ನಾನು ಕೂಡಲೇ ಅದನ್ನು ವಿರೋಧಿಸಿ, ಭಾರತೀಯ ಜನತಾ ಪಾರ್ಟಿಯು ಭಾರತದ ಪ್ರತಿಯೊಬ್ಬ ಪ್ರಜೆಯನ್ನೂ -ಆತ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಅಥವಾ ಬೇರಾವುದೇ ಧರ್ಮಕ್ಕೆ ಸೇರಿರಲಿ- ಪ್ರತಿನಿಧಿಸುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೆ. ಅದೇ ರೀತಿಯಲ್ಲಿ ಕೆಲವು ರಾಜಕೀಯ ಪಕ್ಷಗಳು ದೇಶದಲ್ಲಿರುವ ಶೇಕಡ 82ರಷ್ಟು ಹಿಂದೂಗಳಿಗೆ ಯಾವ ಬೆಲೆಯನ್ನೂ ಕೊಡದೆ ಕೇವಲ ಮಿಕ್ಕ ಶೇಕಡ 18ರಷ್ಟು ಜನರಿಗೆ ಜೋತು ಬೀಳುವ ಹುಸಿ ಜಾತ್ಯತೀತತೆಯನ್ನೂ ನಾವು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಸಾರುತ್ತಿದ್ದೆ. ಇನ್ನೊಂದೆಡೆ, ನಮ್ಮ ರಾಜಕೀಯ ವಿರೋಧಿಗಳು ರಥಯಾತ್ರೆಯು ಕೋಮುದ್ವೇಷದ ದಳ್ಳುರಿಯನ್ನು ಹಚ್ಚಿದೆ ಎಂದು ಟೀಕಿಸುತ್ತಿದ್ದರು. ಆದರೆ ನಿಜಸಂಗತಿಯೇನೆಂದರೆ, ನಮ್ಮ ರಥಯಾತ್ರೆ ಸಾಗಿಬಂದ ಒಂದೇಒಂದು ಸ್ಥಳದಲ್ಲೂ ಒಂದು ಸಣ್ಣ ಕೋಮುಗಲಭೆಯೂ ನಡೆದಿಲ್ಲ. ಬದಲಿಗೆ, ನಮ್ಮ ರಥಯಾತ್ರೆ ಸಂಪರ್ಕಿಸದ ಬೇರೆಬೇರೆ ಕಡೆಗಳಲ್ಲಿ ಕೋಮುಗಲಭೆಗಳು ಸಂಭವಿಸಿದ್ದವು. ಇವ್ಯಾವುದನ್ನೂ ಖಚಿತಪಡಿಸಿಕೊಳ್ಳದೆ ಕೆಲವು ಪತ್ರಿಕೆಗಳು ಬೇಜವಾಬ್ದಾರಿಯಿಂದ ’ಆಡ್ವಾಣಿಯವರ ರಕ್ತಸಿಕ್ತ ರಥಯಾತ್ರೆ’ ಎನ್ನುವಂತಹ ಶೀರ್ಷಿಕೆಗಳೊಂದಿಗೆ ಸುದ್ದಿಗಳನ್ನು ಪ್ರಕಟಿಸತೊಡಗಿದಾಗ ನನಗೆ ತುಂಬಾ ನೋವಾಗುತ್ತಿತ್ತು. ಪತ್ರಿಕೆಗಳ ಈ ಧೋರಣೆಯನ್ನು ಡಾ.ಕೊಯೆನ್ರಾಡ್ ಎಲ್ಸ್ಟ್ ಅವರು ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ತಮ್ಮ ಘನವಾದ ಕೃತಿಯಾದ ’ದಿ ಸ್ಯಾಫ್ರನ್ ಸ್ವಸ್ತಿಕ’ದಲ್ಲಿ ಸಮರ್ಥವಾಗಿ ವಿಶ್ಲೇಷಿಸಿದ್ದಾರೆ.

ಬಂಧಿಸಿದ ಲಾಲು

ನಮ್ಮ ಈ ರಥಯಾತ್ರೆಯು 1990ರ ಅಕ್ಟೋಬರ್ 24ರಂದು ಉತ್ತರ ಪ್ರದೇಶದ ದೇವರಿಯಾ ಪಟ್ಟಣವನ್ನು ಪ್ರವೇಶಿಸಬೇಕಿತ್ತು. ಆದರೆ, ಇದಕ್ಕೆ ಒಂದು ದಿನ ಮೊದಲೇ -ಅಂದರೆ ಅಕ್ಟೋಬರ್ 23ರಂದು- ಬಿಹಾರದ ಸಮಷ್ಟಿಪುರದಲ್ಲಿ ನನ್ನನ್ನು ಬಂಧಿಸಲಾಯಿತು. ನನ್ನ ವಿರುದ್ಧ ಈ ಕ್ರಮವನ್ನು ಕೈಗೊಂಡಿದ್ದು ಆಗ ಬಿಹಾರದಲ್ಲಿ ಆಳ್ವಿಕೆ ನಡೆಸುತ್ತಿದ್ದ ಲಾಲುಪ್ರಸಾದ್ ಯಾದವ್ ನೇತೃತ್ವದ ಜನತಾದಳ ಸರಕಾರ. ನನ್ನನ್ನು ಬಂಧಿಸಿದ ಲಾಲು ಸರಕಾರ, ಮಸ್ಸಂಜೋರ್ ಎಂಬಲ್ಲಿದ್ದ ನೀರಾವರಿ ಇಲಾಖೆಯ ಅತಿಥಿ ಗೃಹದಲ್ಲಿ ನನ್ನನ್ನು ಇಟ್ಟಿತು. ಲಾಲೂ ಸರಕಾರದ ಈ ಕ್ರಮದ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಕಟ್ಟೆಯೊಡೆಯಿತು; ಎಲ್ಲೆಲ್ಲೂ ಸ್ವಯಂಪ್ರೇರಿತ ಪ್ರತಿಭಟನೆಗಳು ನಡೆಯತೊಡಗಿದವು. ಒಟ್ಟು ಐದು ವಾರಗಳ ಕಾಲ ನನ್ನನ್ನು ಬಂಧನದಲ್ಲಿಟ್ಟಿದ್ದ ಲಾಲೂ ಸರಕಾರ, ಕೊನೆಗೆ ನನ್ನನ್ನು ಬಿಡುಗಡೆ ಮಾಡಿತು. ಇದರೊಂದಿಗೆ ನನ್ನ ರಾಜಕೀಯ ಜೀವನದಲ್ಲಿ ನನಗೆ ಬೆಲೆ ಕಟ್ಟಲಾಗದಂತಹ ಅನುಭವವನ್ನು ತಂದುಕೊಟ್ಟ ರಥಯಾತ್ರೆಗೆ ತೆರೆ ಬಿತ್ತು.

ರಾಮ ಜನ್ಮಭೂಮಿ ವಿವಾದವನ್ನು ಇತ್ಯರ್ಥಪಡಿಸಲು ಒಟ್ಟು ನಾಲ್ವರು ಪ್ರಧಾನಿಗಳು -ರಾಜೀವ್ ಗಾಂಧಿ, ವಿ.ಪಿ.ಸಿಂಗ್, ಚಂದ್ರಶೇಖರ್ ಮತ್ತು ಪಿ.ವಿ.ನರಸಿಂಹರಾವ್- ಅನೇಕ ಬಾರಿ ಪ್ರಯತ್ನಿಸಿದರು ಎನ್ನುವುದೇನೋ ನಿಜ. ಆದರೆ ಈ ಪೈಕಿ, ಅತ್ಯಂತ ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಕೂಡಿದ ಪ್ರಯತ್ನವನ್ನು ಕೈಗೊಂಡವರೆಂದರೆ ಚಂದ್ರಶೇಖರ್ ಮಾತ್ರ. ಉಳಿದ ಮೂವರ ಪ್ರಯತ್ನಗಳಲ್ಲಿ ವಿವಾದ ಬಗೆಹರಿಯಬೇಕೆನ್ನುವ ಕಳಕಳಿಗಿಂತ ಹೆಚ್ಚಾಗಿ ಬೇರೆಬೇರೆ -ರಾಜಕೀಯ ಲಾಭದ- ಲೆಕ್ಕಾಚಾರಗಳದ್ದೇ ಮೇಲುಗೈಯಾಗಿತ್ತು.

ರಥಯಾತ್ರೆಯು ಅರ್ಧ ಹಾದಿಯನ್ನು ಕ್ರಮಿಸಿದ್ದ ಹಂತದಲ್ಲಿ ದೀಪಾವಳಿ ಹಬ್ಬವು ಬಂದಿದ್ದರಿಂದ ಯಾತ್ರೆಗೆ ತುಸು ವಿರಾಮ ಕೊಟ್ಟೆವು. ಯಾತ್ರೆಯ ಸ್ವರೂಪವನ್ನು ಆಖೈರುಗೊಳಿಸುವಾಗಲೇ ನಾವು ದೀಪಾವಳಿಯ ಆಚರಣೆಗೆ ನಮ್ಮಿಂದ ಅಡ್ಡಿಯಾಗಬಾರದು ಎಂದು ತೀರ್ಮಾನಿಸಿದ್ದೆವು. ಇದಕ್ಕೆ ತಕ್ಕಂತೆಯೇ ಅಕ್ಟೋಬರ್ 14ರಂದು -ದೀಪಾವಳಿಗೆ ಎರಡು ದಿನ ಮೊದಲು- ನಮ್ಮ ರಥಯಾತ್ರೆಯು ದೆಹಲಿಗೆ ಆಗಮಿಸಿತು. ನಾನಾಗ ಒಂದೆರಡು ದಿನಗಳ ವಿಶ್ರಾಂತಿಯನ್ನು ತೆಗೆದುಕೊಂಡೆ. ಆ ಸಂದರ್ಭದಲ್ಲಿ ಹಲವು ಧೀಮಂತರ ಪ್ರಯತ್ನಗಳಿಂದಾಗಿ ವಿ.ಪಿ.ಸಿಂಗ್ ಸರಕಾರವು ಅಯೋಧ್ಯೆ ವಿವಾದಕ್ಕೊಂದು ಪರಿಹಾರವಾಗಿ ಸುಗ್ರೀವಾಜ್ಞೆಯನ್ನು ಹೊರತರಲು ಒಪ್ಪಿಕೊಂಡಿತು. ಇದರ ಹಿಂದಿದ್ದ ಮೂರು ಅಂಶಗಳ ಪರಿಹಾರ ಸೂತ್ರವನ್ನು ಚಿಂತಕ ಎಸ್.ಗುರುಮೂರ್ತಿ ರೂಪಿಸಿದ್ದರು. ವಿ.ಪಿ.ಸಿಂಗ್ ಸರಕಾರದ ಪರವಾಗಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್, ಪಿ.ಉಪೇಂದ್ರ, ವಿ.ಪಿ.ಸಿಂಗ್ ಸರಕಾರದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ -ಬಳಿಕ ಬಿಜೆಪಿಯನ್ನು ಸೇರಿದ- ಅರುಣ್ ಜೇಟ್ಲಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎನ್. ಗೋವಿಂದಾಚಾರ್ಯ ಮುಂತಾದವರೆಲ್ಲ ಪಾತ್ರವಿತ್ತು. ಈ ಸುಗ್ರೀವಾಜ್ಞೆಯ ಬಗ್ಗೆ ಸ್ವತಃ ವಿ.ಪಿ.ಸಿಂಗ್ ಮತ್ತು ಪಶ್ಚಿಮ ಬಂಗಾಳದ ಆಗಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರು ನನಗೆ ಫೋನ್ ಮಾಡಿ, ಹೇಳಿದರು. ಅವರ ಮನವಿಯ ಮೇರೆಗೆ ನಾನು ನನ್ನ ನಿಗದಿಯ ಕೋಲ್ಕತಾ ಪ್ರವಾಸವನ್ನು ರದ್ದುಪಡಿಸಿದೆ.

ಇನ್ನೊಂದೆಡೆ, ಸರಕಾರದ ಪ್ರತಿನಿಧಿಗಳು ಮತ್ತು ಅಯೋಧ್ಯಾ ಆಂದೋಲನದ ಪ್ರಮುಖರ ನಡುವೆ ಮಾತುಕತೆಗಳು ಮುಂದುವರಿದಿದ್ದವು. ಆದರೆ, ಕೇವಲ ಒಂದೇ ದಿನದಲ್ಲಿ -ಅಂದರೆ 1990ರ ಅಕ್ಟೋಬರ್ 19ರಂದು- ವಿ.ಪಿ.ಸಿಂಗ್ ತಮ್ಮ ನಿಲುವನ್ನು ಬದಲಿಸಿದ್ದರು. ಅಯೋಧ್ಯೆಯ ವಿವಾದಿತ ಭೂಮಿಯನ್ನು ಮಂದಿರ ನಿರ್ಮಾಣಕ್ಕೆಂದು ತಲೆಯೆತ್ತಿದ್ದ ಟ್ರಸ್ಟಿಗೆ ಯಾವುದೇ ಕಾರಣಕ್ಕೂ ಹಸ್ತಾಂತರಿಸುವುದಿಲ್ಲವೆನ್ನುವ ತೀರ್ಮಾನಕ್ಕೆ ಅವರು ಬಂದಿದ್ದರು. ಈ ವಿಚಾರವನ್ನು ಗುರುಮೂರ್ತಿಯವರು ನನಗೆ ತಿಳಿಸಿದರು. ಒಟ್ಟಿನಲ್ಲಿ, ಅಯೋಧ್ಯೆಯ ವಿವಾದವನ್ನು ಸೌಹಾರ್ದದಿಂದ ಬಗೆಹರಿಸಿಕೊಳ್ಳಲು ಬಿಡಬಾರದೆಂಬ ದುಷ್ಟ ಆಸೆಯನ್ನು ಇಟ್ಟುಕೊಂಡಿದ್ದ ಶಕ್ತಿಗಳ ಒತ್ತಡಕ್ಕೆ ವಿ.ಪಿ.ಸಿಂಗ್ ಮಣಿದಿರುವ ವಾಸನೆ ನನಗೆ ಬಡಿಯಿತು. ಇಷ್ಟರ ಮಧ್ಯೆಯೂ ಗುರುಮೂರ್ತಿ ಮತ್ತು ಜೇಟ್ಲಿ ಇಬ್ಬರೂ ವಿ.ಪಿ.ಸಿಂಗ್ ಸರಕಾರಕ್ಕೆ ಅಯೋಧ್ಯೆ ವಿವಾದವನ್ನು ಇತ್ಯರ್ಥಪಡಿಸಲು ಇರುವ ನ್ಯಾಯಬದ್ಧ ದಾರಿಗಳನ್ನು ಮನದಟ್ಟು ಮಾಡಿಕೊಟ್ಟರು. ಅಂತೂ ಇಂತೂ ಇಡೀ ರಾತ್ರಿಯೆಲ್ಲ ವಿಚಾರ ವಿನಿಮಯ ನಡೆದು, ಕೊನೆಗೂ ಸುಗ್ರೀವಾಜ್ಞೆಯನ್ನು ಹೊರಡಿಸುವುದಾಗಿ ಸರಕಾರವು ದೇಶಕ್ಕೆ ತಿಳಿಸಿತು. ಆದರೆ, ತಾನೇ ಹೊರಡಿಸಿದ ಸುಗ್ರೀವಾಜ್ಞೆಯನ್ನು ವಿ.ಪಿ.ಸಿಂಗ್ ಸರಕಾರವು ಅಂದು ರಾತ್ರಿಯೇ -1990ರ ಅಕ್ಟೋಬರ್ 21ರಂದು- ವಾಪಸ್ ತೆಗೆದುಕೊಂಡಿತು. ಆಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಒಡ್ಡಿದ ಬೆದರಿಕೆಯೇ ಇದಕ್ಕೆ ಕಾರಣ! ಇದರಿಂದ ತೀವ್ರ ನಿರಾಸೆಗೊಳಗಾದ ಮಂದಿರ ಚಳವಳಿಯ ಮುಖಂಡರು ಮತ್ತು ರಾಮಭಕ್ತರು, ಇದು ವಿ.ಪಿ.ಸಿಂಗ್ ಸರಕಾರವು ತಮಗೆ ಮಾಡಿದ ದ್ರೋಹವೆಂದು ಭಾವಿಸಿದರು. ಇದಾದ ಎರಡು ದಿನಗಳಲ್ಲಿ ನನ್ನ ಬಂಧನವಾಯಿತು. ಕೂಡಲೇ ರಾಷ್ಟ್ರಪತಿ ಭವನಕ್ಕೆ ತೆರಳಿದ ವಾಜಪೇಯಿಯವರ ನೇತೃತ್ವದ ನಮ್ಮ ಪಕ್ಷದ ನಿಯೋಗವು, ಸಿಂಗ್ ಸರಕಾರಕ್ಕೆ ಕೊಟ್ಟಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿತು. ಇದರ ಪರಿಣಾಮವಾಗಿ ವಿ.ಪಿ.ಸಿಂಗ್ ನೇತೃತ್ವದ ಸರಕಾರ ಪತನಗೊಂಡಿತು.

ಚಂದ್ರಶೇಖರ್ ಅವರ ಸರಕಾರವು ಅಸ್ತಿತ್ವದಲ್ಲಿದ್ದುದು ಕೇವಲ ಏಳು ತಿಂಗಳಷ್ಟೆ. ಅಷ್ಟರಲ್ಲೇ ಅವರು ಅಯೋಧ್ಯೆ ವಿವಾದವನ್ನು ಇತ್ಯರ್ಥಪಡಿಸಲು ಪ್ರಾಮಾಣಿಕವಾಗಿ ಮುಂದಡಿ ಇಟ್ಟರು. ವಾಸ್ತವವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಅಖಿಲ ಭಾರತ ಬಾಬರಿ ಮಸೀದಿ ಕ್ರಿಯಾ ಸಮಿತಿಗಳ ನಡುವೆ ಮೊಟ್ಟಮೊದಲ ಅಧಿಕೃತ ಸಭೆಯನ್ನು ಏರ್ಪಡಿಸಿದ್ದೇ ಚಂದ್ರಶೇಖರ್ ಅವರು. ಶುರುವಿನಲ್ಲಿ ಕ್ರಿಯಾಸಮಿತಿಯು ಅಯೋಧ್ಯೆಯಲ್ಲಿ ದೇವಸ್ಥಾನವನ್ನು ಕೆಡವಿ, ಅದರ ಮೇಲೆ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನುವುದನ್ನು ಸಾಬೀತುಪಡಿಸಿದರೆ ಆ ಮಸೀದಿಯನ್ನು ಸ್ಥಳಾಂತರಿಸಲು ಯಾವ ತಕರಾರೂ ಇಲ್ಲ ಎಂದೇ ಹೇಳಿತು. ಆದರೆ ಬಳಿಕ ಅದು “ವಿವಾದಿತ ಸ್ಥಳದಲ್ಲಿ ನಿರ್ದಿಷ್ಟವಾಗಿ ರಾಮನ ದೇಗುಲವೇ ಇತ್ತು ಎಂದಾದರೆ ಮಾತ್ರ ನಾವು ಮಸೀದಿಯನ್ನು ಸ್ಥಳಾಂತರಿಸಲು ಒಪ್ಪುತ್ತೇವೆ” ಎಂದು ತನ್ನ ನಿಲುವನ್ನು ಬದಲಿಸಿಕೊಂಡಿತು. ಆಮೇಲೆ ಅದು “ರಾಮಾಯಣವು ಒಂದು ಪೌರಾಣಿಕ ಕಥೆಯೇ ವಿನಾ ಐತಿಹಾಸಿಕವಲ್ಲ. ಈಗಿರುವ ಅಯೋಧ್ಯೆ ಕೂಡ ರಾಮಾಯಣದಲ್ಲಿ ಚಿತ್ರಿಸಿರುವ ಅಯೋಧ್ಯೆಯಲ್ಲ. ಅಲ್ಲಿ ರಾಮನ ದೇಗುಲವಿತ್ತು ಎನ್ನುವುದಕ್ಕೆ ಯಾವ ಸಾಕ್ಷಾಧಾರಗಳೂ ಇಲ್ಲ…’’ ಎಂದು ವಾದಿಸತೊಡಗಿತು. ಹೀಗಾಗಿ, ಚಂದ್ರಶೇಖರ್ ಅವರು ಕೈಗೊಂಡ ಪ್ರಯತ್ನಗಳು ಫಲ ಕೊಡಲಿಲ್ಲ.

ಚಂದ್ರಶೇಖರ್ ಪ್ರಾಮಾಣಿಕ ಯತ್ನ

ಇದಾದ ಮೇಲೆ ಚಂದ್ರಶೇಖರ್ ಅವರ ಸರಕಾರ ಬಿದ್ದುಹೋಗಿ, ಪಿ.ವಿ.ನರಸಿಂಹರಾವ್ ಅವರ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂತು. ಮೃದುಭಾಷಿಯೂ ಮೇಧಾವಿಯೂ ಆಗಿದ್ದ ನರಸಿಂಹರಾಯರ ಬಗ್ಗೆ ನನಗೆ ಅಪಾರ ನಿರೀಕ್ಷೆಗಳಿದ್ದವು. ಇದಕ್ಕೆ ತಕ್ಕಂತೆ ಅವರು ಕೂಡ ಶುರುವಿನಲ್ಲಿ ಸಕಾರಾತ್ಮಕವಾಗಿಯೇ ಹೆಜ್ಜೆಗಳನ್ನಿಟ್ಟರು. ರಾಮ ಜನ್ಮಭೂಮಿ ಚಳವಳಿಯ ನಾಯಕರಿಗೂ ರಾಯರ ಬಗ್ಗೆ ಭರವಸೆಗಳಿದ್ದವು. ನರಸಿಂಹರಾವ್ ಅವರಿಗೆ ಭಾರತದ ಇತಿಹಾಸದ ಸ್ಪಷ್ಟವಾದ ತಿಳಿವಳಿಕೆ ಇದ್ದಿದ್ದು ಮತ್ತು ರಾಮ ಜನ್ಮಭೂಮಿಗಾಗಿ ಹಿಂದೂ ಸಮುದಾಯವು ಅನುಭವಿಸಿಕೊಂಡು ಬಂದಿರುವ ಸಂಕಷ್ಟಗಳ ಅರಿವಿದ್ದಿದ್ದು ಇದಕ್ಕೆ ಕಾರಣಗಳಾಗಿದ್ದವು. ಏಕೆಂದರೆ, ರಾಜೀವ್ ಗಾಂಧಿಯವರು 1987ರಲ್ಲಿ ಅಯೋಧ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸರಕಾರಕ್ಕೆ ಸಲಹೆ ನೀಡಲು ರಚಿಸಿದ ಸಚಿವರ ವಿಶೇಷ ತಂಡಕ್ಕೆ ಸ್ವತಃ ನರಸಿಂಹರಾಯರೇ ಮುಖ್ಯಸ್ಥರಾಗಿದ್ದರು. ಸ್ವತಃ ನರಸಿಂಹರಾಯರು ಕೂಡ ಚಂದ್ರಶೇಖರ್ ಅವರು ಕೈಗೊಂಡಿದ್ದ ಯತ್ನಗಳನ್ನು ಮುಂದುವರಿಸುವುದಾಗಿ ಹಿಂದೂ ಧಾರ್ಮಿಕ ಮುಖಂಡರೊಂದಿಗಿನ ತಮ್ಮ ಹಲವು ಖಾಸಗಿ ಸಭೆಗಳಲ್ಲಿ ಭರವಸೆ ನೀಡಿದ್ದರು. ಆದರೆ, ಅವರು ಈ ನಿಟ್ಟಿನಲ್ಲಿ ಒಂದೇಒಂದು ಹೆಜ್ಜೆಯನ್ನೂ ಇಡಲಿಲ್ಲ ಎನ್ನುವುದು ವಾಸ್ತವ.

ಇದರಿಂದ ಭ್ರಮನಿರಸನಗೊಂಡ ಮಂದಿರ ಪರ ವಾದಿಗಳು ’ವಿಶಾಲ ಹಿಂದೂ ಸಮ್ಮೇಳನ’ ದಂತಹ ಕಾರ್ಯಕ್ರಮಗಳ ಮೂಲಕ ಸರಕಾರದ ಮೇಲೆ ಒತ್ತಡ ಹೇರಲು ಶುರು ಮಾಡಿದರು. ಇದಾದ ಬಳಿಕ ರಾವ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಕಮಲ್‌ ನಾಥ್ ಮತ್ತು ಪಿ.ಆರ್. ಕುಮಾರ ಮಂಗಲಂ ಅವರು ಅಯೋಧ್ಯೆ ವಿಚಾರವಾಗಿ ನನ್ನನ್ನು ನಿಯಮಿತವಾಗಿ ಭೇಟಿ ಮಾಡತೊಡಗಿದರು. ವಿಚಿತ್ರವೆಂದರೆ, ಕಮಲ್‌ ನಾಥ್ ಅವರು “ಆಡ್ವಾಣಿಯವರೇ, ಅಯೋಧ್ಯೆ ವಿಚಾರವನ್ನು ನೀವು ಗ್ರಹಿಸಿರುವ ಕ್ರಮವೇ ಸರಿಯಾಗಿಲ್ಲ,’’ ಎಂದುಬಿಟ್ಟರು! ಇದಾದ ಕೆಲವು ದಿನಗಳ ನಂತರ ನನ್ನೊಂದಿಗೆ ಮಾತನಾಡಿದ ಕುಮಾರಮಂಗಲಂ ಅವರು, “ನರಸಿಂಹರಾವ್ ಅವರು ಅಯೋಧ್ಯೆ ವಿವಾದ ಕುರಿತು ಚರ್ಚಿಸುವ ಅಥವಾ ಮಧ್ಯಸ್ಥಿಕೆ ವಹಿಸಬೇಕೆಂಬ ಯಾವ ಅಧಿಕಾರವನ್ನೂ ಕಮಲ್‌ನಾಥ್‌ಗೆ ಕೊಟ್ಟಿಲ್ಲ,’’ ಎಂದು ಹೇಳಿದರು. ವಿಚಿತ್ರವೆಂದರೆ, ಕಮಲ್‌ನಾಥ್ ನನ್ನ ಬಳಿಗೆ ಬಂದಾಗಲೆಲ್ಲ ತಾವು ಪ್ರಧಾನಿ ರಾಯರ ಪರವಾಗಿಯೇ ಬರುತ್ತಿದ್ದೇನೆಂದು ಹೇಳುತ್ತಿದ್ದರು. ಇದೇನೇ ಇರಲಿ, ರಾವ್ ಅವರ ಮೇಲಿದ್ದ ನಿರೀಕ್ಷೆ-ವಿಶ್ವಾಸಗಳು ಫಲಿಸಲಿಲ್ಲ.

ಇದರಿಂದ ಭಾರತೀಯ ಜನತಾ ಪಾರ್ಟಿಗೆ ಆದ ನಿರಾಸೆ ಅಷ್ಟಿಷ್ಟಲ್ಲ. ಆಗ ಏನಾದರೂ ಮಾಡಲೇಬೇಕೆಂದು ತೀರ್ಮಾನಿಸಿದ ನಮ್ಮ ಪಕ್ಷವು, ಕಾಂಗ್ರೆಸ್ ಸರಕಾರವು ದಪ್ಪಚರ್ಮದ ನಡವಳಿಕೆಯನ್ನು ಜನರಿಗೆ ಮನದಟ್ಟು ಮಾಡಿಕೊಟ್ಟು, ಮಂದಿರದ ಪರವಾಗಿ ಜನರು ಕರಸೇವೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ನನ್ನನ್ನೂ ಆಗ ಪಕ್ಷದ ಚುಕ್ಕಾಣಿ ಹಿಡಿದಿದ್ದ ಮುರಳಿ ಮನೋಹರ ಜೋಷಿಯವರನ್ನೂ ಉತ್ತರ ಪ್ರದೇಶಕ್ಕೆ ಕಳುಹಿಸಿ, ಅಲ್ಲೊಂದು ಜಾಗೃತಿ ಯಾತ್ರೆಯನ್ನು ನಡೆಸಲು ತೀರ್ಮಾನಿಸಿತು. ಇದರಂತೆ ನಾನು ವಾರಾಣಸಿ ಯಿಂದಲೂ ಜೋಷಿಯವರು ಮಥುರಾ ದಿಂದಲೂ ಯಾತ್ರೆಯನ್ನು ಪ್ರಾರಂಭಿಸಿದೆವು. ನಮ್ಮ ಈ ಯಾತ್ರೆ ಶುರುವಾಗಿದ್ದು 1992ರ ಡಿಸೆಂಬರ್ 3ರಂದು.

ಇದಾದ ಮೂರು ದಿವಸಕ್ಕೆ ಸರಿಯಾಗಿ -1992ರ ಡಿಸೆಂಬರ್ 6ರಂದು- ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಲಕ್ಷಾಂತರ ಕರಸೇವಕರು ಅಯೋಧ್ಯೆಯಲ್ಲಿ ಜಮಾಯಿಸಿದರು. ಇವರ ಪೈಕಿ ದಕ್ಷಿಣದಲ್ಲಿರುವ ಕೇರಳದ ತುತ್ತತುದಿಯಿಂದ ಹಿಡಿದು ಈಶಾನ್ಯದಲ್ಲಿ ಅಸ್ಸಾಂಗೆ ಸೇರಿದ್ದ ಅಸಂಖ್ಯಾತ ಕರಸೇವಕರಿದ್ದರು. ಇವರಲ್ಲಿ ಬ್ರಾಹ್ಮಣ ಮತ್ತು ಇತರ ಮೇಲ್ಜಾತಿಗಳ ಜನರಿಗಿಂತ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಜನರು, ಹಿಂದುಳಿದ ಜಾತಿಗಳ ಕರಸೇವಕರು ಇದ್ದರು. ಅಲ್ಲದೆ, ಪಂಜಾಬಿನಿಂದ ಬಂದಿದ್ದ ಸಾವಿರಾರು ಸಿಖ್ಖರು ಕೂಡ ಕರಸೇವೆಯಲ್ಲಿ ಪಾಲ್ಗೊಂಡಿದ್ದರು. ಇವರ‍್ಯಾರನ್ನೂ ನಾವು ಈಗಿನ ರಾಜಕೀಯ ಪಕ್ಷಗಳ ಸಭೆಗಳಿಗೆ ಕರೆತರುವಂತೆ ದುಡ್ಡು ಕೊಟ್ಟು ಕರೆದುಕೊಂಡು ಬಂದಿರಲಿಲ್ಲ. ಬದಲಿಗೆ ಪ್ರತಿಯೊಬ್ಬರೂ ಸ್ವಯಂಸ್ಫೂರ್ತಿಯಿಂದ, ಧಾರ್ಮಿಕ ಭಾವನೆಯಿಂದ ಮತ್ತು ಉತ್ಸಾಹದಿಂದ ಅಯೋಧ್ಯೆಗೆ ಬಂದಿದ್ದರು. ಇಡೀ ಭಾರತದ ಇತಿಹಾಸದಲ್ಲೇ ಇಂಥದ್ದೊಂದು ಆಂದೋಲನ ಎಂದೂ ನಡೆದಿರಲಿಲ್ಲ. ಹಿಂದೂ ಸಮಾಜದಲ್ಲಿ ಒಗ್ಗಟ್ಟೆನ್ನುವುದು ಅಸಂಭವ ಎಂದುಕೊಂಡಿದ್ದ ಜನರು ಇದನ್ನೆಲ್ಲ ನೋಡುತ್ತಿದ್ದಂತೆಯೇ ಅವರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವವಾಗತೊಡಗಿತು. ಹಾಗೆಯೇ, ಯಾವ ಬೆಲೆ ತೆತ್ತಾದರೂ ಹಿಂದೂಗಳು ಒಗ್ಗೂಡಬೇಕೆಂದು ಹಂಬಲಿಸುತ್ತಿದ್ದವರಲ್ಲಿ ಇದು ಆನಂದದ ಅಲೆಯ ಉಬ್ಬರಕ್ಕೆ ಕಾರಣವಾಯಿತು.

ಇತಿಹಾಸದ ದಿಕ್ಕುದೆಸೆಯನ್ನೇ ಬದಲಿಸುವಂತಹ ವಿದ್ಯಮಾನಗಳು ಸಾಮಾನ್ಯವಾಗಿ ಮೊದಲೇ ನಿರ್ಧರಿಸಿದ್ದಂತಹ ಒಂದು ನಿರ್ದಿಷ್ಟ ಕ್ರಮದಲ್ಲೇ ಸಂಭವಿಸುತ್ತವೆ. ಆದರೆ ಕೆಲವೊಮ್ಮೆ ಅವು ಅನಿರೀಕ್ಷಿತ ತಿರುವುಗಳನ್ನು ತೆಗೆದುಕೊಳ್ಳುತ್ತವೆ; ಕೆಲವೊಮ್ಮೆ ಹಿನ್ನಡೆಯನ್ನೂ ಅನುಭವಿಸುತ್ತವೆ; ಇಂತಹ ಅರೆಕೊರೆಗಳ ನಡುವೆಯೇ ಅವು ಇನ್ನೆಂದೂ ತಿರುವುಮುರುವು ಮಾಡಲಾಗದಂತಹ ಸಾಧನೆಗಳನ್ನೂ ಮಾಡುತ್ತವೆ. ಇಂತಹದ್ದನ್ನೆಲ್ಲ ಆಂದೋಲನಗಳ ನಾಯಕರು ಅಪೇಕ್ಷಿಸಿರುವುದಿಲ್ಲ; ಹಾಗೆಯೇ, ಆಂದೋಲನದ ಅನುಯಾಯಿಗಳು ಕೂಡ ಇದನ್ನೆಲ್ಲ ನಿರೀಕ್ಷಿಸಿರುವುದಿಲ್ಲ. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನಡೆದ ವಿದ್ಯಮಾನವು ನಿಸ್ಸಂಶಯವಾಗಿಯೂ ಇತಿಹಾಸದ ಗತಿಯನ್ನೇ ಬದಲಿಸುವಂತಹ ಒಂದು ದೊಡ್ಡ ಘಟನೆಯೇ ಸರಿ!

***

  • ಬಿ.ಎಸ್. ಜಯಪ್ರಕಾಶ ನಾರಾಯಣ
  • ಕನ್ನಡ ಸಾಹಿತ್ಯ ಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತಿ. ಕನ್ನಡದ ಶ್ರೇಷ್ಟ ಅನುವಾದಕರಲ್ಲಿ ಖಂಡಿತಾ ಒಬ್ಬರು, ಪತ್ರಕರ್ತರು ಕೂಡ. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ  ‘ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ’, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ‘ನಾನು ಮಲಾಲ’, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ‘ಭಾರತದ ಬೆಸುಗೆ’, ವಿಜಯ ಮಲ್ಯ ಕುರಿತ ‘ಸೊಗಸುಗಾರನ ಏಳುಬೀಳು’, ಓಂ ಸ್ವಾಮಿ ಅವರ ಆತ್ಮಕಥೆ ‘ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ’, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ‘ಕದಡಿದ ಕಣಿವೆ’,  ಸೇರಿದಂತೆ ಹತ್ತಾರು ಮಹತ್ತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಈಗ ಓಶೋ ಅವರು ಶಿಕ್ಷಣದ ಕುರಿತು ಮಾಡಿರುವ ಅಪರೂಪದ ಭಾಷಣಗಳುಳ್ಳ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’ ಕೃತಿ ಕೆಲ ದಿನಗಳಲ್ಲೇ ಓದುಗರ ಕೈ ಸೇರಲಿದೆ. ಜೇಪಿಗೆ ಹಲವಾರು ಪ್ರಶಸ್ತಿಗಳು ಸಂದಿವೆ.

Tags: ayodhya templelk advanilk advani rathayatranarendra modisomnath temple
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಕರುಣೆ ಇಲ್ಲದ ಅಗ್ನಿ; ಅಪರ ಭಗೀರಥನ ಜ್ಞಾನವನ ದಹನ!!

ಕರುಣೆ ಇಲ್ಲದ ಅಗ್ನಿ; ಅಪರ ಭಗೀರಥನ ಜ್ಞಾನವನ ದಹನ!!

Comments 1

  1. Pingback: ಮತ್ತೊಂದು ಐತಿಹಾಸಿಕ ತೀರ್ಪು; ಅಡ್ವಾಣಿ, ಜೋಶಿ, ಉಮಾ ಭಾರತಿ ಸೇರಿ ಎಲ್ಲರಿಗೂ ಕೋರ್ಟ್‌ ಕ್ಲೀನ್‌ಚಿಟ್‌, ಬಿಜೆಪಿ ಭ

Leave a Reply Cancel reply

Your email address will not be published. Required fields are marked *

Recommended

ಗಡಿಭಾಗದ ವಿದ್ಯಾರ್ಥಿಗಳಿಗೆ ಟ್ಯಾಬ್: ಸ್ಮಾರ್ಟ್ ಶಿಕ್ಷಣಕ್ಕೆ ಪ್ರೋತ್ಸಾಹಿಸಿರುವುದು ಒಳ್ಳೆಯ ಕೆಲಸ ಎಂದ ಎಸ್.ಎನ್.ಸುಬ್ಬಾರೆಡ್ಡಿ

ಗಡಿಭಾಗದ ವಿದ್ಯಾರ್ಥಿಗಳಿಗೆ ಟ್ಯಾಬ್: ಸ್ಮಾರ್ಟ್ ಶಿಕ್ಷಣಕ್ಕೆ ಪ್ರೋತ್ಸಾಹಿಸಿರುವುದು ಒಳ್ಳೆಯ ಕೆಲಸ ಎಂದ ಎಸ್.ಎನ್.ಸುಬ್ಬಾರೆಡ್ಡಿ

5 years ago
ಎರಡು ಒಳ್ಳೆಯ ಸುದ್ದಿ: 1. ಐಟಿಐ ಪರೀಕ್ಷೆ ಉಸ್ತುವಾರಿ ಇನ್ನು ಪರೀಕ್ಷಾ ಪ್ರಾಧಿಕಾರಕ್ಕೆ 2. ಹಳ್ಳಿ ಬಡ ಮಹಿಳೆಯರ ಆರ್ಥಿಕಾಭಿವೃದ್ಧಿಗೆ  ಕ್ಷೀರ ಸಂಜೀವಿನಿ

ಎರಡು ಒಳ್ಳೆಯ ಸುದ್ದಿ: 1. ಐಟಿಐ ಪರೀಕ್ಷೆ ಉಸ್ತುವಾರಿ ಇನ್ನು ಪರೀಕ್ಷಾ ಪ್ರಾಧಿಕಾರಕ್ಕೆ 2. ಹಳ್ಳಿ ಬಡ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಕ್ಷೀರ ಸಂಜೀವಿನಿ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ