ಮೈಸೂರು: ಈ ವರ್ಷದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ನಮ್ಮ ನಾಡಿನ ಖ್ಯಾತ ಹೃದ್ರೋಗ ತಜ್ಞ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು, ಉತ್ಸವಕ್ಕೆ ಚಾಲನೆ ನೀಡುವುದಕ್ಕೆ ಮೊದಲು ಚಾಮುಂಡೇಶ್ವರಿ ಅಮ್ಮನವರಿಗೆ ಮೂರು ಬೇಡಿಕೆ ಇಟ್ಟಿದ್ದಾರೆ.
ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಶನಿವಾರ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಿದ ನಂತರ ಮಾತನಾಡಿದ ಅವರು, “ನಾನು ದೇವರಲ್ಲಿ ನನಗಾಗಿ ಆಗಲಿ ಅಥವಾ ನನ್ನ ಕುಟಂಬಕ್ಕಾಗಿ ಆಗಲಿ ಏನನ್ನೂ ಕೇಳಲಿಲ್ಲ. ನಾನು ಅಮ್ಮನವರ ಬಳಿ ಮೂರು ಬೇಡಿಕೆಗಳನ್ನು ಇಟ್ಟಿದ್ದೇನೆ. ಒಂದು; ಜನ, ರಾಜ್ಯ, ದೇಶ ಹಾಗೂ ಇಡೀ ಜಗತ್ತು ಕೋವಿಡ್ ಮುಕ್ತವಾಗಲಿ. ಎರಡನೆಯದು; ಕೋವಿಡ್‌ಗೆ ಆದಷ್ಟು ಬೇಗ ಲಸಿಕೆ ಸಿಗಲಿ. ಮೂರನೆಯದು; ರಾಜ್ಯ ಎದುರಿಸುತ್ತಿರುವ ಪ್ರವಾಹದಿಂದ ಮುಕ್ತಿ ಸಿಗಲಿ” ಎಂದು ಹೇಳಿದರು.
ಕೋವಿಡ್ ಬಂದು ಎಲ್ಲವನ್ನೂ ಬದಲಾಯಿಸಿಬಿಟ್ಟಿದೆ. ಭವಿಷ್ಯವನ್ನು ಮಸಕುಗೊಳಿಸಿದೆ. ಎಲ್ಲರನ್ನೂ ಕಟ್ಟಿಹಾಕುವ ಮೂಲಕ ಮನುಕುಲಕ್ಕೆ ಸವಾಲು ಹಾಕಿದೆ. ಜತೆಗೆ, ಸಂಬಂಧಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದ ಅವರು, ಇಡೀ ಸಮಾಜವನ್ನು ಜಾಲಾಡುತ್ತಿರುವ ಸಾಮಾಜಿಕ ಜಾಲತಾಣಗಳು ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿವೆ. ಜನರ ದಿಕ್ಕು ತಪ್ಪಿಸುತ್ತಿವೆ. ಕೊರೋನಾ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ತಪ್ಪು ಮಾಹಿತಿಗಳು ಹಂಚಿಕೆಯಾಗುತ್ತಿವೆ. ಇಂಥದ್ದೆಲ್ಲ ನಿಲ್ಲಬೇಕಿದೆ ಎಂದರು ಅವರು.
ಧನ್ಯವಾದ ಅರ್ಪಿಸಿದ ಡಾ.ಮಂಜುನಾಥ್
ಇತಿಹಾಸದಲ್ಲಿ ಇದೇ ಮೊದಲಿಗೆ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆ ಮಾಡಲು ವೈದ್ಯರೊಬ್ಬರಿಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ನಾನು ಧನ್ಯನಾಗಿದ್ದೇನೆ. ಇದಕ್ಕಾಗಿ ಸರಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುವೆ ಎಂದು ಡಾ. ಮಂಜುನಾಥ್ ಹೇಳಿದರು.
ದಸರಾ ಮಹೋತ್ಸವವು ನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ದೇಶೀಯತೆಯನ್ನು ಸಾರುತ್ತದೆ ಎಂದು ಅವರು ನುಡಿದರಲ್ಲದೆ, ಪರಿಸರವನ್ನು ನಾವು ಉಳಿಸಿ ಬೆಳೆಸಬೇಕು. ಅದನ್ನು ಹಾಳು ಮಾಡಿದರೆ ಹೇಗೆ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ಇಂದು ಪ್ರಕೃತಿ ತೋರಿಸುತ್ತಿದೆ. ಜತೆಗೆ, ನಾವು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ತಪ್ಪದೇ ಸ್ಯಾನಿಟೈಸೇಷನ್ ಮಾಡಿಕೊಳ್ಳಬೇಕು. ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಲೇಬೇಕು. ಮಾಸ್ಕ್ ಧರಿಸುವುದನ್ನು ತಪ್ಪಿಸಲೇಬಾರದು. ನಾವು ಸೋಂಕಿತರಿಂದ ದೈಹಿಕವಾಗಿ ಮಾತ್ರ ದೂರವಿರಬೇಕೆ ವಿನಾ ಮಾನಸಿಕವಾಗಲ್ಲ ಎಂದರು.
ಇಂದು ವೈದ್ಯರಿಗೆ ಅಭದ್ರತೆ ಕಾಡುತ್ತಿದೆ. ಅವರು ವೃತ್ತಿಯ ಒತ್ತಡ, ಮಾನಸಿಕ ಒತ್ತಡ ಹಾಗೂ ದೈಹಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಹಲ್ಲೆ ಭೀತಿಯಿಂದ ಗ್ರಾಮೀಣ ಭಾಗಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರಿಗೆ ಸೌಹಾರ್ದಯುತ ವಾತಾವರಣ ಹಾಗೂ ಭದ್ರತೆಯನ್ನು ಸರಕಾರ ಕಲ್ಪಿಸಬೇಕು ಎಂದು ಡಾ. ಮಂಜುನಾಥ್ ಮನವಿ ಮಾಡಿದರು.
ಯಾರು ಎಷ್ಟೇ ವಿದ್ಯೆ ಗಳಿಸಿದರೂ ಅದಕ್ಕಿಂತ ನಮ್ಮ ಸಂಸ್ಕಾರ ಬಹಳ ಮುಖ್ಯವಾಗುತ್ತದೆ. ನಾವು ಸಹ ಜನರ ಜೀವ ಮೊದಲು ಆಮೇಲೆ ಶುಲ್ಕ ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಅವರು ವೈದ್ಯಲೋಕಕ್ಕೆ ಕಿವಿಮಾತು ಹೇಳಿದರು.
ಎಲ್ಲವೂ ಸರಳ ಮತ್ತು ಸಾಂಪ್ರದಾಯಿಕ
ಕೋವಿಡ್ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕವಾಗಿ ನಾಡಹಬ್ಬ ಆಚರಿಸಲಾಗುತ್ತಿದೆ. ಆ ದಿಕ್ಕಿನಲ್ಲಿ ಜಗತ್ಪ್ರಸಿದ್ಧ ದಸರಾ ಚಾಲನೆ ಪಡೆದಿದೆ. ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಡಾ.ಸಿ.ಎನ್. ಮಂಜುನಾಥ್ ಅವರು ಶನಿವಾರ ಬೆಳಗ್ಗೆ 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅಮ್ಮನವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಕ್ಕೆ ಚಾಲನೆ ನೀಡಿದರು.
ಸರಳ ದಸರಾಗೆ ಡಾ. ಮಂಜುನಾಥ್ ಅವರು ಚಾಲನೆ ನೀಡಿದ ನಂತರ ಕೊರೊನಾ ಸೋಂಕಿನ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವೈದ್ಯಾಧಿಕಾರಿ ಡಾ. ಟಿ.ಆರ್. ನವೀನ್, ಹಿರಿಯ ನರ್ಸ್ ರುಕ್ಮಿಣಿ, ಪೊಲೀಸ್ ಪೇದೆ ಪಿ.ಕುಮಾರ್, ಅನಾಥ ಶವಗಳ ಮುಕ್ತಿದಾತ ಅಯೂಬ್ ಅಹಮದ್, ಪೌರ ಕಾರ್ಮಿಕ ಮಹಿಳೆ ಮರಗಮ್ಮ ಮತ್ತು ಆಶಾ ಕಾರ್ಯಕರ್ತೆ ನೂರ್ ಜಾನ್ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಸನ್ಮಾನಿತರ ಪೈಕಿ ಪೊಲೀಸ್ ಪೇದೆ ಪಿ.ಕುಮಾರ್ ಅವರ ಬದಲಾಗಿ ಅವರ ಪತ್ನಿ ಸನ್ಮಾನ ಸ್ವೀಕರಿಸಿದರು.
ನವರಾತ್ರಿಯ ಮೊದಲ ದಿನವಾದ ಇಂದು ಮುಂಜಾನೆ 4.30ರಿಂದಲೇ ಚಾಮುಂಡಿ ಅಮ್ಮನವರಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ ಮೂಲ ಚಾಮುಂಡೇಶ್ವರಿ ಅಮ್ಮನವರಿಗೆ ಹಂಸವಾಹಿನಿ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಸಚಿವರಾದ ಎಸ್.ಟಿ. ಸೋಮಶೇಖರ್, ಬಿ. ಸಿ. ಪಾಟೀಲ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ರಾಮದಾಸ್, ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಮೇಯರ್ ತಸ್ಲೀಂ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದರು. ಇಂದಿನ ಕಾರ್ಯಕ್ರಮದಲ್ಲಿ 200 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ವರದಿ: Gnews5