ಶಬರಿಮಲೆ: ಇಲ್ಲಿನ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಕೋವಿಡ್ ನಿಬಂಧನೆಗಳನ್ನು ಮತ್ತಷ್ಟು ಬಿಗಿ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಸನ್ನಿಧಾನದಲ್ಲಿ ಕರ್ತವ್ಯದಲ್ಲಿರುವ ದೇವಳದ ಕೆಲ ಸಿಬ್ಬಂದಿಗೆ ಸೋಂಕು ತಗುಲಿರುವ ಕಾರಣ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದೇ ಡಿಸೆಂಬರ್ 31ರಿಂದ ಆರಂಭವಾಗಲಿರುವ ಮಕರವಿಳಕ್ಕು ಉತ್ಸವದ ವೇಳೆ ಸನ್ನಿಧಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್-19 Rtpcr ಪರೀಕ್ಷೆಯನ್ನು ಮಾಡಿಸಿಕೊಳ್ಳಲೇಬೇಕು. ಹಾಗೂ ಕೋವಿಡ್ ನೆಗೆಟೀವ್ ಬಂದಿರುವ ಪ್ರಮಾಣ ಪತ್ರವನ್ನು ತೋರಿಸಲೇಬೇಕು ಎಂದು ಟ್ರಾವಂಕೂರ್ ದೇವಸ್ವಂ ಬೋರ್ಡ್‌ನ ಅಧ್ಯಕ್ಷ ಎನ್.ವಾಸು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ Rtpcr ಪರೀಕ್ಷೆ ಮಾಡಿಸಿಕೊಳ್ಳದ, ಕೋವಿಡ್ ನೆಗೆಟೀವ್ ಬಂದಿರುವ ಪ್ರಮಾಣ ಪತ್ರವನ್ನು ಹೊಂದಿರದ ಭಕ್ತರನ್ನು ಯಾವುದೇ ಕಾರಣಕ್ಕೂ ಅಯ್ಯಪ್ಪ ದರ್ಶನಕ್ಕೆ ಬಿಡುವುದಿಲ್ಲ. ಶಬರಿಮಲೆಯನ್ನೇ ಹತ್ತಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ದಿನದಿಂದ ಸನ್ನಿಧಾನದಲ್ಲಿ ಕೋವಿಡ್ ಸೋಂಕಿತರು ಹೆಚ್ಚುತ್ತಿರುವ ಕಾರಣಕ್ಕೆ ಸನ್ನಿಧಾನದಲ್ಲಿ ನಿಯೋಜಿಸಿರುವ ಸಿಬ್ಬಂದಿಯನ್ನು ಕಡಿತಗೊಳಿಸಲು ದೇವಸ್ವಂ ಬೋರ್ಡ್ ನಿರ್ಧರಿಸಿದೆ. ಇನ್ನು ಮಕರವಿಳಕ್ಕು ಉತ್ಸವ ಡಿಸೆಂಬರ್ 31ರಿಂದ ಜನವರಿ 19ರವರೆಗೂ ನಡೆಯಲಿದೆ.
ಶಬರಿಮಲೆಯಲ್ಲಿ ಕೋವಿಡ್ ನಿರ್ವಹಣೆ ಸೇರಿದಂತೆ ದೇವಸ್ವಂ ಬೋರ್ಡ್ ಅಗತ್ಯಗಳಿಗಾಗಿ ಕೇರಳ ಸರಕಾರ 20 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ತಿಳಿಸಿರುವ ವಾಸು, ಇದಕ್ಕಾಗಿ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೇವಸ್ವಂ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…