ಬೆಂಗಳೂರು: ಪರೀಕ್ಷೆಯ ಬಗ್ಗೆ ಆತಂಕಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಒಂದು ಮಹತ್ವದ ಸುದ್ದಿಯನ್ನು ನೀಡಿದೆ ರಾಜ್ಯ ಸರಕಾರ.
ಮೇ ತಿಂಗಳ ಎರಡನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಎಸ್ಎಸ್ಎಲ್ಸಿ ಪರೀಕ್ಷೆಗಳು ಜೂನ್ ಮೊದಲ ವಾರದಿಂದಲೇ ಆರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.
ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಪ್ರಕಟಣೆ ಹೊರಡಿಸಿರುವ ಸುರೇಶ್ ಕುಮಾರ್ ಅವರು; ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳ ದಿನಾಂಕದ ಬಗ್ಗೆ ಉಂಟಾಗಿದ್ದ ಗೊಂದಲ ಮತ್ತು ಅನುಮಾನಗಳೆಲ್ಲವನ್ನೂ ನಿವಾರಿಸಿದ್ದಾರೆ. ಇದರೊಂದಿಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ನಿರಾಳವಾಗಿದ್ದು, ಮಕ್ಕಳು ಇದೀಗ ಓದಿನಲ್ಲಿ ಮಗ್ನರಾಗಿದ್ದಾರೆ.
ಶಿಕ್ಷಣ ಇಲಾಖೆಯು ಪಿಯುಸಿ ಮತ್ತು ಎಸ್ಎಸ್ಎಲ್ಸಿ ತರಗತಿಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ದೃಷ್ಟಿಯಿಂದ ಬೋಧನೆ, ಕಲಿಕೆಗಾಗಿ ಗುರುತಿಸಿರುವ ವಿಷಯಾಂಶಗಳನ್ನು ಅಂತಿಮಗೊಳಿಸಿದ್ದು, ಇದರ ವಿವರಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಲಾಗುತ್ತದೆ. ಯಾವುದೇ ವಿದ್ಯಾರ್ಥಿಗೂ ಹೊರೆಯಾಗದ ರೀತಿಯಲ್ಲಿ ಕನಿಷ್ಟ ಕಲಿಕೆಗೆ ಬೋಧಿಸಬೇಕಿರುವ ಪಠ್ಯಗಳನ್ನು ಪರಿಗಣಿಸಲಾಗಿದೆ ಎಂದು ಸುರೇಶ್ ಕುಮಾರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಉಳಿದಂತೆ ಆಯಾ ತಿಂಗಳಲ್ಲಿ ನಡೆಯುವ ಪರೀಕ್ಷಾ ದಿನಾಂಕಗಳನ್ನು ಸರಕಾರ ಶೀಘ್ರವೇ ಪ್ರಕಟಿಸುವ ಸಾಧ್ಯತೆ ಇದೆ.
ಜತೆಗೆ, ಈಗಾಗಲೇ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಈ ತರಗತಿಗಳಿಗೆ ಸಂಬಂಧಿಸಿದಂತೆ ಪಠ್ಯವನ್ನು ಕಡಿತ ಮಾಡುವ ಪ್ರಸ್ತಾಪ ಶಿಕ್ಷಣ ಇಲಾಖೆಯ ಮುಂದೆ ಇಲ್ಲ. ಆದರೆ, ಶಾಲೆಯ ಮಟ್ಟದಲ್ಲಿಯೇ ಮೌಲ್ಯಮಾಪನ ನಡೆಸಲಾಗುವುದರಿಂದ ಆಯಾ ಮಕ್ಕಳ ಕಲಿಕೆಯ ಸಾಮರ್ಥ್ಯದ ಆಧಾರದಲ್ಲಿ ಸರಳವಾಗಿ ಮೌಲ್ಯಮಾಪನದ ಪ್ರಕ್ರಿಯೆ ಹಾಗೆಯೇ ಇರುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಸಚಿವರ ನಿರ್ಧಾರ ಉತ್ತಮವಾಗಿದೆ. ವಿಜ್ಞಾನದ ವಿದ್ಯಾರ್ಥಿಗಳಾದ ನಮಗೆ ಪ್ರಾಕ್ಟಿಕಲ್ ಅಭ್ಯಾಸಕ್ಕೆ ಸಮಯ ಕೊಟ್ಟಿದ್ದಾರೆ. ಈಗಾಗಲೇ ನಮ್ಮ ಉಪನ್ಯಾಸಕರು ಪಾಠಗಳನ್ನು ಬಹುತೇಕ ಮುಗಿಸಿದ್ದು, ಸದ್ಯಕ್ಕೆ ರಿವಿಷನ್ ಮಾಡುತ್ತಿದ್ದಾರೆ. ಈಗಷ್ಟೇ ಆಫ್‌ಲೈನ್ ತರಗತಿಗಳೂ ಆರಂಭವಾಗಿದ್ದು, ನಮ್ಮ ಅಧ್ಯಯನಕ್ಕೆ ಹೆಚ್ಚು ಅನುಕೂಲವಾಗಿದೆ. ಮೇ ತಿಂಗಳಲ್ಲಿ ಪರೀಕ್ಷೆ ನಡೆಸುವುದು ಒಳ್ಳೆಯ ನಿರ್ಧಾರ ಎಂದು ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.