ಬೆಂಗಳೂರು/ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ಶಾಸಕ ಹಾಗೂ ಬುಧವಾರ ಬೆಳಗ್ಗೆವರೆಗೂ ಅಬಕಾರಿ ಸಚಿವರಾಗಿದ್ದ ಎಚ್.ನಾಗೇಶ್ ಅವರ ರಾಜೀನಾಮೆ ಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಂಪುಟವನ್ನು ವಿಸ್ತರಣೆ ಮಾಡಿದ್ದಾರೆ.
ಗಜ ಪ್ರಸವದಂತೆ ಆಗಿಬಿಟ್ಟ ಈ ವಿಸ್ತರಣೆಯ ತಥಂಗದಲ್ಲಿ ಬಿಜೆಪಿಯ ಹಳಬರು ಮತ್ತು ವಲಸಿಗರು ಸೇರಿ ಏಳು ಜನ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಹಿರಿಯ ಶಾಸಕ ಉಮೇಶ್ ಕತ್ತಿ, ಸಿ.ಪಿ.ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಎಸ್.ಅಂಗಾರ, ಆರ್.ಶಂಕರ್ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಈ ಏಳೂ ಮಂದಿಗೆ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಮಾಣ ಸ್ವೀಕಾರ ಮಾಡಿದವರ ಪೈಕಿ ವಿಧಾನ ಪರಿಷತ್ ಸದಸ್ಯರಾದ ಹೊಸಕೋಟೆಯ ಎಂಟಿಬಿ ನಾಗರಾಜ್ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದವರು. ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ಬಂದಿದ್ದ ಆರ್.ಶಂಕರ್ ಹಿಂದಿನ ಸಮ್ಮಿಶ್ರ ಸರಕಾರದಲ್ಲೂ ಮಂತ್ರಿಯಾಗಿದ್ದರು. ಸಿ.ಪಿ.ಯೋಗೀಶ್ವರ್ ಚನ್ನಪಟ್ಟಣದಲ್ಲಿ ಸೋತು ಆಪರೇಷನ್ ಕಮಲಕ್ಕೆ ಹೆಗಲು ಕೊಟ್ಟವರು. ಇನ್ನು ಉಮೇಶ್ ಕತ್ತಿ ಎಂಟನೇ ಬಾರಿಗೆ ಶಾಸಕರಾದವರು. ಮೂಲ ಬಿಜೆಪಿಗರಲ್ಲದಿದ್ದರೂ ಯಡಿಯೂರಪ್ಪ ಕಾರಣಕ್ಕಾಗಿ ಬಹಳ ದಿನಗಳ ಹಿಂದೆಯೇ ಕಮಲ ಪಾಳಯಕ್ಕೆ ಬಂದಿದ್ದವರು. ಇನ್ನು ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ ಹಾಗೂ ಸುಳ್ಯದ ಅಂಗಾರ ಅವರು ಬಿಜೆಪಿಯ ಪಕ್ಕಾ ಮೂಲ ನಿವಾಸಿಗಳು.
ಒಂದೆಡೆ ತಮ್ಮನ್ನು ನಂಬಿ ಬಂದ ಎಂಟಿಬಿ, ಶಂಕರ್ ಅವರ ಹಿತವನ್ನು ಸಿಎಂ ರಕ್ಷಣೆ ಮಾಡಿದ್ದಾರೆ. ಯೋಗೀಶ್ವರ್ ಅವರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಈ ಪೈಕಿ ಮುರುಗೇಶ್ ನಿರಾಣಿ ಸಂಪುಟಕ್ಕೆ ಸೇರಿದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಕೊನೆ ಕ್ಷಣದಲ್ಲಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತಾ? ಎಂದು ಕೇಳಲಾಗುತ್ತಿದೆ. ಸ್ವಪಕ್ಷೀಯ ಕೋಟಾದಲ್ಲಿ ನಿಜಕ್ಕೂ ಅರ್ಹತೆ ಇದ್ದ ಅಂಗಾರ ಕೊನೆಗೂ ಮಂತ್ರಿಯಾಗಿದ್ದಾರೆ. ಅರವಿಂದ ಲಿಂಬಾವಳಿ ಸಂಪುಟಕ್ಕೆ ಸೇರಿದ ಕಾರಣಗಳ ಬಗ್ಗೆ ಯಾರು ತುಟಿ ಬಿಚ್ಚುತ್ತಿಲ್ಲವಾದರೂ, ನಿರಾಣಿ ಎಂಟ್ರಿಯೇ ಹೆಚ್ಚು ಚರ್ಚೆಯಾಗುತ್ತಿದೆ. ಕತ್ತಿಗೆ ಮೊದಲೇ ಸ್ವತಃ ಸಿಎಂ ಅವರೇ ಭರವಸೆ ನೀಡಿದ್ದರು.
ಮುನಿರತ್ನಗೆ ತಪ್ಪಿದ ಅವಕಾಶ
ಸಂಪುಟ ಸೇರಲೇಬೇಕೆಂದು ಪಣ ತೊಟ್ಟಿದ್ದ, ಕಾಂಗ್ರೆಸ್‌ನಿಂದ ವಲಸೆ ಬಂದು ಕಳೆದ ವಿಧಾನಸಭೆ ಚುನಾವಣೆಯ ಉಪ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಮುನಿರತ್ನ ಅವರಿಗೆ ಇನ್ನಿಲ್ಲದ ನಿರಾಶೆಯಾಗಿದೆ. ಅವರನ್ನು ಮನವೊಲಿಸಿ ಏಳು ಜನರ ಪ್ರಮಾಣ ವಚನ ಶಾಸ್ತ್ರ ಮುಗಿಸಲು ಸಿಎಂ ಹರಸಾಹಸವನ್ನೇ ನಡೆಸಬೇಕಾಯಿತು. ಸುಪ್ರೀಂ ಕೋರ್ಟ್‌ನಲ್ಲಿದ್ದ ಪ್ರಕರಣವನ್ನು ಮುಂದಿಕ್ಕಿ ಅವರನ್ನು ಸಂಪುಟದಿಂದ ದೂರ ಇಡಲಾಯಿತು. ಈ ಬಗ್ಗೆ ಸಿಟ್ಟಾಗಿರುವ ಮುನಿರತ್ನ ತನಗೆ ಅನ್ಯಾಯವಾಗಿದೆ ಎಂದು ಆಪ್ತರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ನಾಗೇಶ್‌ಗೆ ಅಲ್ಲ, ಕೋಲಾರಕ್ಕೆ ಅನ್ಯಾಯ
ಮುಳಬಾಗಿಲು ಮೀಸಲು ವಿಧಾನಸಭೆ ಕ್ಷೇತ್ರದಿಂದ ಅನಿರೀಕ್ಷಿತವಾಗಿ ಗೆದ್ದುಬಂದ ಎಚ್.ನಾಗೇಶ್ ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಕ್ಯಾಬಿನೇಟ್ ಮಂತ್ರಿಯಾಗಿದ್ದವರು. ಆಪರೇಷನ್ ಕಮಲ ಯಶಸ್ವಿಯಾದ ಮೇಲೆ ಎಚ್‌ಡಿಕೆ ಸರಕಾರಕ್ಕೆ ಮೊದಲು ಕೈಕೊಟ್ಟವರು ಇದೇ ನಾಗೇಶ್. ಎಲ್ಲರಿಗಿಂತ ಮೊದಲೇ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದ್ದ ಅವರನ್ನು ನಂತರ ಸೇರಿಕೊಂಡವರು ಆರ್.ಶಂಕರ್. ಯಡಿಯೂರಪ್ಪ ಸರಕಾರದಲ್ಲಿ ಭರ್ಜರಿಯಾದ ಅಬಕಾರಿ ಖಾತೆಯೇ ಅವರಿಗೆ ಸಿಕ್ಕಿತು.
ನಾಗೇಶ್ ಅವರ ರಾಜೀನಾಮೆ ಪಡೆದ ನಂತರ ಸಂಪುಟದಲ್ಲಿ ಕೋಲಾರ ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲದಂತಾಗಿದೆ. ಸರಕಾರ ರಚನೆ ಮಾಡಲು ನನ್ನ ಪಾತ್ರವೂ ಇತ್ತು. ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನವಿದ್ದರೂ ನಾನು ರಾಜೀನಾಮೆ ನೀಡಿ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದೆ. ಈಗ ಬಹುಮತ ಇದೆ ಎಂದು ನನಗೆ ಅನ್ಯಾಯ ಮಾಡಲಾಗಿದೆ. ನನ್ನ ಸಮುದಾಯವನ್ನು ವಂಚಿಸಲಾಗಿದೆ ಎಂದು ಅವರು ಅಲವತ್ತುಕೊಂಡಿದ್ದಾರೆ. ಅವರ ಗೋಳನ್ನು ಬಿಜೆಪಿ ಕೇಳುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ, ಅಕ್ಕಪಕ್ಕದ ಪಕ್ಷಗಳಿಂದ ಶಾಸಕರು ಬಿಜೆಪಿಗೆ ಗುಳೆ ಬಂದ ಮೇಲೆ ಪಕ್ಷೇತರ ಶಾಸಕ ನಾಗೇಶ್ ಕಿಮ್ಮತ್ತು ಕಡಿಮೆಯಾಗಿದೆ. ಎಲ್ಲರ ವಿಷಯದಲ್ಲೂ ಮಾತು ಉಳಿಸಿಕೊಳ್ಳುತ್ತಿರುವ ಯಡಿಯೂರಪ್ಪ ನಾಗೇಶ್ ವಿಷಯದಲ್ಲಿ ಮಾತ್ರ ಹೀಗೆ ಮಾಡುತ್ತಿರುವುದು ಕೋಲಾರದ ಪಾಲಿಗೆ ಅನ್ಯಾಯವೇ ಸರಿ ಎನ್ನುತ್ತಾರೆ ಬಿಜೆಪಿ ಹಿರಿಯ ನಾಯಕರೊಬ್ಬರು.
ಇಲ್ಲಿ ಅನ್ಯಾಯವಾಗಿರುವುದು ನಾಗೇಶ್ ಅವರಿಗಲ್ಲ. ಕೋಲಾರ ಜಿಲ್ಲೆಗೆ ಎನ್ನುತ್ತಿದ್ದಾರೆ ಅವರ ಬೆಂಬಲಿಗರು. ಸಂಸದ ಮುನಿಸ್ವಾಮಿ, ಜಿಲ್ಲೆಯ ಕೆಲ ಬಿಜೆಪಿ ನಾಯಕರು ನಾಗೇಶ್ ಅವರಿಗೆ ಕೈಕೊಟ್ಟರು. ನಿರಂತರವಾಗಿ ಅವರು ಪಕ್ಷದ ನಾಯಕರಿಗೆ ದೂರು ನೀಡುತ್ತಿದ್ದರು ಅನ್ನುತ್ತಾರೆ ಅವರು. ಅಷ್ಟೇ ಅಲ್ಲ, ಇತ್ತೀಚೆಗೆ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರ ವರ್ಗಾವಣೆಗೆ ನಾಗೇಶ್ ಹಣ ಕೇಳಿದ್ದರು ಎಂಬ ವಿಷಯ ಬಹಿರಂಗವಾಗಿತ್ತು. ಈ ಬಗ್ಗೆ ಆ ಅಧಿಕಾರಿಯ ಪುತ್ರಿ ಪ್ರಧಾನಿ ಮೋದಿ ಅವರಿಗೆ ದೂರು ನೀಡಿದ್ದರು. ಈ ಕಾರಣಕ್ಕೆ ನಾಗೇಶ್ ವಿಕೆಟ್ ಪತನವಾಗಿರಬಹುದಾ? ಎಂಬ ಚರ್ಚೆ ಜಿಲ್ಲೆಯ ಆಜುಬಾಜಿನಲ್ಲಿ ನಡೆಯುತ್ತಿದೆ. ಇನ್ನೊಂದೆಡೆ ನಾಗೇಶ್ ರಾಜೀನಾಮೆ ನೀಡುತ್ತಿದ್ದಂತೆಯೇ ಮುಳಬಾಗಿಲಿನಲ್ಲಿ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅವರು ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಬೆಂಬಲಿಗರು ಎನ್ನಲಾಗಿದೆ. ಇದು ಕೋಲಾರ ಜಿಲ್ಲೆಯ ಸದ್ಯದ ಸ್ಥಿತಿ. ನಮಗೆ ಒಂದು ಕಣ್ಣು ಹೋದರೂ ಪರವಾಗಿಲ್ಲ, ಪಕ್ಕದವನ ಎರಡೂ ಕಣ್ಣು ಹೋಗಲಿ ಎನ್ನುವ ಜಾಯಮಾನ ಇದೆಂದರೆ ತಪ್ಪೇನಲ್ಲ.
ಸಂಜೆ ಹೊತ್ತಿಗೆ ಹೊಸ ಟ್ವಿಸ್ಟ್
ಮಂತ್ರಿ ಮಂಡಲ ವಿಸ್ತರಣೆಯಾಗಿ ಸಂಜೆ ಹೊತ್ತಿಗೆ ಭಿನ್ನಮತದ ಬೆಂಕಿ ಹೊತ್ತಿಕೊಳ್ಳುವ ಹೊತ್ತಿಗೆ ಎಚ್.ನಾಗೇಶ್ ಅವರನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷಗಿರಿಯನ್ನು ನೀಡಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ. ಈ ಎಲ್ಲ ತೆರೆಮರೆಯ ಕಸರತ್ತುಗಳಲ್ಲಿ ನಾಗೇಶ್‌ಗೆ ಜತೆಯಾಗಿ ನಿಂತವರು ಹಿರಿಯ ಸಚಿವ ಅಶೋಕ್. ಒಲ್ಲದ ಮನಸ್ಸಿನಿಂದಲೇ ಅವರು ನಿಗಮವನ್ನು ಒಪ್ಪಿಕೊಂಡಿದ್ದಾರೆಂದು ಗೊತ್ತಾಗಿದೆ.