ಸಚಿವ ಡಾ.ಸುಧಾಕರ್ ಮನವಿ; ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್‌ಗಳು ರಾಜ್ಯಕ್ಕೆ
ಬೆಂಗಳೂರು: ಕೋವ್ಯಾಕ್ಸಿನ್ ಲಸಿಕೆಯ 20 ಸಾವಿರ ಡೋಸ್‌ಗಳು ರಾಜ್ಯಕ್ಕೆ ಬರಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವ್ಯಾಕ್ಸಿನ್‌ನ ಒಂದು ವೈಲ್‌ನಲ್ಲಿ 10 ಎಂಎಲ್ ಲಸಿಕೆ ಇದೆ. ಕೋವಿಶೀಲ್ಡ್ʼನ ಒಂದು ವೈಲ್‌ನಲ್ಲಿ 5 ಎಂಎಲ್ ಇದೆ. ಕೋವ್ಯಾಕ್ಸಿನ್‌ನ ಒಂದು ವೈಲ್‌ನಿಂದ 20 ಮಂದಿಗೆ ಲಸಿಕೆ ನೀಡಬಹುದು. ಎರಡು ಲಸಿಕೆಗಳ ನಡುವೆ ಇರುವ ವ್ಯತ್ಯಾಸ ಇಷ್ಟೇ. ರಾಜ್ಯದಲ್ಲಿ ಇವೆರಡೂ ಲಸಿಕೆಗಳನ್ನು ನೀಡಲಾಗುವುದು. ಆದರೆ ಲಸಿಕೆ ಪಡೆಯುವವರು ಯಾವ ಲಸಿಕೆ ಬೇಕೆಂದು ಕೇಳುವಂತಿಲ್ಲ ಎಂದರು.
ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ನೀಡಬೇಕು, ಯಾವ ಸಿಬ್ಬಂದಿಗೆ ನೀಡಬೇಕು ಮೊದಲಾದವುಗಳ ಬಗ್ಗೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಜನವರಿ 16ರಿಂದ ಲಸಿಕೆ ವಿತರಣೆ ಆರಂಭಿಸುವುದಕ್ಕೆ ಸಿದ್ಧತೆಯಾಗಿ ಎಲ್ಲ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ನೂತನ ಸಚಿವರಿಗೆ ಶುಭಾಶಯ ತಿಳಿಸುತ್ತೇನೆ. ಕೊನೆ ಗಳಿಗೆಯಲ್ಲಿ ಕೆಲವರಿಗೆ ಸಂಪುಟಕ್ಕೆ ಸೇರಲು ಸಾಧ್ಯವಾಗಿಲ್ಲ. ಅಂತಹವರಿಗೆ ಸೂಕ್ತ ಸಮಯದಲ್ಲಿ ಪಕ್ಷ ಉತ್ತಮ ಅವಕಾಶ ನೀಡಲಿದೆ. ನಮ್ಮ ಸರಕಾರ ಪಾರದರ್ಶಕವಾಗಿ ಕೆಲಸ ಮಾಡಲಿದ್ದು, ಎಲ್ಲ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸ ಮಾಡಲಿದೆ. ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಾದಾಗ ಅಸಮಾಧಾನ ಸಹಜ. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ ಎಂದರು.
ಎಲ್ಲ ಬಿಜೆಪಿ ಶಾಸಕರು ಒಗ್ಗಟ್ಟಾಗಿದ್ದಾರೆ. ಯಾರೂ ಗುಂಪುಗಾರಿಕೆ ಮಾಡುತ್ತಿಲ್ಲ. ಪಕ್ಷದ ಕೆಳಗೆ ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಯಶ್‌ಗೆ ನೋಟಿಸ್ ಅಲ್ಲ, ಮನವಿ
ಚಿತ್ರನಟ ಯಶ್ ಬಹಳ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಅವರ ಮೇಲೆ ನನಗೂ ಅಭಿಮಾನವಿದೆ. ಯಶ್ ಅವರ ಹೊಸ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಯಶ್ ಅವರಿಗೆ ಮನವಿ ಮಾಡಲಾಗಿದೆ. ಆದರೆ ಇದು ನೋಟಿಸ್ ಅಲ್ಲ. ಚಿತ್ರದಲ್ಲಿ ಸಿಗರೇಟು ಸೇದುವ ದೃಶ್ಯ ಇದೆ ಎಂದು ಕೇಳಿದ್ದೇನೆ. ಈ ದೃಶ್ಯವನ್ನು ತೆಗೆದು ಹಾಕಿದರೆ ಸಮಾಜಕ್ಕೆ ಅನುಕೂಲ ಎಂದು ಮನವಿ ಮಾಡಲಾಗಿದೆ. ಯಶ್ ಅವರ ಅಭಿಮಾನಿಗಳಲ್ಲಿ ಅನೇಕ ಯುವಜನರು ಇದ್ದಾರೆ. ಇದು ಎಲ್ಲ ಚಿತ್ರಗಳಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು ಸಚಿವರು.