ಚಿಕ್ಕಬಳ್ಳಾಪುರ: ತಂಬಾಕು ಸೇವನೆ ಆರೋಗ್ಯವನ್ನು ಹದಗೆಡಿಸುವುದಲ್ಲದೇ, ನೆರೆಹೊರೆಯವರ ಮೇಲೂ ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಂಡು, ದಂಡ ವಿಧಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್.ಅಮರೇಶ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೊಟ್ಪಾ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲೆಡೆ ಅರಿವು ಮೂಡಿಸಿ
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಹಲವಾರು ತಂಬಾಕು ನಿಯಂತ್ರಣ ಕಾರ್ಯಕ್ರಮಗಳು ಹಾಗೂ ಗುಲಾಬಿ ಚಳುವಳಿಯ ಜಾಥಾಗಳನ್ನೂ ನಡೆಸಲಾಗಿದೆ. ತಂಬಾಕು ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ ಹಾಗೂ ಯುವಕರಿಗೆ ಇನ್ನೂ ಹೆಚ್ಚಿನ ಅರಿವಿನ ಅಗತ್ಯವಿದೆ. ತಂಬಾಕು ಸೇವನೆಯಲ್ಲಿ ತೊಡಗಿರುವವರನ್ನು ಮುಕ್ತಗೊಳಿಸಬೇಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ಹೊಸಬರು ಸೇರ್ಪಡೆಯಾಗದಂತೆ ಅರಿವು ಮೂಡಿಸಬೇಕು ಎಂದರು ಅವರು.
ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಹಾಗೂ ಚಿಕ್ಕ-ಚಿಕ್ಕ ಅಂಗಡಿ ಮುಂಗಟ್ಟುಗಳು ಹಾಗೂ ಆಸ್ಪತ್ರೆಯ ಸುತ್ತಲೂ ಸ್ವಚ್ಛತೆಯ ಕಾಪಾಡಿಕೊಳ್ಳುವುದರ ಜೊತೆಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ತಂಬಾಕು ಮತ್ತು ಧೂಮಪಾನ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪೊಲೀಸ್ ಇಲಾಖೆ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಮಾಹಿತಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಯವರು ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರ್‌ಗಳು ಹಾಗೂ ಅಂಗನವಾಡಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರೂ ಸಹ ಧೂಮಪಾನ, ತಂಬಾಕು ನಿಯಂತ್ರಣದ ಬಗ್ಗೆ ಹೆಚ್ಚಿನ ರೀತಿಯಾಗಿ ಜಾಗೃತಿಯ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಕೊಟ್ಪಾ ಕಾಯ್ದೆಯಡಿ ದಂಡ
ಕೊಟ್ಪಾ ಕಾಯ್ದೆಯನ್ನು ಉಲ್ಲಂಘಿಸಿ ನಿಷೇಧಿತ ಪ್ರದೇಶಗಳಲ್ಲಿ ತಂಬಾಕು ಸೇವನೆ ಮಾಡಿದವರಗೆ ದಂಡ ವಿಧಿಸಲಾಗಿದೆ. ತಾಲೂಕುವಾರು ಈಗಾಗಲೇ 528 ಜನರ ವಿರುದ್ಧ ದಂಡವನ್ನು ವಿಧಿಸಿದ್ದು, ಒಟ್ಟು 39.500 ರೂ. ದಂಡ ವಿಧಿಸಲಾಗಿದೆ. ಜಿಲ್ಲೆಯಾದ್ಯಂತ 18 ವರ್ಷದೊಳಗಿನ ವಯಸ್ಕರಿಗೆ ತಂಬಾಕು ಹಾಗೂ ಧೂಮಪಾನ ಮಾರಾಟ ಮಾಡದಂತೆ ಕ್ರಮ ಜರುಗಿಸಲಾಗಿದ್ದು, 80.77% ಪ್ರಗತಿ ಸಾಧಿಸಲಾಗಿದೆ. ಇನ್ನೂ ಹೆಚ್ಚಿನ ರೀತಿಯಾಗಿ ತಂಬಾಕು ಸೇವನೆಯಿಂದಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಅಗತ್ಯವಿದೆ ಎಂದು ಹೆಚ್.ಅಮರೇಶ್ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್ ಕಬಾಡೆ, ಡಿಎಲ್‌ಓ ಶಿವಕುಮಾರ್, ಜಿಲ್ಲಾ ಸರ್ಜನ್ ಡಾ.ರಮೇಶ್, ಆರೋಗ್ಯ ಸುರಕ್ಷತಾ ಅಧಿಕಾರಿ ಡಾ.ಮೀಟಿ, ಜಿಲ್ಲಾ ಸಲಹೆಗಾರ ರಾಘವೇಂದ್ರರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

















