- ಇಂದು ರಥಸಪ್ತಮಿ. ಸೂರ್ಯದೇವನು ಸಪ್ತಾಶ್ವರಥಾರೋಹಣ ಮಾಡಿ ದಕ್ಷಿಣ ಧ್ರುವದ ಪ್ರವಾಸ ಮುಗಿಸಿ ಉತ್ತರ ಧ್ರುವದ ಕಡೆಗೆ ಕೆಳಗಿನಿಂದ ಮೇಲೇರುವ ಸಮಯ. ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಬಹಳ ಮಹತ್ತ್ವವಾದ ರಥಸಪ್ತಮಿಯನ್ನು ಅಮೋಘವಾಗಿ ಕಟ್ಟಿಕೊಟ್ಟಿದ್ದಾರೆ ಖ್ಯಾತ ಲೇಖಕ ಡಾ. ಗುರುಪ್ರಸಾದ ಎಚ್.ಎಸ್. ಅವರು.
ಯಾವುದೇ ವಸ್ತು ಹಳೆಯದಾದ ಮಾತ್ರಕ್ಕೆ ಬದುಕು ಹಳತಾಗದು. ಅದು ನಿತ್ಯ ನವೀನ.
ಹೀಗಾಗಿಯೇ ದೇಹ ಹಳತಾದಂತೆ ಹಳೆಯ ಬಟ್ಟೆ ಕಳಚಿ ಹೊಸದನ್ನು ಧರಿಸಿದಂತೆ ಅದನ್ನು ವಿಸರ್ಜಿಸಿ ಆತ್ಮ ಹೊಸತನ್ನು ಪಡೆಯುತ್ತದೆ ಎಂಬ ನಂಬಿಕೆಯಿದೆ. ಸೂರ್ಯನೂ ಹಾಗೆಯೇ, ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ತನ್ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ.
ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ದೇಶಾದ್ಯಂತ ಫೆಬ್ರವರಿ 19ರಂದು ರಥಸಪ್ತಮಿ ಆಚರಿಸಲಾಗುತ್ತಿದೆ.
ʼರಥಸಪ್ತಮಿʼ ಎಂದರೆ ಸೂರ್ಯ ದೇವನು ಚಾಂದ್ರಮಾನ ಸಂವತ್ಸರದ ಹನ್ನೊಂದನೇ ಮಾಸದ ಅಂದರೆ ಮಾಘ ಶುಕ್ಲ ಪಕ್ಷದ ಸಪ್ತಮಿ ತಿಥಿ ದಿವಸ ಸಪ್ತಾಶ್ವಗಳಿಂದ ಕೂಡಿದ ರಥವನ್ನೇರುವ ದಿವಸ.
ಅಂದಿನಿಂದ ಅಶ್ವಾರೂಢನಾಗಿ ಪ್ರಖರವಾಗಲು ಆರಂಭಿಸುವ ದಿನ. ಇದಕ್ಕೆ ʼಮಾಘ ಸಪ್ತಮಿʼ ಎಂತಲೂ ಕರೆಯುತ್ತಾರೆ.
ಮಕರ ರಾಶಿ ಪ್ರವೇಶಿಸಿದ ಸೂರ್ಯನು, ಅಂದು ಸಪ್ತಾಶ್ವರಥಾರೋಹಣ ಮಾಡಿದ ಸಂಕೇತವಾಗಿ ʼರಥಸಪ್ತಮಿ ವ್ರತಾಚರಣೆʼ ಸಂಪ್ರದಾಯ ಬೆಳೆದು ಬಂದಿದೆ. ಅಂದಿನಿಂದ ಸೂರ್ಯನ ಪ್ರಖರವಾದ ಕಿರಣಗಳು ಇಡೀ ಜಗತ್ತಿನಲ್ಲಿ ಪಸರಿಸಲು ಆರಂಭಿಸುತ್ತವೆ.
ಸೂರ್ಯನ ಆರಾಧನೆಗೆ ಸಪ್ತಮಿ ತಿಥಿ ಮತ್ತು ಆದಿತ್ಯವಾರ ಶ್ರೇಷ್ಠ. ʼಸಪ್ತ ಜನ್ಮನಿ ಕೃತೇ ಪಾಪಂ ಮುಕ್ತಿರ್ಭವತಿ ತತ್ ಕ್ಷಣಾತ್ʼ ಎಂಬಂತೆ ಗಂಗಾನದಿಯಲ್ಲಿ ಸ್ನಾನ ಮಾಡಿ ಶುದ್ಧವಾದಂತೆ ಸಪ್ತಮಿ ತಿಥಿಯಂದು ಸೂರ್ಯನನ್ನು ಪೂಜಿಸಿದರೆ ಏಳು ಜನ್ಮದಲ್ಲಿ ಮಾಡಿದ ಪಾಪಗಳು ಕ್ಷಯವಾಗಿ ಆಯುಷ್ಯ, ಆರೋಗ್ಯ, ಸಂಪತ್ತು ಲಭಿಸುತ್ತದೆ ಎಂದು ಪೌರಾಣಿಕದ ಒಂದು ಕಥೆ ತಿಳಿಸುತ್ತದೆ.
ಭೌಗೋಳಿಕವಾಗಿಯೂ ಸುಮಾರು 15 ದಿವಸಗಳ ಹಿಂದೆಯೇ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ʼಮಕರ ಸಂಕ್ರಮಣʼವೆಂದು ಕರೆಯಾಲಗುತ್ತದೆ. ಅಂದರೆ, ಸೂರ್ಯನು ದಕ್ಷಿಣ ಧ್ರುವದ ಪ್ರವಾಸ ಮುಗಿಸಿ ಉತ್ತರ ಧ್ರುವದ ಕಡೆಗೆ ಕೆಳಗಿನಿಂದ ಮೇಲೇರುತ್ತಾನೆ. ಆದ್ದರಿಂದ ಬಿಸಿಲಿನ ಪ್ರಖರತೆ ಸಹ ಕ್ರಮೇಣ ವೃದ್ಧಿಸಿ, ಉತ್ತರಾಯಣ ಆರಂಭದ ಮುನ್ಸೂಚನೆ ಕೊಡುತ್ತಾನೆ. ʼಸೂರ್ಯ ಪ್ರತ್ಯಕ್ಷ ದೇವತಾʼ ನಮ್ಮ ಕಣ್ಣಿಗೆ ಕಾಣಿಸುವ ದೇವರೆಂದರೆ ಸೂರ್ಯ ಚಂದ್ರರಿಬ್ಬರೇ. ಪ್ರತ್ಯಕ್ಷ ಕಾಣುವ ದೇವರನ್ನು ಪೂಜಿಸಬೇಕು. ಸೂರ್ಯೋಪಾಸನೆಯಿಂದಲೇ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳು ಶುಕ್ಲ ಯಜುರ್ವೇದವನ್ನು ಸಂಪಾದಿಸಿದರು.
ನಿತ್ಯ ಸೂರ್ಯೋಪಾಸನೆ, ಸೂರ್ಯ ನಮಸ್ಕಾರದೊಂದಿಗೆ ಸೂರ್ಯನ ದ್ವಾದಶ ನಾಮಸ್ಮರಣ ಮಾಡಿದರೆ ಸರ್ವರೋಗ ಪರಿಹಾರವಾಗುವುವು. ಆರೋಗ್ಯ ವೃದ್ಧಿಗಾಗಿ ಪ್ರತಿನಿತ್ಯ ದ್ವಾದಶ ಸೂರ್ಯ ನಮಸ್ಕಾರಗಳನ್ನು ಪ್ರಾತಃಕಾಲದಲ್ಲಿ ಸರಿಯಾಗಿ ಹಾಕಿದರೆ ಆರೋಗ್ಯ ಸುಧಾರಿಸುವುದು. ದ್ವಾದಶ ನಾಮಗಳು ಹೀಗಿವೆ. (ಆರಂಭದಲ್ಲಿ ಓಂಕಾರವನ್ನು ಸೇರಿಸಿಕೊಳ್ಳಬೇಕು)
||ಸೂರ್ಯಾಯ ನಮಃ, ಭಾನವೇ ನಮಃ, ಖಗಾಯ ನಮಃ, ಪೂಷ್ಣೇ ನಮಃ, ಹಿರಣ್ಯ ಗರ್ಭಾಯ ನಮಃ, ಮರಿಚಯೇ ನಮಃ, ಆದಿತ್ಯಾಯ ನಮಃ, ಸವಿತ್ರೇ ನಮಃ, ಅರ್ಕಾಯ ನಮಃ, ಭಾಸ್ಕರಾಯ ನಮಃ, ಮಿತ್ರಾಯ ನಮಃ, ರವಯೇ ನಮಃ||
ಆಚರಣೆಯ ವಿಧಾನ
ಏತಜ್ಜನ ಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಯತ್ ಪುನಃ ಇತಿ ಸಪ್ತವಿಧಂ ಪಾಪಂ ಸ್ನಾನ್ನೇ ಸಪ್ತ ಸಪ್ತಿಕೆ ಸಪ್ತಾವ್ಯಾಧಿ ಸಮಾಯುಕ್ತಂ ಹರಮಾಕರಿ ಸಪ್ತಮಿ
ಷಷ್ಠಿ ತಿಥಿಯ ರಾತ್ರಿ ಉಪವಾಸವಿದ್ದು, ಸಪ್ತಮಿಯ ಅರುಣೋದಯ ಕಾಲದಲ್ಲಿ ಸ್ನಾನಕ್ಕೆ ಬಹಳ ಮಹತ್ವವಿದೆ. ಕಬ್ಬಿನಿಂದ ನೀರು ತಿರುಗಿಸಿ, ಸೂರ್ಯನ ವೃಕ್ಷವೆಂದೇ ಪ್ರಸಿದ್ಧವಾದ ಎಕ್ಕೆ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು. ಅಂದರೆ ಹಿಂದಿನ ಜನ್ಮಗಳಲ್ಲಿನ ಪಾಪ, ಸಪ್ತವ್ಯಾಧಿಗಳು, ಮಾತು, ಮನಸ್ಸು, ದೇಹದಿಂದ ಮಾಡಿದ ಅಪರಾಧಗಳು ನಾಶ ಹೊಂದಿ, ಮುಕ್ತಿ ಲಭ್ಯವಾಗುವುದೆಂದು ಪೌರಾಣಿಕ ಪ್ರತೀತಿ ಇದೆ.
ರಥಸಪ್ತಮಿಯ ದಿನದಂದು ಆಬಾಲವೃದ್ಧರಾಗಿ ಸೂರ್ಯೋದಯಕ್ಕಿಂತಲೂ ಮುಂಚೆಯೇ ಎದ್ದು ಮನೆಯನ್ನೆಲ್ಲ ಶುಚಿಗೊಳಿಸಿ ಹೆಂಗಳೆಯರು ಮನೆಯ ಮುಂದೆ ಸೆಗಣಿ ಸಾರಿಸಿ ಚೆಂದದ ದೊಡ್ಡ ದೊಡ್ಡ ರಂಗೋಲಿ ಇಟ್ಟು, ಸ್ನಾನದ ಸಮಯದಲ್ಲಿ ತಲೆಯ ನೆತ್ತಿಯ ಮೇಲೊಂದು, ಎರಡು ಭುಜಗಳು, ಎರಡು ಪಾದಗಳು, ಹೃದಯ ಕಳಶ ಮತ್ತು ನಾಭಿ ಮೇಲೆ ಒಟ್ಟು 7 ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡುವುದು ಸಂಪ್ರದಾಯವಾಗಿದೆ.
ಸೂರ್ಯ ದೇವನನ್ನು ಎಕ್ಕದ ಎಲೆಗಳಿಂದ ಪೂಜಿಸುವುದರಿಂದ, ಎಕ್ಕದ ಎಲೆಗಳನ್ನು ಬಳಸುತ್ತಾರೆ. ಈ ರೀತಿಯಾಗಿ ಏಳು ಎಕ್ಕದೆಲೆಯ ಸ್ನಾನ ಮಾಡುವುದರಿಂದ ಏಳೇಳು ಜನ್ಮದ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆಯಲ್ಲದೇ ಎಕ್ಕದೆಲೆಯಿಂದ ಮೈಯ್ಯುಜ್ಜಿಕೊಂಡು ಸ್ನಾನ ಮಾಡಿದರೆ, ಸಾಧಾರಣವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ, ಚರ್ಮರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು, ರೋಗಗಳನ್ನು ನಿವಾರಿಸುವ ಸಾಮರ್ಥ್ಯವಿದೆ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.
ಸ್ನಾನದ ನಂತರ ಸೂರ್ಯ ದೇವರನ್ನು ಪೂಜಿಸಲಾಗುವುದು. ರಥಸಪ್ತಮಿಯಂದು ಶುಭದ ಸಂಕೇತವಾಗಿ ಮನೆಗಳಲ್ಲಿ ಹಾಲನ್ನು ಉಕ್ಕಿಸುವ ಸಂಪ್ರದಾಯವೂ ಇದೆ. ವಿಜಯದಶಮಿಯಂತೆಯೇ ಈ ದಿನವೂ ಮಾಡುವ ಕೆಲಸಗಳಲ್ಲವೂ ಶುಭಪ್ರದವಾಗುತ್ತದೆ ಎನ್ನುವ ನಂಬಿಕೆ ಇರುವ ಕಾರಣ, ಈ ದಿನ ಅನೇಕ ಶುಭ ಕಾರ್ಯಗಳನ್ನು ಮಾಡುತ್ತಾರೆ.
ಎಳ್ಳು ನೆಲ್ಲಿಕಾಯಿ ಪುಡಿಯನ್ನು ಹಚ್ಚಿಕೊಂಡು ಸ್ನಾನ ಮಾಡಬೇಕು. ಅಂದು ಸರ್ವ ಪಾಪ ಪರಿಹಾರಾರ್ಥವಾಗಿ ಬೂದುಗುಂಬಳಕಾಯಿ, ಎಳ್ಳು ಮತ್ತು ತುಪ್ಪ ದಾನ ಮಾಡಬೇಕು.
ಪ್ರಾತಃಕಾಲದ ಸೂರ್ಯನು ಬ್ರಹ್ಮನೆಂದು, ಮಧ್ಯಾಹ್ನದ ಸೂರ್ಯನು ವಿಷ್ಣುವೆಂದು, ಸಾಯಂಕಾಲದ ಸೂರ್ಯನನ್ನು ರುದ್ರನೆಂದು ಭಾವಿಸಿ ಸೌರಪಂಥದವರು ಪೂಜಿಸಿದ್ದಾರೆ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಸ್ಫೂರ್ತಿ ಕೊಡುವ ಮಹಾಮಹಿಮನು. ವಿಶ್ವದ ಸರ್ವ ಮನುಷ್ಯರ ನಡತೆಯನ್ನು ಕಾದು ವೀಕ್ಷ್ಷಿಸುವ ಗೂಢಚಾರ. ಜಗತ್ತಿಗೆ ಚೈತನ್ಯ ನೀಡುವ ಎಲ್ಲ ಗ್ರಹಗಳ ಅಧಿಪತಿ ನಿರಾಕಾರವಾದ ಭಗವಂತನ ಸಗುಣರೂಪವೇ ಸೂರ್ಯದೇವ.
ಮಾಘಮಾಸದಲ್ಲಿ ಅದರಲ್ಲೂ ರಥಸಪ್ತಮಿಯಂದು ಸೂರ್ಯೋದಯದ ಸಮಯದಲ್ಲಿ ನದಿ, ಸಾಗರ, ಸರೋವರಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅಘ್ರ್ಯ ನೀಡಿದಲ್ಲಿ ಪೂರ್ವ ಜನ್ಮದ ಪಾಪಗಳು ಮತ್ತು ಈ ಜನ್ಮದ ಕರ್ಮಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯೂ ಇರುವ ಕಾರಣ ಹಲವರು ಪುಣ್ಯಕ್ಷೇತ್ರಗಳಲ್ಲಿ ಪುಣ್ಯಸ್ನಾನವನ್ನೂ ಮಾಡುವ ಸಂಪ್ರದಾಯವಿದೆ.
ದೇಶಾದ್ಯಂತ ದೇವಾಲಯಗಳಲ್ಲಿ ರಥಸಪ್ತಮಿಯಂದು ವಿಶೇಷ ಪೂಜೆ ಹೋಮ ಹವನಾದಿಗಳನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯ ಮಾಡಿ ಭಕ್ತಾದಿಗಳಿಗೆ ವಿತರಿಸುತ್ತಾರೆ. ಒರಿಸ್ಸಾದ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತಿನ ಮೊಥೇರಾ, ಮಧ್ಯಪ್ರದೇಶದ ಉನಾವು, ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂ ಮತ್ತು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸೂರ್ಯನಾರಾಯಣನ ದೇವಸ್ಥಾನಗಳಿಗೆ ರಥಸಪ್ತಮಿಯಂದು ಭಕ್ತಾದಿಗಳು ವಿಶೇಷವಾಗಿ ಭೇಟಿ ನೀಡುತ್ತಾರೆ.
ಹೆಂಗಳೆಯರಿಗೆ ಸಂಕ್ರಾಂತಿಯ ಎಳ್ಳು-ಬೆಲ್ಲ ಬೀರುವ ಕಾಲಾವಕಾಶ ರಥಸಪ್ತಮಿಯ ದಿನದಂದು ಕೊನೆಯಾಗುವ ಕಾರಣ ಬಹುತೇಕರು ಇಂದು ದೂರ ದೂರದ ತಮ್ಮ ಬಂಧು ಮಿತ್ರರ ಮನೆಗಳಿಗೆ ಹೋಗಿ ಎಳ್ಳು ಬೀರಿ ಬರುವ ಸಂಪ್ರದಾಯವೂ ಇದೆ.
ವಸಂತಕಾಲದ ಮುನ್ಸೂಚನೆ
ನಮ್ಮ ನಿತ್ಯ ಜೀವನದಲ್ಲಿ ಸರ್ವ ರೀತಿಯಿಂದ ವಿಶ್ವಕ್ಕೆ ಬೇಕಾಗುವ ಸೂರ್ಯನಿಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಕಡಿಮೆಯೇ. ಏನೂ ಮಾಡಲಿಕ್ಕೆ ಆಗದಿದ್ದರೂ ಕೊನೆಗೆ ಪ್ರತಿದಿನ ಅವನಿಗೊಂದು ನಮಸ್ಕಾರ ಮಾಡಿದರೂ ಸಾಕು ಅವನು ತೃಪ್ತನಾಗಿ ಆಶೀರ್ವದಿಸುತ್ತಾನೆ.
ಆರೋಗ್ಯಂ ಭಾಸ್ಕರಾದಿಚ್ಛೇತ್…
ಚಳಿಗಾಲದಲ್ಲಿ ಮುದುಡುವ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ. ʼಆರೋಗ್ಯಂ ಭಾಸ್ಕರಾದಿಚ್ಛೇತ್ʼ ಅಂದರೆ ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿಯಯೂ ಇದು ಸಾಬೀತಾಗಿದೆ. ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಚಂದ್ರನ ಬೆಳಕಿನಲ್ಲಿ ವಿಟಮಿನ್ ʼಬಿ 12ʼ ಇದ್ದರೆ ಸೂರ್ಯನ ಕಿರಣಗಳಲ್ಲಿ ವಿಟಮಿನ್ ʼಡಿʼ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ಪ್ರತ್ಯಕ್ಷವಾಗಿ ಕಾಣುವ ದೈವಸ್ವರೂಪಿ ಸೂರ್ಯನ ಆರಾಧನೆಗೆ ವಿಗ್ರಹಾರಾಧನೆ ಬಳಕೆಗೆ ಬರುವ ಮುಂಚಿನಿಂದಲೂ ಪ್ರಾಶಸ್ತ್ಯವಿದೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ.
- Lead Photo by @ckphotographi / pk channakrishna