ಚಿಕ್ಕಬಳ್ಳಾಪುರದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ವೇಳೆ ಅಂಕಿ-ಅಂಶ ಬಿಚ್ಚಿಟ್ಟ ಎಂ. ವೀರಪ್ಪ ಮೊಯಿಲಿ
ಚಿಕ್ಕಬಳ್ಳಾಪುರ: 2014ರಿಂದ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿಯವರೆಗೆ ಜನರಿಂದ 22 ಲಕ್ಷ ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡಲಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟೀಷ್ ಸರಕಾರವೂ ಹೀಗೆಯೇ ಸುಂಕ ವಸೂಲಿ ಮಾಡುತ್ತಿತ್ತು. ಹೀಗಾಗಿಯೇ ಜನರು ಆಕ್ರೋಶಗೊಂಡು ಬೀದಿಗೆ ಬರುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಬುಧವಾರ ತೈಲ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ನಡೆದ ಕಾಂಗ್ರೆಸ್ ಆಯೋಜಿಸಿದ್ದ ‘ಜನಧ್ವನಿ ಯಾತ್ರೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ನಾನು ಪೆಟ್ರೋಲಿಯಂ ಖಾತೆ ಮಂತ್ರಿಯಾಗಿದ್ದೆ. ಡಾ.ಮನಮೋಹನ್ ಸಿಂಗ್ ಪ್ರಧಾನಮಂತ್ರಿ ಆಗಿದ್ದರು. ಆಗ ತೈಲ, ಅಡುಗೆ ಅನಿಲ ಬೆಲೆಯನ್ನು ನಿಯಂತ್ರಣ ಮಾಡಲು, ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಪ್ರತೀ ವರ್ಷ 5 ಲಕ್ಷ ಕೋಟಿ ರೂ. ಸಬ್ಸಿಡಿ ಕೊಡುತ್ತಿದ್ದೆವು. ಈಗ ಎಲ್ಲವನ್ನೂ ಅನಿಯಂತ್ರಣಗೊಳಿಸಿ ಜನರನ್ನು ತುಳಿದು ಉದ್ಯಮಿಗಳನ್ನು ಉದ್ಧಾರ ಮಾಡುತ್ತಿದ್ದಾರೆಂದರು.
ಮೋದಿ ಕಣ್ಣಲ್ಲಿ ನೀರು ಬರುತ್ತಿಲ್ಲ
ದೇಶಾದ್ಯಂತ ರೈತರು ಕೇಂದ್ರ ಸರಕಾರದ ವಿರುದ್ಧ ತಿರುಗಿಬಿದ್ದಾರೆ. ನೂರಾರು ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಪ್ರಧಾನಿ ಮೋದಿಯ ಕಣ್ಣಲ್ಲಿ ನೀರು ಬರುತ್ತಿಲ್ಲ. ಬ್ರಿಟೀಷರು ಗೌರಿಬಿದನೂರು ತಾಲ್ಲೂಕಿನ ವಿಧುರಾಶ್ವತ್ಥದಲ್ಲಿ 32 ರೈತರನ್ನು ಕೊಂದರು. ಆದರೆ, ಈಗ ಮೋದಿಯ ದೌರ್ಜನ್ಯದಿಂದ ದಿಲ್ಲಿ, ಉತ್ತರ ಪ್ರದೇಶದಲ್ಲಿ 200ಕ್ಕೂ ಹೆಚ್ಚು ರೈತರ ಬಲಿದಾನವಾಗಿದೆ ಎಂದು ಮೊಯಿಲಿ ಟೀಕಾ ಪ್ರಹಾರ ನಡೆಸಿದರು.
ಇಂದಿರಾ ಗಾಂಧಿಯಿಂದ ಮೋದಿ ಪಾಠ ಕಲಿಯಲಿ
ಇಂದಿರಾ ಗಾಂಧಿ ಅವರಿಂದ ಮೋದಿ ಪಾಠ ಕಲಿಯಬೇಕು. ಆ ಸಂದರ್ಭದಲ್ಲಿ ಯಾವುದೋ ಕಾಯ್ದೆಯನ್ನು ವಿರೋಧಿಸಿ ಸುಮಾರು 25 ಸಾವಿರಕ್ಕೂ ಹೆಚ್ಚು ಸಾಧು ಸಂತರು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಬಂದಿದ್ದರು. ಸ್ವತಃ ಇಂದಿರಾ ಗಾಂಧಿ ಅವರೇ ಸಂಸತ್ ಭವನದ ಗೇಟುಗಳನ್ನು ತೆರೆಸಿ ಅವರೆಲ್ಲರನ್ನು ಬರಮಾಡಿಕೊಂಡು ಆಹಾರೋಪಚಾರ ಮಾಡಿ ಆ ಕಾಯ್ದೆಯನ್ನು ವಾಪಸ್ ಪಡೆಯುವ ಭರವಸೆ ನೀಡಿದರು. ಆದರೆ ಮೋದಿ ರೈತರು ಬರುವ ದಾರಿಗಳಲ್ಲಿ ಮೊಳೆಗಳನ್ನು ಹೊಡೆಸಿದರು. ಇದು ಇಂದಿರಾ ಗಾಂಧಿ ಮತ್ತು ಮೋದಿಗಿರುವ ವ್ಯತ್ಯಾಸ. ಈ ದೇಶ ಮಾತ್ರವಲ್ಲ ಜಗತ್ತು ಕಂಡ ಬಲಿಷ್ಠ ಪ್ರಧಾನಮಂತ್ರಿಯಿಂದ ಮೋದಿ ಕಲಿಯಬೇಕಾದ ಪಾಠವಿದು ಎಂದು ಮೊಯಿಲಿ ಹೇಳಿದರು.

ಜನರ ಬದುಕು ನರಕವಾಗಿದೆ: ಸಿದ್ದರಾಮಯ್ಯ
ಉದ್ಯಮಿಗಳನ್ನು ಸಂತೃಪ್ತಗೊಳಿಸಲು ಬೆಲೆಗಳನ್ನು ನಿರಂತರವಾಗಿ ಏರಿಸುವ ಮೂಲಕ ನರೇಂದ್ರ ಮೋದಿ ಸರಕಾರ ಜನರನ್ನು ನರಕಕ್ಕೆ ದೂಡಿದೆ ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.
ಬೆಲೆ ಏರಿಕೆಯಿಂದ ಜನರು ನರಳುತ್ತಿದ್ದಾರೆ. ಅವರಿಗೆ ಜೀವನ ನಡೆಸುವುದೇ ಬರ್ಬರವಾಗಿದೆ. ಬಿಜೆಪಿ ಸರಕಾರ ಎಲ್ಲರ ಜೀವನವನ್ನು ನರಕಕ್ಕೆ ದೂಡಿ ವಿಕೃತ ಮೆರೆಯುತ್ತಿದೆ. ಜನರ ಜೀವನವನ್ನು ಅಸ್ತವ್ಯಸ್ತ ಮಾಡುವ ಮೂಲಕ ಮೋದಿ ಸರಕಾರ ಜನವಿರೋಧಿ ನೀತಿಗಳಿಂದ ಕುಖ್ಯಾತಿಯಾಗಿದೆ.
-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ನಾವು ವಿರೋಧ ಪಕ್ಷವಾಗಿ ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕಾಗಿದೆ. ನಾವು ಸುಮ್ಮನಿರಲಾಗದು. ಈ ರೀತಿಯಲ್ಲಿ ಜನರನ್ನು ಸಂಕಷ್ಟಕ್ಕೆ ಗುರಿ ಮಾಡಿದ ಬಿಜೆಪಿಗೆ ತಕ್ಕಪಾಠ ಕಲಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಆಪರೇಷನ್ ಕಮಲದ ಸರಕಾರ: ಡಿಕೆಶಿ
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್; “ರಾಜ್ಯದಲ್ಲಿರುವ ಸರಕಾರ ಅನೈತಿಕ ಸರಕಾರ. ನೋಟು-ಸೀಟಿನಿಂದ ಅಧಿಕಾರಕ್ಕೆ ಬಂದಿದ್ದು. ಆಪರೇಷನ್ ಕಮಲ ಮಾಡಿಕೊಂಡು ಬಂದಿದ್ದು. ಕೊರೊನ ಕಾಲದಲ್ಲಿ ರಾಜ್ಯವನ್ನು ಲೂಟಿ ಮಾಡಿದ ಸರಕಾರವಿದು, ಜನರ ದುಡ್ಡನ್ನು ನುಂಗಿದ ಸರಕಾರವಿದು ಎಂದು ದೂರಿದರು.
ಬೇಸಿಗೆ ಬರುವುದಕ್ಕೆ ಮುನ್ನವೇ ಲೋಡ್‌ಶೆಡ್ಡಿಂಗ್ ಶುರುವಾಗಿದೆ. ರೈತರು ಬೆಳೆದ ಬೆಲೆಗೆ ಉತ್ತಮ ದರದ ಭರವಸೆ ಇಲ್ಲ. ಹೀಗಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಶ್ರಮಜೀವಿಗಳು, ಇಲ್ಲಿ ನೀರಿನ ಕೊರತೆ ಇದೆ, ಸಾವಿರಾರು ಅಡಿ ಆಳದಿಂದ ನೀರನ್ನು ಹೊರತೆಗೆದು ಬೇಸಾಯ ಮಾಡಲಾಗುತ್ತಿದೆ. ಆದರೂ ಒಬ್ಬ ರೈತ ಕೂಡ ಈ ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಎದೆಗುಂದಲಿಲ್ಲ. ಸಿಲ್ಕ್-ಮಿಲ್ಕ್ ಮತ್ತು ತರಕಾರಿಯಿಂದಲೇ ಉನ್ನತಿ ಸಾಧಿಸಿದವರು ಎಂದು ಜಿಲ್ಲೆಯ ರೈರನ್ನು ಡಿಕೆಶಿ ಶ್ಲಾಘಿಸಿದರು.
ಚಿಕ್ಕಬಳ್ಳಾಪುರ ರಾಜ್ಯದ ಪ್ರಗತಿಯ ಹೆಬ್ಬಾಗಿಲು. ಈ ಲೋಕಸಭಾ ಕ್ಷೇತ್ರದಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಹೀಗಾಗಿ ಇಲ್ಲಿಂದಲೇ ಕಾಂಗ್ರೆಸ್ ಜನಧ್ವನಿ ಯಾತ್ರೆಯನ್ನು ಆರಂಭ ಮಾಡಿದ್ದೇವೆ ಎಂದ ಡಿಕೆಶಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಂದಿನ ಚುನಾವಣೆಯಲ್ಲಿ ಐದಕ್ಕೆ ಐದೂ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುತ್ತದೆ ಎಂದರು.
ಕೆಲವರಿಗೆ ಕಾಂಗ್ರೆಸ್ ಅಳಿವಿನ ಕನಸು: ಕೆ.ಎಚ್.ಮುನಿಯಪ್ಪ
ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟ ಗಂಡು ನೆಲ ಅವಿಭಜಿತ ಕೋಲಾರ ಜಿಲ್ಲೆ. ಹೀಗಾಗಿ ಕಾಂಗ್ರೆಸ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಆದರೆ, ಸ್ವಲ್ಪ ವ್ಯತ್ಯಾಸವಾಗಿದೆ. ಕೆಲವರಿಗೆ ದಿನವೂ ಕಾಂಗ್ರೆಸ್ ಅಳಿವಿನ ಕನಸು ಬೀಳುತ್ತಿದೆ. ಇದಕ್ಕೆ ನಾವು ಮತ್ತೆ ಪುಟಿದೇಳುವ ಮೂಲಕ ಉತ್ತರ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಒತ್ತಿ ಹೇಳಿದರು.
ʼಜನಧ್ವನಿ ಯಾತ್ರೆʼಯಲ್ಲಿ ಮಾಜಿ ಸಚಿವರಾದ ಕೃಷ್ಣಭೈರೇಗೌಡ, ಎಚ್.ಎನ್.ಶಿವಶಂಕರ ರೆಡ್ಡಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ದ್ರುವನಾರಾಯಣ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ವಿ.ಮುನಿಯಪ್ಪ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಮಾಜಿ ಶಾಸಕ ಎನ್.ಸಂಪಂಗಿ, ಮಾಜಿ ಸಚಿವ ಹೆಚ್.ಆಂಜನೇಯಲು, ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಉಪಾಧ್ಯಕ್ಷ ಬಿ.ಎಸ್.ರಫಿವುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಪ್ರಧಾನ ಕಾರ್ಯದರ್ಶಿ ಪ್ರೆಸ್ ಸುರೇಶ್, ಮುಖಂಡರಾದ ಯಲುವಹಳ್ಳಿ ರಮೇಶ್, ಅಡ್ಡಗಲ್ ಶ್ರೀಧರ್ ಸೇರಿದಂತೆ ಜಿಲ್ಲೆಯ ಪಕ್ಷದ ಮುಖಂಡರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಯಾತ್ರೆಯನ್ನು ಆರಂಭಿಸುವುದಕ್ಕೂ ಮುನ್ನ ಕಾಂಗ್ರೆಸ್ ನಾಯಕರೆಲ್ಲರೂ ನಗರದ ಕಂದವಾರ ಕೆರೆಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಬಳಿಕ ನಗರದ ಬಿ.ಬಿ.ರಸ್ತೆ ಮೂಲಕ ಬೃಹತ್ ಮೆರವಣಿಗೆ ನಡೆಸಿದರು.




















