ಗುಡಿಬಂಡೆ: ಕೆರೆಕಟ್ಟೆಗಳು ನಾಡಿನ ಜೀವನಾಡಿ. ರೈತಾಪಿ ಜನರ ಉಸಿರು. ಇವನ್ನು ಈಗಂತೂ ನಿರ್ಮಿಸಲು ಆಗದು. ಹಾಗಾಗಿ ಇರುವುದನ್ನು ಉಳಿಸಿಕೊಳ್ಳಲೇಬೇಕು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡ ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಂದ ಜನರ ಜೀವನ ಮಟ್ಟ ಸುಧಾರಿಸುತ್ತಿದೆ ಎಂದು ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪೃಥ್ವಿರಾಜ್ ಹೇಳಿದರು.
ಸಮೀಪದ ಬೊಮ್ಮಗಾನಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ʼನಮ್ಮೂರು ನಮ್ಮ ಕೆರೆ ಕಾರ್ಯಕ್ರಮʼಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು,
10.79 ಲಕ್ಷ ರೂ. ವೆಚ್ಚದಲ್ಲಿ ನಮ್ಮೂರು ನಮ್ಮ ಕೆರೆ
ಬೊಮ್ಮಗಾನಹಳ್ಳಿ ಗ್ರಾಮದ ಕೆರೆಗೆ 10.79 ಲಕ್ಷ ರೂ. ವೆಚ್ಚದಲ್ಲಿ ʼನಮ್ಮೂರು ನಮ್ಮ ಕೆರೆʼ ಕಾರ್ಯಕ್ರಮದಡಿ ಕೆರೆಯ ಹೂಳೆತ್ತಿ ಅವುಗಳಿಗೆ ಮರುಜೀವ ನೀಡಲಾಗುತ್ತದೆ. ನಂತರ ಊರಿನವರಿಗೆ ಕೆರೆ ವರ್ಗಾಯಿಸಲಾಗುತ್ತದೆ. ಈ ಮೂಲಕ ಕೆರೆಯ ಮಹತ್ವ, ಅಗತ್ಯ, ಕೆರೆ ಸಂರಕ್ಷಣೆಯ ಕುರಿತ ಜಾಗೃತಿಯನ್ನು ಮೂಡಿಸುವ ಅಪೂರ್ವ ಕೆಲಸವೊಂದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ನಮ್ಮ ಗ್ರಾಮಗಳ ಜೀವನಾಡಿ ಕೆರೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು ಪೃಥ್ವಿರಾಜ್.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಿ.ವಸಂತ್ ಮಾತನಾಡಿ, ಅಂತರ್ಜಲ ಮಟ್ಟ ಕುಸಿತದ ಗಂಭೀರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಶಾಶ್ವತ ಪರಿಹಾರವೆಂಬಂತೆ 2016ರಲ್ಲಿ ʼನಮ್ಮೂರು ನಮ್ಮ ಕೆರೆʼ ಯೋಜನೆ ಪ್ರಾರಂಭಿಸಿದರು ಎಂದರು.

ನಾಲ್ಕು ವರ್ಷಗಳಿಂದ ಕೆರೆಗಳ ಪುನಶ್ಚೇತನ ಕಾರ್ಯಕ್ರಮ ನಡೆಯುತ್ತಿದೆ. ಈ ಮಳೆಗಾಲದಲ್ಲಿ ಎಲ್ಲ ಕೆರೆಗಳು ತುಂಬಿವೆ. ಇದರಿಂದಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳೂ ಮರುಜೀವ ಪಡೆದುಕೊಂಡಿವೆ. ಈಗಾಗಿ ತಮ್ಮ ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಕೆರೆಯಿಂದ ತೆಗೆಯುವ ಮಣ್ಣನ್ನು ರೈತರು ಟ್ರಾಕ್ಟರ್ ಮೂಲಕ ತಮ್ಮ ತಮ್ಮ ಹೊಲಗಳಿಗೆ ತೆಗೆದುಕೊಂಡು ಹೊಗುವುದರ ಮೂಲಕ ಮಣ್ಣನ್ನು ಉಪಯೋಗಿಸಿಕೊಳ್ಳಬೆಕೆಂದು ವಸಂತ್ ಅವರು ಹೇಳಿದರು..
ಬೊಮ್ಮಗಾನಹಳ್ಳಿ ಗ್ರಾಮದ ಕೆರೆಯ ಅಭಿವೃದ್ಧಿ ದೃಷ್ಟಿಯಿಂದ ಕೆರೆ ಅಭಿವೃದ್ಧಿ ಸಮಿತಿಯನ್ನು ಈಗಾಗಲೇ ರಚಿಸಿದ್ದು ಇದರ ಅಧ್ಯಕ್ಷರಾಗಿ ಕೇಶವ ಅವರು ಕೆರೆಯಲ್ಲಿ ಹೂಳೆತ್ತುವ ಜವಬ್ದಾರಿ ವಹಿಸಿಕೊಂಡಿದ್ದಾರೆ ಎಂದರು ಅವರು.
ಈ ವೇಳೆ ತಾ.ಪಂ ಸದಸ್ಯ ಎಲ್.ಐ.ಸಿ ಮೂರ್ತಿ, ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಧನಂಜಯ್, ಕೆರೆ ಎಂಜಿನಿಯರ್ ಅರುಣ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶೇಖರ್, ಅಡಿಟರ್ ಕೃಷ್ಣ, ಒಕ್ಕೂಟದ ಅಧ್ಯಕ್ಷೆ ಪರಿಮಳ ಡಿ.ಎಲ್, ಪಿ.ಡಿ.ಒ ಮುನಿಯಪ್ಪ, ಕೆರೆ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಕೇಶವ, ಉಪಾಧ್ಯಕ್ಷ ಕೃಷ್ಣಪ್ಪ, ಖಜಾಂಚಿ ಮಂಜುನಾಥ್, ಸದಸ್ಯರಾದ ಪೃಥ್, ಗಿರಿಜಾ, ಅಂಬುಜಾ, ಯಶೋಧಮ್ಮ, ಚಿಕ್ಕಬೈರಾರೆಡ್ಡಿ, ನರಸಿಂಹಮೂರ್ತಿ ಮುಂತಾದವರು ಇದ್ದರು.


















