ಸಿನಿಮಾ ಪ್ರಮೋಷನ್ ಚಟುವಟಿಕೆಗಳಿಂದ ಅಪಾಯ ಹೆಚ್ಚುವ ಆತಂಕವಿದೆ ಎಂದ ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಮುಂದಿನ ಒಂದು ತಿಂಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಎಲ್ಲ ಜಿಲ್ಲಾಡಳಿತಗಳು ಸಭೆ-ಸಮಾರಂಭ, ಮನರಂಜನೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಂದಿನ ಒಂದು ತಿಂಗಳು ಅತ್ಯಂತ ಸವಾಲಿನ ಪರಿಸ್ಥಿತಿ ಎದುರಾಗುವ ಸಂಭವವಿದೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ. 2ರಷ್ಟು ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಮನರಂಜನೆ, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಚಟುವಟಿಕೆಗಳು, ಸಭೆ-ಸಮಾರಂಭಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು” ಎಂದು ನಿರ್ದೇಶನ ನೀಡಿದರು.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜಿಲ್ಲಾಧಿಕಾರಿಗಳ ಜತೆಯೂ ಮಾತುಕತೆ ನಡೆಸಲಾಗಿದೆ. ಗಡಿ ಭಾಗಗಳಲ್ಲಿ ಹೊರ ರಾಜ್ಯಗಳಿಂದ ಬಂದವರನ್ನು ತಪಾಸಣೆ ಮಾಡುವುದು, ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಸೇರಿದಂತೆ ಹತ್ತು-ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.
ಸ್ಟಾರ್ ನಟರಿಗೆ ಸಚಿವರ ಮನವಿ
ಸ್ಟಾರ್ ನಟರ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಸಾವಿರಾರು ಜನ ಸೇರುತ್ತಿದ್ದು; ದಯವಿಟ್ಟು ನೀವು ಮಾಸ್ಕ್ ಹಾಕಿ, ನಿಮ್ಮ ಅಭಿಮಾನಿಗಳಿಗೂ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ ಎಂದು ಸ್ಟಾರ್ ನಟರಲ್ಲಿ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ತಪ್ಪುವ ಸಾಧ್ಯತೆ ಇದೆ. ಹಲವೆಡೆ ನಟರು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಪ್ರಚಾರಕ್ಕೆ ಸಾವಿರಾರು ಜನ ಸೇರುತ್ತಿದ್ದಾರೆ. ನಟರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಹೀಗಾಗಿ ನೀವು ಮಾಸ್ಕ್ ಹಾಕಿ, ನಿಮ್ಮ ಫ್ಯಾನ್ಸ್ʼಗಳಿಗೂ ಜಾಗೃತಿ ಮೂಡಿಸಿ ಎಂದು ಅವರು ಮನವಿ ಮಾಡಿದರು.
ಮಠಾಧೀಶರು ಜಾತ್ರೆ, ಉತ್ಸವ, ಸಮಾರಂಭಗಳಿಗೆ ಕಡಿವಾಣ ಹಾಕಿ. ಇಲ್ಲದಿದ್ದರೇ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ತಪ್ಪುವುದು ಗ್ಯಾರಂಟಿ ಎಂದು ಸಚಿವರು ಎಚ್ಚರಿಕೆ ನೀಡಿದರು.