ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣವು ಶನಿವಾರ ಸಂಜೆ ಹೊತ್ತಿಗೆ ಮಹಾನ್ ಬ್ರೇಕ್ ಪಡೆದು ಕ್ಲೈಮ್ಯಾಕ್ಸ್ ಲೆವೆಲ್ಲಿಗೆ ಬಂದು ಮುಟ್ಟಿದ್ದು, ಮಹಾನಾಯಕ ಯಾರು? ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಆ ಯುವತಿಯ ಪೋಷಕರು ಹಾಗೂ ರಮೇಶ ಜಾರಕಿಹೊಳಿ ಆ ಮಹಾನ್ ನಾಯಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕಮಾರ್ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯ ಬಹಿರಂಗವಾದ ನಂತರ ಕಾಂಗ್ರೆಸ್-ಬಿಜೆಪಿ ಪಕ್ಷಗಳಲ್ಲಿ ಬರುಸಿನ ಚಟುವಟಿಕೆಗಳು ಆರಂಭವಾಗಿವೆ.
ಕಾಂಗ್ರೆಸ್ ಮಹಾನ್ ನಾಯಕನ ಹೆಸರು ರಿವೀಲ್ ಆಗಿದ್ದಾಯಿತು. ಇನ್ನು ಬಿಜೆಪಿ ಮಹಾನ್ ನಾಯಕನ ಹೆಸರು ಬಹಿರಂಗ ಯಾವಾಗ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಶನಿವಾರದ ಇಡೀ ಬೆಳವಣಿಗೆಗಳು ಡಿ.ಕೆ.ಶಿವಕುಮಾರ್ ಅವರ ಸುತ್ತವೇ ಗಿರಕಿ ಹೊಡೆದವಲ್ಲದೆ, ಸಂಜೆ ಹೊತ್ತಿಗೆ ಒಂದು ಅಂತಿಮ ಚಿತ್ರಣವೂ ಸಿಕ್ಕಿತು. ನೇರವಾಗಿ ಕನಕಪುರ ಬಂಡೆಗೆ ಡಿಚ್ಚಿ ಹೊಡೆದ ಬೆಳಗಾವಿ ಸಾಹುಕಾರ ಕನಕಪುರದಲ್ಲಿಯೇ ಖುದ್ದು ಬಂಡೆಯ ವಿರುದ್ಧ ಅಖಾಡಕ್ಕಿಳಿಯುವೆ ಎಂದು ತೊಡೆತಟ್ಟಿದರು.
ಇದೊಂದು ಕಡೆಯಾದರೆ, ಆ ಯುವತಿ ಹಾಗೂ ಸೀಡಿ ಗ್ಯಾಂಗ್ ಜತೆ ಡಿಕೆಶಿ ಸಂಬಂಧ ಸ್ಪಷ್ಟವಾದ ಹಿನ್ನೆಲೆಯಲ್ಲಿ ಬಿಜೆಪಿ ಹೇಗಾದರೂ ಮಾಡಿ ಬೆಳಗಾವಿ ಲೋಕಸಭೆ, ಎರಡು ವಿಧಾನಸಭೆ ಕ್ಷೇತ್ರಗಳ ಚುನಾವಣಾ ಪ್ರಚಾರ ಕಣದಿಂದ ಅವರನ್ನು ದೂರ ಇಡಲು ಹಸ್ತಪಾಳಯದಲ್ಲಿ ದಾಳಗಳು ಉರುಳತೊಡಗಿವೆ.
ಬೆಳಗಾವಿಗೆ ಬರದಂತೆ ತಡೆಯುವ ಯತ್ನ
ಮುಖ್ಯವಾಗಿ ಬೆಳಗಾವಿಗೆ ಯಾವ ಕಾರಣಕ್ಕೂ ಡಿಕೆಶಿ ಬರದಂತೆ ತಡೆಯಲು ಸ್ವತಃ ಕಾಂಗ್ರೆಸ್ ನಾಯಕರೇ ಪ್ಲ್ಯಾನ್ ಮಾಡುತ್ತಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಉಪ ಚುನಾವಣೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾತ್ರ ಎದುರಿಸಬೇಕು ಎಂದು ಫಿಕ್ಸ್ ಆಗಿರುವ ಒಂದು ಗುಂಪು, ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ್ಯೂ ಸೀಡಿ ಬಲೆಯಲ್ಲಿ ಸಿಕ್ಕಿಬಿದ್ದಿರುವ ಡಿಕೆಶಿ ವಿರುದ್ಧ ಹೀಗೆ ಜಿದ್ದು ತೀರಿಸಿಕೊಳ್ಳಲು ಕಸರತ್ತು ನಡೆಸಿದೆ.
ಈಗಾಗಲೇ ಡಿಕೆಶಿ ಹಾಗೂ ಸೀಡಿ ಗ್ಯಾಂಗ್ ನಡುವಿನ ಸಂಬಂಧದ ಬಗ್ಗೆ ಪಕ್ಷದ ಕೆಲವರು ಹೈಕಮಾಂಡ್ ಕಿವಿ ಕಚ್ಚಿದ್ದು, ಆದರೆ, ದಿಲ್ಲಿಯಲ್ಲಿ ತನ್ನ ವಿರೋಧಿಗಳಿಗಿಂತ ಡಿಕೆಶಿಯೇ ಹೆಚ್ಚು ಪ್ರಭಾವ ಹೊಂದಿದ್ದಾರೆ. ಹೀಗಾಗಿ ಡಿಕೆಶಿಗೆ ರಾಜ್ಯದಲ್ಲಿಯೇ ಮುಜುಗರ ಉಂಟು ಮಾಡಬೇಕು. ಅವರ ವಿರುದ್ಧ ಹೆಚ್ಚೆಚ್ಚು ಪ್ರಚಾರ ಆಗುವಂತೆ ಮಾಡುವ ಹವಣಿಕೆಯಲ್ಲಿ ಕೆಲವರಿದ್ದಾರೆ.
ಅದಕ್ಕೆ ಪೂರಕವಾಗಿ ಬಿಜೆಪಿ ಕೂಡ ಚುನಾವಣಾ ಪ್ರಚಾರ ಕಣಕ್ಕೆ ಡಿಕೆಶಿ ಬರದಂತೆ ಮಾಡುವುದು ಹಾಗೂ ಒಂದು ವೇಳೆ ಅವರು ಬಂದರೂ ಸೀಡಿ ಸ್ಟೋರಿಯನ್ನೇ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯುವ ಐಡಿಯಾವನ್ನು ಹಾಕಿಕೊಂಡಿದೆ. ಶನಿವಾರ ಬೆಳಗ್ಗೆಯಿಂದ ಡಿಕೆಶಿಯನ್ನು ಟಾರ್ಗೆಟ್ ಮಾಡಿಕೊಂಡು ಬಿಜೆಪಿ ಸಂದಿಸಿದ ಟ್ವಿಟ್ಟರ್ ಬಾಣಗಳು ಕಾಂಗ್ರೆಸ್‌ಗೆ ಆಳವಾಗಿ ನಾಟಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸೂ ಟ್ವಿಟ್ಟರ್ ಬಾಣಗಳನ್ನೂ ಹೂಡಿತಾದರೂ ಅಷ್ಟು ಪರಿಣಾಮಕಾರಿ ಅನಿಸಲಿಲ್ಲ.
ಸದನದಲ್ಲಿ ಆ ಯುವತಿ ಪರವಾಗಿ ಹೋರಾಟ ನಡೆಸಿದ್ದ ಕಾಂಗ್ರೆಸ್ ಪಕ್ಷದ ನಾಯಕರಿಗೆ, ಇದೀಗ ಪಕ್ಷದ ಅಧ್ಯಕ್ಷರೇ ಸೀಡಿ ಗ್ಯಾಂಗ್‌ಗೆ ಆಪ್ತರಾಗಿರುವುದು ತೀವ್ರ ಇರಿಸುಮುರಿಸು ಆಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಮೇಲೆ ಸೇಡು ತೀರಿಸಿಕೊಳ್ಳಲು ಒಂದು ಗುಂಪು ಎಲ್ಲ ಪ್ಲ್ಯಾನ್ ಮಾಡಿಕೊಂಡಿದೆ ಎಂದು ಅತ್ಯಂತ ವಿಶ್ವಸನೀಯ ಮೂಲಗಳು ತಿಳಿಸಿವೆ.
ವೈಯಕ್ತಿಕ ನೆಲೆಗಟ್ಟಿನ ಜಗಳ
ರಮೇಶ್ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ತಿಕ್ಕಾಟ ಪಕ್ಷಕ್ಕಿಂತ ವೈಯಕ್ತಿಕ ಮಟ್ಟದಲ್ಲಿ ನಡೆಯುತ್ತಿದ್ದು, ಇದರಿಂದ ಅಂತರ ಕಾಯ್ದುಕೊಳ್ಳಲು ಸಿದ್ದರಾಮಯ್ಯ ನಿರ್ಧಸಿದ್ದಾರೆ ಎಂಬ ಮಾಹಿತಿಯೂ ಬಂದಿದೆ. ಅಲ್ಲದೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಇದ್ದಾಗ ಬೆಳಗಾವಿ ರಾಜಕಾರಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಸ್ತಕ್ಷೇಪ ಮಾಡುತ್ತಿದ್ದ ಡಿಕೆಶಿ ಮೇಲೆ ಅಸಮಾಧಾನಗೊಂಡಿದ್ದವರೆಲ್ಲ ಇದೀಗ ಸಿದ್ದರಾಮಯ್ಯ ಪಕ್ಕದಲ್ಲಿ ನಿಂತು, ಸೀಡಿ ಕೆಸರು ತಮ್ಮ ಮೇಲೆ ಬೀಳಿಸಿಕೊಳ್ಳುವುದು ಬೇಡ ಎಂಬ ಎಚ್ಚರಿಕೆ ವಹಿಸುತ್ತಿದ್ದಾರೆ. ಅಲ್ಲಿಗೆ ಪಕ್ಷದಲ್ಲಿ ಡಿಕೆಶಿ ಒಂಟಿಯಾಗುತ್ತಿದ್ದಾರಾ? ಎಂಬ ಪ್ರಶ್ನೆಯೂ ಮೂಡಿದೆ.
ಜಾರಕಿಹೊಳಿಯಿಂದಲೂ ಬಿಜೆಪಿ ಅಂತರ
ಇನ್ನೊಂದೆಡೆ ಡಿಕೆಶಿ ಮತ್ತು ಕಾಂಗ್ರೆಸ್ ಮೇಲೆ ಟ್ವಿಟ್ಟರ್ ವಾರ್ ಮಾಡುತ್ತಿರುವ ಬಿಜೆಪಿ ಕೂಡ ಇದೀಗ ರಮೇಶ್ ಜಾರಕಿಹೊಳಿ ಅವರಿಂದ ಸಂಪೂರ್ಣ ಡಿಸ್ಟೆನ್ಸ್ ಮೆಂಟೇನ್ ಮಾಡಲು ನಿರ್ಧರಿಸಿದೆ. ಜಾರಕಿಹೊಳಿ ಪ್ರಕರಣವನ್ನು ಸಮರ್ಥಿಸುವ ಅಥವಾ ರಮೇಶ್ ಇಲ್ಲವೇ ಬಾಲಚಂದ್ರ ಜಾರಕಿಹೊಳಿ ಹೇಳಿಕೆಗಳನ್ನು ಸಮರ್ಥನೆ ಮಾಡುವ ಯಾವ ಹೇಳಿಕೆಗಳಿಗೆ ಒತ್ತಾಸೆಯಾಗಿ ನಿಲ್ಲಬಾರದು ಎಂದು ಪಕ್ಷವು ಎಲ್ಲರಿಗೂ ಖಡಕ್ಕಾಗಿಯೇ ತಾಕೀತು ಮಾಡಿದ್ದಾರೆ.
ಆಡಳಿತಾತ್ಮಕವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಬ್ಬರನ್ನು ಬಿಟ್ಟರೆ ಉಳಿದ ಯಾವ ನಾಯಕನೂ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡುತ್ತಿಲ್ಲ. ಸೀಡಿ ಲೀಕ್ ಆದ ಒಂದೆರಡು ದಿನ ಸಂಪುಟದಲ್ಲಿರುವ ಮುಂಬಯಿ ಗೆಳೆಯರು ಬಿಟ್ಟರೆ ಉಳಿದಾವ ಸಚಿವರೂ ರಮೇಶ್ ಬೆಂಬಲಕ್ಕೆ ನಿಲ್ಲಲಿಲ್ಲ. ಕ್ರಮೇಣ, ನ್ಯಾಯಾಲಯಕ್ಕೆ ಮೊರೆ ಹೋಗಿ ತಡೆಯಾಜ್ಞೆ ತಂದಿರುವ ಆರು ಸಚಿವರು ಕೂಡ ಜಾರಕಿಹೊಳಿ ಪ್ರಶ್ನೆ ಬಂದ ಕೂಡಲೇ ಮೆಲ್ಲಗೆ ಜಾರಿಕೊಳ್ಳುತ್ತಿದ್ದಾರೆ.
ಇದೆಲ್ಲವನ್ನು ಗಮನಿಸುತ್ತಾ ಹೋದರೆ ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಸೈಡ್‌ಲೈನಾಗುತ್ತಿರುವ ರೀತಿಯಲ್ಲಿಯೇ ಕಾಂಗ್ರೆಸ್‌ನಲ್ಲಿ ಡಿಕೆಶಿಯನ್ನೂ ಸೈಡಿಗೆ ತಳ್ಳಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ.