ಬಾಗೇಪಲ್ಲಿ: ತಾಲ್ಲೂಕಿನ ಮಿಟ್ಟೆಮರಿ ಗರುಡಾದ್ರಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪ್ರದಾಯಂತೆ ಪೂಜಾ ವಿಧಾನಗಳೊಂದಿಗೆ ಸರಳವಾಗಿ ನಡೆಯಿತು. ಆದರೆ, ಗರುಡ ಪಕ್ಷಿ ಬಾರದ ಕಾರಣಕ್ಕೆ ಭಕ್ತರಿಗೆ ನಿರಾಶೆ ಉಂಟಾಯಿತು.
ಸೋಮವಾರ ನಡೆದ ಗರುಡಾದ್ರಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಕೋವಿಡ್ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೈಗೊಂಡ ಮುನ್ನಚ್ಚರಿಕೆ ಕ್ರಮಗಳ ನಡುವೆಯೇ ಎಲ್ಲ ಪೂಜಾ ಕೈಂಕರ್ಯಗಳು ನಡೆದವು.
ಕೋವಿಡ್ ಸೋಂಕು ಹರಡದಂತೆ ಸರಕಾರ 500 ಮಂದಿಗೆ ಹೆಚ್ಚು ಜನ ಸೇರದಂತೆ ನಿರ್ಬಂಧ ಹೇರಿತ್ತು. ಸರಕಾರಿ ಆದೇಶದಂತೆ ತಹಶೀಲ್ದಾರ್ ಡಿ.ಎ.ದಿವಾಕರ್ ಜಾತ್ರೆಯನ್ನು ರದ್ದುಗೊಳಿಸಿ ಆದೇಶ ಮಾಡಿದ್ದರು. ಆದರೆ, ದೇವಾಲಯದಲ್ಲಿ ಹಾಗೂ ರಥೋತ್ಸವದ ಬಳಿ ನಡೆದ ಪೂಜೆಯಲ್ಲಿ ಅರ್ಚಕರು ಮಾತ್ರ ಭಾಗಿಯಾದರು.
ದೇವಾಲಯದ ಮುಖ್ಯದ್ವಾರದಲ್ಲಿ ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ದೇವರಿಗೆ ಹಾಗೂ ಒಳ-ಹೊರಾಂಗಣದಲ್ಲಿ ವಿಶೇಷ ಹೂವಿನ ಹಾಗೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು, ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶ ಇರಲಿಲ್ಲ. ದೇವಾಲಯದ ಮುಂದೆ ಇರುವ ದೇವರ ವಿಗ್ರಹಗಳಿಗೆ ನೈವೇದ್ಯ ಸಮರ್ಪಿಸಿ, ಪೂಜೆ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು.
ಸಂಪ್ರದಾಯದಂತೆ ಹೋಮ-ಹವನಗಳು, ಪೂಜಾ ಕೈಂಕರ್ಯಗಳು ನಡೆದವು. ತಹಶೀಲ್ದಾರ್ ಡಿ.ಎ.ದಿವಾಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ವಿಶೇಷ ಪೂಜೆ ಸಲ್ಲಿಸಿದರು.
ಪ್ರದಕ್ಷಿಣೆ ಹಾಕದ ಗರುಡ
ತಾಲ್ಲೂಕಿನ ಮೇರುವಪಲ್ಲಿ ಗ್ರಾಮದ ಆಂಜನೇಯಸ್ವಾಮಿ ದೇವರ ಮೆರವಣಿಗೆ ಮಿಟ್ಟೇಮರಿಗೆ ಬಂದ ನಂತರ ಗರುಡಾದ್ರಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವ ಆರಂಭವಾಗುತ್ತಿತ್ತು, ಈ ಸಲ ದೇವರ ಮೆರವಣಿಗೆ ಆಗಲಿಲ್ಲ. ಸರಳ ಬ್ರಹ್ಮರಥೋತ್ಸವದ ಸುತ್ತಲೂ ಗರುಡಪಕ್ಷಿ ಪ್ರದಕ್ಷಿಣೆ ಹಾಕಿಲ್ಲ. ಇದರಿಂದ ಭಕ್ತರಲ್ಲಿ ನಿರಾಶೆ ಮೂಡಿಸಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಿ.ಎ.ದಿವಾಕರ್ ಮಾತನಾಡಿ; ” ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಸಾಂಪ್ರದಾಯವಾಗಿ ಬ್ರಹ್ಮರಥೋತ್ಸವ ಆಚರಣೆ ಮಾಡಲಾಗಿದೆ. ದೇವಾಲಯದ ಒಳಗೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಸೋಂಕು ಹರಡದಂತೆ ಜನರು ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂಬ ಕಾರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದೇವಾಲಯದ ಅರ್ಚಕರ ನೇತೃತ್ವದಲ್ಲಿ ಹೂವಿನ ಅಲಂಕಾರ, ಅಭಿಷೇಕ, ಹೋಮ-ಹವನಗಳನ್ನು ಪೂಜಾ ವಿಧಿ-ವಿಧಾನಗಳನ್ನು ನೆರೆವೇರಿಸಲಾಯಿತು” ಎಂದರು.