- ನೀರು ಲಭ್ಯತೆಯ ಬಗ್ಗೆಯೇ ಖಾತರಿ ಇಲ್ಲದ ಎತ್ತಿಹೊಳೆ ಯೋಜನೆಯನ್ನು ʼರಾಷ್ಟ್ರೀಯ ಯೋಜನೆʼ ಎಂದು ಘೋಷಿಸಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರಂತೆ.
ಚಿಕ್ಕಬಳ್ಳಾಪುರ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ರೂಪಿಸಿರುವ ಎತ್ತಿನಹೊಳೆ ಯೋಜನೆಯನ್ನು ʼರಾಷ್ಟ್ರೀಯ ಯೋಜನೆʼಯನ್ನಾಗಿ ಪರಿವರ್ತಿಸಿ ಹೆಚ್ಚಿನ ಅನುದಾನ ಕೊಡಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆಯು ಕುಡಿಯುವ ನೀರಿನ ಯೋಜನೆಯಾಗಿದೆ. ಇದರಿಂದ ಬಯಲುಸೀಮೆಯ ಸುಮಾರು ಏಳೆಂಟು ಜಿಲ್ಲೆಗಳಿಗೆ ನೀರಿನ ದಾಹ ನೀಗಲಿದ್ದು, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು. ಇನ್ನೂ ಅಗತ್ಯವಿರುವ ಅನುದಾನವನ್ನು ಕೇಂದ್ರ ಸರಕಾರ ನೀಡಬೇಕು ಎಂದು ಈಗಾಗಲೇ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ಫಲಪ್ರದವಾಗಲು ಇನ್ನಷ್ಟು ಶ್ರಮ ಹಾಕಲಾಗುವುದು ಎಂದರು.
ರಸ್ತೆ ಅಭಿವೃದ್ಧಿಗೆ ಅನುದಾನ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ 9 ತಾಲೂಕುಗಳಲ್ಲಿ 2020-21ನೇ ಸಾಲಿಗೆ ಪ್ರಧಾನಮಂತ್ರಿಗಳ ಗ್ರಾಮ ಸಡಕ್ (ಪಿಎಂಜಿಎಸ್‍ವೈ) ಯೋಜನೆಯಡಿ ಒಟ್ಟಾರೆ 249.79 ಕಿ.ಮೀ.ನಷ್ಟು ರಸ್ತೆಗಳ ಅಭಿವೃದ್ಧಿಗೆ 173.13 ಕೋಟಿ ರುಪಾಯಿ ಮಂಜೂರು ಆಗಿದೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನಲ್ಲಿ 46.11 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ 45.63 ಕೋಟಿ ರುಪಾಯಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕುಗಳಲ್ಲಿ ಒಟ್ಟು 97.94 ಕಿ.ಮೀ. ಉದ್ದದ ರಸ್ತೆಗೆ 61.30 ಕೋಟಿ ರುಪಾಯಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕುಗಳಲ್ಲಿ ಒಟ್ಟು 105.74 ಕಿ.ಮೀ. ಉದ್ದದ ರಸ್ತೆಗೆ 66.20 ಕೋಟಿ ರುಪಾಯಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಸಂಸದರ ಪ್ರದೇಶಾಭಿವೃದ್ಧಿ ನಿಧಿ
ಈ ಯೋಜನೆಯಡಿ 2019-20 ಮತ್ತು 2020-21ನೇ ಸಾಲಿಗೆ ಕ್ಷೇತ್ರದ 9 ತಾಲೂಕುಗಳಲ್ಲಿ ಒಟ್ಟು 79 ಕಾಮಗಾರಿಗಳನ್ನು ಕೈಗೊಂಡು, 3.82 ಕೋಟಿ ರು. ಖರ್ಚು ಮಾಡಲಾಗಿದೆ. ಪ್ರಧಾನಮಂತ್ರಿ ಆದರ್ಶಗ್ರಾಮ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ 40 ಲಕ್ಷ ರುಪಾಯಿಗಳಂತೆ ಒಟ್ಟು 41 ಗ್ರಾಮಗಳಿಗೆ ಅನುದಾನ ಮಂಜೂರಾಗಿದ್ದು, 2018-19, 2019-20ನೇ ಸಾಲಿನ ಮೊದಲ ಹಂತದಲ್ಲಿ 19 ಗ್ರಾಮಗಳಿಗೆ ಒಟ್ಟು 7.60 ಕೋಟಿ ರುಪಾಯಿಗಳು ಮಂಜೂರಾಗಿದೆ. 2019-20ನೇ ಸಾಲಿನ 2ನೇ ಹಂತ ಮತ್ತು 2020-21 ಸಾಲುಗಳಲ್ಲಿ ಒಟ್ಟು 22 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ತಲಾ 20 ಲಕ್ಷ ರು. ದಂತೆ 4.40 ಕೋಟಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 42 ಗ್ರಾಮಗಳಿಗೆ ಅನುದಾನ ಮಂಜೂರಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ 14 ಗ್ರಾಮಗಳಿಗೆ 5.60 ಕೋಟಿ, 2ನೇ ಹಂತದಲ್ಲಿ 28 ಗ್ರಾಮಗಳಿಗೆ ತಲಾ 20 ಲಕ್ಷದಂತೆ ಒಟ್ಟು 5.60 ಕೋಟಿ ರು. ಮಂಜೂರಾಗುವ ಹಂತದಲ್ಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಗೆ ಸಿಲ್ಕ್ ಬೆಳೆಗಾರರಿಗೆ ಸಿಲ್ಕ್ ಸಮಗ್ರ ಯೋಜನೆಯಡಿಯಲ್ಲಿ ನೀಡುವ ಸಲಕರಣೆಗಳಾದ ಸ್ಪ್ರೇಯರ್, ಮಲ್ಬರಿ ಪ್ರೂನರ್, ಚಂದ್ರಿಕೆ, ಸೋಲಾರ್ ದೀಪಗಳ ಅಳವಡಿಕೆಗೆ ಶೇ.75 ರಷ್ಟು ಸಹಾಯಧನವನ್ನು ಸಾಮಾನ್ಯ ರೈತರಿಗೆ ಮತ್ತು ಶೇ.90ರಷ್ಟು ಎಸ್ಸಿ/ಎಸ್ಟಿ ರೈತರಿಗೆ ನೀಡುವ ಯೋಜನೆಗೆ 46.79 ಕೋಟಿ ವಿತರಿಸಲು ಯೋಜನೆ ಅನುಷ್ಠಾನಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಸಂಸದರು ವಿವರಿಸಿದರು.