ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಭೆಯಲ್ಲಿ ಮಹತ್ವ್ವದ ನಿರ್ಧಾರ; ಇದು ಜಗತ್ತಿನಲ್ಲೇ ಮೂರನೇ ಹಂತದ ಅತಿದೊಡ್ಡ ಲಸಿಕೆ ಅಭಿಯಾನ
ನವದೆಹಲಿ: ಕೋವಿಡ್ ಎರಡನೇ ಅಲೆಯನ್ನು ಶತಾಯಗತಾಯ ಕಟ್ಟಿಹಾಕಲು ಹೊರಟಿರುವ ಕೇಂದ್ರ ಸರಕಾರ ಮೇ 1ರಿಂದಲೇ ಕೋವಿಡ್-19 ಲಸಿಕೆ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಅಂದಿನಿಂದಲೇ 18 ವರ್ಷದ ಮೇಲ್ಪಟ್ಟ ಎಲ್ಲ ವಯೋಮಿತಿಯವರಿಗೆ ಲಸಿಕೆ ನೀಡುವುದೂ ಸೇರಿದಂತೆ ಕೊರೊನಾ ನಿಯಂತ್ರಣಕ್ಕೆ 3 ಹಂತಗಳ ಕಾರ್ಯತಂತ್ರವನ್ನು ಪ್ರಕಟಿಸಿದೆ. ಈವರೆಗೆ 45 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ.
ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಗರಿಷ್ಠ ಪ್ರಮಾಣದ ಜನರಿಗೆ ಲಸಿಕೆ ನೀಡುವುದು ಸರಕಾರದ ಉದ್ದೇಶವಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಲಸಿಕೆ ನೀಡಲು ಯೋಜನೆ ರೂಪಿಸಿದೆ.
ನವದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಅದರಲ್ಲಿ ಲಸಿಕೆ ನೀಡುವ ವಯಸ್ಸಿನ ಮಿತಿ ಇಳಿಕೆ ನಿರ್ಧಾರವೂ ಒಂದು.
ಜಗತ್ತಿನ ಅತಿದೊಡ್ಡ ಲಸಿಕೆ ಆಭಿಯಾನ
ಲಸಿಕೆಯ ಬೆಲೆ, ಲಸಿಕೆ ಸಂಗ್ರಹಣೆ, ವ್ಯಾಕ್ಸಿನ್ ಪಡೆಯುವವರ ವಯೋಮಿತಿ ಹಾಗೂ ಲಸಿಕೆ ಅಭಿಯಾನದ ನಿರ್ವಹಣೆಯ ಬಗ್ಗೆ ಪ್ರಧಾನಿ ಮಹತ್ತ್ವದ ಚರ್ಚೆ ನಡೆಸಿದರು. ಇದು ಜಗತ್ತಿನಲ್ಲಿಯೇ ಮೂರನೇ ಹಂತದ ಅತಿದೊಡ್ಡ ವ್ಯಾಕ್ಸಿನ್ ಅಭಿಯಾನವಾಗಿದೆ.
ಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಉತ್ಸಾಹದಿಂದ ಮುಂದೆ ಬಂದು ಲಸಿಕೆ ಪಡೆಯಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರಲ್ಲದೆ, ಲಸಿಕೆ ತಯಾರಕರು ತಮ್ಮ ಉತ್ಪಾದನೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಲಹೆ ಮಾಡಿದರು.
ರಾಜ್ಯಗಳು ನೇರವಾಗಿ ಲಸಿಕೆ ಪಡೆಯಬಹುದು
ವ್ಯಾಕ್ಸಿನ್ ತಯಾರಕರು ತಮ್ಮ ಉತ್ಪಾದನೆಯ ಶೇ.50ರಷ್ಟು ಲಸಿಕೆಯನ್ನು ರಾಜ್ಯಗಳಿಗೆ ನೇರವಾಗಿ ಒದಗಿಸಬಹುದಾಗಿದೆ. ಹಾಗೆಯೇ ಮುಕ್ತ ಮಾರುಕಟ್ಟೆಯಲ್ಲಿ ಪೂರ್ವನಿಗಧಿತ ಬೆಲೆಗೆ ಲಸಿಕೆಯನ್ನು ಕೊಡಬಹುದಾಗಿದೆ. ಜತೆಗೆ, ಹೆಚ್ಚುವರಿ ಲಸಿಕೆಯನ್ನು ನೇರವಾಗಿ ಉತ್ಪಾದಕರಿಂದಲೇ ಸಂಗ್ರಹಿಸಲು ರಾಜ್ಯಗಳಿಗೆ ಅವಕಾಶ ನೀಡುವ ಬಗ್ಗೆ ಪ್ರಧಾನಿ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಮೂರನೇ ಹಂತದ ವ್ಯಾಕ್ಸಿನ್ ಅಭಿಯಾನವನ್ನು ಅತ್ಯಂತ ಕರಾರುವಕ್ಕಾದ ಕಾರ್ಯತಂತ್ರದೊಂದಿಗೆ ರೂಪಿಸಲಾಗಿದೆ. ವೇಗವಾಗಿ ಹಾಗೂ ಅತಿ ಹೆಚ್ಚು ಜನರಿಗೆ ಕಡಿಮೆ ಅವಧಿಯಲ್ಲಿ ಲಸಿಕೆ ನೀಡುವುದು ಈ ಕಾರ್ಯತಂತ್ರದ ಭಾಗವಾಗಿದೆ. ವೈಜ್ಞಾನಿಕವಾಗಿ, ಜಾಗತಿಕ ಮಾನದಂಡಗಳ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ಈ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಡಾ.ಮನಮೋಹನ್ ಸಿಂಗ್ ಪತ್ರ ಬರೆದಿದ್ದರು
ಭಾನುವಾರವಷ್ಟೇ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು ಲಸಿಕೆ ಅಭಿಯಾನವನ್ನು ಚುರುಕುಗೊಳಿಸಬೇಕಾಗಿ ಸಲಹೆ ನೀಡಿದ್ದರು. ಅಲ್ಲದೆ, ಕೋವಿಡ್ ಎರಡನೇ ಅಲೆ ತಡೆಗೆ ಪಂಚಸೂತ್ರಗಳನ್ನು ಸೂಚಿಸಿದ್ದರು. ಆ ಮರುದಿನವೇ ಪ್ರಧಾನಿ ಸಭೆ ಕರೆದು 18 ವರ್ಷಕ್ಕೂ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಮಹತ್ತ್ವದ ನಿರ್ಧಾರ ಕೈಗೊಂಡಿದ್ದಾರೆ.
ಡಾ.ಹರ್ಷವರ್ಧನ್ ಉಡಾಫೆ
ಮನಮೋಹನ್ ಸಿಂಗ್ ಅವರ ಪತ್ರಕ್ಕೆ ಪ್ರತ್ಯುತ್ತರ ನೀಡಿರುವ ಸಚಿವ ಡಾ.ಹರ್ಷವರ್ಧನ್, ಅತ್ಯಂತ ಬಾಲಿಷ ಉತ್ತರ ನೀಡಿದ್ದು, ಓರ್ವ ಮಾಜಿ ಪ್ರಧಾನಿಯನ್ನು ಗೇಲಿ ಮಾಡಿ ನಗೆಪಾಟಲಿಗೀಡಾಗಿದ್ದಾರೆ.
ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಬದಲು ಮೂರ್ಖತನದ ಪ್ರತ್ಯುತ್ತರ ಕೊಟ್ಟಿರುವ ಆರೋಗ್ಯ ಸಚಿವರು ಈ ಮೂಲಕ ಅನಾರೋಗ್ಯಕರ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ.
ಸರಕಾರ ಹಾಗೂ ತಾನು ಮಾಡುತ್ತಿರುವುದೇ ಸರಿ ಎನ್ನುವ ಧಿಮಾಕಿನಿಂದ ಹರ್ಷವರ್ಧನ್ ಉತ್ತರ ಕೊಟ್ಟಿದ್ದಾರೆಂದು ಟ್ವಿಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಕಾಮೆಂಟ್‌ಗಳನ್ನು ಹರ್ಷವರ್ಧನ್‌ಗೆ ಟ್ಯಾಗ್ ಮಾಡಿ ಚಳಿ ಬಿಡಿಸಿದ್ದಾರೆ.