ಚಿಕ್ಕಬಳ್ಳಾಪುರ: ಕೊರೊನ ವಾರೀಯರ್ಸ್ ಆಗಿ ಕಾರ್ಯ ನಿರ್ವಹಿಸುತಿರುವವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಸುಖೀಭವ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಸುಪ್ರಿಯಾ ರಾಮ್ ತಿಳಿಸಿದರು.
ನಾಟ್ಯಪ್ರಿಯ ನೃತ್ಯ ಕಲಾನಿಕೇತನ ಹಾಗೂ ಸುಖೀಭವ ಟ್ರಸ್ಟ್ ವತಿಯಿಂದ ಕಳೆದ ಎರಡು ದಿನಗಳಿಂದ ಕೊರೊನ ವಾರೀಯರ್ಸ್ ಸೇರಿದಂತೆ ನಗರ ಪ್ರದೇಶದಲ್ಲಿ ಬಡ ಮತ್ತು ನಿರ್ಗತಿಕರಿಗೆ ಮಧ್ಯಾಹ್ನದ ಊಟವನ್ನು ಉಚಿತವಾಗಿ ಒದಗಿಸುತ್ತಿರುವ ಅವರು, “ಕೊರೊನಾ ಎರಡನೇ ಅಲೆಯ ಭೀಕರತೆ ಎಲ್ಲರಿಗೂ ತಿಳಿದದ್ದೇ. ಭಯ ಪಡುವುದಕ್ಕಿಂತ ಎಚ್ಚರಿಕೆಯಿಂದ ನಾವು ಇರುವುದರ ಜತೆಗೆ ಇತರರಿಗೂ ಎಚ್ಚರಿಕೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸಲು ತಿಳಿಸಬೇಕು” ಎಂದರು.
ಎರಡನೇ ಅಲೆ ಅತಿ ವೇಗವಾಗಿ ಹರಡುತಿದ್ದು, ಇದರಿಂದ ಲಾಕ್ಡೌನ್ ಆಗಿರುವ ಕಾರಣಕ್ಕೆ ನಿರ್ಗತಿಕರಿಗೆ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿದೆ. ಹೀಗಾಗಿ ಸಂಕಷ್ಟದ ಈ ಕಾಲದಲ್ಲಿ ಅಂತಹ ಬಡವರಿಗೆ ದಾರಿ ತೋಚದಂತಾಗಿದೆ. ಹಸಿವಿನಿಂದ ಬಳಲುತ್ತಿದ್ದ ನಿರ್ಗತಿಕರಿಗೆ ಮಧ್ಯಾಹ್ನದ ಊಟ ನೀಡುವುದರಿಂದ ಸ್ವಲ್ಪಮಟ್ಟಿಗೆ ಅವರ ಹಸಿವು ನೀಗಿಸಿದಂತಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಟ್ರಸ್ಟ್ ಪದಾಧಿಕಾರಿಗಳು ಬೀದಿ ಬದಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಮಲಗಿದ್ದ ಪ್ರಾಣಿ, ಶ್ವಾನಗಳಿಗೂ ಅನ್ನ, ಬಿಸ್ಕೆಟ್ ಮತ್ತು ನೀರು ನೀಡಿದ್ದಾರೆ. ಸೊಮವಾರ ಸುಮಾರು 150 ಹಾಗೂ ಮಂಗಳವಾರ 200 ಜನರಿಗೆ ಆಹಾರ ನೀಡಲಾಗಿದೆ ಎಂದು ಸುಪ್ರಿಯಾ ರಾಮ್ ತಿಳಿಸಿದ್ದಾರೆ.




















