ಬೆಂಗಳೂರು ಜನರಿಗೆ ಜಿಲ್ಲೆಯಲ್ಲಿ ನಿಲ್ಲದ ಲಸಿಕೆ I 18-44 ವಯಸ್ಸಿನವರಿಗೆ ಸರಕಾರ ವ್ಯಾಕ್ಸಿನ್ ನಿಲ್ಲಿಸಿದರೂ ಡೋಂಟ್‌ಕೇರ್ I ಬೇಕಾದವರಿಗೆ ಲಸಿಕೆ ನೀಡುವಂತೆ ಸಿಬ್ಬಂದಿಗೆ ಧಮ್ಕಿ ಹಾಕಿದ ಚಿಕ್ಕಬಳ್ಳಾಪುರ ಜಿಲ್ಲೆಯ RMO ಪತಿರಾಯರು!!
ಶುಕ್ರವಾರ ಅಪರಾಹ್ನ 2.45 ಗಂಟೆಗೆ ಸರಿಯಾಗಿ ಚಿಕ್ಕಬಳ್ಳಾಪುರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಪಡೆದ 18+ ವಯೋಮಿತಿಯವರು.
CkNewsNow Exclusive
by M Krishnappa Chikkaballapura
ಚಿಕ್ಕಬಳ್ಳಾಪುರ: ಸ್ವತಃ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಅದೆಷ್ಟು ಎಕ್ಕುಟ್ಟಿ ಹೋಗಿದೆ ಎನ್ನುವುದಕ್ಕೆ ಇಲ್ಲಿದೆ ಇನ್ನೊಂದು ತಾಜಾ ಉದಾಹರಣೆ.
ಗುಡಿಬಂಡೆ, ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗಳಲ್ಲಿ ಟೆಕ್ಕಿಗಳು ಸೇರಿ ಬೆಂಗಳೂರು ಜನ ಸ್ಥಳೀಯರಿಗೆ ಸಿಗಬೇಕಿದ್ದ ಲಸಿಕೆಗಳನ್ನು ಡಿಜಿಟಲ್ ಹೈಜಾಕ್ ಮಾಡಿದ ಘಟನೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ 18 ವರ್ಷ ಮೇಲ್ಪಟ್ಟ 44 ವರ್ಷ ಕೆಳಗಿನವರಿಗೆ ನಿಯಮಬಾಹಿರಾಗಿ ಅನ್ನುವುದಕ್ಕಿಂತ ಅಕ್ರಮವಾಗಿ ಲಸಿಕೆ ನೀಡಿದ ಪ್ರಸಂಗ ಶುಕ್ರವಾರ ನಡೆಯಿತು!!
ಆರೋಗ್ಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಜಿಲ್ಲಾ ಹೆಲ್ಪ್‌ಲೈನ್ ಉದ್ಘಾಟನೆ ಮಾಡಲು ಜಿಲ್ಲಾ ಕೇಂದ್ರದಲ್ಲಿ ಇದ್ದಾಗಲೇ ಈ ಘಟನೆ ನಡೆಯಿತು. ಜಿಲ್ಲಾಸ್ಪತ್ರೆಯ ಸ್ಥಾನಿಕ ಆರೋಗ್ಯಾಧಿಕಾರಿ (RMO) ಅವರ ಪತಿ ಎಂದು ಹೇಳಲಾದ ವ್ಯಕ್ತಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನರ್ಸ್‌ಗಳಿಗೆ ಧಮ್ಕಿ & ಬೆದರಿಕೆ ಹಾಕಿ ತಮಗೆ ಬೇಕಾದ ಬೆಂಗಳೂರಿನ ಹನ್ನೆರಡು ಯುವಜನರಿಗೆ ಅಕ್ರಮವಾಗಿ ಲಸಿಕೆ ಹಾಕಿದರು!!
ಮೇ 10ರಿಂದ ರಾಜ್ಯ ಸರಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ನಿರ್ಧಾರ ಮಾಡಿತ್ತು. ಆದರೆ, ಕೋವಿಡ್ 2ನೇ ಅಲೆ ತೀವ್ರವಾದ ಬೆನ್ನಲ್ಲೇ ಲಸಿಕೆ ಅಭಾವ ಉಂಟಾಯಿತು. ಆರಂಭದಲ್ಲಿಯೇ ವ್ಯಾಕ್ಸಿನ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದವರೆಲ್ಲ ಜೀವ ಭಯದಿಂದ ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದರು. ಕ್ರಮೇಣ ಲಸಿಕೆಗೆ ಡಿಮಾಂಡ್ ಜಾಸ್ತಿಯಾದ ಪರಿಣಾಮ ರಾಜ್ಯದೆಲ್ಲೆಡೆ ತೀವ್ರ ಕೊರತೆಯೂ ಉಂಟಾಯಿತು. ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಲಸಿಕೆಗೆ ಹಾಹಾಕಾರ ಉಂಟಾಯಿತು. ಎಚ್ಚೆತ್ತ ರಾಜ್ಯ ಸರಕಾರ ಮೇ 14ರಿಂದಲೇ 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷ ಕೆಳಗಿನ ಜನರಿಗೆ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿತು. ಈ ನಿಯಮ ಶುಕ್ರವಾರದಿಂದಲೇ ಜಾರಿಗೆ ಬಂದಿದೆ.
ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಬೇರೆ ರೂಲ್ಸ್!!
ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 14ರಿಂದಲೇ 18 ವರ್ಷ ಮೇಲ್ಪಟ್ಟ ಹಾಗೂ 44 ವರ್ಷ ಕೆಳಗಿನ ಜನರಿಗೆ ಲಸಿಕೆ ನೀಡುವುದನ್ನು ನಿಲ್ಲಿಸಲಾಯಿತೇನೋ ಸರಿ. ಆದರೆ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾತ್ರ ಇದು ನಿಲ್ಲಲಿಲ್ಲ.
ಅಷ್ಟೇ ಅಲ್ಲ, ಕೋವಿನ್ ಪೋರ್ಟಲ್ ಹಾಗೂ ಆರೋಗ್ಯ ಸೇತು ಆಪ್‌ನಲ್ಲೂ ಮೇ 14ಕ್ಕೂ ಮೊದಲೇ ಸ್ಲಾಟ್ ಬುಕ್ ಮಾಡಿಕೊಂಡವರಿಗೂ ಲಸಿಕೆ ಕೊಡುವುದಿಲ್ಲ ಎಂದು ಸರಕಾರ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿತು. ತಕ್ಷಣವೇ ಬುಕ್ ಆಗಿದ್ದ ಸ್ಲಾಟ್ ಕ್ಯಾನ್ಸಲ್ ಕೂಡ ಆಯಿತು. ಆರೋಗ್ಯ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಈ ಆದೇಶವನ್ನು ಪ್ರಕಟಿಸಲಾಯಿತು. ವಿಪರ್ಯಾಸವೆಂದರೆ, ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಸರಕಾರದ ಆದೇಶಕ್ಕೆ ಮೂರು ಕಾಸಿನ ಕಿಮ್ಮತ್ತು ಇಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಮಹತ್ವಾಕಾಂಕ್ಷೆಯ ಲಸಿಕೆ ಅಭಿಯಾನವನ್ನು ಹಾಳು ಮಾಡುವ ಕೆಲಸ ಇಲ್ಲಿ ನಿರಾತಂಕವಾಗಿ ನಡೆಯುತ್ತಿದೆ. ಆದಕ್ಕೆ, ಆಸ್ಪತ್ರೆ ಅಧಿಕಾರಿಗಳೇ ಸಾಥ್ ಕೊಡುತ್ತಿದ್ದಾರೆ. ಕಿರಿಯ ಸಿಬ್ಬಂದಿ ಹೆದರಿಕೊಂಡು ಕೆಲಸ ಮಾಡುತ್ತಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಮಧ್ಯಾಹ್ನ 2 ಗಂಟೆ ಹೊತ್ತಿಗೆ ಚಿಕ್ಕಬಳ್ಳಾಪುರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಮೂರು ಕಾರುಗಳು ಬಂದು ನಿಂತವು. ಆ ಕಾರುಗಳ ನೋಂದಣಿ ಸಂಖ್ಯೆ ಬೆಂಗಳೂರಿಗೆ ಸೇರಿದಾಗಿದ್ದವು. ಕಾರಿಳಿದ 18+ ವಯೋಮಿತಿಯ 12 ಯುವ ಜನರು ಆಸ್ಪತ್ರೆಯೊಳಕ್ಕೆ ಬರುತ್ತಾರೆ. ಇವರಲ್ಲಿ 8 ಜನ ಯುವತಿಯರು, ನಾಲ್ವರು ಯುವಕರಿದ್ದರು. ಬಂದವರೇ ಆಲ್ಲಿನ ಸಿಬ್ಬಂದಿಗೆ ಲಸಿಕೆ ಕೊಡಿ ಎಂದು ಕೇಳಿದರು.
ಲಸಿಕೆ ಇಲ್ಲ ಎಂದರು ಸಿಬ್ಬಂದಿ
ಇವತ್ತು ಬೆಳಗ್ಗೆಯಿಂದಲೇ 18+ ವಯೋಮಿತಿಯ ಯುವಜನರಿಗೆ ಲಸಿಕೆ ಕೊಡಬಾರದು ಎಂದು ಸರಕಾರ ಆದೇಶ ಹೊರಡಿಸಿದೆ. ಹೀಗಾಗಿ ನಿಮಗ್ಯಾರಿಗೂ ಲಸಿಕೆ ಕೊಡಲು ಬರುವುದಿಲ್ಲ ಎಂದು ಸಿಬ್ಬಂದಿ ಉತ್ತರ ನೀಡಿದರು. ಆದರೆ, ಬೆಂಗಳೂರಿಗರು ಇವರ ಮಾತಿಗೆ ಜಗ್ಗಲಿಲ್ಲ. ಲಸಿಕೆ ಬೇಕೆಂದು ಪಟ್ಟು ಹಿಡಿದರು. ನೋಡಿದರೆ ಅವರ ದಾಖಲೆಗಳು ಬೆಂಗಳೂರಿನವೇ ಆಗಿದ್ದವು. ದಾಖಲೆಗಿಂತ ಹೆಚ್ಚಾಗಿ ಸದ್ಯಕ್ಕೆ ಲಸಿಕೆ ಪಡೆಯಲು ಅವರಿಗೆ ಅವಕಾಶ ಇರಲಿಲ್ಲ. ಹೀಗಾಗಿ ನಿಯಮ ಮೀರಿ ಲಸಿಕೆ ಕೊಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ನೇರವಾಗಿ ಹೇಳಿಬಿಟ್ಟರು.
ಆಗ ಬಂತು ನೋಡಿ!! ಜಿಲ್ಲಾ ಕೋವಿಡ್ ಕೇರ್ ಸೆಂಟರ್‌ನ ಉಸ್ತುವಾರಿ ಅಧಿಕಾರಿ ಹಾಗೂ ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ (RMO ) ಡಾ.ವಿಜಯಲಕ್ಷ್ಮೀ ಅವರ ಪತಿರಾಯರ ಮೊಬೈಲ್ ಕಾಲ್. ಮೊಬೈಲನ್ನು ಸಿಬ್ಬಂದಿ ಒಬ್ಬರಿಗೆ ಕೊಟ್ಟರು ಆ 12 ಯುವಜನರಲ್ಲಿದ್ದ ಒಬ್ಬ ವ್ಯಕ್ತಿ.
RMO ಪತಿರಾಯರು ಬಂದ ಎಲ್ಲ ಯುವಕರಿಗೆ ವ್ಯಾಕ್ಸಿನ್ ಕೊಡುವಂತೆ ಆ ನರ್ಸ್‌ಗೆ ತಾಕೀತು ಮಾಡಿದರು. ಆದರೆ, ನಿಯಮ ಉಲ್ಲಂಘಿಸಲು ಸಿದ್ಧರಿಲ್ಲದ ಸಿಬ್ಬಂದಿ, “ಸರ್, ಇವತ್ತಿನಿಂದ 18+ ನವರಿಗೆ ವ್ಯಾಕ್ಸಿನ್ ಕೊಡುವ ಹಾಗಿಲ್ಲ. ಸೆಕೆಂಡ್ ಡೋಸ್‌ನವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೊಡುತ್ತಿದ್ದೇವೆ. ಇವರಿಗೆ ಲಸಿಕೆ ಕೊಟ್ಟರೆ ನಮಗೆ ತೊಂದರೆ ಆಗುತ್ತದೆ. ದಯವಿಟ್ಟು ನಮ್ಮನ್ನು ಬಿಟ್ಟು ಬಿಟ್ಟುಬಿಡಿ, ಕ್ಷಮಿಸಿ” ಎಂದು ಕೇಳಿಕೊಂಡರು.
ಇದಾವುದಕ್ಕೂ RMO ಪತಿ ಜಗ್ಗಲೇ ಇಲ್ಲ. “ಬೇಕಾದರೆ ಕೋವಿಡ್ ವಾರಿಯರ್ಸ್ ಅಂತ ಬೆರದುಕೊಂಡು ವ್ಯಾಕ್ಸಿನ್ ಕೊಡ್ರಿ” ಎಂದು ಗುಡುಗಿದರು. ಅಲ್ಲಿಗೂ ಮಣಿಯದ ಸಿಬ್ಬಂದಿಗೆ ಮತ್ತೂ ಜೋರು ಮಾಡಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ತೀರಾ ಆತಂಕಗೊಂಡ ಸಿಬ್ಬಂದಿ ಅವರೆಲ್ಲರಿಗೂ 2.45 ಗಂಟೆಗೆಲ್ಲ ವ್ಯಾಕ್ಸಿನ್ ಕೊಟ್ಟು ಸಾಗಹಾಕಿದರು.
ಸಿಕೆನ್ಯೂಸ್ ನೌ ಕಣ್ಣಿಗೆ ಬಿದ್ದ ದೃಶ್ಯಗಳು!!
ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಇಷ್ಟೆಲ್ಲ ಪ್ರಸಂಗಕ್ಕೂ ಸಿಕೆನ್ಯೂಸ್ ನೌ ಸಾಕ್ಷಿಯಾಯಿತು. ಲಸಿಕೆಗಾಗಿ ಕಾಯುತ್ತಿದ್ದ ಸೆಕೆಂಡ್ ಡೋಸ್ ಪಡೆದಿದ್ದವರನ್ನು ಕಡೆಗಣಿಸಿ ಬೆಂಗಳೂರು ನಗರದಿಂದ ಬಂದಿದ್ದ ಆರ್‌ಎಂಒ ಮೇಡಂ ಪತಿರಾಯರ ಕಡೆಯವರಿಗೆ ಲಸಿಕೆ ಕೊಟ್ಟು ರಾಜ ಮರ್ಯಾದೆಯಿಂದ ಕಳಿಸಲಾಯಿತು. ಲಸಿಕೆಗಾಗಿ ಹೊರಗೆ ನಿಂತಿದ್ದ ಸ್ಥಳೀಯರು ಹಿಡಿಶಾಪ ಹಾಕಿದ್ದು ಬಿಟ್ಟರೆ ಇನ್ನೇನು ಮಾಡಲಿಲ್ಲ.
ಕಕ್ಕಾಬಿಕ್ಕಿಯಾದ ಬೆಂಗಳೂರಿಗರು
ಅಕ್ರಮವಾಗಿ, ಅದೂ RMO ಮೇಡಂ ಪತಿರಾಯರ ಪ್ರಭಾವ ಬಳಸಿ ಲಸಿಕೆ ಪಡೆಯಲು ಬಂದಿದ್ದ ಬೆಂಗಳೂರಿಗರು ಸಿಕೆನ್ಯೂಸ್ ನೌ ಪ್ರಶ್ನೆ ಮಾಡುತ್ತಿದ್ದಂತೆಯೇ ಕಕ್ಕಾಬಿಕ್ಕಿಯಾದರು. ಒಮ್ಮೆ ನಮ್ಮದು ಬೆಂಗಳೂರು ಅಂದ್ರು, ಇನ್ನೊಮ್ಮೆ ಚಿಕ್ಕಬಳ್ಳಾಪುರ ಅಂದರು. ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದರೆ, ಒಬ್ಬರು ಪೆಟ್ರೋಲ್ ಬಂಕ್ ಎಂದರೆ, ಇನ್ನೊಬ್ಬರು ಐಟಿ ಎಂದು ಉಸುರಿದರು. ಮೊದಲು ಫೊಟೋ ತೆಗೆಯಲು ಆಕ್ಷೇಪಿಸಿದ ಅವರು, ನಂತರ ‘ಮೀಡಿಯಾ’ ಎಂದಾಗ ಸುಮ್ಮನಾದರು.
ಕಳುವಾದ ಸಿಲಿಂಡರ್‌ಗಳು ಇನ್ನೂ ಪತ್ತೆ ಇಲ್ಲ!!
ಎರಡು ವಾರದ ಹಿಂದೆ ಡಾ.ವಿಜಯಲಕ್ಷ್ಮೀ ಅವರೇ ಉಸ್ತುವಾರಿ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಕೇರ್ ಸೆಂಟರ್‌ನ 10 ಆಕ್ಸಿಜನ್ ಸಿಲಿಂಡರ್‌ಗಳು ಕಳುವಾಗಿದ್ದವು. ಸಿಲಿಂಡರ್ ದಾಸ್ತಾನು ಮಳಿಗೆಯ ಬಾಗಿಲು ಒಡೆಯದೇ, ಕಿಟಕಿ, ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಕಳುವು ಮಾಡಲಾಗಿತ್ತು. ಸ್ವತಃ ಡಾ.ವಿಜಯಲಕ್ಷ್ಮೀ ಅವರೇ ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದರು. ವಿಪರ್ಯಾಸವೆಂದರೆ, ಸಿಲಿಂಡರ್ ದಾಸ್ತಾನು ಕೋಣೆಯ ಕೀಗಳಲ್ಲಿ ಒಂದು ಸ್ವತಃ RMO ಬಳಿ, ಇನ್ನೊಂದು ಸಹಾಯಕ ಮುನಿರಾಜು ಅವರ ಬಳಿ ಮಾತ್ರ ಇರುತ್ತದೆ ಎಂಬ ಮಾಹಿತಿ ಸಿಕೆನ್ಯೂಸ್ ನೌಗೆ ಸಿಕ್ಕಿದೆ.
ವಿಷಯ ಹೀಗಿದ್ದಾಗ, ಸಿಲಿಂಡರ್‌ಗಳನ್ನು ಕದ್ದವರು ಯಾರು? ಬೀಗವನ್ನೇ ಒಡೆಯದೇ ಸಿಲಿಂಡರ್‌ಗಳನ್ನು ಎಗರಿಸಿದವರು ಯಾರು? ಎಂಬ ಪ್ರಶ್ನೆ ಚಿಕ್ಕಬಳ್ಳಾಪುರದ ಜನರನ್ನು ಕಾಡುತ್ತಿದೆ. ಇನ್ನು, ಪೊಲೀಸರು ಕೂಡ ಈ ಬಗ್ಗೆ ತುಟಿಕ್-ಪಿಟಕ್ ಎನ್ನುತ್ತಿಲ್ಲ. ಹಿರಿಯ ವೈದ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕಡೆಯಿಂದಲೂ ಜನರಿಗೆ ಯಾವ ಮಾಹಿತಿಯೂ ಇಲ್ಲ.
ಸಂಬಂಧಿತ ಠಾಣೆಯಲ್ಲಿ ಕೇಳಿದರೆ, ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ ಎಂಬ ಸಿದ್ಧ ಉತ್ತರ ಸಿಗುತ್ತಿದೆ. ಮುಚ್ಚಿದ ಬಾಗಿಲು ಮುಚ್ಚಿದಂತೆಯೇ ಇದೆ. ಹಾಕಿದ ಕಿಟಕಿ ಹಾಕಿದಂತೆಯೇ ಇದೆ. ಆದರೆ, ಸಿಲಿಂಡರ್‌ಗಳು ಮಾತ್ರ ಕಳುವಾಗಿವೆ!! ಕಾಣದಂತೆ ಮಾಯವಾದ ಸಿಲಿಂಡರ್‌ಗಳ ಬಗ್ಗೆ ಜನರಿಗೆ ದಿನದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ.