ಧಾರ್ಮಿಕ ದತ್ತಿ ಆಯುಕ್ತೆಯಾಗಿ ರೋಹಿಣಿ ಸಿಂಧೂರಿ / ಆರ್‌ಡಿಪಿಆರ್ ಇ-ಗವರ್ನೆನ್ಸ್ ನಿರ್ದೇಶಕಿಯಾಗಿ ಶಿಲ್ಪಾ ನಾಗ್
ಮೈಸೂರು/ಬೆಂಗಳೂರು: ಜಿಲ್ಲೆಯಲ್ಲಿ ನಡೆದಿದ್ದ ಅತಿದೊಡ್ಡ ಭೂಹಗರಣ, ಕೋವಿಡ್ ಸಾವುಗಳ ಲೆಕ್ಕ, ಪಾಸಿಟಿವಿಟಿಯ ಗೊಂದಲ ಹಾಗೂ ಹದಿನಾರು ಕೋವಿಡ್ ಕೇರ್ ಸೆಂಟರ್‌ಗಳ ಸ್ಥಾಪನೆಯ ಬಗ್ಗೆ ಉಂಟಾಗಿದ್ದ ಅನುಮಾನಗಳ ನಡುವೆಯೇ ತಿಕ್ಕಾಟದ ನೆಪವೊಡ್ಡಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ರಾಜಕೀಯ ಹಿತಾಸಕ್ತಿಗಳನ್ನು ತೃಪ್ತಿಪಡಿಸಿದೆ.
ರೋಹಿಣಿ ಅವರ ವರ್ಗಾವಣೆ ವಿವಾದ ಆಗಬಹುದು ಎನ್ನುವ ಮುನ್ನೆಚ್ಚರಿಕೆಯೊಂದಿಗೆ ಅವರ ವಿರುದ್ಧ ಬಹಿರಂಗ ಸಮರ ಸಾರಿದ್ದ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನೂ ವರ್ಗಾವಣೆ ಮಾಡಲಾಗಿದೆ.
ಇಡೀ ದೇಶದ ಗಮನ ಸೆಳೆದಿದ್ದ ಈ ಐಎಎಸ್ ಅಧಿಕಾರಿಗಳ ಜಟಾಪಟಿ ಮತ್ತೂ ಅದರ ಹಿಂದಿನ ಸಂಗತಿಗಳನ್ನು ಹೊರಗೆಳೆಯುವ ಪ್ರಯತ್ನ ಮಾಡದ ಸರಕಾರ, ಕೇವಲ ಇಬ್ಬರಿಗೂ ವರ್ಗಾವಣೆ ಶಿಕ್ಷೆ ವಿಧಿಸಿ ಜಾಣ ನಡೆ ಅನುಸರಿಸಿದೆ.
ಇನ್ನು, ರೋಹಣಿ ಸಿಂಧೂರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಗೌತಮ್ ಬಗಾದಿ ಅವರನ್ನು ನೇಮಿಸಲಾಗಿದೆ.

ಹಾಗೆಯೇ ಶಿಲ್ಪಾನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಇ-ಗವರ್ನೆನ್ಸ್ ವಿಭಾಗದ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಶಿಲ್ಪಾ ಅವರಿದ್ದ ಮೈಸೂರು ಮೈಸೂರು ಪಾಲಿಕೆ ಆಯುಕ್ತರನ್ನಾಗಿ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ವರ್ಗ ಮಾಡಲಾಗಿದೆ.
ರಾಜೀನಾಮೆ ವಾಪಸ್ ಪಡೆದ ಶಿಲ್ಪಾನಾಗ್
ಇದೇ ವೇಳೆ ಶಿಲ್ಪಾನಾಗ್ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿರುಕುಳ ಆರೋಪ ಮಾಡಿ ಮೈಸೂರು ಪಾಲಿಕೆ ಆಯುಕ್ತೆ ಹುದ್ದೆ ಹಾಗೂ ಭಾತೀಯ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ನೀಡಿದ್ದರು.
ಇದೀಗ ರಾಜೀನಾಮೆ ಹಿಂದಕ್ಕೆ ಪಡೆದಿದ್ದು, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.
ಶುಕ್ರವಾರ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮೈಸೂರಿಗೆ ಆಗಮಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಅವರಿಂದ ಮಾಹಿತಿ ಪಡೆದಿದ್ದರು.
















