• About
  • Advertise
  • Careers
  • Contact
Wednesday, May 6, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ನಮ್ಮ ನಡುವೆ ನಡೆದಾಡಿದ ಗಾಂಧೀಜಿ ಇವರು: ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

P K Channakrishna by P K Channakrishna
June 27, 2021
in CKPLUS, STATE
Reading Time: 2 mins read
1
ನಮ್ಮ ನಡುವೆ ನಡೆದಾಡಿದ ಗಾಂಧೀಜಿ ಇವರು:   ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…
970
VIEWS
FacebookTwitterWhatsuplinkedinEmail

“ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗಬೇಕು. ಡೊನೇಷನ್ ಇಲ್ಲದ ವ್ಯವಸ್ಥೆ ಬರಬೇಕು ಎಂದು ಕನಸು ಕಂಡಿದ್ದ, ಅದಕ್ಕಾಗಿ ಜೀವಿತಾವಧಿಯುದ್ದಕ್ಕೂ ಅವಿರತವಾಗಿ ಶ್ರಮಿಸಿದ್ದ ವ್ಯಕ್ತಿಯೊಬ್ಬರು ಕ್ಯಾಪಿಟೇಷನ್ ಶಿಕ್ಷಣ ವ್ಯವಸ್ಥೆಯನ್ನೇ ಮೈವೆತ್ತ ಕರ್ನಾಟಕದಂಥ ರಾಜ್ಯದಲ್ಲಿ ಜೀವಿಸಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು..”


  • ಎಚ್‌ಎನ್‌, ಪ್ರಿನ್ಸಿಪಾಲರಾದ ಶ್ರೀ ಎನ್.ನಂಜುಂಡಪ್ಪ (ಎಡಕ್ಕೆ) ಬಲಕ್ಕೆ ನಾನು (ಬ್ಯಾಗು ಹಿಡಿದವ)

ಬೆಂಗಳೂರಿನ ಹೃದಯ ಮೆಜೆಸ್ಟಿಕ್‌ನಿಂದ ಸರಿಯಾಗಿ ನೂರಎರಡು ಕಿ.ಮೀ ದೂರದಲ್ಲಿರುವ ಬಾಗೇಪಲ್ಲಿ ಎಂಬ ನತದೃಷ್ಟ ಪಟ್ಟಣಕ್ಕೆ ‘ಭಾಗ್ಯನಗರ’ ಎಂಬ ಇನ್ನೊಂದು ಹೆಸರಿದೆ. ಹೆಸರಲ್ಲೇನಿದೆ ಭಾಗ್ಯ? ಇವತ್ತಿಗೂ ಭಾಗ್ಯವನ್ನೇ ಕಾಣದ ಇಲ್ಲಿನ ಜನರು ನೆಚ್ಚಿಕೊಂಡಿರುವುದು ಅನತಿದೂರದಲ್ಲಿ ನೆಲೆಸಿರುವ ಗಡಿದಂ ಶ್ರೀ ವೆಂಕಟೇಶ್ವರ ಸ್ವಾಮಿ ಅವರನ್ನು ಮತ್ತೂ ತಮ್ಮ ಬೆವರನ್ನು.

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಪರಗೋಡು-ಚಿತ್ರಾವತಿ ಅಣೆಕಟ್ಟೆ ದಾಟಿ ಎರಡುಮೂರು ನಿಮಿಷ ಕ್ರಮಿಸಿ ಬಸ್ಸಿನ ಕಿಟಕಿಯಿಂದ ಬಲಕ್ಕೆ ಇಣುಕಿದರೆ ದೂರದಲ್ಲಿ ಗಡಿದಂ ದೇಗುಲದ ರಾಜಗೋಪುರ ವಿರಾಜಮಾನವಾಗಿ ಕಾಣುತ್ತಿದೆ. ಆ ನೋಟವನ್ನು ಸ್ವಲ್ಪ ಮೊಟಕು ಮಾಡಿದರೆ ಕಲ್ಲುಬಂಡೆಗಳ ಗುಡ್ಡಂತೆ ಕಾಣುವ ಬೆಟ್ಟದ ಮುನ್ನೆಲೆಯಲ್ಲಿ ಮರಗಳ ದೊಡ್ಡ ಗುಂಪು ಗೋಚರವಾಗುತ್ತದೆ. ಆ ಹಸಿರುರಾಶಿ ನಡುವೆ ವಿಶಾಲವಾಗಿ ಮೈಚಾಚಿಕೊಂಡಿದೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು.

ಈ ಪರಿ ಹಸಿರು ಹೊದಿಕೆ ಹೊದ್ದುಕೊಂಡು ತಣ್ಣಗಿರುವ ಈ ಕಾಲೇಜು ನನ್ನ ಪಾಲಿಗೆ ಅಕ್ಷರಶಃ ಅಕ್ಷರಕಾಶಿಯೇ. ಮೂರು ವರ್ಷ ನಾನೂ ಆ ಕಾಶಿಯಲ್ಲೇ ಇದ್ದೆ. ದೇವರನ್ನೇ ನಂಬದ ವಿಚಾರವಾದಿ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯನವರು ಅದರ ನಿರ್ಮಾತೃ. ತಮ್ಮ ನರನಾಡಿಗಳಲ್ಲೂ ವಿಜ್ಞಾನವನ್ನೇ ತುಂಬಿಕೊಂಡು ವೈಚಾರಿಕತೆಯನ್ನೇ ಉಸಿರಾಡುತ್ತಿದ್ದ ಅವರು ವಿಶಾಲ ಹೃದಯದಿಂದ ಹಳ್ಳಿಮಕ್ಕಳ ಉದ್ಧಾರಕ್ಕಾಗಿ ಕಾಲೇಜನ್ನು ಕಟ್ಟಿಸಿದ್ದರು. ಬಡಮಕ್ಕಳು, ಅದರಲ್ಲೂ ರೈತಮಕ್ಕಳಿಗೇ ಒಳ್ಳೆಯ & ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಆಶಿಸಿ ಈ ಮಹತ್ಕಾರ್ಯ ಮಾಡಿದ್ದರು.

ಹೆಜ್ಜೆಗೆ ಒಂದುನೂರು ತೆಲುಗು ಶಬ್ದಗಳೇ ಕೇಳುವ ಬಾಗೇಪಲ್ಲಿಗೆ 1976ರಲ್ಲಿ ನ್ಯಾಷನಲ್ ಕಾಲೇಜು ಬಂದಿತು. ಎಚ್ಚೆನ್ ಎಂಬ ʼಶಿಕ್ಷಣಸಂತʼ ಅಲ್ಲಿಗೆ ಹೆಜ್ಜೆ ಇಟ್ಟಿದ್ದು ಆಗಲೇ. ಆ ಹೊತ್ತಿಗೆ ಕರ್ನಾಟಕದ ಶಿಕ್ಷಣ ವ್ಯವಸ್ಥೆ ದುಡ್ಡಿದ್ದವರ ಪಾಲಾಗುವ ಅನಿಷ್ಠ ಪರ್ವ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಮಾತ್ರವಲ್ಲ, ರಾಜ್ಯವ್ಯಾಪಿ ಜಾತಿಗೊಂದು ಶಿಕ್ಷಣ ಸಂಸ್ಥೆ ತಲೆ ಎತ್ತುತ್ತಿದ್ದ, ಡೊನೇಷನ್ ಹಾವಳಿಗೆ ಗಟ್ಟಿ ತಳಪಾಯ ಹಾಕುತ್ತಿದ್ದ ವೇಳೆಯಲ್ಲೇ ಎಚ್ಚೆನ್ ಅವರು ಕನ್ನಡಕ್ಕೆ ಹತ್ತಿರವಿದ್ದರೂ ಅದರ ಸೊಗಡಿನಿಂದ ಬಹುದೂರವಿದ್ದ ಬಾಗೇಪಲ್ಲಿಯಲ್ಲಿ ಕಾಲೇಜಿಗೆ ಅಡಿಗಲ್ಲು ಹಾಕಿಬಿಟ್ಟರು. ಅವರ ನಿರ್ಧಾರ ಕೇಳಿ ಮೂಗುಮುರಿದವರೆಷ್ಟೋ.. ಲೆಕ್ಕವಿಲ್ಲ. ಬೆಂಗಳೂರಿನಲ್ಲಿ ಬಿಟ್ಟು ನಮ್ಮೂರಲ್ಲಿ ಈ ಮನುಷ್ಯ ಏಕೆ ಕಾಲೇಜು ಮಾಡುತ್ತಿದ್ದಾರೆಂದು ಸ್ಥಳೀಯರೂ ಚಕಿತರಾಗಿ ಅವರನ್ನು “ಬಂಧುಗಳೇ ಇಲ್ಲದ ಭೈರಾಗಿ” ಎಂದು ಮೂದಲಿಸಿದ್ದರು.

ಆದರೆ, ಎಚ್ಚೆನ್ ಆಲೋಚನೆಯೇ ಬೇರೆಯಾಗಿತ್ತು. ಅನಕ್ಷರತೆ, ಬಡತನ, ಬರ ಮತ್ತು ತೆಲುಗು ಮೈವೆತ್ತಿದ್ದ ಆ ನೆಲಕ್ಕೆ ಈ ಕಾಲೇಜು ನಿಜಕ್ಕೂ ಒಂದು ಓಯೆಸಿಸ್. ’ಅ’ಭಾಗ್ಯನಗರದ ಆಸುಪಾಸಿನ ಹೆಣ್ಣುಮಕ್ಕಳಿಗೆ ನಿಜವಾಗಿಯೂ ಎಚ್ಚೆನ್ ಭಾಗ್ಯದ ಬಾಗಿಲನ್ನೇ ತೆರೆದರು. ಆಗ ಪಿಯುಸಿ ದಾಟಿ ಡಿಗ್ರಿ ಬೇಕಿದ್ದರೆ ೪೨ ಕಿ.ಮೀ ದೂರದ ಚಿಕ್ಕಬಳ್ಳಾಪುರ ಮುನಿಸಿಪಲ್ ಕಾಲೇಜಿಗೆ ಹೋಗಬೇಕಿತ್ತು. ಆಗ ಎಂತಹ ದುಃಸ್ಥಿತಿ ಇತ್ತೆಂದರೆ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಬಾಗೇಪಲ್ಲಿ ಹೆದ್ದಾರಿಯ ಹೆಬ್ಬಾಗಿಲು ಟಿಬಿ ಕ್ರಾಸ್ ದಾಟಿಸುವುದು ಕೂಡ ಕಷ್ಟವಿದ್ದ ಕಾಲವದು. ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳು ಹತ್ತಕ್ಕೆ ಇಲ್ಲವೇ ಪಿಯುಸಿ ಆದ ಕೂಡಲೇ ಹಸೆಮಣೆಗೆ ಸಿದ್ಧರಾಗಿಬಿಡುತ್ತಿದ್ದರು. “ನಮ್ಮ ಮಗಳದ್ದು ಪಿಯುಸಿ ಆಯಿತು, ಎಸ್ಸೆಸ್ಸೆಲ್ಸಿ ಪಾಸಾಯಿತು, ಇನ್ನೇನಿದ್ದರೂ ಈ ವರ್ಷ ಮದುವೆ” ಎಂದು ಅಪ್ಪ-ಅಮ್ಮ ಹೇಳುತ್ತಿದ್ದ ಸಮಯವದು. ಹುಡುಗರ ಕಥೆಯೂ ಹೆಚ್ಚೂಕಡಿಮೆ ಅಷ್ಟೇ.

ನಮ್ಮ ಎಚ್ಚೆನ್ ಇದನ್ನು ಬದಲಾಯಿಸಿದರು. ಬಾಗೇಪಲ್ಲಿ ಎಂಬ ಗಡಿಪಟ್ಟಣಕ್ಕೆ ಬರಲು ತಾಯಿ ಸರಸ್ವತಿಗೆ ಬಾಗಿಲು ತೆರೆದದ್ದು ಅವರೇ. ಸರ್ವಋತುವಿನಲ್ಲೂ ಒಣಗೇ ಇರುತ್ತಿದ್ದ ಚಿತ್ರಾವತಿ ನದಿ ದಂಡೆಯಲ್ಲಿ ʼಜ್ಞಾನಗಂಗೆʼಯನ್ನು ಅವರು ಹರಿಯುವಂತೆ ಮಾಡಿದ್ದು ಹೀಗೆ.

ಗೌರಿಬಿದನೂರಿನಲ್ಲೂ ಹೀಗೆ ಆಯಿತು. 1964ರಲ್ಲಿಯೇ ಅಲ್ಲೂ ನ್ಯಾಷನಲ್ ಕಾಲೇಜು ಸ್ಥಾಪಿಸಿ ಉಳ್ಳವರ ಮನೆಗಳ ಕೂಲಿಗಳಾಗುತ್ತಿದ್ದ ಹುಡುಗರ ಕೈಗೆ ಪೆನ್ನು-ಪುಸ್ತಕ ಕೊಟ್ಟರು ಎಚ್ಚೆನ್. ಡಿಗ್ರಿಯ ಉತ್ಕಟತೆ ಇದ್ದರೂ ಗತ್ಯಂತರವಿಲ್ಲದೆ ಮದುವೆಗೆ ಕೊರಳೊಡ್ಡುತ್ತಿದ್ದ ಯುವತಿಯರು ಕಾಲೇಜಿನ‌ ಲಾಬ್‌ಗಳಲ್ಲಿ ಪ್ರಯೋಗ ಮಾಡತೊಡಗಿದರು. ಗ್ರಾಮೀಣ ವಿದ್ಯಾರ್ಥಿಗಳಿಗೆ, ಅದರಲ್ಲೂ ಕನ್ನಡದ ಕಸುವೇ ಕಾಣದ ನೆಲದಲ್ಲಿ ಶಿಕ್ಷಣ ಕೈಂಕರ್ಯವನ್ನು ಯಶಸ್ವಿಯಾಗಿ ಶುರು ಮಾಡಿದ್ದರು ಅವರು. ಒಣಗಿ ಬೆಂಡಾಗಿ ಹೋಗಿದ್ದ ಪಿನಾಕಿನಿ ನದಿಯ ತಟದಲ್ಲಿ ಜ್ಞಾನವೃಕ್ಷಗಳು ಚಿಗುರೊಡೆತೊಡಗಿದ್ದು ಹೀಗೆ.

ಅವರೆಡೂ ಕಾಲೇಜುಗಳನ್ನೂ ಸ್ಥಾಪಿಸಿದಾಗ ಕೋಲಾರ ಜಿಲ್ಲೆಯೊಂದೇ ಇತ್ತು. ಆಗ ಗೌರಿಬಿದನೂರು, ಬಾಗೇಪಲ್ಲಿ ತಾಲೂಕುಗಳು ಕರ್ನಾಟಕದಲ್ಲೇ ಅತ್ಯಂತ ಹಿಂದುಳಿದ ಪ್ರದೇಶಗಳೆಂಬ ಕುಖ್ಯಾತಿಗೆ ಒಳಗಾಗಿದ್ದವು. ಆದರೂ ಎಚ್ಚೆನ್ ಅವರು ಇವೆರಡೂ ಪ್ರದೇಶಗಳಿಗೆ ಜ್ಞಾನಗಂಗೆಯನ್ನು ಹರಿಸಿ ಶೈಕ್ಷಣಿಕವಾಗಿ ಮರುಭೂಮಿಯಾಗಿದ್ದ ನೆಲದಲ್ಲಿ ಜ್ಞಾನಸೆಲೆಯನ್ನು ಉಕ್ಕಿಸಿದ್ದರು. ಓದಿನ, ಅಪರಿಮಿ ಜ್ಞಾನದ ಹಸಿವಿನಿಂದ ಹೊಸೂರು ಎಂಬ ಹಳ್ಳಿಯಿಂದ ಬೆಂಗಳೂರಿಗೆ 85 ಕಿ.ಮೀ ನಡೆದಿದ್ದ ಅವರು ಅದಕ್ಕೆ ಪ್ರತಿಯಾಗಿ ನಮ್ಮೆರಡು ತಾಲೂಕುಗಳಿಗೆ ಎರಡು ಉತ್ಕೃಷ್ಟ ಕಾಲೇಜುಗಳನ್ನು ಕೊಟ್ಟು ಅಜರಾಮರರಾದರು.


ಇನ್ನು ನಾನು. ಗುಡಿಬಂಡೆಯಲ್ಲಿ ಪಿಯುಸಿ ಮುಗಿಸಿ ಡಿಗ್ರಿಗೆ ಯಾವ ಕಾಲೇಜು ಸೇರಬೇಕೆಂಬ ಪರಮ ಗೊಂದಲದಲ್ಲಿದ್ದ ಸಂದರ್ಭವದು. ಚಿಕ್ಕಬಳ್ಳಾಪುರದ ಮುನಿಸಿಪಲ್ ಕಾಲೇಜಿಗೆ ಸೇರುವಂತೆ ಕೆಲ ಗೆಳೆಯರು ಹೇಳಿದ್ದರು. ಅದೇ ಹೊತ್ತಿಗೇ ನಮ್ಮ ಗುಡಿಬಂಡೆಯಲ್ಲಿ ಎಚ್ಚೆನ್ ಹೆಸರು ಜನಜನಿತವಾಗಿತ್ತು. ನನ್ನ ಜತೆಯಲ್ಲೇ 10ನೇ ತರಗತಿ ಓದಿದ್ದ ಎಚ್.ನರಸಿಂಹಯ್ಯ ಎಂಬ ಗೆಳೆಯನ ಮೂಲಕ ಎಚ್ಚೆನ್‌ ಅವರ ಹೆಸರು ನನಗೆ ಗೊತ್ತಾಯಿತು.

ಹೀಗೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಸೇರಿದ ನನಗೆ ಅನೇಕ ಸಲ ಎಚ್ಚೆನ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಪ್ರಥಮ ಪದವಿಯಲ್ಲಿದ್ದಾಗಲೇ ನನಗೆ ಅವರ ದರ್ಶನವಾಯಿತು. ಆಮೇಲೆ ವರ್ಷಕ್ಕೆರಡು ಅಥವಾ ಮೂರು ಬಾರಿಯಾದರೂ ಅವರನ್ನು ನೋಡುವ ಭಾಗ್ಯವಿರುತ್ತಿತ್ತು. ಮುಖ್ಯವಾಗಿ ಎನ್ನೆಸ್ಸೆಸ್ ಕ್ಯಾಂಪಿನ ಸಮಾರೋಪಕ್ಕೆ ಅವರು ಬರುವುದು ತಪ್ಪುತ್ತಿರಲಿಲ್ಲ. ಇದಾದ ಮೇಲೆ ಬೆಂಗಳೂರಿಗೆ ಬಂದಾಗ ಬಸವನಗುಡಿ ನ್ಯಾಷನಲ್ ಕಾಲೇಜು ಹಾಸ್ಟೆಲ್‌ನಲ್ಲಿ ಅವರನ್ನು ಭೇಟಿಯಾಗಿದ್ದೆ. ಒಂದು ದಿನ ಕಲ್ಲುಪ್ಪು ಬೆರೆಸಿದ್ದ ಬಿಸಿನೀರಿನಲ್ಲಿ ಕಾಲಿಟ್ಟುಕೊಂಡು ಮರದ ಕುರ್ಚಿ ಮೇಲೆ ಕೂತಿದ್ದ ಅವರನ್ನು ನೋಡಿದಾಗ ಮಾತು ಹೊರಡದೇ ತಡವರಿಸಿದ್ದೆ. ‘ಕಾಲು ನೋವು ಕಣಪ್ಪಾ, ಉಪ್ಪುನೀರು ಬಿಸಿ ಒಳ್ಳೆಯದು’ ಎಂದು ಅವರೇ ಹೇಳಿದ್ದರು. ತಿನ್ನಲೊಂದು ಹಣ್ಣು ಕೊಟ್ಟರು. ಅದಾದ ಮೇಲೆ ಬೆಂಗಳೂರಿಗೆ ಬಂದಾಗಲೆಲ್ಲ ನನ್ನ ಬಸವನಗುಡಿ ಯಾತ್ರೆ ತಪ್ಪುತ್ತಿರಲಿಲ್ಲ. ಆಗೆಲ್ಲ ಎಚ್ಚೆನ್ ಭೇಟಿ ಆಗದಿದ್ದರೆ ಬಸವನಗುಡಿ ಕಾಲೇಜನ್ನೇ ಕಣ್ತುಂಬಿಕೊಂಡು ಊರಿಗೆ ಮರಳುತ್ತಿದ್ದೆ.


ಪತ್ರಿಕೋದ್ಯಮಕ್ಕೆ ಬಂದ ಮೇಲೆ ಅವರನ್ನು ನಿರಂತರವಾಗಿ ಭೇಟಿಯಾಗುವುದು, ಅವರ ಭಾಷಣಗಳನ್ನು ವರದಿ ಮಾಡುವುದು ಶುರುವಾಯಿತು. ಆ ಲಗಾಯ್ತಿನಿಂದ ನನಗೆ ಅವರ ಅರಿವು ಇನ್ನೊಂದು ಮಜಲು ಮುಟ್ಟಿತು. ಎಚ್.ಡಿ. ದೇವೇಗೌಡರ ಕ್ಯಾಬಿನೇಟ್‌ನಲ್ಲಿ ಸಚಿವರಾಗಿದ್ದ ಎಂ.ಪಿ. ಪ್ರಕಾಶ್‌ರನ್ನು ಒಮ್ಮೆ ಎಚ್ಚೆನ್ ಅವರು ಹೊಸೂರು ಶಾಲೆಗೆ ಭಾಷಣಕಾರರನ್ನಾಗಿ ಕರೆತಂದಿದ್ದರು. ನಾನು ಪತ್ರಕರ್ತನಾಗಿ ಅವರ ಭಾಷಣವನ್ನು ಮೊದಲು ವರದಿ ಮಾಡಿದ್ದು ಅದೇ ಮೊದಲು. ಚಿಕ್ಕಬಳ್ಳಾಪುರದ ವಾರ್ತಾಧಿಕಾರಿ ಸಿ.ಎಂ.ರಂಗಾರೆಡ್ಡಿ ಸಾರಥ್ಯದಲ್ಲಿ ಹೊಸೂರಿಗೆ ಚಿಕ್ಕಬಳ್ಳಾಪುರ ಪತ್ರಕರ್ತರ ಸವಾರಿ ಹೋಗಿತ್ತು. ಹಿರಿಯರಾದ ಭವಾನಿ ಲಕ್ಷ್ಮೀನಾರಾಯಣ ಮತ್ತವರ ಕ್ಯಾಮೆರಾ ಹಾಗೂ ವಯಸ್ಸಿನಲ್ಲಿ ಕೊಂಚ ಹಿರಿಯರಾದ ʼಸಂಯುಕ್ತ ಕರ್ನಾಟಕʼ ವರದಿಗಾರ ಜಯರಾಂ ಜತೆಯಲ್ಲಿದ್ದರು.

ಮಾಮೂಲಿಯಾಗಿ ಸಚಿವರು ಬಂದರೆ ಅವರ ಭಾಷಣವನ್ನೇ ಸುದ್ದಿ ಮಾಡುತ್ತಿದ್ದ ದಿನಗಳವು. ನನಗೂ ಅದೇ ಸರಿ ಅಂತ ನಂಬಿಕೆ. ಆದರೆ, ಕಾರ್ಯಕ್ರಮ ಮುಗಿಸಿ ಚಿಕ್ಕಬಳ್ಳಾಪುರಕ್ಕೆ ವಾಪಸ್ ಬಂದು ಸುದ್ದಿ ಬರೆದು ಮುಗಿಸಿದ ಮೇಲೆ ಎಚ್ಚೆನ್ ಹೇಳಿದ್ದೇ ʼಇಂಟ್ರೋʼ ಆಗಿ ದೇಶಾವರಿಯಾಗಿ ಭಾಷಣ ಮಾಡಿದ ಎಂ.ಪಿ.ಪ್ರಕಾಶ್ ಅವರ ಮಾತುಗಳೆಲ್ಲ ಸಬ್ ಹೆಡ್ಡಿಗೆ ಬಂದಿದ್ದವು. “ಹಳ್ಳಿ ಮಕ್ಕಳು ಓದಬೇಕು, ಯಾಕೆ?” ಎಂದು ಕಾರಣಗಳನ್ನು ಹೇಳುತ್ತಲೇ ಹೊಸೂರು ನ್ಯಾಷನಲ್‌ ಶಾಲೆ ಕಥೆಯನ್ನು ಹೇಳಿದ್ದರು ಎಚ್ಚೆನ್.‌ ನನ್ನ ಮೇಲೆ ಅಚ್ಚಳಿಯದೇ ಬಿದ್ದ ಮುದ್ರೆ ಅದು.

ಮತ್ತೊಂದು ಪ್ರಸಂಗ. ಆವತ್ತೊಂದು ದಿನ ನನಗೆ ಬೆಳಗ್ಗೆಯೇ ಮುಖ್ಯಮಂತ್ರಿ ನಿವಾಸಕ್ಕೆ ಅಸೈನ್‌ಮೆಂಟಿತ್ತು. ʼಸಂಯುಕ್ತ ಕರ್ನಾಟಕʼ ಪತ್ರಿಕೆಯ ಮುಖ್ಯ ವರದಿಗಾರ ಯಗಟಿ ಮೋಹನ್ ನನಗೆ ಮುಖ್ಯಮಂತ್ರಿಗಳ ಆಧಿಕೃತ ನಿವಾಸ ಮತ್ತು ಕಚೇರಿ ʼಅನುಗ್ರಹʼ, ʼಕೃಷ್ಣಾʼಕ್ಕೆ ಕಳಿಸಿದ್ದರು. ನಾನು ಬೆಳಗ್ಗೆ ಎಂಟೂವರೆಗೇ ಅನುಗ್ರಹದಲ್ಲಿದ್ದೆ. ಮುಖ್ಯಮಂತ್ರಿಗಳ ಫೋಟೊಗ್ರಾಫರ್ ನಟರಾಜ್ ಅವರು ಗಡಿಬಿಡಿಯಿಂದ ʼಅನುಗ್ರಹʼದ ಗೇಟಿಗೆ ಓಡಿಬಂದರು. “ಯಾಕೆ? ಯಾರು ಬರ್ತಾರೆ ಸರ್” ಅಂತ ಕೇಳಿದೆ. ಯಾರೋ ಹಿರಿಯರು, ಗಾಂಧೀವಾದಿಗಳು ಬರ್ತಾರಂತೆ ಅಂದರು ಅವರು. ಕೆಲ ಕ್ಷಣಗಳಲ್ಲೇ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೂ ʼಅನುಗ್ರಹʼದ ಗೇಟಿಗೆ ಬಂದು ನಿಂತರು. ಆಗ ಅಂಬಾಸಿಡರ್ ಕಾರಿನಲ್ಲಿ ಬಂದು ಇಳಿದವರು ನಮ್ಮ ಎಚ್ಚೆನ್. ಬಾಗೇಪಲ್ಲಿ ನ್ಯಾಷನಲ್ ಕಾಲೇಜು ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಅವರು ಬಂದಿದ್ದರು. ಸುಮಾರು ಹತ್ತದಿನೈದು ನಿಮಿಷಗಳ ಮಾತುಕತೆಯ ನಂತರ ಕೃಷ್ಣ ಅವರು ಗೇಟಿನವರೆಗೂ ಬಂದು ಎಚ್ಚೆನ್ ಅವರನ್ನು ಬೀಳ್ಕೊಟ್ಟರು. ನಾನು ಅವರಿಗೆ ನಮಸ್ಕಾರ ಹಾಕಿ, “ಸರ್, ನನ್ನ ಹೆಸರು ಚನ್ನಕೃಷ್ಣ, ಬಾಗೇಪಲ್ಲಿ ನ್ಯಾಷನಲ್ ಕಾಲೇಜು ವಿದ್ಯಾರ್ಥಿ” ಎಂದೆ. ಅವರಿಗೆ ಬಹಳ ಸಂತೋಷವಾಯಿತು. ನನ್ನ ಬೆನ್ನುತಟ್ಟಿದರು. ಪಕ್ಕದಲ್ಲೇ ಇದ್ದ ಕೃಷ್ಣ ಅವರು ನನ್ನಡೆ ನೋಡಿ ನಗೆಬೀರಿ, “ನೋಡಿ, ನಿಮ್ಮ ಶಿಷ್ಯರೂ ಇಲ್ಲೂ ಇದ್ದಾರೆ” ಎಂದರು. ನನ್ನ ಹೆಮ್ಮೆ, ಆನಂದಕ್ಕೆ ಪಾರವೇ ಇಲ್ಲ.

ಎಚ್ಚೆನ್ ಎಂದರೆ ಅಷ್ಟು ಎತ್ತರ. ಅವರ ಸರಳತೆ, ಪ್ರಾಮಾಣಿಕತೆ, ಪ್ರಖರ ವಿಚಾರ, ನಂಬಿದ ಗಾಂಧೀವಾದ, ತೊಟ್ಟ ಖಾದಿ, ಆಡಿದ ಮಾತು… ಎಲ್ಲವನ್ನೂ ತಮ್ಮ ಕೊನೆಕ್ಷಣದವರೆಗೂ ಜೀವಿಸಿ ಬಿಟ್ಟುಹೋಗಿದ್ದಾರೆ. ಕಾಲೇಜಿನಲ್ಲಿದ್ದಷ್ಟೂ ದಿನ ಪಾಠ ಮಾಡದಿದ್ದರೂ ನಮಗೆ ಅವರು ಗುರುವೇ ಆಗಿದ್ದರು. ನಮಗೆ ಬೋಧಿಸುತ್ತಿದ್ದ ಎನ್ನೆನ್, ಎಚ್ಚಾರ್ಕೆ, ನಿಂಗಪ್ಪ, ರಾಜು, ಎಲ್ಲಾರ‍್ಕೆ, ಆರ‍್ಟಿವಿ ಮತ್ತೂ ಕಲಿಸದಿದ್ದರೂ ಜೀವನದ ಪಾಠ ಹೇಳಿಕೊಟ್ಟ ಡಿಎಸ್, ಬಿಪಿವಿ, ಕೆಟಿವಿ, ಸಿದ್ದಪ್ಪ ಅವರೆಲ್ಲರಲ್ಲೂ ನಾನು ಕಂಡಿದ್ದು ಎಚ್ಚೆನ್ ಎಂಬ ಸ್ಫೂರ್ತಿಯ ಸೆಲೆಯನ್ನೆ.

  • ನಾನು & ನನ್ನ ಪುತ್ರಿ ಲಹರಿ.

2020ರ ಜೂನ್ 6ರಂದು ಎಚ್ಚೆನ್ ಅವರ ಜನ್ಮಶಮಾನೋತ್ಸವವಿತ್ತು. ಆವತ್ತೇ ನನಗೆ ಇದೆಲ್ಲವನ್ನು ಬರೆಯಲಾಗದ್ದಕ್ಕೆ ವಿಷಾದವಿದೆ. ಕೆಲ ತಿಂಗಳ ಹಿಂದೆ ನನ್ನ ಹಿರಿಯ ಮಗಳ ಜತೆ ಬಸವನಗುಡಿ ಕಾಲೇಜಿಗೆ ಹೋಗಿದ್ದೆ. ನನ್ನ ಎಕಾಮಿಕ್ಸ್ ಗುರುವರ್ಯರಾದ ಎಚ್ಚಾರ‍್ಕೆ (ಎಚ್.ಆರ್.ಕೃಷ್ಣಮೂರ್ತಿ) ಡಿಗ್ರಿ ಕಾಲೇಜಿನ ಪ್ರಾಂಶುಪಾಲರ ಕುರ್ಚಿಯಲ್ಲಿದ್ದರು. ನನ್ನ ಕಂಗಳು ತುಂಬಿಬಂದಿದ್ದವು. ಗುರುವಲ್ಲದ ಗೆಳೆಯ ಪ್ರಕಾಶ್, ಬಾಗೇಪಲ್ಲಿಯಿಂದ ಬಸವನಗುಡಿಗೆ ಶಿಫ್ಟ್ ಆಗಿದ್ದರು. ಎಚ್ಚೆನ್ ಕೋಣೆಯನ್ನು ತೋರಿಸಿದರು. ಅಲ್ಲಿ ನಿಲ್ಲಿಸಿ ನಮ್ಮಿಬ್ಬರ ಫೋಟೋ ತೆಗೆದರು. ಎಚ್ಚೆನ್ ಮಲಗಿದ್ದ ಕಾಟ್, ಹಾಸಿಗೆ, ದಿಂಬು, ಮಿಕ್ಸಿ, ನೀರಿನ ಫಿಲ್ಟರ್, ಗ್ಲಾಸು ಜತೆಗೆ ಅವರು ಧರಿಸಿದ್ದ ಉಡುಪುಗಳು ಅಲ್ಲೇ ಇವೆ, ಜತನವಾಗಿ.. ಬಹು ಜೋಪಾನವಾಗಿ. ಜತೆಗೆ ಅವರು ಬಿಟ್ಟುಹೋಗಿರುವ ಸ್ಮೃತಿಗಳು ಮತ್ತು ಮೌಲ್ಯಗಳು ಕೂಡ.


ಗಾಂಧೀಜಿ ಅವರ ಬಗ್ಗೆ ಅಲ್ಬರ್ಟ್ ಐನ್‌ಸ್ಟಿನ್ ಹೀಗೆ ಹೇಳಿದ್ದರು..
“ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿಯೊಬ್ಬರು ಈ ಭೂಮಿಯ ಮೇಲೆ ನಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು”.

ಇದೇ ಮಾತನ್ನು ಎಚ್ಚೆನ್ ಅವರಿಗೂ ಅನ್ವಯಿಸಿ ಹೀಗೆ ಹೇಳಬಹುದು..
“ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗಬೇಕು. ಡೊನೇಷನ್ ಇಲ್ಲದ ವ್ಯವಸ್ಥೆ ಬರಬೇಕು ಎಂದು ಕನಸು ಕಂಡಿದ್ದ, ಅದಕ್ಕಾಗಿ ಜೀವಿತಾವಧಿಯುದ್ದಕ್ಕೂ ಅವಿರತವಾಗಿ ಶ್ರಮಿಸಿದ್ದ ವ್ಯಕ್ತಿಯೊಬ್ಬರು ಕ್ಯಾಪಿಟೇಷನ್ ಶಿಕ್ಷಣ ವ್ಯವಸ್ಥೆಯನ್ನೇ ಮೈವೆತ್ತ ಕರ್ನಾಟಕದಂಥ ರಾಜ್ಯದಲ್ಲಿ ಜೀವಿಸಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು..”

ಉತ್ಪ್ರೇಕ್ಷೆ ಏನಲ್ಲ, ಇದು ಸತ್ಯವೂ ಹೌದು. ಶಿಕ್ಷಣ ಇವತ್ತು ಉಳ್ಳವರ ಜಹಗೀರು.

***

Tags: Bengalurudr h narasimhaiahdr h narasimhaiah 101 birth anniversarykarnatakanational college
P K Channakrishna

P K Channakrishna

www.cknewsnow.com ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ. ಪ್ರಿಂಟ್‌ ಮೀಡಿಯಾದಲ್ಲಿ 3 ದಶಕದಷ್ಟು ಸುದೀರ್ಘ ಅನುಭವ. ರಾಜಕೀಯ, ಕೃಷಿ, ಸಿನಿಮಾ, ಸಂಗೀತ, ಫೊಟೋಗ್ರಫಿ, ಪ್ರವಾಸ, ಸೋಶಿಯಲ್‌ ಮೀಡಿಯಾದಲ್ಲಿ ಆಸಕ್ತಿ. ಓದು ಅಚ್ಚುಮೆಚ್ಚು.

Related Posts

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

by cknewsnow desk
June 2, 2025
0

ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸುವಂತೆ ಕೇಂದ್ರ ಸಚಿವರು, ಸಂಸದರಿಗೆ ಡಿಸಿಎಂ ಡಿಕೆಶಿ ಮನವಿ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

Next Post
ಮುಂಗಾರಿಗೆ ಮುನ್ನವೇ ಉತ್ತಮ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ, ಬಿತ್ತನೆ ಬೀಜ-ರಸಗೊಬ್ಬರಕ್ಕಿಲ್ಲ ಕೊರತೆ

ಮುಂಗಾರಿಗೆ ಮುನ್ನವೇ ಉತ್ತಮ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ, ಬಿತ್ತನೆ ಬೀಜ-ರಸಗೊಬ್ಬರಕ್ಕಿಲ್ಲ ಕೊರತೆ

Comments 1

  1. Pavan kalyan D.G says:
    5 years ago

    ಭಾರತದಲ್ಲಿ ಶತಕೋಟಿ ಶಿಷ್ಯರನ್ನು ಹೊಂದಿದ ನಮ್ಮ ಎಚ್ಚೆನ್ ರವರ ಬಗ್ಗೆ ನಿಮ್ಮ ಅನುಭಾವುಗಳ ಜೊತೆಗೆ ನಮ್ಮನ್ನು ಭಾವುಕರಾಗಿ ಮಾಡುವ ಲೇಖನವಾಗಿದೆ. ಇವರಿಗೆ ಶಿಕ್ಷಣ ಬಗ್ಗೆ ಇರುವ ಓಲವು …. ಇವೆಲ್ಲಾ ವನ್ನು ನಿಮ್ಮ ಲೇಖನದಲ್ಲಿ ಸೂಕ್ಷವಾಗಿ ಪ್ರತಿ ವಾಕ್ಯವನ್ನು ಓದಿದೇ ಸರ್.

    Reply

Leave a Reply Cancel reply

Your email address will not be published. Required fields are marked *

Recommended

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಮೈಸೂರು ಯುವಕ

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಮೈಸೂರು ಯುವಕ

5 years ago
ಗುಡಿಬಂಡೆಗೆ ಬರಲಿದ್ದಾರೆ ಕೃಷ್ಣಪಟ್ಟಣಂ ಔಷಧ ಖ್ಯಾತಿಯ ಆಂಧ್ರದ ಆರ್ಯುವೇದ ವೈದ್ಯ ಪಂಡಿತ್ ಆನಂದಯ್ಯ

ಗುಡಿಬಂಡೆಗೆ ಬರಲಿದ್ದಾರೆ ಕೃಷ್ಣಪಟ್ಟಣಂ ಔಷಧ ಖ್ಯಾತಿಯ ಆಂಧ್ರದ ಆರ್ಯುವೇದ ವೈದ್ಯ ಪಂಡಿತ್ ಆನಂದಯ್ಯ

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ