ರೈತರ ಬೇಡಿಕೆಗೆ ಅನುಗುಣವಾಗಿ ಶೇಂಗಾ, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಮುಸುಕಿನ ಜೋಳ, ಸಜ್ಜೆ, ಹೆಸರು, ತೊಗರಿ, ಇನ್ನೂ ಮುಂತಾದ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ.
BY Ra Na Gopala Reddy Bagepalli
ಬಾಗೇಪಲ್ಲಿ: ಸತತ ಐದು ವರ್ಷಗಳಿಂದ ಅನಾವೃಷ್ಟಿಯಿಂದ ರೈತಾಪಿ ಜನರು ಅಕ್ಷರಶಃ ನಲುಗಿ ಹೋಗಿದ್ದರು. ಈಗ ಮೂರು ದಿನಗಳಿಂದ ಮಳೆ ಬೀಳುತ್ತಿದ್ದು, ಮುಂಗಾರು ಪೂರ್ವದಲ್ಲೇ ಮಳೆ ಚುರುಕುಗೊಂಡಿದೆ. ಹೊಸ ಭರವಸೆಯೊಂದಿಗೆ ಅನ್ನಧಾತರು ಮತ್ತೆ ಜಮೀನುಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಬಿತ್ತನೆಗೆ ಸಜ್ಜುಗೊಳ್ಳುತ್ತಿದ್ದಾರೆ.
ಈ ನಡುವೆ ಆವರಿಸಿರುವ ಕೊರೊನಾ ಆತಂಕದ ಮಧ್ಯೆಯೇ ರೈತರು ಕೃಷಿ ಚಟುಕವಟಿಕೆಗಳಿಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ, ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ತಾಲೂಕಿನಲ್ಲಿ ಮಳೆ ಚುರುಕೊಂಡಿದ್ದು ಕೃಷಿಕರಲ್ಲಿ ಹೊಸ ಚೈತನ್ಯ ಮೂಡಿಸಿದೆ.
ತಾಲೂಕು ಮುಂಗಾರಿಗೆ ಆಗಬಹುದಾದ ಬಿತ್ತನೆ ಪ್ರಮಾಣಕ್ಕೆ ತಕ್ಕಂತೆ ಬಿತ್ತನೆ ಬೀಜ
ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಶೇಂಗಾ, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಮುಸುಕಿನ ಜೋಳ, ಸಜ್ಜೆ, ಹೆಸರು, ತೊಗರಿ, ಇನ್ನೂ ಮುಂತಾದ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ.

ತಾಲೂಕಿನ ಮುಂದಿನ ಮಳೆ ಪ್ರಮಾಣ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಮತ್ತಷ್ಟು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗುವುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕೆಂದು ಬಾಗೇಪಲ್ಲಿ ತಾಲೂಕು ಕೃಷಿ ನಿರ್ದೇಶಕರಾದ ಕೆ.ಸಿ.ಮಂಜುನಾಥ ಮನವಿ ಮಾಡಿದ್ದಾರೆ.
ರೈತ ಸಂಪರ್ಕ ಕೇಂದ್ರಗಳು
ರೈತರ ಅನುಕೂಲಕ್ಕಾಗಿ ತಾಲೂಕಿನಾದ್ಯಂತ 6 ಕಡೆ ರೈತ ಸಂಪರ್ಕ ವಿತರಣಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಬಾಗೇಪಲ್ಲಿ ಪಟ್ಟಣದ ಬಾಗೇಪಲ್ಲಿ ಕಸಬಾ, ಗೂಳೂರು, ಪಾತಪಾಳ್ಯ, ಮಿಟ್ಟೇಮರಿ, ಚೇಳೂರು ಚಾಕವೇಲು ಗ್ರಾಮದಲ್ಲಿ ಬಿತ್ತನೆ ಬೀಜಗಳ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕೆ.ಸಿ.ಮಂಜುನಾಥ ತಿಳಿಸಿದ್ದಾರೆ.

















