Lead photo courtesy: ps express
ವಿನಮ್ರತೆ, ಸರಳತೆ, ಸಜ್ಜನಿಕೆಯ ಮೇರು / ನಟನೆ ಅಷ್ಟೇ ಎತ್ತರ
ಬೆಂಗಳೂರು: ಶನಿವಾರ ತಡರಾತ್ರಿಯಿಂದ ವೆಂಟಿಲೇಟರ್ ಮೇಲೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕನ್ನಡದ ʼಸಹಜ ನಟʼ ಸಂಚಾರಿ ವಿಜಯ್ ಹೊಸ ದಿಗಂತದತ್ತ ತಮ್ಮ ಸಂಚಾರ ಶುರು ಮಾಡಿದ್ದಾರೆ..
ಕೊನೆ ಕ್ಷಣದಲ್ಲೇನಾದರೂ ದೇವರ ಕರುಣೆ, ಅಭಿಮಾನಿಗಳ ಪ್ರಾರ್ಥನೆ ಹಾಗೂ ವೈದ್ಯರ ಪರಿಶ್ರಮದಿಂದ ಏನಾದರೂ ಪವಾಡ ನಡೆದು ವಿಜಯ್ ಅವರ ಮಿದುಳು ಕೆಲಸ ಮಾಡಲು ಆರಂಭಿಸುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸಹಸ್ರಾರು ಅಭಿಮಾನಿಗಳ ಆಶಯ, ಪ್ರಾರ್ಥನೆ ಫಲಿಸಲಿಲ್ಲ. ಅವರು ಉಳಿದು ಹೊರಬರುತ್ತಾರೆಂಬ ನಿರೀಕ್ಷೆಯೂ ಈಡೇರಲಿಲ್ಲ.
ಈ ವರದಿ ಬರೆಯುವುದಕ್ಕೆ ಸ್ವಲ್ಪ ಹೊತ್ತಿಗೆ ಮುನ್ನ ಮತ್ತೊಮ್ಮೆ ಪರೀಕ್ಷೆ ನಡೆಸಿದ ವೈದ್ಯರ ತಂಡವು ಮಿದುಳು ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬ ಸಂಗತಿಯನ್ನು ಖಚಿತಪಡಿಸಿದೆ. ಹೀಗಾಗಿ ಅವರ ಕುಟುಂಬದ ಆಶಯದಂತೆ ಸಂಚಾರಿ ವಿಜಯ್ ಅವರ ಅಂಗಾಂಗ ದಾನಕ್ಕೆ ಎಲ್ಲವೂ ಸಿದ್ಧವಾಗಿದೆ. ರಾಜ್ಯ ಸರಕಾರದ ʼಜೀವನ ಸಾರ್ಥಕತೆ ತಂಡʼ ಅಂಗಾಗಗಳನ್ನು ತೆಗೆಯುವ ಕೆಲಸವನ್ನು ಆರಂಭಿಸಿದೆ. ವಿಜಯ್ ಅವರು ಅಗಲಿದ ನಂತರವೂ ಅವರ ಅಂಗಾಂಗಳು ಅನ್ಯರ ಬಾಳಿಗೆ ಬೆಳಕು ತುಂಬಲಿವೆ.
ಆಸ್ಪತ್ರೆಯೊಳಗೆ ವೈದ್ಯರು ಅಂಗಾಂಗಳನ್ನು ತೆಗೆಯುತ್ತಿದ್ದರೆ, ಹೊರಗೆ ಮಾಧ್ಯಮಗಳ ನೂರಾರು ಕ್ಯಾಮೆರಾಗಳು ಉಸಿರು ಬಿಗಿಹಿಡಿದು ಕೂತಿವೆ. ವಿಜಯ್ ಉಸಿರು ಚೆಲ್ಲದೆ, ಆ ವೆಂಟಿಲೇಟರ್ ಮೇಲೆ ಒಮ್ಮೆಯಾದರೂ ಅಲುಗಾಡಬಾರದೆ? ಹಾಗೆ ಅಲುಗಾಡಿದ್ದನ್ನು ವೈದ್ಯರು ಬಂದು ಹೇಳಬಾರದೆ? ಎಂದು ಆಶಿಸಿ ಕಾಯುತ್ತಿವೆ.
ಬೆಳಗ್ಗೆ ದೇಹ ಹಸ್ತಾಂತರ
ಮಂಗಳವಾರ ಬೆಳಗ್ಗೆ ಹೊತ್ತಿಗೆ ವಿಜಯ್ ಅವರ ಪಾರ್ಥೀವ ಶರೀರವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗುವುದು. ಬಳಿಕ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿನಮ್ರತೆ, ಸರಳತೆ, ಸಜ್ಜನಿಕೆಯ ಮೇರು
ಕನ್ನಡದ ಹೊಸ ತಲೆಮಾರಿನ ನಾಯಕ ನಟರ ಪೈಕಿ ಬಹಳ ವಿಭಿನ್ನರಾಗಿದ್ದ ಸಂಚಾರಿ ವಿಜಯ್ ಅವರು ವಿನಮ್ರತೆ, ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ. ಸಂಕೋಚ ಸ್ವಭಾವದ ಅವರು ನಟನೆಗೆ ಬಂದರೆ ವಿರಾಟ್ ಸ್ವರೂಪವಾಗುತ್ತಿದ್ದರು.
ಅಪ್ಪಟ ರಂಗ ಕಲಾವಿದ, ನರನಾಡಿಗಳಲ್ಲೂ ನಟನೆಯನ್ನೇ ಉಸಿರಾಡುತ್ತಿದ್ದ ಪರಿ ಸಂಚಾರಿ ವಿಜಯ್‌ಗೆ ಮಾತ್ರ ಸಿದ್ದಿಸಿದ್ದು. ಬೆಳ್ಳಿತೆರೆಯ ಮೇಲೆ ಅವರು ಅಬ್ಬರಿಸಿದವರಲ್ಲ, ಬದಲಿಗೆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕನ ಮುಂದೆ ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದರು.
ಲಿಂಗದೇವರು ನಿರ್ದೇಶನದ ʼನಾನು ಅವನಲ್ಲ-ಅವಳುʼ ಸಿನಿಮಾ ಸಂಚಾರಿ ವಿಜಯ್ ಅವರ ನಟನೆಯ ಪರಾಕಾಷ್ಠೆ. ನಂತರ ಬಂದ ʼನಾತಿಚರಾಮಿʼ ಅವರ ನಟನೆಯ ಅಪ್ಪಟ್ಟ ಅರಬ್ಬಿ ಸಮುದ್ರ. ಬಳಿಕ ʼಕೃಷ್ಣ ತುಳಸಿʼ ಆ ತುಳಸೀದಳದಷ್ಟೇ ಪರಿಶುದ್ಧತೆಯ ತಾದ್ಯಾತ್ಮ. ಇಂಥ ವಿಜಯ್ ಈಗ ತಮ್ಮ ಸಂಚಾರ ಮುಗಿಸುತ್ತಿದ್ದಾರೆ. ಬೆಳಗಿನ ಹೊತ್ತಿಗೆ ಬೇರೆಯದೇ ಸುದ್ದಿ ಕೇಳಲೇಬೇಕಾದ ಅನಿವಾರ್ಯತೆ.
ತೃತೀಯ ಲಿಂಗಿ ಪಾತ್ರವೆಂದರೆ ಅಬ್ಬರಿಸುವ, ಕಿರುಚುವ ʼಜಾನರ್ʼಗೆ ಸೇರಿರುವ ಈ ಕಾಲದಲ್ಲಿ ವಿಜಯ್ ಆ ಪಾತ್ರದೊಳಕ್ಕೆ ಸರ್ವವನ್ನೂ ಮರೆತು ಪರಕಾಯ ಪ್ರವೇಶ ಮಾಡಿದ್ದರು. ಲಿಂಗದೇವರು ಅತ್ಯಂತ ಸೂಕ್ಷ್ಮವಾಗಿ ಕಟ್ಟಿದ ದೃಶ್ಯಗಳಲ್ಲಿ ಅಷ್ಟೇ ಸೂಕ್ಷ್ಮವಾಗಿ ಆವರಿಸಿಕೊಂಡು ಅಭಿನಯ ದಿಗಂತವನ್ನು ದಾಟಿದ್ದರು. 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಇವರಿಗೆ ʼನಾನು ಅವನಲ್ಲ…ಅವಳುʼ ಪಾತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಂದಾಗ ಇಡೀ ಕನ್ನಡಚಿತ್ರ ಒಮ್ಮೆ ಮೈಕೊಡವಿಕೊಂಡಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಹಿರಿಯ ಸಚಿವ ಅರುಣ್ ಜೇಟ್ಲಿ ಅವರಿದ್ದ ವೇದಿಕೆಗೆ ಸಂಕೋಚದಿಂದಲೇ ಏರಿಬಂದ ವಿಜಯ್ ಪ್ರಶಸ್ತಿ ಸ್ವೀಕರಿಸಿದ ದೃಶ್ಯಗಳು ಈಗಲೂ ಕಣ್ ಪಾಪೆಯಲ್ಲಿ ಹೊರಳಾಡುತ್ತಿವೆ.
ಪಾತ್ರಗಳು ಒಂದಲ್ಲ, ಎರಡಲ್ಲ.. ಎಲ್ಲದರಲ್ಲೂ ವಿಜಯ್ ಜೀವಿಸಿದ್ದರು. ಇನ್ನೂ ನಮ್ಮ ಹೃದಯಗಳಲ್ಲಿ ಜೀವಿಸಲಿದ್ದಾರೆ..