ಹಳ್ಳಿ ಆಸ್ಪತ್ರೆಗಳಿಗೂ ಆಕ್ಸಿಜನ್ ಘಟಕ: ಆಧುನಿಕ ಯಂತ್ರಗಳು
ಸರಗೂರು ( ಮೈಸೂರು ಜಿಲ್ಲೆ): ಕೋವಿಡ್ 3ನೇ ಅಲೆಯೂ ಸೇರಿ ಭವಿಷ್ಯದಲ್ಲಿ ಎದುರಾಗಬಹುದಾದ ಎಲ್ಲ ಆರೋಗ್ಯ ಬಿಕ್ಕಟ್ಟುಗಳನ್ನು ಎದುರಿಸಲು ಇಡೀ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ವೈದ್ಯರು ಸೇರಿ 7,500 ವೈದ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮೈಸೂರು ಜಿಲ್ಲೆಯ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಭಾನುವಾರ 19 ಬೆಡ್‌ಗಳ ಕೋವಿಡ್ ಆರೈಕೆ ಘಟಕದ ಲೋಕಾರ್ಪಣೆ ಹಾಗೂ ಸೋಲಿಗರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಮುಖ್ಯವಾಗಿ ಗ್ರಾಮೀಣ ಮಟ್ಟದಲ್ಲಿ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳ ಮೆಡಿಕಲ್ ಸೌಲಭ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತಮಪಡಿಸಲಾಗುತ್ತಿದೆ. ಇದಕ್ಕಾಗಿ ಗ್ರೂಪ್ ಡಿ, ನರ್ಸುಗಳು, ಪ್ಯಾರಾ ಮೆಡಿಕಲ್, ವೈದ್ಯರನ್ನು ಆದಷ್ಟು ಬೇಗ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಎಲ್ಲ ಕಡೆ ತಂತ್ರಜ್ಞಾನ ಬಳಸಿಕೊಳ್ಳುವುದರ ಜತೆಗೆ, ಜಾಗತಿಕ ಮಟ್ಟದ ವೈದ್ಯಕೀಯ ಯಂತ್ರಗಳನ್ನು ಅಳವಡಿಸಲಾಗುವುದು. ಎಲ್ಲೆಲ್ಲಿ ಕಟ್ಟಡದ ಅಗತ್ಯ ಇದೆಯೋ ಅಲ್ಲೆಲ್ಲ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು. ಪ್ರತಿ ಜಾಗದಲ್ಲಿ ಅಲ್ಲಿಗೇ ಮೀಸಲಾದ ಆಕ್ಸಿಜನ್ ಘಟಕಗಳನ್ನೂ ಸ್ಥಾಪಿಸುವುದರ ಜತೆಗೆ, ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಕೋವಿಡ್ ಕಾರ್ಯಪಡೆ ನಿರ್ಣಯ ಕೈಗೊಂಡು ಅಗತ್ಯ ಶಿಫಾರಸುಗಳನ್ನು ಆರೋಗ್ಯ ಇಲಾಖೆಗೆ ನೀಡಿದೆ ಎಂದು ಅವರು ಹೇಳಿದರು.
ಮೂರನೇ ಅಲೆಗೆ ತಯಾರಿ
ಸಂಭವನೀಯ ಮೂರನೇ ಅಲೆ ಬಗ್ಗೆ ಆತಂಕ ಬೇಡ. ಈಗಾಗಲೇ ಎಲ್ಲೆಡೆ ಭರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಜತೆಗೆ, ಮಕ್ಕಳಿಗೆ ಅಗತ್ಯವಾದ ಎಲ್ಲ ಬಗೆಯ ಔಷಧಿ, ಐಸಿಯು, ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಇತ್ಯಾದಿ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಡಿಸಿಎಂ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಅನಿಲಕುಮಾರ್, ಮುಖ್ಯಮಂತ್ರಿ ಯವರ ಸಲಹೆಗಾರ ಪ್ರಶಾಂತ ಪ್ರಕಾಶ್ ಈ ಸಂದರ್ಭದಲ್ಲಿ ಇದ್ದರು.