ಬಾಗೇಪಲ್ಲಿ ಕಸಬಾ ದೇವರಗುಡಿಪಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದನೇ ತರಗತಿ ಆಂಗ್ಲ ಮಾಧ್ಯಮ ಆರಂಭ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯನ್ನು ದಾಖಲಿಸುವ ಮೂಲಕ ಚಾಲನೆ
by Ra Na Gopala Reddy Bagepalli
ಬಾಗೇಪಲ್ಲಿ: ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಅನಿವಾರ್ಯತೆ ಇದ್ದು, ಬಡ ಕುಟುಂಬದ ಪ್ರತಿ ಮಗುವಿಗೂ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ’ ಎಂದು ಬಾಗೇಪಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ ತಿಳಿಸಿದರು.
ಬಾಗೇಪಲ್ಲಿ ಕಸಬಾ ದೇವರಗುಡಿಪಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದನೇ ತರಗತಿ ಆಂಗ್ಲ ಮಾಧ್ಯಮ ಆರಂಭ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯನ್ನು ದಾಖಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸರಕಾರವು ಸಮಾನ ಶಿಕ್ಷಣದ ಧ್ಯೇಯದೊಂದಿಗೆ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾತೃಭಾಷೆಗೆ ಧಕ್ಕೆಯಾಗದಂತೆ ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಅವಕಾಶ ನೀಡಲು ಮುಂದಾಗಿದೆ’ ಎಂದರು.
ಪೋಷಕರ ಆಶಯಕ್ಕೆ ತಕ್ಕಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾಲೂಕಿನ 3 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗುತ್ತಿದ್ದು, ಬಾಗೇಪಲ್ಲಿ ತಾಲೂಕಿನಲ್ಲಿ ಚೇಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರ್ಗಾನುಕುಂಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಾಗೇಪಲ್ಲಿ ಪಟ್ಟಣದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭವಾಗುತ್ತಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಾಗೇಪಲ್ಲಿ ಕಸಬಾ ತಾಲೂಕು ದೇವರಗುಡಿಪಲ್ಲಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭವಾಗಿದ್ದು ಈ ಭಾಗದ ಪೋಷಕರಿಗೆ ಅತ್ಯಂತ ಸಂತಸದ ವಿಷಯವಾಗಿದೆ.
ಆದ್ದರಿಂದ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸಲು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.
‘ತಾಲ್ಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟರಾಮ್ ಮಾತನಾಡಿ, ಪ್ರಸಕ್ತ ವರ್ಷ ದೇವರಗುಡಿಪಲ್ಲಿ ಶಾಲೆಯಲ್ಲಿ 1ನೇ ತರಗತಿಗೆ 30 ಮಕ್ಕಳನ್ನು ಮಾತ್ರ ದಾಖಲು ಮಾಡಿಕೊಳ್ಳಲು ಅವಕಾಶ ಇದೆ. ಆಯಾ ಶಾಲಾ ವ್ಯಾಪ್ತಿಯಲ್ಲಿ ಪೋಷಕರ ಸಭೆ ನಡೆಸಿ, ಈ ಬಗ್ಗೆ ಮಾಹಿತಿ, ಮನೆ ಮನೆ ಭೇಟಿ, ಜಾಥಾದ ಮೂಲಕ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
‘ಸರಕಾರಿ ಶಾಲೆಗಳಲ್ಲಿ ರೇಡಿಯೊ ತರಗತಿ, ಅನುಭವಿ ಶಿಕ್ಷಕರಿಂದ ಬೋಧನೆ, ಆಕರ್ಷಕ ಶಾಲಾ ವಾತಾವರಣ, ಉಚಿತ ಪಠ್ಯಪುಸ್ತಕ, ಕ್ಷೀರಭಾಗ್ಯ, ಮಧ್ಯಾಹ್ನ ಬಿಸಿಯೂಟ, ಸಮವಸ್ತ್ರ, ಶೂ, ಸಾಕ್ಸ್, ವಿದ್ಯಾರ್ಥಿ ವೇತನ ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಪೋಷಕರು ಈ ಬಗ್ಗೆ ಚಿಂತನ ಮಂಥನ ನಡೆಸಿ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಬೇಕು’ ಎಂದರು
ದೇವರಗುಡಿಪಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಮಾತನಾಡಿ, ‘ಆಂಗ್ಲ ಮಾಧ್ಯಮದ ಆರಂಭ ಸ್ವಾಗತಾರ್ಹ. ಪೋಷಕರು ಖಾಸಗಿ ಶಾಲಾ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲು ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಸರಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ’ ಆದ್ದರಿಂದ ಪೋಷಕರು ಸರಕಾರಿ ಶಾಲೆಗೆ ಸೇರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಜಯರಾಮ್, ಮಂಜುಳಾ, ಪದ್ಮಶ್ರೀ, ಮುಖ್ಯ ಶಿಕ್ಷಕಿ ಪ್ರಮೀಳಾ, ಶಿಕ್ಷಕರಾದ ವಿ.ರಮಾ ದೇವಿ, ವರಲಕ್ಷ್ಮೀ, ಗ್ರಾಮದ ಮುಖಂಡರಾದ ಶಿವರಾಮ ರೆಡ್ಡಿ, ಬಾಬು, ರವಿ.ಕೃಷ್ಣಪ್ಪ, ಪ್ರಭಾವತಿ, ಲಕ್ಷ್ಮೀ ಸೇರಿ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.