ಬಾಗೇಪಲ್ಲಿ: ಅತ್ಯಂತ ಅಪಾಯಕಾರಿ ರೀತಿಯಲ್ಲಿ ಪಟ್ಟಣದ ಮನೆಗಳ ಮೇಲೆ ಹಾದುಹೋಗಿರುವ ೧೧ ಕೆವಿ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸುವ ಕಾರ್ಯ ಶೀಘ್ರವೇ ಮಾಡಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಅವರು ಇಂದು ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸಾರ್ವಜನಿಕರ ದೂರುಗಳ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಬಹುತೇಕ ಕಡೆಗಳಲ್ಲಿ ಕಳೆದ ಕೆಲ ದಶಕಗಳಿಂದಲೂ ಮನೆಗಳ ಮೇಲೆ ಅತ್ಯಂತ ಕೆಳಮಟ್ಟದಲ್ಲಿಯೇ ಅಪಾಯಕಾರಿ ರೀತಿಯಲ್ಲಿ ೧೧ ಕೆವಿ ವಿದ್ಯುತ್ ತಂತಿಗಳು ಹಾದು ಹೋಗಿರುವುದನ್ನು ಅವರು ವೀಕ್ಷಿಸಿದರು. ಶಾಸಕರು ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರು ಕಳೆದ ಹತ್ತಾರು ವರ್ಷಗಳಿಂದಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಪಾಯಕಾರಿ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ದಯವಿಟ್ಟು ಇದನ್ನು ಪುಣ್ಯದ ಕಾರ್ಯ ಎಂದು ತಿಳಿದು ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸಿ ನಮ್ಮ ಪ್ರಾಣಗಳನ್ನು ರಕ್ಷಿಸಿ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಈ ಬಗ್ಗೆ ನನಗೂ ದೂರುಗಳು ಬಂದಿದ್ದು ಅದರ ಹಿನ್ನಲೆಯಲ್ಲಿಯೇ ಸ್ಥಳ ಪರಿಶೀಲನೆ ಮಾಡುತ್ತಿದ್ದೇನೆ. ಈಗಾಗಲೇ ಬೆಸ್ಕಾಂ ಮೂಲಕ ಮಾಹಿತಿ ಪಡೆದುಕೊಂಡಿದ್ದು ಬಾಗೇಪಲ್ಲಿ ಪಟ್ಟಣದಲ್ಲಿ ಸುಮಾರು ೬ ಕಿ.ಮೀ. ವ್ಯಾಪ್ತಿಯಲ್ಲಿ ೧೧ ಕೆವಿ ವಿದ್ಯುತ್ ತಂತಿಗಳು ಅಪಾಯಕಾರಿ ರೀತಿಯಲ್ಲಿ ಮನೆಗಳ ಮೇಲೆ ಹಾದು ಹೋಗಿವೆ. ಇದನ್ನು ಸ್ಥಳಾಂತರಿಸಿ ಯುಜಿ ಕೇಬಲ್ ಅಳವಡಿಸುವ ಕಾರ್ಯವನ್ನು ಅತಿ ಶೀಘ್ರದಲ್ಲಿಯೇ ಮಾಡಲಾಗುವುದು. ಸಾರ್ವಜನಿಕರ ದಶಕಗಳ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಬೆಸ್ಕಾಂ ಎಇಇ ಸೋಮಶೇಖರ್ ಮತ್ತಿತರೆ ಸಿಬ್ಬಂದಿ, ಪುರಸಭೆ ಸದಸ್ಯರು, ಮುಖಂಡರು ಶಾಸಕರ ಜತೆಯಲ್ಲಿದ್ದರು.


















