ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್‌ವೈ ಭಾವುಕ ವಿದಾಯ; ಬ್ಯಾಂಕ್ವೆಟ್ ಹಾಲ್‌ನಲ್ಲಿ ಬಿಕ್ಕಳಿಸುತ್ತಲೇ ಪದತ್ಯಾಗದ ಘೋಷಣೆ ಮಾಡಿದ ಯಡಿಯೂರಪ್ಪ
ಬೆಂಗಳೂರು: ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾವಪರವಶರಾಗಿ ವಿದಾಯ ಭಾಷಣ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ಈ ಮೂಲಕ ಕಳೆದ ಕೆಲ ದಿನಗಳಿಂದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಉಂಟಾಗಿದ್ದ ಹಗ್ಗಜಗ್ಗಾಟದಿಂದ ತೀವ್ರ ಬೇಸರಕ್ಕೆ ಗುರಿಯಾಗಿದ್ದ ಅವರು, ಉಕ್ಕಿ ಬರುತ್ತಿದ್ದ ದುಃಖವನ್ನು ತಡೆಯುತ್ತಲೇ ಬಿಕ್ಕಿಳಿಸುತ್ತಲೇ ತಮ್ಮ ಪದತ್ಯಾಗದ ಘೋಷಣೆ ಮಾಡಿದರು.
ಆರಂಭದಲ್ಲಿ ಎಂದಿನಂತೆಯೇ ಅವರು ಭಾಷಣ ಆರಂಭಿಸಿದರೂ ಅವರ ಮಾತುಗಳಲ್ಲಿ ಭಾರವಿತ್ತು. ಉಕ್ಕಿಬರುತ್ತಿದ್ದ ಭಾವಾವೇಶವನ್ನು ಅವರು ತಡೆದುಕೊಳ್ಳುತ್ತಿದ್ದರು. ಕೆಲ ನಿಮಿಷಗಳಾದ ನಂತರ ಅವರದ್ದು ವಿದಾಯ ಭಾಷಣ ಎಂಬುದು ಸ್ಪಷ್ಟವಾಗಿಬಿಟ್ಟಿತು. ಕೊನೆಗೆ ಪದತ್ಯಾಗ ಮಾತನ್ನೇಳುವ ಹೊತ್ತಿಗೆ ಅತೀವ ಭಾವುಕತೆಗೆ ಒಳಗಾದ ರಾಜಾಹುಲಿ, ಭಾರವಾದ ಮನಸ್ಸಿನಿಂದಲೇ ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿದರು.
“ಈ ಕಾರ್ಯಕ್ರಮದಲ್ಲಿ ಬಾಗಿಯಾದ ನೀವೆಲ್ಲರೂ ಊಟ ಮಾಡಿ. ನೀವೆಲ್ಲರೂ ಊಟ ಮಾಡಿದ ನಂತರ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೋಡಲು ನಿರ್ಧರಿಸಿದ್ದೇನೆ. ನಾನು ಈಗಾಗಲೇ ನಿರ್ಧರಿಸಿದ್ದೇನೆ” ಎಂದು ಯಡಿಯೂರಪ್ಪ ಹೇಳಿದರು.
ಅವರು ರಾಜೀನಾಮೆ ವಿಷಯ ಕೆಲವರಿಗಾದರೂ ಗೊತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಅಕ್ಕಪಕ್ಕ ಕೂತಿದ್ದ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಮುಂತಾದವರು ತೀವ್ರ ದಿಗ್ಬ್ರಮೆಗೊಳಗಾದರು. ಎದುರಿನ ಆಸನಗಳಲ್ಲಿ ಕೂತಿದ್ದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳೆಲ್ಲರೂ ಒಮ್ಮಲೆ ಶಾಕ್‌ಗೆ ಗುರಿಯಾದರು.
ಯಡಿಯೂರಪ್ಪ ಅವರ ಪ್ರತಿ ಮಾತಿನಲ್ಲೂ ಭಾವತೀವ್ರತೆ ಇತ್ತು. ಕಳೆದ ಎರಡು ವರ್ಷಗಳ ತಮ್ಮ ಅಧಿಕಾರಾವಧಿಯ ಸಾಧನೆಗಳ ಪಟ್ಟಿ ಮಾಡುತ್ತಲೇ, “ಪ್ರತಿ ಸಂದರ್ಭದಲ್ಲಿಯೂ ನನಗೆ ಅಗ್ನಿಪರೀಕ್ಷೆಗಳೇ ಎದುರಾದವು. ಎರಡು ವರ್ಷಗಳ ಹಿಂದೆ ಪ್ರಮಾಣ ವಚನ ಸ್ವೀಕಾರ ಮಾಡಿದ ಮೇಲೆ ಎರಡು ತಿಂಗಳ ಕಾಲ ವರಿಷ್ಠರು ಸಂಪುಟ ರಚನೆಗೆ ಅವಕಾಶವನ್ನೇ ನೀಡಲಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ ಒಬ್ಬನೇ ಹುಚ್ಚನಂತೆ ಓಡಾಡಿದೆ. ಪ್ರವಾಹ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ ಕೋವಿಡ್ ಮಾರಿ ಕಾಣಿಸಿಕೊಂಡಿತು. ಹೀಗೆ ಹೆಜ್ಜೆಹೆಜ್ಜೆಗೂ ಅಗ್ನಿಪರೀಕ್ಷೆಗಳು, ಸವಾಲುಗಳೇ ಇದ್ದವು. ಆದರೆ ಎಲ್ಲ ಶಾಸಕರು, ಸಚಿವರು, ಅಧಿಕಾರಿಗಳು ಹಾಗೂ ಪಕ್ಷದ ಸಹಕಾರದಿಂದ ಎದುರಿಸಿದೆ” ಎಂದು ಅವರು ಹೇಳಿದರು.
ಒಂದೆಡೆ; ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜೆ.ಪಿನಡ್ಡಾ ಅವರು ಎಲ್ಲ ರೀತಿಯ ಕಾಳಜಿ, ಪ್ರೀತಿ ತೋರಿದರು ಎಂದು ಹೇಳುತ್ತಲೇ, ಹೈಕಮಾಂಡ್ ಕಡೆಯಿಂದ ಎದುರಾದ ಪರೀಕ್ಷೆಗಳೂ ಅವರು ಪ್ರಸ್ತಾಪ ಮಾಡಿದರು. ಎರಡು ತಿಂಗಳ ಕಾಲ ವರಿಷ್ಠರು ಸಂಪುಟ ರಚನೆಗೆ ಅವಕಾಶವನ್ನೇ ನೀಡಲಿಲ್ಲ ಎಂಬ ಅಂಶವನ್ನು ಪುನರುಚ್ಚರಿಸಿದರು.
ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಅವಧಿಗೂ ಮುನ್ನವೇ ಯಡಿಯೂರಪ್ಪ ಒಮ್ಮೆಯೂ ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಲಿಲ್ಲ.
ರಾಜೀನಾಮೆ ಅಂಗೀಕಾರ
ಬ್ಯಾಂಕ್ವೆಟ್ ಹಾಲ್ ಕಾರ್ಯಕ್ರಮ ಮುಗಿಸಿಕೊಂಡ ಯಡಿಯೂರಪ್ಪ ಅವರು ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜ್ಯಪಾಲರು ರಾಜೀನಾಮೆ ಅಂಗೀಕಾರ ಮಾಡಿದ್ದಾರೆ. ಕೆಲವೊತ್ತು ರಾಜ್ಯಪಾಲರ ಜತೆ ಮಾತುಕತೆ ನಡೆಸಿದ ಅವರು, ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. ಮುಂದಿನ ಮುಖ್ಯಮಂತ್ರಿ ಪ್ರಮಾಣ ಸ್ವೀಕಾರ ಮಾಡುವವರೆಗೆ ಮುಂದುವರಿಯುವಂತೆ ಗೆಹ್ಲೋತ್ ಅವರು ಬಿಎಸ್‌ವೈ ಅವರಿಗೆ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ನಾಳೆ ನೂತನ ಮುಖ್ಯಮಂತ್ರಿ ಆಯ್ಕೆ
ಬಿಜೆಪಿ ಸಂಸದೀಯ ಮಂಡಳಿ ಸಭೆ ನಾಳೆ ನಡೆಯಲಿದ್ದು, ರಾಜ್ಯದ ಹೊಸ ಮುಖ್ಯಮಂತ್ರಿ ಯಾರೆಂಬುದು ಗೊತ್ತಾಗಲು ಇನ್ನೂ 24 ಗಂಟೆ ಕಾಯಬೇಕಿದೆ.
ಆದರೆ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಗುಟ್ಟನ್ನು ಬಿಜೆಪಿ ಬಿಟ್ಟುಕೊಡುತ್ತಿಲ್ಲ. ಆದರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಡಿಸಿಎಂ ಡಾ.ಅಶ್ವತ್ಥನಾರಾಯಣ, ಸಚಿವ ಮುರುಗೇಶ್ ನಿರಾಣಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂತಾದವರ ಹೆಸರುಗಳಿದ್ದು, ಅಂತಿಮವಾಗಿ ಮೋದಿ, ಅಮಿತ್ ಶಾ ಮತ್ತು ನಡ್ಡಾ ಯಾರ ಹೆಸರನ್ನು ಫೈನಲ್ ಮಾಡುತ್ತಾರೋ ಕಾದು ನೋಡಬೇಕಿದೆ.
ಉಳಿದಂತೆ ಹಿರಿಯ ಸಚಿವರಿಗೆ ಬಹುತೇಕ ಕೋಕ್ ನೀಡಲಾಗುವುದು ಎನ್ನಲಾಗಿದ್ದು, ಹೊಸ ಮುಖಗಳಿಗೆ ಅವಕಾಶ ಸಿಗಲಿದೆ ಎನ್ನಲಾಗಿದೆ. ಇನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹಾರಿದ್ದ ಬಾಂಬೆ ಫ್ರೆಂಡ್ಸ್ ಎಲ್ಲರೂ ಸಂಪುಟದಲ್ಲಿ ಉಳಿಯುವ ಸಾಧ್ಯತೆ ಇದೆ.