ಕಾಣಿಪಾಕಂ ಶ್ರೀ ವಿನಾಯಕನಿಗೆ ಡಿಕೆ ಶಿವಕುಮಾರ್ ಪೂಜೆ; ಕಾಂಗ್ರೆಸ್, ವೈಎಸ್ಸಾರ್ ಕಾಂಗ್ರೆಸ್ ತೆಲುಗು ದೇಶಂ ಮೂರೂ ಪಕ್ಷಗಳ ಮುಖಂಡರಿಂದ ಅದ್ಧೂರಿ ಸ್ವಾಗತ
ಕಾಣಿಪಾಕಂ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾಣಿಪಾಕಂ ಶ್ರೀ ವರಸಿದ್ಧಿ ವಿನಾಯಕ ದೇಗುಲಕ್ಕೆ ಸೋಮವಾರ ತೆರಳಿ, ಪೂಜೆ ಸಲ್ಲಿಸಿದರು.
ಇದಕ್ಕೆ ಮುನ್ನ ಕಾಂಗ್ರೆಸ್, ವೈಎಸ್ಸಾರ್ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಶಿವಕುಮಾರ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡದ್ದು ವಿಶೇಷವಾಗಿತ್ತು. ಬೃಹತ್ ಹೂಮಾಲೆಗಳನ್ನು ಹಾಕಿ ಡಿಕೆಶಿ ಅವರನ್ನು ಬರ ಮಾಡಿಕೊಂಡರು.
ಆಂಧ್ರದ ಪುಟ್ಟಲಪಟ್ಟು ಶಾಸಕ ಎಂ.ಎಸ್. ಬಾಬು, ಚಿತ್ತೂರು ಶಾಸಕ ಜೆಎಂಸಿ ಶ್ರೀನಿವಾಸ್, ವೈಎಸ್ಸಾರ್ ಕಾಂಗ್ರೆಸ್ ನಾಯಕ ವಲಿವೇಲು ರಾಜಾರೆಡ್ಡಿ, ಪೃಥ್ವಿ, ಕಾಂಗ್ರೆಸ್ ನಾಯಕ ಸುರೇಶ್ ಕುಪ್ಪಂ , ಕುಮಾರರಾಜು, ಪ್ರದೀಪ್ ರೆಡ್ಡಿ, ದತ್ತು, ಸರಪಂಚ ಶಾಂತಿಸಾಗರ ರೆಡ್ಡಿ, ಬುಜ್ಜಿರೆಡ್ಡಿ, ಕಾಣಿಪಾಕಂ ವಿನಾಯಕ ದೇವಸ್ಥಾನ ಮಂಡಳಿಯ ಮಾಜಿ ಅಧ್ಯಕ್ಷರಾದ ಮೋಹನ್ ರೆಡ್ಡಿ, ಜಗನ್ನಾಥ ರೆಡ್ಡಿ, ಬೆಂಗಳೂರಿನ ರಘುನಾಥ ನಾಯ್ಡು ಹಾಜರಿದ್ದರು.
ಕಾಣಿಪಾಕಂ ವಿನಾಕನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಡಿಕೆಶಿ ಪ್ರಸಾದ ಸ್ವೀಕರಿಸಿದರು. ಗಂಟೆಗೂ ಹೆಚ್ಚು ಹೊತ್ತು ಅವರು ದೇವಾಲಯದಲ್ಲೇ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ, ನಾನು ಶ್ರೀ ಕಾಣಿಪಾಕಂ ವಿನಾಯಕ ಸ್ವಾಮಿಯ ಭಕ್ತ. ಬಂದು ಪೂಜೆ ಸಲ್ಲಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಇಲ್ಲಿ ಎಲ್ಲ ಮುಖಂಡರು ಪಕ್ಷಾತೀತವಾಗಿ ನನ್ನನ್ನು ಬರಮಾಡಿಕೊಂಡು ಸ್ವಾಗತಿಸಿದ್ದಕ್ಕೆ ನನ್ನ ಹೃದಯ ಉಕ್ಕಿ ಬಂದಿದೆ ಎಂದು ಹೇಳಿದರು.