ಕೆಂಪು ನೆಲದಲ್ಲಿ ಮತ್ತೆ ಮೊಳಗಲಿ ರೈತರ ಕಹಳೆ, ಜನವಿರೋಧಿ ಕಾಯ್ದೆ ಹಿಂಪಡೆಯಲು ಡಾ.ಅನಿಲ್ ಕುಮಾರ್ ಅವುಲಪ್ಪ ಆಗ್ರಹ
by Ra Na Gopala Reddy Bagepalli
ಬಾಗೇಪಲ್ಲಿ: ಅಂದು ರೈತರ ಹೋರಾಟಕ್ಕೆ ನಾಂದಿ ಹಾಡಿ ಹುತಾತ್ಮರಾದ ಅಚೇಪಲ್ಲಿ ದದ್ದಿಮಪ್ಪ ಹಾಗೂ ಮದ್ದಲಖಾನೆ ಆದಿನಾರಾಯಣ ರೆಡ್ಡಿ ಅವರು ವೀರಮರಣ ಹೊಂದಿ ಹುತಾತ್ಮರಾದರು. ಆದರೆ, ಈ ಕೆಂಪು ನೆಲದಲ್ಲಿ ರೈತರ ಕಹಳೆ ಮತ್ತೆ ಮೊಳಗಲಿದ್ದು, ಅಂದು ಹೋರಾಟಕ್ಕೆ ಬೆಟರ್‌ಮೆಂಟ್ ಲೇವಿ ಕಾರಣವಾಗಿದ್ದರೆ, ಇಂದು ಮಾರಕ ಕೃಷಿ ಕಾನೂನುಗಳು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿವೆ ಎಡಪಂಥೀಯ ಚಿಂತಕ ಡಾ.ಅನಿಲ್ ಕುಮಾರ್ ಅವುಲಪ್ಪ ಹೇಳಿದರು.
ದದ್ದಿಮಪ್ಪ ಹಾಗೂ ಮದ್ದಲಖಾನೆ ಆದಿನಾರಾಯಣ ರೆಡ್ಡಿ ಹುತಾತ್ಮರಾದ ಸ್ಮರಣಾರ್ಥ ಬಾಗೇಪಲ್ಲಿ ಪಟ್ಟಣದ ಪ್ರವಾಸ ಮಂದಿರ ಬಳಿ ಇರುವ ಹುತಾತ್ಮರ ಸ್ತೂಪಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು ಅವರು, ಈ ಇಬ್ಬರು ರೈತರ ತ್ಯಾಗ-ಬಲಿದಾನ ಸ್ಮರಣೀಯ ಎಂದರು.
“ಬಾಗೇಪಲ್ಲಿಯಲ್ಲಿ 1980 ಅಗಸ್ಟ್ 7ರಂದು ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಹಾರಿಸಿದ ಗುಂಡೇಟಿಗೆ ಇಬ್ಬರು ರೈತರು ಹುತಾತ್ಮರಾದರು. ರಾಜ್ಯದ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಸರಕಾರದ ಆಡಳಿತದ ಕಾಲದಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನವಲಗುಂದ, ನರಗುಂದಗಳಲ್ಲಿಯೂ ಅನ್ನದಾತರು ಹೋರಾಟಕ್ಕೆ ಇಳಿದಾಗ ಪೊಲೀಸರು ಹಾರಿಸಿದ ಗುಂಡಿಗೆ ರೈತರು ಬಲಿಯಾಗಿದ್ದರು. ಇದನ್ನು ಉಗ್ರವಾಗಿ ಪ್ರತಿಭಟಿಸಿ ಮಾಜಿ ಶಾಸಕ ಎ.ವಿ.ಅಪ್ಪಸ್ವಾಮಿರೆಡ್ಡಿ ನೇತೃತ್ವದಲ್ಲಿ ಸಾವಿರಾರರು ಜನರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಿದ್ದರೂ ಪೊಲೀಸರು ವಿನಾಕಾರಣ ಲಾಠಿ ಪ್ರಹಾರ ಮಾಡಿ ಕೊನೆಗೆ ಗೋಲಿಬಾರ್ ನಡೆಸಿದಾಗ ತಾಲೂಕಿನ ಆಚೇಪಲ್ಲಿ ಗ್ರಾಮದ ದದ್ದಿಮಪ್ಪ, ಮದ್ದಲಖಾನೆ ಗ್ರಾಮದ ಆದಿನಾರಾಯಣರೆಡ್ಡಿ ಎಂಬ ರೈತರು ಹುತಾತ್ಮರಾದರು. ಇನ್ನೂ ಅನೇಕ ರೈತರು ಗಾಯಗೊಂಡರು” ಎಂದು ಅವರು ಹೇಳಿದರು.
ಹುತಾತ್ಮ ರೈತರ ಸ್ಫೂರ್ತಿ ಬಹಳ ದೊಡ್ಡದು. ಅವರ ತ್ಯಾಗ-ಬಲಿದಾನಗಳನ್ನು ಸ್ಮರಿಸುತ್ತಲೇ ನಾವು ಹೋರಾಟ ನಡೆಸಬೇಕಿದೆ. ರೈತರ ಹಕ್ಕುಗಳನ್ನು ರಕ್ಷಿಸಿಕೊಳ್ಳದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಅವರು ನುಡಿದರು.
ಕೇಂದ್ರದ ಮತ್ತು ರಾಜ್ಯ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು; ದೇಶದಲ್ಲಿ ಬಡತನ, ಹಸಿವು, ನಿರುದ್ಯೋಗ, ಅಸಮಾನತೆ ತಾಂಡವವಾಡುತ್ತಿದೆ. ಕೇಂದ್ರವು ಯಾವ ಸಮಸ್ಯೆಗೂ ಪರಿಹಾರ ಕಂಡುಕೊಳ್ಳದೇ ಜನವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನು ಖಂಡಿಸಿ ಜನಾಂದೋಲನ ನಡೆಸಲಾಗುತ್ತದೆ.
ಡಾ.ಅನಿಲ್ ಕುಮಾರ್ ಅವುಲಪ್ಪ
ಕರ್ನಾಟಕ ರಾಜ್ಯ ಪ್ರಾಂತೀಯ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಪಿ.ಮಂಜುನಾಥ ರೆಡ್ಡಿ ಮಾತನಾಡಿ; ಈ ಭಾಗದಲ್ಲಿ ಕಳೆದ 40 ವರ್ಷಗಳಿಂದ ಸಿಪಿಐ(ಎಂ) ಪಕ್ಷ ಚಾರಿತ್ರಿಕ ಹೋರಾಟಗಳನ್ನು ನಡೆಸುತ್ತಿದೆ. ಅಲ್ಲದೆ, ಕಳೆದ 7 ತಿಂಗಳಿಂದ ದೆಹಲಿಯ ಗಡಿಯಲ್ಲಿ ರೈತ ವಿರೋಧಿಯಾದ 3 ಕಾನೂನುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಈ ಹೋರಾಟಗಳನ್ನು ದಮನ ಮಾಡುವ ಕೆಲವನ್ನು ಕೇಂದ್ರ ಸರಕಾರ ಮಾಡುತ್ತಿದೆ” ಎಂದು ದೂರಿದರು.
ಈ ಸರಕಾರಗಳು ರೈತ ವಿರೋಧಿಯಾಗಿವೆ. ರೈತ, ಕಾರ್ಮಿಕ, ಬಡವರು, ಬೀದಿಬದಿ ವ್ಯಾಪಾರಿಗಳ ವಿರೋಧಿ ಕಾನೂನುಗಳಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯಿದೆ, ಕಾರ್ಮಿಕ ವಿರೋಧಿ ಕಾಯ್ದೆಗಳಂಥ ಜನ ವಿರೋಧಿ ಕಾಯ್ದೆಗಳ ಮುಖಾಂತರ ಮತ್ತು ದೇಶದ ಸಂಪತ್ತುಗಳಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಿಎಸ್ಸೆನ್ನೆಲ್ ಹಾಗೂ ಈಗ ಮಂಡಿಸಲು ಹೊರಟಿರುವ ಕೆಇಬಿ ಕಾಯ್ದೆಯಂತಹ ಸಾರ್ವಜನಿಕ ವಿರೋಧಿ ಕಾನೂನುಗಳನ್ನು ತಂದು ಈ ದೇಶದ ಜನರ ಸ್ವಾತಂತ್ರ್ಯ ಕಸಿದುಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಮತ್ತು ಕೂಲಿ ಕಾರ್ಮಿಕರ ವಿಭಾಗದ ರಾಜ್ಯ ಉಪಾಧ್ಯಕ್ಷ ಮುನಿವೆಂಕಟಪ್ಪ, ಮಹಿಳಾ ಜನವಾದಿ ರಾಜ್ಯ ಉಪಾಧ್ಯಕ್ಷೆ ಸಾವಿತ್ರಮ್ಮ, ವಾಲ್ಮೀಕಿ ನಗರದ ಅಶ್ವತ್ಥಪ್ಪ, ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಡಿವೈಎಫ್‍ಐ ಅಧ್ಯಕ್ಷ ಬಿ.ಎಂ.ಹೇಮಚಂದ್ರ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಶ್ರೀರಾಮ ನಾಯಕ್, ಶ್ರೀರಾಮಪ್ಪ, ಪುರಸಭೆ ಮಾಜಿ ಸದಸ್ಯರಾದ ಮಹಮದ್, ಮದ್ದಲಖಾನೆ ರಘುರಾಮಿರೆಡ್ಡಿ ಮತ್ತಿತರರು ಹಾಜರಿದ್ದರು.