ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ-2020ರ ಕುರಿತಾದ ಆದೇಶವನ್ನು ತಕ್ಷಣವೇ ಹಿಂಪಡೆದು ವಿಸ್ತೃತ ಚರ್ಚೆ ನಡೆಸಿದ ನಂತರ ಜಾರಿ ಮಾಡುವ ಕುರಿತು ನಿರ್ಧಾರ ಕೈಗೊಳ್ಳಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾವುದೇ ಚರ್ಚೆ ನಡೆಸದೆ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ನಿಲುವು. ದೇಶದ ಒಕ್ಕೂಟ ತತ್ತ್ವಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಾಡಿನ ಶಿಕ್ಷಣ ತಜ್ಞರು, ಉಪನ್ಯಾಸಕರು, ಹಿರಿಯರು ಮತ್ತು ವಿರೋಧ ಪಕ್ಷಗಳ ಮುಖಂಡರು ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ರಾಜ್ಯದ ಮೇಲೆ ಹೇರಬೇಡಿ. ಸಂಬಂಧಿಸಿದ ಎಲ್ಲ ವಲಯಗಳ ಜನರ ಜೊತೆಗೆ ವಿಸ್ತೃತ ಚರ್ಚೆ ನಡೆಸಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ ನಿರ್ಧರಿಸಿ ಎಂದು ಹೇಳಿದ್ದೆವು ಎಂದು ಅವರು ಹೇಳಿದ್ದಾರೆ.
ಹಾಗೆ ಮಾಡದೆ ಈ ಅನಾಹುತಕಾರಿ ನೀತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೆ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಹಲವಾರು ಅಪಾಯಕಾರಿಯಾದ ಅಂಶಗಳಿವೆ; ಬಡವರ, ಮಧ್ಯಮ ವರ್ಗದವರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಡಲಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಆದೇಶದಲ್ಲಿನ ಪ್ರಮುಖ ಸಮಸ್ಯೆಗಳನ್ಬು ಸಿದ್ದರಾಮಯ್ಯ ಅವರು ಗುರುತಿಸಿದ್ದಾರೆ. ಅವು ಹೀಗಿವೆ..
1. ಕನ್ನಡ ಭಾಷಾ ವಿಷಯವನ್ನು ಕೇವಲ ಎರಡು ಸೆಮಿಸ್ಟರುಗಳಿಗೆ; ಅಂದರೆ ಒಂದು ವರ್ಷಕ್ಕೆ ಮಾತ್ರ ಕಲಿಸುವುದಾಗಿ ಹಿಂದೆ ಹೇಳಿದ್ದರು. ರಾಜ್ಯದ ವಿವಿಧ ವಲಯಗಳಿಂದ ಪ್ರಬಲ ಪ್ರತಿರೋಧ ಬಂದ ಮೇಲೆ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥನಾರಾಯಣ ಅವರು ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು.
ಆದರೆ ಸರಕಾರ ಶನಿವಾರ ಹೊರಡಿಸಿರುವ ಆದೇಶದಲ್ಲಿ ಅದರ ಕುರಿತು ಸ್ಪಷ್ಟತೆ ಇಲ್ಲ. ಒಂದು ವರ್ಷಕ್ಕೆ ಸೀಮಿತಗೊಳಿಸುವರೋ ಇಲ್ಲವೇ ಹಿಂದೆ ಇದ್ದಂತೆ ಎರಡು ವರ್ಷಗಳೂ ಕಲಿಸುವರೋ ಅಥವಾ ನಾವು ಒತ್ತಾಯ ಮಾಡಿದಂತೆ ಧಾರವಾಡ ಮುಂತಾದ ವಿವಿಗಳಲ್ಲಿರುವಂತೆ ಮೂರೂ ವರ್ಷಗಳಿಗೆ ಕಲಿಸಲಾಗುವುದೋ ಎಂಬುದರ ಬಗ್ಗೆ ಸರಕಾರ ಆದೇಶ ಮೌನವಾಗಿದೆ.
2. ಈ ಆದೇಶದಲ್ಲಿರುವ ಅತ್ಯಂತ ಕೆಟ್ಟ ಮತ್ತು ಅಪಾಯಕಾರಿಯಾದ ಹಾಗೂ ಜಗತ್ತಿನ ಯಾವ ದೇಶಗಳಲ್ಲೂ ಇಲ್ಲದ ಕಲಿಕಾ ಕ್ರಮವನ್ನು ಈ ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ. ಅದರ ಪ್ರಕಾರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಯು ಶೇ.40ರಷ್ಟು ಕ್ರೆಡಿಟ್ಟುಗಳನ್ನು/ಅಂಕಗಳನ್ನು/ಆನ್‌ಲೈನ್ ಮೂಲಕ ಕೇಳಿ ಪಡೆಯಬಹುದು. ತರಗತಿಗಳಿಗೆ ಹಾಜರಾಗಬೇಕಾದ ಅಗತ್ಯವಿಲ್ಲ. ಯಾವುದೇ ವಿಶ್ವವಿದ್ಯಾಲಯದಿಂದ ಶೇ.50ರಷ್ಟು ಅಂಕ/ಕ್ರೆಡಿಟ್ಟುಗಳನ್ನು ಪಡೆಯಬೇಕು. ಇದರಿಂದಾಗಿ ಪ್ರಾಕ್ಟಿಕಲ್ ತರಗತಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ತರಗತಿಗಳಿಗೆ ಹಾಜರಾಗುವ ಅಗತ್ಯವಿಲ್ಲ. (ಈಗಾಗಲೆ ಉಪನ್ಯಾಸಕರುಗಳಿಂದ ಪಠ್ಯಗಳನ್ನು ರೆಕಾರ್ಡ್ ಮಾಡಿಸಲಾಗಿದೆ).
ಈ ನೀತಿಯ ಪ್ರಕಾರ ವಿಶ್ವ ವಿದ್ಯಾಲಯಗಳನ್ನು ದೂರಶಿಕ್ಷಣ ಕೇಂದ್ರಗಳಂತೆ ಮಾಡಲಾಗುತ್ತಿದೆ.
ಆ ಮೂಲಕ ಅನೇಕ ಸರ್ಟಿಫಿಕೇಟ್ ಕೋರಸುಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ, ನಿಧಾನಕ್ಕೆ ಸರಕಾರಿ ವಿವಿಗಳನ್ನು ಮುಚ್ಚಿ ಖಾಸಗಿ ವಿವಿಗಳನ್ನು ಹೆಚ್ಚಿಸಲು, ಖಾಸಗಿಯವರಿಗೆ ವಿಪರೀತ ಹಣ ಮಾಡಲು ಬೇಕಾದ ವೇದಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸೃಷ್ಟಿಸಿಕೊಡಲು ಕೇಂದ್ರ-ರಾಜ್ಯ ಬಿಜೆಪಿ ಸರಕಾರಗಳು ಹೊರಟಿವೆ.
ಗುಣಮಟ್ಟದ ಪ್ರಾಧ್ಯಾಪಕರುಗಳನ್ನು ಮತ್ತು ಅತ್ಯಂತ ಪ್ರಾಯೋಗಿಕವಾದ ಹಾಗೂ ಬದುಕಿಗೆ ಹತ್ತಿರವಾದ “ಪೆಡಗಾಗಿ (ಕಲಿಕೆ ಮತ್ತು ಬೋಧನಾ ವಿಧಾನ) ಗಳ ಮೂಲಕ ಶಿಕ್ಷಣ ಕೊಡುವುದರ ಕಡೆಗೆ ಯೋಚಿಸುವುದರ ಬದಲಾಗಿ ವಿವಿಗಳನ್ನು ಸರ್ಟಿಫಿಕೇಟ್ ನೀಡುವ ಅಂಗಡಿಗಳನ್ನು ಮಾಡಲಾಗುತ್ತಿದೆ.
ಬಿಜೆಪಿಯು ಉನ್ನತ ಶಿಕ್ಷಣವನ್ನು ಸರಿಪಡಿಸುವ ನೆಪದಲ್ಲಿ ಎಲ್ಲವನ್ನೂ ಧ್ವಂಸ ಮಾಡುತ್ತಿದೆ. ಖಾಸಗಿ ಬಂಡವಾಳಿಗರು ಶಿಕ್ಷಣದ ದಿಕ್ಕು ದೆಸೆಗಳನ್ನು ನಿರ್ಧರಿಸುವ ಹೊಲಸು ಕ್ರಮವನ್ನು ಪರಿಚಯಿಸಲಾಗುತ್ತಿದೆ. ಇದು ಸ್ಪಷ್ಟವಾಗಿ ಜನವಿರೋಧಿ ಕ್ರಮ. ದೇಶದ್ರೋಹವೆಂದರೆ ಜನದ್ರೋಹವೆ ಎಂದು ಅರಿತುಕೊಳ್ಳಬೇಕು.
3.ಈಗಿನ ಪದವಿಯಲ್ಲಿ ಮೂರು ಮೇಜರ್ ವಿಷಯಗಳ ಬದಲಾಗಿ ಕೇವಲ ಎರಡು ವಿಷಯಗಳನ್ನು ಕಲಿಸುವಂತೆ ಹಾಗೂ ಮೂರನೇ ವರ್ಷ ಅಥವಾ 5 & 6ನೇ ಸೆಮಿಸ್ಟರುಗಳಾಚೆಗೆ ಕೇವಲ ಒಂದು ವಿಷಯವನ್ನು ಮೇಜರ್ ಆಗಿ ಇನ್ನೊಂದನ್ನು ಮೈನರ್ ಆಗಿ ಅಥವಾ ಎರಡನ್ನೂ ಮೇಜರ್ ಆಗಿ ಕಲಿಸಲು ಆದೇಶಿಸಲಾಗಿದೆ. ಇದರಿಂದಾಗಿ ಸಾವಿರಾರು ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳುತ್ತಾರೆ. ಮುಂದೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಉದ್ಯೋಗಗಳೇ ಸೃಷ್ಟಿಯಾಗುವುದಿಲ್ಲ.
ಜಗತ್ತಿನ ಅನೇಕ ಪ್ರಮುಖ ಇತಿಹಾಸಕಾರರು ಶುದ್ಧ ವಿಜ್ಞಾನದ (ಜೆನೆಟಿಕ್ಸ್ ಮುಂತಾದ) ವಿಷಯಗಳ ಮೂಲಕ ತಮ್ಮ ವಿಷಯಗಳನ್ನು ಮಂಡಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳೂ ಆ ಎಲ್ಲ ವಿಷಯಗಳನ್ನು ಕಲಿಯಬೇಕಲ್ಲವೆ? ಆದರೆ ಒಂದು ಮೇಜರ್ ಸಬ್ಜೆಕ್ಟ್ ಎಂದು ಮಾಡಿ ಮಕ್ಕಳನ್ನು ಕೂಪ ಮಂಡೂಕಗಳನ್ನಾಗಿಸಲು ಹೊರಟಿದ್ದಾರೆ.
ಉನ್ನತ ಶಿಕ್ಷಣ ಕುಸಿದು ಬಿದ್ದರೆ ರಾಷ್ಟ್ರವೂ ಕುಸಿದು ಬೀಳುತ್ತದೆ. ಜೊತೆಗೆ 21ನೇ ಶತಮಾನ ಬಹುಶಿಸ್ತುಗಳ ಯುಗ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು. ಅಜ್ಞಾನವನ್ನು ಆರಾಧಿಸುವ ಮೂರ್ಖರ ಮಾತು ಕೇಳಿ ರಾಜ್ಯ ಮತ್ತು ರಾಷ್ಟ್ರಗಳ ಶಿಕ್ಷಣವನ್ನು ಕೊಲ್ಲಬಾರದೆಂದು ಒತ್ತಾಯಿಸುತ್ತೇನೆ.
4. ಪಿಯುಸಿ ಮಟ್ಟದಲ್ಲಿ ವಿಜ್ಞಾನ ಕಲಿತವರು ಇದುವರೆಗೆ ಬಿಎಸ್ಸಿ ಹೋಗಲು ಮನಸ್ಸಾಗದಿದ್ದರೆ ಬಿ.ಕಾಂ ಅಥವಾ ಬಿಎ ಗೆ ಸೇರಬಹುದಿತ್ತು. ಈ ಆಯ್ಕೆಗಳು ರದ್ದಾಗುತ್ತವೆ ಎಂಬಂತೆ ಆದೇಶ ಹೊರಡಿಸಲಾಗಿದೆ.
5. ಶಿಕ್ಷಣ, ಪಠ್ಯಕ್ರಮಗಳನ್ನು ನಿರ್ಧರಿಸುವ ಹಕ್ಕು ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳ ಅಧಿಕಾರಗಳನ್ನು ದಮನ ಮಾಡಿ ಕೇಂದ್ರದ ಬಿಜೆಪಿ ಸರಕಾರವು ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಟಿದೆ.
ಇದಕ್ಕೆ ತಕ್ಕ ಹಾಗೆ ಕೇಂದ್ರದ ದಮನಕಾರಿ ನೀತಿಯನ್ನು ಪ್ರಶ್ನಿಸಬೇಕಾದ, ಪ್ರತಿಭಟಿಸಬೇಕಾದ ರಾಜ್ಯ ಬಿಜೆಪಿ ಸರಕಾರವು ರಾಜ್ಯದ ಹಿತಾಸಕ್ತಿಯನ್ನು ಎಲ್ಲರಿಗಿಂತ ಮುಂದೆ ನಿಂತು ಬಲಿಕೊಡಲು ಇನ್ನಿಲ್ಲದ ಉತ್ಸಾಹ ತೋರುತ್ತಿದೆ.
ಇವು ಮೇಲ್ನೋಟಕ್ಕೆ ತಕ್ಷಣಕ್ಕೆ ನನಗೆ ಕಂಡ ಅನಾಹುತಕಾರಿ ಅಂಶಗಳು. ಆಳದಲ್ಲಿ ಇನ್ನೂ ಭೀಕರ ಹುನ್ನಾರಗಳಿವೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..

















