ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆ ಮತ್ತು ಮಕ್ಕಳ ಐಸಿಯು ಘಟಕ ಲೋಕಾರ್ಪಣೆ ಕಾರ್ಯಕ್ರಮ
by GS Bharath Gudibande
ಚಿಕ್ಕಬಳ್ಳಾಪುರ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಬಸವರಾಜ ಬೊಮ್ಮಾಯಿ ಅವರು ನಾಳೆ ಜಿಲ್ಲೆಗೆ ಮೊದಲ ಭೇಟಿ ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕ ಇಲ್ಲದೆ ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಇದ್ದು, ಇನ್ನು ಮುಂದೆ ಅಂಥ ಪರಿಸ್ಥಿತಿ ನಿವಾರಣೆ ಆಗಲಿದೆ. ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಬಹುದು ಎಂಬ ತಜ್ಞರ ವರದಿ ಇದೆ. ಇಂತಹ ಕಠಿಣ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಇದು ಒಳ್ಳೆಯ ಸುದ್ದಿ.
ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು, ಮುಖ್ಯವಾಗಿ ರೈತರು ಕೆಲ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವರು ಜಿಲ್ಲೆಗೆ ಏನಾದರೂ ಘೋಷಣೆ ಮಾಡಬಹುದಾ ಎನ್ನುವ ಆಸೆ ಜನತೆಗಿದೆ.
ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ರಸ್ತೆಯ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಗೆ ಆಗಮಿಸಲಿರುವ ಸಿಎಂ, ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ವತಿಯಿಂದ ನಿರ್ಮಿಸಿರುವ 300 ಹಾಸಿಗೆಗಳ ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆ ಮತ್ತು ಮಕ್ಕಳ ತೀವ್ರ ನಿಗಾ ಘಟಕ ಲೋಕಾರ್ಪಣೆ ಮಾಡಲಿದ್ದಾರೆ.
ನಂತರ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅವರು ಗೌರವ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.