ನಿರೀಕ್ಷೆಯಲ್ಲಿ ಕಾಮನ್‌ಮ್ಯಾನ್
ರಾಜ್ಯ ಬಿಜೆಪಿಯಲ್ಲಿನ ತೀವ್ರ ಬೆಳವಣಿಗೆಗಳ ನಡುವೆ ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ ಬಸವರಾಜ ಬೊಮ್ಮಾಯಿ ಅವರು ಕಳೆದ ಜು.28ರಂದು ಪ್ರಮಾಣ ವಚನ ಸ್ವೀಕರಿಸಿ ಮೊದಲ ಒಂದು ತಿಂಗಳು ಪೂರೈಸಿ ಹಂತ ಹಂತವಾಗಿ ರಾಜಕೀಯ ಅನಿಶ್ಚಿತತೆಯಿಂದ ಹೊರಬಂದು ಭರವಸೆಯತ್ತ ಹೆಜ್ಜೆ ಇಟ್ಟಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೆರಳಿನಲ್ಲಿ ಪಳಗಿರುವ ಬೊಮ್ಮಾಯಿ ಅವರು ಏಕಾಂಗಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹಲವು ಹೊಸ ನಿರ್ಣಯಗಳನ್ನು ಪ್ರಕಟಿಸುವ ಮೂಲಕ ಶೋಷಿತರ ಪರವಾಗಿ ಸುಮಾರು 2,500 ಕೋಟಿ ರೂ.ಗಳ ಯೋಜನೆಗಳನ್ನು ಘೋಷಿಸಿದರು. ರೈತರ, ವೃದ್ಧರ, ಶೋಷಿತರ, ಅಬಲರ ಪರವಾಗಿಯೇ ಇವೆ. ಸ್ವಾತಂತ್ರೋತ್ಸವ ದಿನ ಮಾಡಿದ ಹದಿನಾಲ್ಕು ಅಮೃತ ಘೋಷಣೆಗಳೆಲ್ಲವೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಸುಮಾರು 1,000 ಕೋಟಿ ರೂ. ಯೋಜನೆಗಳಿವೆ. ಇವು ತುಳಿತಕ್ಕೆ ಒಳಗಾದ ಸಮುದಾಯದ ಪರವಾಗಿರುವುದೇ ಆಗಿದ್ದು ಸಮುದಾಯಗಳಿಗೆ ಭರವಸೆಯನ್ನು ಮೂಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಐದು ಘೋಷಣೆಗಳನ್ನು ಮಾಡಿದರು. ಅದರಲ್ಲಿ ಪ್ರಾಥಮಿಕ ಶಿಕ್ಷಣಕ್ಕೂ ಪ್ರತ್ಯೇಕ ಪರಿಷತ್ ರಚನೆಯೂ ಒಂದು. ಅದು ಚರ್ಚೆಯೊಂದರ ಸಂದರ್ಭದ ಅಭಿಪ್ರಾಯವೆಂದು ಹೇಳಲಾಗುತ್ತಿದೆ. ಅಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಾಡಿನ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲೂ ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ತಾವು ಅಭಿವೃದ್ಧಿ ಪರ ಎಂಬುದನ್ನು ಸಿಎಂ ನಿರೂಪಿಸಿದರು.
ಬೊಮ್ಮಾಯಿ ಮುಖ್ಯಮಂತ್ರಿಯಾದಾಗ ಅವರು ಯಾರದ್ದೋ ರಬ್ಬರ್ ಸ್ಟಾಂಪ್ ಆಗುತ್ತಾರೆ, ಇನ್ನಾರದೋ ಹಿಡಿತದಲ್ಲಿರುತ್ತಾರೆ, ಅವರಿಂದ ಸ್ವಂತಿಕೆಯ ಆಡಳಿತ ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಒಂದು ತಿಂಗಳ ಆಡಳಿತ ಬಹುತೇಕ ಉತ್ತರ ನೀಡಿದೆ ಎನ್ನಬಹುದು. ಬ್ರಿಟಿಷ್ ಕಾಲದ ಗಾರ್ಡ್ ಆಫ್ ಆನರ್ ಎಂಬ ಸಾಂಪ್ರದಾಯಿಕ ಪದ್ಧತಿಗೆ ಮೊದಲು ತಿಲಾಂಜಲಿಯನ್ನಿಟ್ಟಿದ್ದು, ಜೀರೋ ಟ್ರಾಫಿಕ್ ವ್ಯವಸ್ಥೆ ತೆಗೆದು ಹಾಕಿದ್ದು, ಕನ್ನಡ ಪುಸ್ತಕಗಳ ಕೊಡುಗೆ ಸಹಜವಾಗಿಯೇ ಜನರ ಗಮನ ಸೆಳೆದವು. ಸುವರ್ಣಸೌಧದ ಬಳಕೆ ಬಗ್ಗೆ ನೀಡಿರುವ ಭರವಸೆಗಳು ಅವರಲ್ಲಿ ವಿಶ್ವಾಸ ಹೆಚ್ಚಿಸಿದವು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಬೆನ್ನಲ್ಲೇ ಎದುರಾದ ಸಂಪುಟ ರಚನೆ ಮತ್ತು ಖಾತೆಗಳ ಹಂಚಿಕೆಯಲ್ಲೂ ಜಾಣ್ಮೆ ಮೆರೆದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅದಕ್ಕೆ ಸಂಬಂಧಿಸಿದ ಅಸಮಾಧಾನವನ್ನೂ ಅಲ್ಲಲ್ಲೇ ನಿಭಾಯಿಸಿ ತಣ್ಣಗಾಗಿಸುವಲ್ಲಿ ಯಶಸ್ವಿಯಾದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಮುಂದೆ ಯಾರೇ ಮುಖ್ಯಮಂತ್ರಿಯಾದರೂ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ತೀವ್ರ ಸ್ವರೂಪಕ್ಕೆ ತಿರುಗಿ ಕೋಲಾಹಲವಾಗುತ್ತದೆ ಎಂಬ ಪ್ರತಿಪಕ್ಷಗಳ ಎಣಿಕೆಯನ್ನು ಹುಸಿಗೊಳಿಸಿದ್ದು, ಕಳೆದ ಒಂದು ತಿಂಗಳಲ್ಲಿ ಪ್ರತಿಪಕ್ಷಗಳು ಪ್ರಮುಖವಾಗಿ ಬೆರಳು ತೋರುವಂಥ ಯಾವುದೇ ಅಚಾತುರ್ಯವಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಸಣ್ಣಪುಟ್ಟ ಆರೋಪಗಳು ಕೇಳಿಬಂದರೂ ಅದಕ್ಕೆ ತಕ್ಷಣವೇ ಸ್ಪಂದಿಸಿ ಸರಿಪಡಿಸುವ ಪ್ರಯತ್ನವನ್ನೂ ಬೊಮ್ಮಾಯಿ ಮಾಡಿದ್ದಾರೆ.
ತಮ್ಮನ್ನು ಭೇಟಿಯಾಗಲು ಬರುವವರು ಹಾರ ತರಾಯಿ ತರದಂತೆ ಸೂಚನೆ ನೀಡಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ತಾಕೀತು ಮಾಡಿದ್ದಾರೆ.
ಕೋವಿಡ್ ಮೂರನೇ ಅಲೆ ಬರಬಹುದು ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಬೊಮ್ಮಾಯಿ ಅವರು ನೆರೆಯ ಕೇರಳದಿಂದ ಅಪಾಯವಾಗುವುದನ್ನು ತಡೆಗಟ್ಟುವ ಸಂಬಂಧ ಗಡಿ ಜಿಲ್ಲೆಗಳಾದ ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಬಂದಿದ್ದಾರೆ.
ಕ್ಷಿಪ್ರ ಅವಧಿಯಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಆರ್ಥಿಕ ಶಿಸ್ತನ್ನು ಸರಿದಾರಿಗೆ ತರಲು ಬೇಕಾದ ಪ್ರಯತ್ನಕ್ಕೂ ಕೈಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಂಡು ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಚರ್ಚೆ ನಡೆಸಿದ್ದಾರೆ.
ಇದೆಲ್ಲದರ ನಡುವೆ ನೆರೆಯ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಉಪವಾಸದ ಬೆದರಿಕೆ ವಿರೋಧಕ್ಕೆ ಅವರದೇ ದಾಟಿಯಲ್ಲಿ ಉತ್ತರ ನೀಡಿ, ಅದಕ್ಕೆ ಪ್ರತಿಯಾಗಿ ಕಾನೂನು ತಜ್ಞರ ನೆರವಿನೊಂದಿಗೆ ಯೋಜನೆ ಜಾರಿಗೆ ಹೆಜ್ಜೆ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ನೆಲ, ಜಲ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸಾರಿರುವುದು ಕನ್ನಡಿಗರಲ್ಲಿ ವಿಶ್ವಾಸ ಮೂಡಿಸಿದೆ.
ಈ ನಡುವೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಮುಖ್ಯಮಂತ್ರಿ ಬೊಮ್ಮಾಯಿ ಅವರ ಆಡಳಿತ ಸರಿದಾರಿಯಲ್ಲಿ ಸಾಗುತಿದೆ ಎಂಬುದಕ್ಕೆ ನಿರ್ದಶನವಾಗಿದೆ, ಅಲ್ಲದೇ ಆಡಳಿತಾರೂಢ ಬಿಜೆಪಿಯಷ್ಟೇ ಅಲ್ಲದೆ ಪ್ರತಿಪಕ್ಷಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಒಂದು ತಿಂಗಳ ಅವಧಿಯ ಬೊಮ್ಮಾಯಿ ಅವರ ನಡೆ ಮತ್ತು ಅವರ ಆಡಳಿತದ ವೈಖರಿಯನ್ನು ಕುತೂಹಲದಿಂದ ಗಮನಿಸುತ್ತಿರುವ ಆಡಳಿತಾರೂಢ ಬಿಜೆಪಿ ವರಿಷ್ಠರಿಗೆ ಮತ್ತು ಕಾರ್ಯಕರ್ತರಿಗೆ ಒಂದಷ್ಟು ಸಮಾಧಾನ ತಂದಿದೆ. ಇತ್ತೀಚಿಗೆ ಗೃಹ ಸಚಿವ ಅಮಿತ್ ಶಾ ವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿಯ ಕಾಲ ಯಡಿಯೂರಪ್ಪರಿಂದಲೇ ಶುರುವಾಯಿತು, ಮುಂದೆ ಬೊಮ್ಮಾಯಿವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಾಗುವುದು, ಬಹುಮತದೊಂದಿಗೆ ಅಧಿಕಾರಕ್ಕೆ ಹಿಡಿಯುತ್ತೇವೆ” ಎಂಬ ಮಾತು ಅವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ, ಅದರೆ ಪಕ್ಷದ ಹಿರಿಯರಿಗೆ ಇರುಸುಮುರುಸು ಅಗಿರುವುದು ಅಂತೂ ಸತ್ಯ.
ಸೆಪ್ಟಂಬರ್ 13ರಿಂದ 24ರವರೆಗೆ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಮೇಲ್ಮನೆ ಮತ್ತು ಕೆಳಮನೆಯಲ್ಲಿ ವಿರೋಧ ಪಕ್ಷಗಳಿಗೆ ಉತ್ತರ ನೀಡಬೇಕಿದೆ. ಕಾನೂನು ಮತ್ತು ಸಂಸದೀಯ ಖಾತೆಯನ್ನು ನಿರ್ವಹಿಸಿದ್ದ ಬೊಮ್ಮಾಯಿ ಅವರ ರಾಜಕೀಯ ಚಾಣಾಕ್ಷತೆಗೆ ಸಿಎಂ ಆಗಿ ಕಾರ್ಯ ನಿರ್ವಹಿಸುವುದು ಸವಾಲಾಗಿದೆ.
ಮುಂದೆಯೂ ಅವರಿಗೆ ಬೆಟ್ಟದಷ್ಟು ಸವಾಲುಗಳು ನಿಂತಿವೆ ಚುನಾವಣೆ, ರಾಜ್ಯದ ಅರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವುದು, ಭಿನ್ನಮತೀಯ ಚಟುವಟಿಕೆಗಳಿಗೆ ನಿಭಾಯಿಸುವುದು, ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಹಣ ತರಬೇಕಾಗಿದೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರಲು ಮತ್ತು ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಹೀಗೆ ಹತ್ತು ಹಲವು ಸವಾಲು ಅವರ ಮುಂದಿದ್ದು, ಹೇಗೆ ನಿಭಾಯಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಬೊಮ್ಮಯಿವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ, ಶೋಷಿತರಪರ ಜನರ ಆಶೋತ್ತರಗಳಿಗೆ ಅನುಗುಣವಾಗಿ ಆಡಳಿತ ನಡೆಸಲಿ ಎಂಬುದು ನಮ್ಮ ಆಶಯ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.