ಬಾಗೇಪಲ್ಲಿಯಲ್ಲಿ SFI ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
by Ra Na Gopala Reddy Bagepalli
ಬಾಗೇಪಲ್ಲಿ: ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿವೆ ಎಂದು ಇಂದು ಬಾಗೇಪಲ್ಲಿ ತಾಲೂಕು ಭಾರತೀಯ ವಿಧ್ಯಾರ್ಥಿ ಫೆಡರೇಷನ್ (ಎಸ್.ಎಫ್. ಐ) ಎಂದು ದೂರಿದೆ.
ಪಟ್ಟಣದಲ್ಲಿ ಗೂಳೂರು ಡಾ.ಹೆಚ್.ನರಸಿಂಹಯ್ಯ ವೃತ್ತ ದಿಂದ ಕಾಲೇಜು ವಿಧ್ಯಾರ್ಥಿಗಳು ಪ್ರತಿಭಟನೆ ಮೆರವಣಿಗೆ ಹೊರಟು ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಗೇಪಲ್ಲಿ ತಾಲೂಕು ಎಸ್ ಎಫ್ ಐ ಅಧ್ಯಕ್ಷ ಸತೀಶ್, ಹೆಣ್ಣು ಸಮಾಜದ ಕಣ್ಣು ಅಂತಾರೆ. ಆದರೆ ಅನಾದಿ ಕಾಲದಿಂದಲೂ ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಲೇ ಇದೆ. ಹೆಣ್ಣನ್ನು ದೇವತೆಯೆಂದು ಪೂಜಿಸುವ ಸಂಸ್ಕ್ರತಿ ಅನ್ನೋ ಮಾತು ಕೇವಲ ಪದಗಳಿಗಷ್ಟೇ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಮೈಸೂರು ವಿದ್ಯಾರ್ಥಿನಿ ಹಾಗೂ ಬಾಂಬೆಯ ಗೃಹಿಣಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಸೋಮಶೇಖರ್ ಮಾತನಾಡಿ; ‘ಅ.26ರಂದು ದೆಹಲಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ನಾಗರಿಕ ರಕ್ಷಣಾ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದ ರಾಬಿಯಾ ಸೈಫಿ ಅವರನ್ನು ಮೇಲಾಧಿಕಾರಿಗಳ ಭ್ರಷ್ಟಾಚಾರ ಮುಚ್ಚಿ ಹಾಕಲು ಸಾಮೂಹಿಕ ಅತ್ಯಾಚಾರಗೈದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಾಂಬೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆ ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಇವೆಲ್ಲ ಘಟನೆಗಳು ನಾಗರಿಕ ಸಮಾಜವೇ ತಲೆತಗ್ಗಿಸುವ ಸಂಗತಿಗಳಾಗಿವೆ. ರಾಬಿಯಾ ಸೈಫಿಯಂಥ ಸರ್ಕಾರದ ರಕ್ಷಣಾ ಅಧಿಕಾರಿಗೆ ರಕ್ಷಣೆ ಇಲ್ಲವೆಂದರೆ ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ಮಹಿಳೆಯರಲ್ಲಿ ಇನ್ನಷ್ಟು ಅಭದ್ರತೆ ಹೆಚ್ಚಿಸಿದೆ’ ಎಂದು ದೂರಿದರು.
‘ಟಿವಿ, ಮೊಬೈಲ್, ಪತ್ರಿಕೆಗಳಲ್ಲಿ ಯುವಜನರನ್ನು ಅಶ್ಲೀಲತೆ ಮತ್ತು ಅಪರಾಧ ಕೃತ್ಯಗಳಿಗೆ ಉದ್ರೇಕಿಸುವ ವಿಡಿಯೋ, ಚಿತ್ರಗಳು ಎಗ್ಗಿಲ್ಲದೇ ಪ್ರಸಾರವಾಗುತ್ತಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೋಮಶೇಖರ್, ಸತೀಶ್, ಎಸ್ಎಫ್ ಐ ತಾಲೂಕು ಕಾರ್ಯದರ್ಶಿ ಪವನ್ ಕುಮಾರ್ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.