ಸಚಿವ ಡಾ.ಕೆ.ಸುಧಾಕರ್
By M Krishnappa Chikkaballapura
ಚಿಕ್ಕಬಳ್ಳಾಪುರ: ದಿನನಿತ್ಯದ ಬದುಕಿಗೋಸ್ಕರ ಮತ್ತು ಉದ್ಯೋಗಕೋಸ್ಕರ ಅನ್ಯಭಾಷೆಗಳನ್ನು ಕಲಿಯಬೇಕಾದ ಅನಿವಾರ್ಯತೆ ಇದೆ. ಅನ್ಯಭಾಷೆಗಳನ್ನು ಕಲಿಯುವುದರ ಜೆತೆಗೆ ಮಾತೃಭಾಷೆಯನ್ನಾಗಿ ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು ಹಾಗೂ ತಾಯಿ ಭಾಷೆಗೆ ಸದಾ ಮೊದಲ ಸ್ಥಾನವನ್ನೇ ನೀಡಬೇಕು ಎಂದು ಆರೋಗ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಪ್ರತಿಪಾದಿಸಿದರು.
ಸೋಮವಾರದಂದು ಅವರು ಚಿಕ್ಕಬಳ್ಳಾಪುರದ ಸರ್.ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಅನೇಕ ಮಹನೀಯರು ಮಹತ್ವದ ಪಾತ್ರವಹಿಸಿದ್ದು, ಇಂದು ಜಾಗತಿಕ ಮಟ್ಟದಲ್ಲಿ ಹೆಸರಾಗಿರುವ ಬೆಂಗಳೂರು ಮಹಾನಗರದಲ್ಲಿ 108ಕ್ಕೂ ಹೆಚ್ಚು ಭಾಷಿಕರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆಂದರೆ ಅದಕ್ಕೆ ಕರ್ನಾಟಕದ ಸೌಹಾರ್ದತೆಯ ಗುಣದ ಮಣ್ಣು ಕಾರಣ ಎಂದರು ಅವರು.
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ವಿಶಿಷ್ಟವಾಗಿ ಜಾಗತಿಕವಾಗಿಯೂ ಗಮನ ಸೆಳೆದಿದೆ. ಹರಿದು ಹಂಚಿಹೋಗಿದ್ದ ಕನ್ನಡ ನೆಲದ ಪ್ರದೇಶಗಳನ್ನು ಒಗ್ಗೂಡಿಸುವ ಕರ್ನಾಟಕ ಏಕೀಕರಣದ ಹೋರಾಟ ಹೆಚ್ಚು ಮಹತ್ವದ ಹೋರಾಟವಾಗಿದ್ದು, ಈ ಏಕೀಕರಣ ಹೋರಾಟದಲ್ಲಿ ಹಲವು ಮಹನೀಯರ ಅಪಾರ ಪರಿಶ್ರಮವಿದೆ. ಕನ್ನಡಿಗರು ಭಾಷಾ ನಿರಭಿಮಾನಿಗಳಾಗದೆ ತಾಯಿ ಭಾಷೆಗೆ ಸದಾ ಮೊದಲ ಸ್ಥಾನವನ್ನೇ ನೀಡಬೇಕು. ಮೊದಲು ತಾಯಿ ಭಾಷೆ, ನಂತರ ಉಳಿದ ಭಾಷೆಗಳು ಎಂಬುದನ್ನು ಅರಿತು ಸಾವಿರಾರು ವರ್ಷಗಳ ಇತಿಹಾಸದ ಕನ್ನಡ ಭಾಷೆಯನ್ನು ಗೌರವಿಸಿ ಎಲ್ಲೆಡೆ ಬಳಕೆ ಮಾಡಿ ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಈ ಸಂತಸದ ಸಂದರ್ಭದಲ್ಲಿ ನಮ್ಮ ನಾಡು-ನುಡಿ, ನೆಲ-ಜಲ, ಹಾಗೂ ಸಾಹಿತ್ಯ-ಸಂಸ್ಕøತಿಗಳ ಪರಂಪರೆ ನಡೆದು ಬಂದ ದಾರಿಯನ್ನು ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದರು ಸಚಿವರು.
ಕನ್ನಡ ನಾಡು-ನುಡಿ ಕಟ್ಟಿದ ಮಹನೀಯರು
ಕನ್ನಡ ನಾಡುನುಡಿಯನ್ನು ಕಟ್ಟಿ ಬೆಳೆಸಿದ ಆದಿಕವಿ ಪಂಪ, ರನ್ನ, ಪೊನ್ನ, ಸರ್ವಜ್ಞ ಕವಿ, ಸಂತರು, ದಾಸರು, ಬಸವಾದಿ ಶಿವಶರಣರು, ಜಾನಪದ ಶ್ರಮಜೀವಿಗಳನ್ನು, ಹಳ್ಳಿಹಳ್ಳಿಗಳಲ್ಲಿ ಕನ್ನಡ ಪರಂಪರೆಯನ್ನು ಜೀವಂತವಾಗಿ ಕಾಯ್ದುಕೊಂಡಿರುವ ಹಿರಿಯರನ್ನು ಸ್ಮರಿಸಬೇಕು. ಗಂಗ, ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರು ಹಾಗೂ ದಿವಾನರುಗಳು ಆಳ್ವಿಕೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಬೆಳೆದಿವೆ ಎಂದರು.
ಕರ್ನಾಟಕ ಏಕೀಕರಣದ ರೂವಾರಿಗಳನ್ನು ಸ್ಮರಿಸೋಣ
ಸ್ವಾತಂತ್ರ್ಯ ಗಳಿಸಿದಾಗ ಕನ್ನಡನಾಡು ಮದ್ರಾಸ್ ಕರ್ನಾಟಕ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು ಮತ್ತು ಕೊಡಗು ಕರ್ನಾಟಕ ಎಂಬ 5 ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡನಾಡನ್ನು 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ಮೂಲಕ ಕನ್ನಡ ಭಾಗಗಳನ್ನು ಒಂದುಗೂಡಿಸಲಾಯಿತು. ಕನ್ನಡನಾಡಿನ ಏಕೀಕರಣಕ್ಕೆ ಶ್ರಮಿಸಿದ ಆಲೂರು ವೆಂಕಟರಾಯರು, ಪಂಜೆ ಮಂಗೇಶರಾಯರು, ಹುಯಿಲಗೋಳ ನಾರಾಯಣರಾವ್, ಅ.ನ.ಕೃಷ್ಣರಾಯರು, ಕಾರ್ನಾಡ್ ಸದಾಶಿವರಾಯರು, ಡೆಪ್ಯೂಟಿ ಚೆನ್ನಬಸಪ್ಪ, ಮುದವೀಡು ಕೃಷ್ಣರಾಯರು, ದೊಡ್ಡಮೇಟಿ ಅನ್ನದಾನಪ್ಪ, ಆರ್.ಆರ್.ದಿವಾಕರ, ಉತ್ತಂಗಿ ಚನ್ನಪ್ಪನವರು, ತ.ರಾ.ಸುಬ್ಬರಾವ್, ಕುವೆಂಪು, ಕಾರಂತರು, ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ಸರ್.ಎಂ.ವಿಶ್ವೇಶ್ವರಯ್ಯ, ಡಾ.ರಾಜಕುಮಾರ್ ಮೊದಲಾದ ಮಹಾನ್ ವ್ಯಕ್ತಿಗಳನ್ನು ನಾವು ಸ್ಮರಿಸಲೇಬೇಕು ಎಂದು ಸಚಿವರು ಪ್ರತಿಪಾದಿಸಿದರು.
ಲಕ್ಷ ಕಂಠಗಳ ಗೀತ ಗಾಯನ
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ವಿಶೇಷ ಆಸಕ್ತಿಯಿಂದ ಈ ಬಾರಿಯ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಕ್ಟೋಬರ್ 24 ರಿಂದ 30ರವರೆಗೆ “ಕನ್ನಡಕ್ಕಾಗಿ ನಾವು” ಎಂಬ ಧೈಯ ವಾಕ್ಯದೊಂದಿಗೆ ರಾಜ್ಯಾದ್ಯಂತ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕನ್ನಡ ಭಾಷೆ ಮತ್ತು ಸಂಸ್ಕತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆ ಅದರಲ್ಲೂ ವಿಶೇಷವಾಗಿ ಗಡಿನಾಡು ಪ್ರದೇಶಗಳಲ್ಲಿ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಕನ್ನಡದಲ್ಲೇ ಮಾತು, ಬರವಣಿಗೆ, ಸಂದೇಶ, ನಾಟಕ, ಸಂಗೀತ, ನೃತ್ಯ, ಸ್ಥಳೀಯ ಉಡುಪು ಹಾಗೂ ತಿನಿಸುಗಳ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜತೆಗೆ ನಾಡು ಕಂಡ ಶ್ರೇಷ್ಠ ಕವಿಗಳಾದ ಡಾ.ಕುವೆಂವು ಅವರ “ಬಾರಿಸು ಕನ್ನಡ ಡಿಂಡಿಮವ”, ಡಾ.ಕೆ.ಎಸ್.ನಿಸಾರ್ ಅಹಮದ್ ಅವರ “ಜೋಗದ ಸಿರಿ ಬೆಳಕಿನಲ್ಲಿ” ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು”; ಈ ಮೂರು ಗೀತೆಗಳ ಸಾಮೂಹಿಕ ಗೀತ ಗಾಯನ ಕಾರ್ಯಕ್ರಮವನ್ನು ಏಕಕಾಲಕ್ಕೆ ಅಕ್ಟೋಬರ್ 28ರಂದು ರಾಜ್ಯಾದ್ಯಂತ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮವನ್ನು ಮೊಟ್ಟಮೊದಲ ಬಾರಿಗೆ ಯಶಸ್ವಿಗೊಳಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಆಚರಿಸಿದ್ದು, ಹೆಮ್ಮೆಯ ಸಂಗತಿಯಾಗಿದೆ ಎಂದರು.
ರಾಜ್ಯೋತ್ಸವವು ನಾಡಹಬ್ಬವಾಗಿದ್ದು ಕನ್ನಡಿಗರೆಲ್ಲರು ಸಂಭ್ರಮಿಸಬೇಕಾದ ಸಂದರ್ಭ. ಈ ಸಂಭ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರ ನಾಡು ನುಡಿಗಳ ಅಭಿವೃದ್ಧಿಗಾಗಿ ಕನ್ನಡವನ್ನು ಕಟ್ಟಿಕೊಳ್ಳಬೇಕು. ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕøತಿ, ನೆಲ-ಜಲ, ಕೃಷಿ-ಕೈಗಾರಿಕೆ, ಅನ್ನ, ಅಕ್ಷರ ಮತ್ತು ಆರೋಗ್ಯ ಮುಂತಾಗಿ ಕರ್ನಾಟಕದ ಸರ್ವಾಂಗೀಣ ವಿಕಾಸವನ್ನು ಕುರಿತು ಚಿಂತಿಸಬೇಕಾದ ಸಂದರ್ಭ ಇದಾಗಿದೆ.
ಸಚಿವ ಡಾ.ಕೆ.ಸುಧಾಕರ್
ಕನ್ನಡ ಭಾಷೆ ಮತ್ತು ಸಾಹಿತ್ಯ ಪರಂಪರೆಯ ಶ್ರೀಮಂತಿಕೆ
ಕನ್ನಡವು ಜಗತ್ತಿನ 6,500 ಭಾಷೆಗಳಲ್ಲಿ 27ನೇ ಸ್ಥಾನ ಹೊಂದಿದೆ. ಕನ್ನಡ ಬರಹವನ್ನು ವಿಶ್ವ ಲಿಪಿ ಪ್ರಪಂಚದ ರಾಣಿ ಎನ್ನುತ್ತಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಗಳು ಪ್ರಬುದ್ದ ಸ್ಥಿತಿಯಲ್ಲಿದ್ದಾಗ ಇಂಗ್ಲಿಷ್ ಭಾಷೆಯು ಸೇರಿ ಜಗತ್ತಿನ ಹಲವು ಭಾಷೆಗಳು ಹುಟ್ಟಿರಲಿಲ್ಲವಂತೆ! ಇಷ್ಟು ಸುದೀರ್ಘ ಪರಂಪರೆ ಹೊಂದಿರುವ ಕನ್ನಡ ಭಾಷೆ ಮತ್ತು ಸಾಹಿತ್ಯವು ಹಲವು ಮಹಾನ್ ಕವಿಗಳಿಂದ ರೂಪಿಸಿರುವ ಪರಂಪರೆಯಾಗಿದೆ.
ಕಾಯಕತತ್ವ ಹಾಗೂ ಸಮ ಸಮಾಜ ನಿರ್ಮಾಣದ ಆಶಯ ಹೊಂದಿದ್ದ ಬಸವೇಶ್ವರರು ಕನ್ನಡ ಸಾಹಿತ್ಯ ಪರಂಪರೆಗೆ ಬುನಾದಿ ಹಾಕಿದ್ದಾರೆ. ಜಾತಿ, ಮತ, ಧರ್ಮ, ಲಿಂಗ, ತಾರತಮ್ಯವನ್ನು ಹೋಗಲಾಡಿಸಲು ಅನುಭವ ಮಂಟಪ ನಿರ್ಮಿಸಿ ಕಟ್ಟಕಡೆಯ ಜನರು ಮತ್ತು ಮಹಿಳೆಯರಿಗೆ ಅಕ್ಷರ ಕಲಿಸಿ ಅವರಿಂದ ವಚನಗಳನ್ನು ಬರೆಸಿದ್ದರು. ಸಮಾನತೆ, ಜಾತ್ಯತೀತ ನಿಲುವು, ಮತ ಮತ್ತು ಮೌಡ್ಯಗಳನ್ನು ಬೇರು ಸಹಿತ ತೊಡೆದು ಹಾಕಲು ಕ್ರಾಂತಿ ಮಾಡಿದ್ದಾರೆ ಎಂದರು ಅವರು.
ಓದುವ ಸಮಾಜ ನಿರ್ಮಾಣ
ಜನತೆಯಲ್ಲಿ ಓದುವ ಹವ್ಯಾಸವಿಲ್ಲದ ದೇಶ ಅಭಿವೃದ್ಧಿಯಾಗಲಾರದು, ಓದುವುದರಿಂದ ವಿಚಾರಶಕ್ತಿ, ಸಂವೇದನೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ಮತ್ತು ಅಕ್ಷರ ಕಲಿತ ಪ್ರತಿಯೊಬ್ಬರೂ ಕನ್ನಡ ವೃತ್ತಪತ್ರಿಕೆಗಳು, ಸಾಹಿತ್ಯ, ವಿಚಾರ ಹಾಗೂ ಸಮಕಾಲಿನ ಪುಸ್ತಕಗಳು ಹಾಗೂ ನಿಯತಕಾಲಿಕೆಗಳನ್ನು ನಿರಂತರ ಓದಬೇಕು. ಇದರಿಂದಾಗಿ ವ್ಯಕ್ತಿಯ ವಿಕಸನ ಹಾಗೂ ನಾಡುನುಡಿಗಳ ಅಭಿವೃದ್ಧಿಯೂ ಆಗುತ್ತದೆ. ಜನಸಾಮಾನ್ಯರಿಗೆ ಮತ್ತು ತಾಯಂದಿರಿಗೆ ಕನ್ನಡ ಸಾಹಿತ್ಯ ತಲುಪಬೇಕು. ಪಂಡಿತರಿಗಷ್ಟೇ ಅಲ್ಲದೇ ಶ್ರೀ ಸಾಮಾನ್ಯರಿಗೆ, ಓದುಬರಹ ಕಲಿಯದವರಿಗೂ, ಕನ್ನಡ ಸಾಹಿತ್ಯವನ್ನು ತಿಳಿಯುವ ವ್ಯವಸ್ಥೆಯಾಗಬೇಕು ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯಕ್ಕೆ ನಮ್ಮ ಜಿಲ್ಲೆಯ ಕೊಡುಗೆ
ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯವರಾದ ಕೈವಾರ ನಾರೇಯಣ ಕವಿ, ಗೂಳೂರಿನ ಜಚನಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ.ಗುಂಡಪ್ಪ, ಪ್ರಧಾನ ಗುರುದತ್, ತೀ.ತಾ. ಶರ್ಮ, ಹಂಪ ನಾಗರಾಜಯ್ಯ ಮೊದಲಾದವರು ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ʼಸಿರಿಭೂವಲಯʼ ಕೃತಿ ರಚಿಸಿರುವ ಕುಮುದೆಂದು ಕವಿಯು ನಮ್ಮ ತಾಲೂಕಿನ ಯಲುವಹಳ್ಳಿಯಲ್ಲಿದ್ದರು ಎಂಬುದು ಹೆಮ್ಮೆಯ ಸಂಗತಿ. ಚಿಕ್ಕಬಳ್ಳಾಪುರ ಜಿಲ್ಲೆಯು ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಡಾ.ಸಿ.ಎನ್.ಆರ್.ರಾವ್ ಈ ಇಬ್ಬರು ಭಾರತರತ್ನಗಳನ್ನು ದೇಶಕ್ಕೆ ನೀಡಿದೆ. ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರು ಜಿಲ್ಲೆಯ ಶಿಕ್ಷಣ ಪ್ರಸಾರಕ್ಕೆ ಸಲ್ಲಿಸಿರುವ ಸೇವೆ ಸ್ಮರಣೀಯ. ಇವರೆಲ್ಲ ಕನ್ನಡ ಭಾಷೆ ಮತ್ತು ಸಂಸ್ಕತಿ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿರುತ್ತಾರೆ ಎಂದು ಡಾ.ಸುಧಾಕರ್ ವಿವರಿಸಿದರು. .
ಸಾಮರಸ್ಯ ಇರಬೇಕು
ನಮ್ಮ ಜಿಲ್ಲೆ ಆಂಧ್ರ ಪ್ರದೇಶದ ಗಡಿಯಾಗಿದ್ದು ಜನಜೀವನದಲ್ಲಿ ತೆಲುಗಿನ ಪ್ರಭಾವವಿದ್ದರೂ ನಾವು ತೆಲುಗು ಭಾಷೆಯನ್ನು ವಿರೋಧಿಸಬೇಕಾಗಿಲ್ಲ. ಭಾಷೆಗಳು ಬೆರೆಯಾದರೂ ನಮ್ಮೆಲ್ಲರ ಭಾವಗಳು ಒಂದೇ ಆಗಬೇಕು. ಕನ್ನಡದ ಸಹೋದರ ಭಾಷೆಗಳು ಮತ್ತು ಸಂಸ್ಕøತಿಗಳ ನಡುವೆ ಸಾಮರಸ್ಯ ಇರಬೇಕು- ಸಂಘರ್ಷ ಬೇಡ. ನಮ್ಮ ಅಗತ್ಯಕ್ಕೆ ತಕ್ಕಂತೆ ಕನ್ನಡದ ಜೊತೆಗೆ ಸಹೋದರ ಭಾಷೆಗಳನ್ನು ಕಲಿತು ಬಳಸೋಣ. ಆದರೆ, ಕನ್ನಡ ಭಾಷೆಯನ್ನು ತಾಯಿಯಂತೆ ಗೌರವಿಸಿ ಕನ್ನಡ ಭಾಷೆಯಲ್ಲಿಯೇ ಜೀವಿಸೋಣ. ಶಾಲಾ ಕಾಲೇಜುಗಳು, ಗ್ರಂಥಾಲಯ, ಆಡಳಿತ ಭವನಗಳು, ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ವಾತಾವರಣ ಸೃಷ್ಟಿಯಾಗಬೇಕು ಎಂದರು ಸಚಿವರು.
ಎಚ್.ಎನ್ ವ್ಯಾಲಿ ನೀರಿನ ಹರಿವು
ಜಿಲ್ಲೆಯ ರೈತ ಬಾಂಧವರಿಗೆ ಅನುಕೂಲವಾಗುವಂತೆ ಎಚ್.ಎನ್ ವ್ಯಾಲಿ ಯೋಜನೆಯಡಿ ಜಿಲ್ಲೆಯ 44 ಕೆರೆಗಳನ್ನು ತುಂಬಿಸಲು ನೀರು ಹರಿಸಲಾಗಿತ್ತು. ದೇವರ ಕೃಪೆಯಿಂದ ಹಿಂದೆಂದು ಕಾಣದ ವಾರ್ಷಾಧಾರೆಯು ಸುರಿದಿದ್ದರಿಂದ ಹಾಗೂ ಎಚ್.ಎನ್.ವ್ಯಾಲಿಯ ನೀರು ಹರಿದಿದ್ದರಿಂದ 44 ಕೆರೆಗಳ ಪೈಕಿ 43 ಕೆರೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, ಉಳಿದ 1 ಕೆರೆಯಲ್ಲಿ ಶೇ.50 ರಷ್ಟು ನೀರು ಶೇಕರಣೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದರಿಂದ ಅಸಂಖ್ಯಾತ ರೈತರು ಪ್ರಯೋಜನವನ್ನು ಪಡೆಯುವಂತಾಗಿದೆ. ಬಯಲು ಸೀಮೆಗೆ ನೀರುಣಿಸುವ ಎತ್ತಿನಹೊಳೆ ಯೋಜನೆಯೂ ಸಹ ಪ್ರಗತಿಯಲ್ಲಿದ್ದು, ಇದಲ್ಲದೇ ಜಿಲ್ಲಾ ಪಂಚಾಯತಿ ಮತ್ತು ಸಣ್ಣ ನೀರಾವರಿ ಇಲಾಖೆಯಡಿ ಬರುವ ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳು ಈ ವರ್ಷದ ಧಾರಕಾರ ಮಳೆಗೆ ತುಂಬಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಅತಿ ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆಯ ಬೆಳೆಗಳು ನಾಶವಾಗಿರುವುದನ್ನು ಮನಗಂಡ ಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದೆ. ಸದ್ಯದಲ್ಲೆ ಮಳೆಯಿಂದ ಪೀಡಿತರಾದ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ಸರಕಾರದಿಂದ ಸದ್ಯದಲ್ಲೇ ವಿತರಿಸಲಾಗುವುದು ಎಂದರು ಎಂದು ಅವರು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಕೈಗಾರಿಕಾ ಹಬ್ ಆಗಬೇಕು
ಕೈಗಾರಿಕಾ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಕೇಂದ್ರ ತಾಣಗಳನ್ನಾಗಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪರಿವರ್ತಿಸಲು ಎಲ್ಲಾ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಈ ಭಾಗದಲ್ಲಿ ಕೈಗಾರಿಕಾ ಹಬ್ ಆರಂಭಿಸಲು ಸರ್ಕಾರ ಒಲವು ಹೊಂದಿದ್ದು, ಈ ಉದ್ದೇಶಕ್ಕಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಈಗಾಗಲೇ ಸರಿಸುಮಾರು 4000 ಎಕರೆಯನ್ನು ಜಮೀನನ್ನು ಕೈಗಾರಿಕಾ ಹಬ್ ನಿರ್ಮಾಣಕ್ಕಾಗಿ ಗುರುತಿಸಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆÉಯಡಿ ಒಟ್ಟು 1,20,855 ಫಲಾನುಭವಿಗಳು ನೊಂದಣಿಯಾಗಿದ್ದು, ರೂ.172.77 ಕೋಟಿಗಳಷ್ಟು ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಿರುತ್ತಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಲಿದೆ ಹಾಗೂ ಜಿಲ್ಲೆಯು ಅನೇಕ ಪ್ರಸಿದ್ಧ ಪ್ರವಾಸಿ ಕೇಂದ್ರಗಳನ್ನು ಹೊಂದಿದ್ದು, ಕರ್ನಾಟಕದ ಊಟಿ ಎಂದೇ ಹೆಸರಾದ ನಂದಿಗಿರಿಧಾಮವನ್ನು ಅಂತÀರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಜಿಲ್ಲಾಡಳಿತದ ದಕ್ಷ ಕಾರ್ಯವೈಖರಿಗೆ ನಿದರ್ಶನ
ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯೂ ಸಹ ಕೊರೋನಾ ವಿಪತ್ತಿನಿಂದಾಗಿ ಸಾವು-ನೋವುಗಳಿಗೆ ಸಾಕ್ಷಿಯಾಗಬೇಕಾಯಿತು. ಆದರೆ ಯುಕ್ತ ಸಮಯದಲ್ಲಿ ಸರ್ಕಾರದ ನೆರವು, ಜಿಲ್ಲಾಡಳಿತದ ಸಂವೇದನಾಶೀಲ ನಿರ್ವಹಣೆಗಳಿಂದಾಗಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಈ ಪಿಡುಗಿನ ವಿರುದ್ಧ ಸಮರ ಸಾರಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಜಿಲ್ಲೆಯಲ್ಲಿರುವ ಗ್ರಾಮಗಳು ಮತ್ತು ವಾರ್ಡ್ವಾ್ರು ಕೋವಿಡ್ ನಿಯಂತ್ರಣ ಟಾಸ್ಕ್ ಪೋರ್ಸ್ ಸಮಿತಿಗಳನ್ನು ರಚಿಸಿ ಕೋವಿಡ್ನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ. ಕಾಲಕಾಲಕ್ಕೆ ಜನರಲ್ಲಿ ಕೊರೋನಾ ನಿಯಂತ್ರಣಾ ಮಾರ್ಗಸೂಚಿ ಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ನಟ ಆರಂಭದಿಂದ ಈವರೆಗೆ 43,942 ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದು, ಈ ಪೈಕಿ 43,501 ಜನರು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದು ಶೇ. 98.94 ರಷ್ಟು ಮಂದಿ ಗುಣಮುಖರಾಗಿರುವುದು ಜಿಲ್ಲಾಡಳಿತದ ದಕ್ಷ ಕಾರ್ಯವೈಖರಿಗೆ ನಿದರ್ಶನವಾಗಿದೆ.
ಜೊತೆಗೆ ಕೊರೋನಾ ಪಿಡುಗನ್ನು ಸಂಪೂರ್ಣವಾಗಿ ತೊಲಗಿಸಲು ಲಸಿಕಾಕರಣವೇ ಅಂತಿಮ ಅಸ್ತ್ರವಾಗಿದೆ ಎಂಬುದನ್ನು ಅರಿತ ಜಿಲ್ಲಾಡಳಿತ ಲಸಿಕಾಕರಣವನ್ನು ಅಭಿಯಾನದ ರೀತಿಯಲ್ಲಿ ನಿರಂತರವಾಗಿ ಕೈಗೊಳ್ಳುತ್ತಾ ಬಂದಿದೆ. ಇದುವರೆಗೂ ಮೊದಲನೇ ಡೋಸ್ ಲಸಿಕೆಯನ್ನು 8,49,075 (89.29%) ಮತ್ತು ಎರಡನೇ ಡೋಸ್ ಲಸಿಕೆಯನ್ನು 4,81,614 (50.64%) ಫಲಾನುಭವಿಗಳು ಪಡೆದಿದ್ದಾರೆ. ನಮ್ಮ ಜಿಲ್ಲಾಡಳಿತವು ತೀವ್ರ ಸಂಕಷ್ಟದ ನಡುವೆಯೂ ಯಾವುದೇ ಜನರಲ್ಲಿ ಅನಾಥಪ್ರಜ್ಞೆ ಕಾಡದಂತೆ ಬಹಳ ದೂರದರ್ಶಿತ್ವದೊಂದಿಗೆ ಕಾರ್ಯ ನಿರ್ವಹಿಸಿದ್ದು, ಸರ್ಕಾರದ ಜನಪರ ಕಾಳಜಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ.ವೈದ್ಯರು,ದಾದಿಯರು ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆಗಳನ್ನು ತಿಳಸಿದರು.
ಇಷ್ಟೆಲ್ಲಾ ಪ್ರಗತಿಗಳ ನಡುವೆ ಕೊರೋನಾ ಪಿಡುಗು ಇನ್ನೂ ಪೂರ್ಣವಾಗಿ ನಾಶವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಜನರು ಕಡ್ಡಾಯವಾಗಿ ಕೊರೋನಾ ನಿಯಮಗಳನ್ನು ಅನುಸರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು ಹಾಗೂ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಎಂಬ ಸಿದ್ದಾಂತವನ್ನು ಅನುಷ್ಠಾನಗೊಳಿಸಲು ನಾವೆಲ್ಲರೂ ಮುಂದಾಗೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಗೌರವ ವಂದನೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಪೊಲೀಸ್ ಕವಾಯತು ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆದವು. ಕನ್ನಡ ನಾಡು ನುಡಿ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಸಾಧಕರನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ ಬಿ.ವಿ.ಕೃಷ್ಣ (ಶಿಕ್ಷಣ), ವೆಂಕಟರಮಣ ಬಿನ್ ಆದೆಪ್ಪ (ಜಾನಪದ ಕಲೆ), ಕೆ.ನರಸಿಂಹಪ್ಪ (ಸಾಹಿತ್ಯ), ಮೊಹಮ್ಮದ್ ಜಿಲಾನಿ (ಮಾಧ್ಯಮ), ಎಸ್.ಪಿ.ಗೋಪಾಲಕೃಷ್ಣ (ಸಾಹಿತ್ಯ), ಶಿವರಾಂ ಬಿನ್ ಬೀರಪ್ಪ ಹೋಟೆಲ್ ರಾಮಣ್ಣ(ಸಮಾಜಸೇವೆ), ವೀರಭದ್ರಯ್ಯ (ಜಾನಪದ ಕಲೆ) , ಎ.ಎಂ.ತ್ಯಾಗರಾಜು (ಸಾಹಿತ್ಯ), ರಾಜಮ್ಮ (ರಂಗಭೂಮಿ) ಮತ್ತು ರವಿಕುಮಾರ್ ವಿ (ದೃಶ್ಯಮಾಧ್ಯಮ) ಇವರುಗಳನ್ನು ಸನ್ಮಾನಿಸಲಾಯಿತು.