ಜ್ಞಾನ ಭಂಡಾರಕ್ಕೆ ಶಿಕ್ಷಕರು & ಸರಕಾರಿ ನೌಕರರ ಸಂಘದಿಂದ ಇಂದು ಬೀಳ್ಕೊಡುಗೆ
By GS Bharath Gudibande
ಗುಡಿಬಂಡೆ: ಕಡು ಬಡತನದಲ್ಲಿ ಹುಟ್ಟಿ ಬೆಳೆದ ವ್ಯಕ್ತಿ ಹಾಗೂ ಪುಸ್ತಕ ಪ್ರೇಮಿಯೂ ಜ್ಞಾನವೇ ಭಂಡಾರವೆಂದೇ ಹೆಸರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಅವರು ಗುಡಿಬಂಡೆಯಿಂದ ಚಿಂತಾಮಣಿ ತಾಲೂಕಿಗೆ ವರ್ಗಾವಣೆಯಾಗಿದ್ದಾರೆ.
ಸದಾ ಲವಲವಿಕೆಯ, ಸೃಜನಶೀಲ ಮನೋಭಾವದ ವೆಂಕಟೇಶಪ್ಪ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹಾಗೂ ಕಾನುಮಾಕಲಹಳ್ಳಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ ನಂತರ ಬಾಗೇಪಲ್ಲಿ ತಾಲೂಕಿನ ಬಿಆರ್‌ಸಿ (ಸಮನ್ವಯಾಧಿಕಾರಿ)ಯಾಗಿ ಕೆಲ ಕೆಲಸ ಮಾಡಿದ್ದರು. ಶಿಡ್ಲಘಟ್ಟ ತಾಲೂಕಿನಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಮಹತ್ವದ ಸುಧಾರಣೆಗಳನ್ನು ತಂದಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಬಡ್ತಿ ಪಡೆದು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಕೆಲಸ ಮಾಡಿದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಗೆ ವರ್ಗಾವಣೆಯಾಗಿ ಬಂದಿದ್ದರು.

ಗುಡಿಬಂಡೆಯಲ್ಲಿ ವೆಂಕಟೇಶಪ್ಪ ಸಾಧನೆ
- 2019- 2020ರಲ್ಲಿ ಗುಡಿಬಂಡೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸುಕನ್ಯಾ ಅವರ ವರ್ಗಾವಣೆ ನಂತರ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೆಂಕಟೇಶಪ್ಪ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬರುವುದರಲ್ಲಿ ಶ್ರಮಿಸಿದ್ದರು.
- 2020-2021ರ ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಫೋನ್ ಇನ್ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಮತ್ತು ಪೋಷಕರ ಸಂದೇಹಗಳನ್ನು ನಿವಾರಿಸುವ ಮೂಲಕ ಉತ್ತಮ ಫಲಿತಾಂಶ ಬರಲು ಕಾರಣರಾಗಿದ್ದರು.
- 2020-21ರಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜೆಲ್ಲೆಗೆ ಪ್ರಥಮ ಸ್ಥಾನ ಪಡಯುವಲ್ಲಿ ಶ್ರಮಿಸಿದ್ದರು.
- ಶಿಕ್ಷಕರ ಸ್ನೇಹಿಯಾಗಿ, ಶಿಕ್ಷಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಷ್ಕರಿಸುತ್ತಿದ್ದರು.
- ತಾಲೂಕಿನ ಹಂಪಸಂದ್ರ, ಬೀಚಗಾನಹಳ್ಳಿ ಹಾಗೂ ಆದರ್ಶ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿರುವ ಕೀರ್ತಿ ಅವರದ್ದು.
- ತಾಲೂಕಿನ ಯಲಕಲರಾಲಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮಾಡಲು ಶ್ರಮಿಸಿದ್ದರು.
- ತಾಲೂಕಿನ ಪ್ರತಿಯೊಂದು ಶಾಲೆಗೆ ಬೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದರು.
ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ, ಶಿಕ್ಷಕ ಸ್ನೇಹಿ ಅಧಿಕಾರಿಯಾಗಿ ತಾಲೂಕಿನಾದ್ಯಂತ ವೆಂಕಟೇಶಪ್ಪ ಚಿರಪರಿಚಿತರು. ಶಿಕ್ಷಣ ವಂಚಿತ ಮಕ್ಕಳ ಪಾಲಿನ ಆಶಾಕಿರಣವಾಗಿದ್ದರು. ಮಕ್ಕಳಿಗೆ ಶಿಕ್ಷಣ ಕೊಡುವಲ್ಲಿ ವ್ಯತ್ಯಾಸವಾದರೆ ಕಠಿಣವಾಗಿ ವರ್ತಿಸುತ್ತಿದ್ದರು. ತಾಲೂಕಿನ ಶಾಲೆಗಳಿಗೆ ಹೊಸತನ ತುಂಬಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು.
ಬಾಲಾಜಿ, ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷರ ಸಂಘ, ಗುಡಿಬಂಡೆ
‘ಶಿಕ್ಷಣವೇ ಜೀವನ, ಜೀವನವೇ ಶಿಕ್ಷಣ’ ಎಂಬಂತೆ ವೆಂಕಟೇಶಪ್ಪ ಅವರು ಶಿಕ್ಷಣ ಪ್ರೇಮಿ. ಜ್ಞಾನಿಯಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ಗಾವಣೆ ಗುಡಿಬಂಡೆ ತಾಲೂಕಿಗೆ ನಷ್ಟವಾಗಿದೆ. ಅವರ ಮುಂದಿನ ವೃತ್ತಿ ಬದುಕಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ.
ವಿ.ಶ್ರೀರಾಮಪ್ಪ, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಗುಡಿಬಂಡೆ
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಗುಡಿಬಂಡೆ ತಾಲೂಕಿನ ಶಾಲೆಗಳ ಅಭಿವೃದ್ಧಿಗೆ ಬಹಳ ಶ್ರಮಿಸಿದ್ದಾರೆ. ಉತ್ತಮ ವಾಗ್ಮಿಗಳು, ದೂರದೃಷ್ಟಿಯಿಂದ ಕ್ರಮ ಕೈಗೊಳ್ಳುತ್ತಿದ್ದರು. ಮಕ್ಕಳ ಪಾಠ, ತರಗತಿಗಳು, ಕೆಲಸ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳುತ್ತಿದ್ದರು. ವರ್ಗಾವಣೆ ಎನ್ನುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ಆದರೆ ಅವರ ವರ್ಗಾವಣೆಯಿಂದ ತಾಲೂಕಿಗೆ ನಷ್ಟವಾಗಿದೆ.
ಕೆ.ವಿ.ನಾರಾಯಣಸ್ವಾಮಿ, ಅಧ್ಯಕ್ಷರು, ಸರಕಾರಿ ನೌಕರರ ಸಂಘ, ಗುಡಿಬಂಡೆ




















