ಚಿಕ್ಕಬಳ್ಳಾಪುರ- ಕೋಲಾರ ಜಿಲ್ಲೆಗಳ ಕೆರೆ ನೀರಾವರಿ ಮತ್ತು ಇಂದಿನ ಪರಿಸ್ಥಿತಿ
- ಕಳೆದ ನಲವತ್ತೈದು ದಿನಗಳಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಆದರೆ, ಈ ಮಳೆನೀರು ಎರಡೂ ಜಿಲ್ಲೆಗಳಲ್ಲೂ ನಿಲ್ಲದೆ ಅಕ್ಕಪಕ್ಕದ ರಾಜ್ಯಗಳಿಗೆ ಹರಿದುಹೋಗುತ್ತಿದೆ. ಈ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು.
ಡಾ.ಎಂ.ವೆಂಕಟಸ್ವಾಮಿ
ಕಳೆದ ಕೆಲ ದಿನಗಳಿಂದ ಎಡಬಿಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳು ಕೋಡಿ ಹರಿಯುತ್ತಿವೆ, ಇಲ್ಲ ಛಿಧ್ರಗೊಂಡು ನೀರೆಲ್ಲ ಹರಿದುಹೋಗುತ್ತಿದೆ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಕೆರೆಗಳು ಕೋಡಿ ಹರಿಯುವ ಚಿತ್ರಗಳನ್ನು ಜನರು ವಿಡಿಯೋಗಳಲ್ಲಿ ಹಂಚಿಕೊಂಡು ಸಂಭ್ರಮಪಡುತ್ತಿದ್ದಾರೆ. ಆದರೆ ಇದನ್ನು ನೋಡುತ್ತಿರುವ ನಮ್ಮಂತ ಹಿರಿಯ ತಲೆಮಾರಿನ ಜನರಿಗೆ ಸಂತೋಷದ ಬದಲಿಗೆ ದುಃಖವೇ ಒತ್ತರಿಸಿ ಬರುತ್ತಿದೆ. ಈ ಕೆರೆಗಳ ಇತಿಹಾಸದ ಬಗ್ಗೆ ಒಂದೆರಡು ಮಾತುಗಳನ್ನು ನಿಮ್ಮ ಜತೆಗೆ ಹಂಚಿಕೊಳ್ಳಬೇಕೆನಿಸುತ್ತಿದೆ.
ನದಿಗಳಿಲ್ಲದ ಕೋಲಾರ ಜಿಲ್ಲೆ ಕೆರೆಗಳ ಜಿಲ್ಲೆ ಎಂದೇ ಪ್ರಖ್ಯಾತಿ. ಇದು ಒಂದು ರೀತಿಯಲ್ಲಿ ವರವೂ ಹೌದು, ಶಾಪವೂ ಹೌದು. ವರ ಎಂದರೆ ಇತ್ತೀಚಿನ ದಿನಗಳಲ್ಲಿ ನದಿಗಳಿರುವ ಮತ್ತು ಕಡಲ ತೀರಗಳಿರುವ ರಾಜ್ಯಗಳ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ ನಮ್ಮ ಜಿಲ್ಲೆಯಲ್ಲಿ ನದಿಗಳು ಇಲ್ಲದೇ ಇರುವುದೇ ವಾಸಿ ಎನಿಸುತ್ತದೆ. ಶಾಪವೆಂದರೆ ನಮ್ಮ ಜಿಲ್ಲೆಯಲ್ಲಿ ನೀರು ಹರಿಯುವ ಒಂದೂ ನದಿಯೂ ಇಲ್ಲದೇ ಇರುವುದು. ನಂದಿಬೆಟ್ಟದಲ್ಲಿ ಐದು ನದಿಗಳು ಹುಟ್ಟಿದರೂ ಎರಡೂ ಜಿಲ್ಲೆಗಳಿಗೆ ಏನೂ ಪ್ರಯೋಜನ ಇಲ್ಲ. ಹಾಗಾಗಿ ನಮ್ಮ ಪೂರ್ವಿಕರು ಮಳೆಗಾಲದಲ್ಲಿ ಸಣ್ಣಪುಟ್ಟ ನದಿ ಝರಿಗಳಿಂದ ಹರಿದುಬರುವ ಜಲಾನಯನದಲ್ಲೆ ಕೆರೆಗಳ ಸರಣಿಯನ್ನೇ ನಿರ್ಮಿಸಿ ಬದುಕು ಕಟ್ಟಿಕೊಂಡಿದ್ದರು.
ಗಂಗರು, ಚೋಳರ ಕಾಲದಿಂದ ಇತ್ತೀಚಿನವರೆಗೆ ಹಳ್ಳಿಗಳ ಒಳಿತಿಗಾಗಿ ʼಕೆರೆಯಿಂದ ಕೆರೆಗೆ’ ಎಂಬ ತತ್ವದ ಮೇಲೆ ಕೆರೆಗಳನ್ನು ನಿರ್ಮಾಣ ಮಾಡಿ ಕಾಲಕಾಲಕ್ಕೆ ದುರಸ್ತಿ ಮಾಡಿಕೊಂಡು ಬರಲಾಗಿತ್ತು. ಕರ್ನಾಟಕ ರಾಜ್ಯದಲ್ಲಿ ಸುಮಾರು ೩೬,೦೦೦ ಕೆರೆಗಳಿದ್ದರೆ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳೆರಡರಲ್ಲೇ ಸುಮಾರು ೪,೨೨೪ ಕರೆಗಳಿದ್ದವು ಎನ್ನಲಾಗಿದೆ. ಒಂದು ಕೆರೆ ತುಂಬಿ ಕೋಡಿ ಹರಿದರೆ ಆ ನೀರು ಕೆಳಗಿನ ಹಂತದಲ್ಲಿರುವ ಕೆರೆಗೆ ಹರಿದು, ಅಲ್ಲಿಂದ ಮತ್ತೊಂದು ಕರೆಗೆ, ಹೀಗೆ ಎಲ್ಲಾ ನದಿ-ಜಲಾನಯನದ ಕೆರೆಗಳೆಲ್ಲ ನೀರನ್ನು ಹಂಚಿಕೊಂಡು ಇಡೀ ಜಿಲ್ಲೆ ಕೃಷಿ, ಸಸ್ಯಶ್ಯಾಮಲೆಯಿಂದ ನಳಿನಳಿಸುತ್ತಿತ್ತು. ಆದರೆ ಇಂದು ಆ ಕೆರೆಗಳೆಲ್ಲ ಒತ್ತುವರಿಯಾಗಿ, ಸಂಪೂರ್ಣ ನಿರ್ಲಕ್ಷ್ಯತೆಗೆ ಒಳಗಾಗಿ ಅನೇಕ ಕೆರೆಗಳು ಮಾಯವಾಗಿವೆ. ಇಲ್ಲ ಊಳಿನಿಂದ ತುಂಬಿಕೊಂಡು ಹೆಸರಿಗೆ ಮಾತ್ರ ಕರೆಗಳಂತೆ ಕಾಣಿಸುತ್ತಿವೆ.
ಎಷ್ಟೇ ಮಳೆ ಬಂದರೂ ಏನೂ ಪ್ರಯೋಜನ ಇಲ್ಲ. ಕಳೆದ ಮೂರು ನಾಲ್ಕು ದಶಕಗಳಿಂದ ಸಂಪೂರ್ಣ ನಿರ್ಲಕ್ಷೆಗೆ ಒಳಗಾಗಿರುವ ಕೆರೆಗಳು ಹೂಳು ತುಂಬಿಕೊಂಡು ಒತ್ತುವರಿಯಾಗಿ ಮಾಲಿನ್ಯಗೊಂಡಿವೆ. ಹಿಂದಿನ ದಿನಗಳಲ್ಲಿ ಹಳ್ಳಿ ಸಮುದಾಯಗಳೇ ಕೆರೆಗಳನ್ನು ನಿರ್ವಹಿಸುತ್ತಿದ್ದವು. ಆ ನಂತರ ರಾಜ್ಯ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡ ಕೆಲವು ದಶಕಗಳು ಸರಿಯಾಗಿಯೇ ನಡೆಯುತ್ತಿತ್ತು. ಜನರ ಮನಸ್ಥಿತಿಗಳು ಬದಲಾದವು, ರಾಜಕೀಯ ಹಳ್ಳಿಗಳಿಗೆ ತಲುಪಿದ್ದೇ ಎಲ್ಲವೂ ತಿರುಗಾಮರುಗಾಗಿ ಎಲ್ಲಾ ರೀತಿಯ ಕೆಲಸಗಳಲ್ಲೂ ಭ್ರಷ್ಟತೆ ತುಂಬಿಕೊಂಡು ಕೆರೆಗಳು ಮಾಯವಾದವು, ಇಲ್ಲ ಮಲಿನಗೊಂಡವು.
ಮಳೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳದೇ ಹೋದರೆ ಮಳೆ ಎಷ್ಟೇ ಸುರಿದರೂ ಏನೂ ಪ್ರಯೋಜನ ಇಲ್ಲ. ಮಳೆಬಿದ್ದ ತಕ್ಷಣವೇ ರೈತರು ಕೊಳವೆ ಬಾವಿಗಳಿಂದ ಅಂತರ್ಜಲದ ನೀರನ್ನೆಲ್ಲ ಮೇಲಕ್ಕೆ ಹರಿಸಿ ಸಾಕಷ್ಟು ಪೋಲು ಮಾಡಿ ಆರ್ಥಿಕ ಬೆಳಗಳನ್ನು ಬೆಳೆಸಿ ರಸ್ತೆಗಳಿಗೆ ಚೆಲ್ಲುವುದು ಪ್ರಾರಂಭವಾಗಿಬಿಡುತ್ತದೆ. ಆ ದೃಶ್ಯಗಳನ್ನು ನೋಡುತ್ತಿದ್ದರೆ ಕೆಲವೊಮ್ಮೆ ಕರುಳು ಹಿಂಡಿದಂತಾಗುತ್ತದೆ.
ರೈತರು ಹಿಂದೆಂದಿಗಿಂತ ಈಗ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಯಾಕೆಂದರೆ ಬಡತನ, ನಿರುದ್ಯೋಗ, ಗಗನಕ್ಕೇರಿದ ಬೆಲೆಗಳು, ಆರ್ಥಿಕ ಮುಗ್ಗಟ್ಟು ದೇಶವನ್ನು ಆವರಿಸಿಕೊಂಡಿರುವಾಗ ಹಣ ಮತ್ತು ಶ್ರಮ ಎರಡನ್ನೂ ಪೋಲು ಮಾಡುವುದು ಸರಿಯಲ್ಲ. ಸರಿಯಾದ ರೀತಿಯಲ್ಲಿ ಯೋಜನೆಗಳನ್ನು ಮಾಡಿಕೊಂಡು ಬೆಳೆಗಳನ್ನು ಬೆಳೆಯುವುದು ಈಗ ಅನಿವಾರ್ಯವಾಗಿದೆ. ಸಾಲಸೋಲ ಮಾಡಿಕೊಂಡು ಬೆಳೆಗಳನ್ನು ಬೆಳೆದು ನಷ್ಟ ಮಾಡಿಕೊಳ್ಳುವುದಕ್ಕಿಂತ ಬೆಳೆಯದೇ ಇರುವುದೇ ವಾಸಿ. ಬೆಳೆಗಳನ್ನು ಬೆಳೆದು ನಷ್ಟವಾಗುವುದನ್ನು ತಪ್ಪಿಸಿ ಲಾಭ ಮಾಡಿಕೊಳ್ಳುವ ಯೋಜನೆಗಳನ್ನು ರೂಪಿಸಬೇಕಿದೆ.
ಹಾಗಾಗಿ ಯಾವ ಬೆಳೆಯನ್ನು ಬೆಳೆಯಬೇಕು? ಎಷ್ಟು ಬೆಳೆಯಬೇಕು? ಎನ್ನುವ ವೈಜ್ಞಾನಿಕ ಯೋಜನೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾದ ಕೆಲಸವಾಗಿದೆ. ಯಾವುದೇ ಬೆಳೆಯನ್ನು ಬೆಳೆಯುವುದಕ್ಕೆ ಮುಂಚೆ ಅದಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ. ಇಲ್ಲವೆಂದರೆ ಹಣ ದೊರಕುವ ಆರ್ಥಿಕ ಕೃಷಿ ಬೆಳೆಗಳನ್ನು ಎಷ್ಟು ಬೇಕೊ ಅಷ್ಟು ಮಾತ್ರ ಬೆಳೆದುಕೊಂಡು ಉಳಿದಂತೆ ದೀರ್ಘಕಾಲ ಸಂಗ್ರಹಿಸಿಡುವಂತಹ ಬೆಳೆಗಳನ್ನು/ಧಾನ್ಯಗಳನ್ನು ಬೆಳೆಯಬೇಕಾಗಿದೆ. ಕೆಲವು ತರಕಾರಿ ಹಣ್ಣುಗಳನ್ನು ಬೆಳೆದರೂ ಅವು ನಾಶವಾಗದಂತೆ ಎಚ್ಚರ ವಹಿಸಿ ಶೀತ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ಕಾಲಕಾಲಕ್ಕೆ ಬಳಸಿಕೊಳ್ಳುವ ಯೋಜನೆಗಳನ್ನು ಮಾಡಿಕೊಳ್ಳಬೇಕಿದೆ. ಇಂತಹ ಯೋಜನೆಗಳನ್ನು ಇಸ್ರೇಲ್, ಯುರೋಪ್, ಅಮೆರಿಕ ಮತ್ತು ಚೀನಾ ದೇಶಗಳು ಮೂರು ನಾಲ್ಕು ದಶಕಗಳಿಂದಲೇ ನಿರ್ವಹಿಸುತ್ತಿವೆ.
ಚೀನಾದಲ್ಲಿ ಬಹಳ ವರ್ಷಗಳ ಹಿಂದೆಯೇ ಜನ ಸಮುದಾಯಗಳು, ಆಡಳಿತಗಾರರು ಮತ್ತು ಕೃಷಿತಜ್ಞರು ಕಾಲಕಾಲಕ್ಕೆ ಚರ್ಚೆ ಮಾಡಿ ಎಷ್ಟು ನೀರು ದೊರಕುತ್ತದೆ? ಜನಸಂಖ್ಯೆಗೆ ಅನುಗುಣವಾಗಿ ಯಾವ ಯಾವ ಬೆಳೆಗಳನ್ನು ಎಷ್ಟೆಷ್ಟು ಬೆಳೆಯಬೇಕು ಎಂಬುದನ್ನು ನಿರ್ಧಾರ ಮಾಡುತ್ತಿತ್ತು. ಜತೆಗೆ ಬೆಳೆದ ಬೆಳೆಗಳನ್ನು ಸರಕಾರ ನಿರ್ದಿಷ್ಟ ಬೆಲೆಗೆ ರೈತರಿಂದ ಖರೀದಿ ಮಾಡಿ ಅದನ್ನು ಸೊಸೈಟಿಗಳ ಮೂಲಕ ವಿತರಣೆ ಮಾಡುವ ವ್ಯವಸ್ಥೆ ಮಾಡಿಕೊಂಡಿತ್ತು. ನೀರು, ಗೊಬ್ಬರ, ಬೀಜಗಳನ್ನು ಸರಕಾರ ರೈತರಿಗೆ ಉಚಿತವಾಗಿ ಪೂರೈಕ ಮಾಡಿ, ರೈತರು ಬೆಳೆದ ಬೆಳೆಗೆ ತಕ್ಕಂತೆ ಲಾಭಾಂಶ ದೊರಕುತ್ತಿತ್ತು. ಇಂತಹ ವ್ಯವಸ್ಥೆಯಿಂದ ರೈತರಿಗಾಗಲಿ, ಸರಕಾರಕ್ಕಾಗಲಿ ಮತ್ತು ಖರೀದಿ ಮಾಡುವ ಸಾರ್ವಜನಿಕರಿಗಾಗಲಿ ಯಾವುದೇ ತೊಂದರೆ ಇರುವುದಿಲ್ಲ. ಎಲ್ಲದರ ದರವನ್ನು ಸರಕಾರ ಮೊದಲೇ ನಿಗದಿ ಮಾಡಿಬಿಟ್ಟಿರುತ್ತದೆ.
ಇಂತಹ ವ್ಯವಸ್ಥೆ ಭಾರತದಲ್ಲಿ ಈಗ ನಡೆಯುವುದು ಅಸಾಧ್ಯದ ಮಾತೇ ಆಗಿದೆ. ಚೀನಾ ಮಾದರಿ ಅಥವಾ ಇಸ್ರೇಲ್ ಮಾದರಿ ಕೃಷಿಯನ್ನು ಮಾಡುತ್ತಾರೋ ಇಲ್ಲವೊ ಅದು ಬೇರೆ ಮಾತು. ಆದರೆ ಜಿಲ್ಲೆಯ ಜನರೆಲ್ಲ ಒಟ್ಟುಗೂಡಿ ತುರ್ತಾಗಿ ಒಂದು ಕೆಲಸವನ್ನು ಮಾಡಲೇಬೇಕಿದೆ. ಸರಕಾರ ನೂರಾರು ಕೋಟಿ ರೂಪಾಯಿಗಳನ್ನು ಯಾವ ಯಾವ ಕೆಲಸಕ್ಕೊ ವ್ಯಯ ಮಾಡುತ್ತದೆ. ಕೃಷಿ ಪ್ರಧಾನವಾದ ದೇಶದಲ್ಲಿ ಕೃಷಿ ಕಾರ್ಯದಲ್ಲಿ ಹೆಚ್ಚೆಚ್ಚು ಹಣ ತೊಡಿಗಿಸುವ ಕೆಲಸ ಮಾಡಬೇಕಿದೆ. ಅದೇನೇ ಇದ್ದರೂ ಮುಂದಿನ ದಿನಗಳಲ್ಲಿ ಸ್ವಲ್ಪವಾದರೂ ನೆಮ್ಮದಿ ಕಂಡುಕೊಳ್ಳಬೇಕಾದರೆ ಜಿಲ್ಲೆಯ ಜೀವನಾಡಿ ಕೆರೆಗಳ ಹೂಳನ್ನೆಲ್ಲ ತೆಗೆದು ಒತ್ತುವರಿಯನ್ನು ಬಿಡಿಸಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಕರೆಗಳನ್ನು ಉಳಿಸಿಕೊಳ್ಳಬೇಕಿದೆ. ಇಲ್ಲ ಬದುಕನ್ನು ಕಳೆದುಕೊಳ್ಳಬೇಕಿದೆ. ಎರಡೂ ಜನರ ಕೈಯಲ್ಲೇ ಇದೆ.
- ಲೇಖಕರು ಖ್ಯಾತ ಭೂ ವಿಜ್ಞಾನಿಗಳು