ಕ್ವಾರಂಟೈನ್ ಅವಧಿ 7ರಿಂದ 14 ದಿನಕ್ಕೆ ಹೆಚ್ಚಳ ಸಂಭವ
by M Krishnappa Chikkaballapura
ಚಿಕ್ಕಬಳ್ಳಾಪುರ: ಕೊರೊನಾ ಹೊಸ ತಳಿ ಓಮಿಕ್ರಾನ್ ಓಟಕ್ಕೆ ಅಂಕುಶ ಹಾಕಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿರುವ ರಾಜ್ಯ ಸರಕಾರ; ಬಿಗಿ ಕ್ರಮಗಳು ಅಥವಾ ಲಾಕ್‌ಡೌನ್ ಸುಳಿವು ನೀಡಲಿಲ್ಲವಾದರೂ ಜನರು ಕೋವಿಡ್ ಶಿಷ್ಠಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಬಿಗಿ ಮಾಡುವ ಸೂಚನೆಯನ್ನಂತೂ ನೀಡಿದೆ.
ಚಿಕ್ಕಬಳ್ಳಾಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು; “ವಿದೇಶಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಸೋಂಕಿತರನ್ನು ಪತ್ತೆ ಮಾಡಲು ಎಲ್ಲ ಕ್ರಮ ವಹಿಸಲಾಗಿದೆ. ಜನರು ಆತಂಕ್ಕೆ ಗುರಿ ಆಗುವುದು ಬೇಡ. ಆದರೆ, ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯ” ಎಂದರು.
ವಿದೇಶದಿಂದ ಬಂದವರಿಗೆ ಕೊವಿಡ್ ಟೆಸ್ಟ್ ಕಡ್ಡಾಯ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾದೆ. ಕ್ವಾರಂಟೈನ್ ಅವಧಿ ಹೆಚ್ಚಿಸಲು ಸಲಹೆ ಬಂದಿದ್ದು, ಕ್ವಾರಂಟೈನ್ ಅವಧಿಯನ್ನು 7 ದಿನಗಳಿಂದ 14 ದಿನಕ್ಕೆ ಹೆಚ್ವಿಸುವ ಚಿಂತನೆ ಇದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನಾಳೆ ಈ ಬಗ್ಗೆ ಮಹತ್ವದ ಸಭದೆ ನಡೆಸಲಿದ್ದೇನೆ. ಓಮಿಕ್ರಾನ್ ತಡೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದೆಲ್ಲವನ್ನು ಮಾಡಲಾಗುವುದು. ರಾಜ್ಯದಲ್ಲಿ ಇನ್ನೂ 43 ಲಕ್ಷ ಜನರು ಎರಡನೇ ಡೋಸ್ ಲಸಿಕೆ ಪಡೆದಿಲ್ಲ. ಎರಡೂ ಡೋಸ್ ಲಸಿಕೆ ಪಡೆದುಕೊಳ್ಳಲೇಬೇಕು. ಸೋಂಕು ಉಲ್ಬಣಗೊಂಡ ಮೇಲೆ ಲಸಿಕೆ ತೆಗೆದುಕೊಂಡರೇ ಏನೂ ಪ್ರಯೋಜನವಿಲ್ಲ. ಶೇ.೯೦ರಷ್ಟು ಜನ ಎರಡೂ ಡೋಸ್ ಲಸಿಕೆ ಪಡೆದರೆ ಮೂರನೇ ಅಲೆ ತಡೆಯಬಹುದಾಗಿದೆ ಎಂದರು ಸಚಿವರು.
ಜನರು ಎಚ್ಚರಿಕೆ ವಹಿಸುವುದು ಉತ್ತಮ. ದೊಡ್ಡ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡಿಮೆ ಮಾಡಬೇಕು. ಅನಗತ್ಯವಾಗಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು ಬೇಡ. ವಸತಿ ನಿಲಯ ಇರುವ ಕಡೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಎರಡು ಡೋಸ್ ವ್ಯಾಕ್ಸಿನ್ ಅನ್ನು ಎಲ್ಲರೂ ಕಡ್ಡಾಯವಾಗಿ ಪಡೆದಿರಬೇಕು ಎಂದು ಈಗಾಗಲೇ ಮುಖ್ಯಮಂತ್ರಿಯವರು ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.