ಲಂಚದ ಹಣ ಪಡೆಯುವಾಗಲೇ ಅರೆಸ್ಟ್
ಚಿಕ್ಕಬಳ್ಳಾಪುರ: ಪೌತಿ ಖಾತೆ ಮಾಡಿಕೊಡುವ ಬಗ್ಗೆ ವರದಿ ನೀಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಬಾಗೇಪಲ್ಲಿ ತಾಲೂಕಿನ ತಟ್ಟನ್ನಗಾರಿಪಲ್ಲಿ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇಂದು (ಶನಿವಾರ) ಎಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಲಂಚದ ಹಣದ ಸಮೇತ ಗ್ರಾಮ ಲೆಕ್ಕಾಧಿಕಾರಿ ಬಲೆಗೆ ಬಿದ್ದಿದ್ದು, ಅವರನ್ನು ಬಂಧಿಸಿ ಲಂಚದ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಪೌತಿಗೆ ಹಣಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಿಗ
ಬಾಗೇಪಲ್ಲಿ ತಾಲೂಕಿನ ಕಮ್ಮರಿವಾರಿಪಲ್ಲಿ ಗ್ರಾಮದ ನಿವಾಸಿಯೊಬ್ಬರು ತಮ್ಮ ತಾತನ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ತಂದೆಯ ಹೆಸರಿಗೆ ಪೌತಿ ಖಾತೆ ಮಾಡಿಕೊಡುವಂತೆ ತಾಲೂಕು ಕಚೇರಿಗೆ ಅರ್ಜಿಯನ್ನು ಸಲ್ಲಿಸಿದ್ದರು.
ಪೌತಿ ಖಾತೆ ಸಂಬಂಧ ಮೇಲಾಧಿಕಾರಿಗಳಿಗೆ ವರದಿ ನೀಡಲು ತಟ್ಟನ್ನಗಾರಿಪಲ್ಲಿ ಗ್ರಾಮ ಲೆಕ್ಕಾಧಿಕಾರಿಯಾದ ಶಿವಕುಮಾರ್ ದೂರುದಾರರಿಂದ 35,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 5,000 ರೂ. ಲಂಚದ ಹಣವನ್ನು ಪಡೆದು, ಅಂತಿಮವಾಗಿ 25,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು. ಅದರಂತೆ ಶನಿವಾರ ಕಾರ್ಯಾಚರಣೆ ನಡೆಸಿ, ಗ್ರಾಮಲೆಕ್ಕಾಧಿಕಾರಿ ದೂರುದಾರರಿಂದ 25,000 ರೂ. ಲಂಚದ ಹಣವನ್ನು ಪಡೆದುಕೊಳ್ಳುವಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದೆ.
Super good job