ಆಡಳಿತ ಮಂಡಳಿ ವಿರುದ್ಧ ಹಗಲು ದರೋಡೆ ಆರೋಪ
ಮೈಸೂರು: ಹೊಸ ವರ್ಷ ಪ್ರಾರಂಭ ಹಿನ್ನೆಲೆಯಲ್ಲಿ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಿದ್ದರೂ ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಆದರೆ ಹಣ ಹೆಚ್ಚಳ ಮಾಡಿದ್ದು ಆಕ್ರೋಶಕ್ಕೆ ಎಡೆಮಾಡಿದೆ.
ಚಾಮುಂಡಿ ಬೆಟ್ಟದಲ್ಲಿ 300 ರೂ.ಗಳ ವಿಶೇಷ ದರ್ಶನವೆಂದು ಹಣ ಪಡೆಯುತ್ತಿದ್ದು, ಆಡಳಿತ ಮಂಡಳಿಯವರು ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.
ಹೊಸವರ್ಷದ ಪ್ರಯುಕ್ತ ಶನಿವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಾಯಿಯ ದರ್ಶನಕ್ಕೆ ಆಗಮಿಸಿದ್ದರು.
ಕಳೆದೆರಡು ವರ್ಷಗಳಿಂದ ಕೊರೋನಾ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಈ ಬಾರಿ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
300ರೂ.ಗಳ ವಿಶೇಷ ದರ್ಶನದ ರಸೀದಿ ನೀಡುತ್ತಿದ್ದು, ಇಷ್ಟೊಂದು ಹಣ ಯಾಕೆ ಕೊಡಬೇಕು? ಇದು ಸುಲಿಗೆಯಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದಾರೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.
ಆದರೆ ಶಾಸಕ ಜಿ.ಟಿ.ದೇವೇಗೌಡರನ್ನು ಸಂಪರ್ಕಿಸಿದಾಗ ಅವರು ನನಗೆ ಆ ವಿಷಯ ಗೊತ್ತೇ ಇಲ್ಲ. 300 ರೂ.ಮಾಡಿರುವುದು ನನಗೆ ತಿಳಿದಿಲ್ಲ. ನನ್ನ ಜತೆ ಆ ಕುರಿತು ಯಾರೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
100 ರೂ. 30 ರೂ.ಗಳ ಜೊತೆ 300 ರೂ.ಗಳ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೊರೋನಾ ಹೊಡೆತಕ್ಕೆ ಸಿಲುಕಿ ನಲುಗಿರುವವರಿಗೆ 300 ರೂ.ಭಾರೀ ಹೆಚ್ಚಳವಾಗಿದೆ.