ಶ್ರೀ ರಾಮಾನುಜಾಚಾರ್ಯರ ‘ಸಮಾನತೆಯ ಮೂರ್ತಿ‘ (Statue of Equality) ಇಂದು ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆ; ತನ್ನಿಮಿತ್ತ ಈ ಲೇಖನ
by Dr Guruprasad Hawaldar
ಸಾವಿರಾರು ವರ್ಷಗಳ ಹಿಂದೆಯೇ ಅಸ್ಪೃಶ್ಯತೆಯ ವಿರುದ್ಧದ ಆಧ್ಯಾತ್ಮಿಕ ಆಂದೋಲನಕ್ಕೆ ಮುನ್ನುಡಿ ಬರೆದು, ಸಮಾನತೆ ಸಾರಿ ಜಗತ್ತಿಗೆ ಶ್ರೀ ವಿಶಿಷ್ಟಾದೈತ ತತ್ವವನ್ನು ನೀಡಿ ಭಗವಂತನನ್ನು ಒಲಿಸಿಕೊಳ್ಳಲು ಭಕ್ತಿಯೊಂದೇ ಮಾರ್ಗ ಎಂದು ಹೇಳಿದ ಶ್ರೀ ರಾಮಾನುಜಾಚಾರ್ಯರ ‘ಸಮಾನತೆಯ ಮೂರ್ತಿ‘ (Statue of Equality) ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆ ಮಾಡಲಿದ್ದಾರೆ.
ಹೈದರಾಬಾದಿನ ಸಮೀಪವಿರುವ ಶಂಶಾಬಾದ್ʼನಲ್ಲಿ ಸುಮಾರು 1,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿರುವ ಪ್ರತಿಮೆ ದೇಶಕ್ಕೆ ಸಮರ್ಪಣೆ ಆಗುತ್ತಿರುವ ಸುಸಂದರ್ಭದಲ್ಲಿ ಶ್ರೀ ರಾಮಾನುಜರು ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ.
ಇದು ಜಗತ್ತಿನ ಎರಡನೇ ಅತಿ ಎತ್ತರದ ಕುಳಿತ ಭಂಗಿಯ ಪ್ರತಿಮೆ. ಥಾಯ್ಲೆಂಡ್ನಲ್ಲಿರುವ ಕುಳಿತ ಭಂಗಿಯ ಬುದ್ಧನ ಪ್ರತಿಮೆಯು ಮೊದಲನೇ ಎತ್ತರದ ಪ್ರತಿಮೆ.
ಈ ಪ್ರತಿಮೆಯನ್ನು ಶ್ರೀ ರಾಮಾನುಜಾಚಾರ್ಯ ಆಶ್ರಮದ ಶ್ರೀ ಚಿನ್ನ ಜೀಯರ್ ಸ್ವಾಮೀಜಿಯವರ ಪರಿಕಲ್ಪನೆಯಂತೆ ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆ ಸುಮಾರು 216 ಅಡಿ ಎತ್ತರವಿದೆ. 1,800 ಟನ್ʼಗಿಂತ ಹೆಚ್ಚು ಪ್ರಮಾಣದ ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಸತುವುಗಳ ಸಂಯೋಜನೆಯ ‘ಪಂಚಧಾತು’ವಿನೊಂದಿಗೆ ನಿರ್ಮಿಸಲಾಗಿದೆ.
ಈ ಪ್ರತಿಮೆ ಯೋಜನೆಯ ಪ್ರಮುಖ ಅಂಶಗಳೆಂದರೇ, ತಾಮ್ರದಿಂದ ಮಾಡಿದ 42 ಅಡಿ ಎತ್ತರದ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಬಲಿಪೀಠದಲ್ಲಿ ಶ್ರೀ ರಾಮಾನುಜಾಚಾರ್ಯರ 54 ಇಂಚು ಎತ್ತರದ ಚಿನ್ನದ ದೇವರ ಪ್ರತಿಮೆ ಇದೆ. 24 ಕ್ಯಾರೆಟ್ʼನ 120 ಕೆ.ಜಿ. ಚಿನ್ನ ಬಳಸಿ ದೇವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
108 ದಿವ್ಯ ದೇಶಂ ಹಾಗೂ ಸ್ಪೂರ್ತಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸಂಕೀರ್ಣದಲ್ಲಿ ಆನ್ʼಲೈನ್ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದೆ. ಓಮ್ನಿಮ್ಯಾಕ್ಸ್ ಥಿಯೇಟರ್ ಮಾಡಲಾಗಿದೆ.
ಪ್ರತಿಮೆಯು 108 ‘ದಿವ್ಯ ದೇಶಂ’ ಮಾದರಿ ದೇವಾಲಯಗಳಿಂದ ಸುತ್ತುವರೆದಿರುತ್ತದೆ. ಭದ್ರಿನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಮತ್ತು ಇತರ ದೇವಾಲಯ ಮಾದರಿಗಳಿಂದ ಸುತ್ತುವರಿದಿದೆ. ಅಸ್ತಿತ್ವದಲ್ಲಿರುವ ದೇವಾಲಯಗಳಲ್ಲಿ ದೇವತೆಗಳ ಮತ್ತು ರಚನೆಗಳ ವಿಗ್ರಹಗಳನ್ನು ಆಕಾರದಲ್ಲಿ ನಿರ್ಮಿಸಲಾಗಿದೆ.
ಇದನ್ನು 54 ಅಡಿ ಎತ್ತರದ ಬೇಸ್ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ. ಇದನ್ನು ‘ಭದ್ರ ವೇದಿಕೆ’ ಎಂದು ಹೆಸರಿಸಲಾಗಿದೆ. ಇದು ವೈದಿಕ ಡಿಜಿಟಲ್ ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ, ಪ್ರಾಚೀನ ಭಾರತೀಯ ಗ್ರಂಥಗಳು, ರಂಗಮಂದಿರ, ಶೈಕ್ಷಣಿಕ ಗ್ಯಾಲರಿಯನ್ನು ಹೊಂದಿದೆ, ಇದು ಸಂತ ರಾಮಾನುಜಾಚಾರ್ಯರ ಅನೇಕ ಕೃತಿಗಳ ವಿವರಗಳನ್ನು ಪ್ರಸ್ತುತಪಡಿಸುತ್ತದೆ. ಒಟ್ಟಾರೆ 200 ಎಕರೆಯಷ್ಟು ವಿಶಾಲ ವಿಸ್ತಾರದಲ್ಲಿ ದೇವಾಲಯ ಹರಡಿಕೊಂಡಿದೆ.
ಶ್ರೀ ರಾಮಾನುಜಾಚಾರ್ಯರು
ತಮಿಳುನಾಡಿನ ಚೆನ್ನೈ ಪಟ್ಟಣಕ್ಕೆ ಹತ್ತಿರವಿರುವ ಶ್ರೀ ಪೆರಂಬದೂರಿನಲ್ಲಿ ಜನಿಸಿದ ರಾಮಾನುಜರು (ಕ್ರಿ.ಶ. 1017-1137) ಕೇಶವ ಸೋಮಯಾಜಿ (ಕೇಶವ ದೀಕ್ಷಿತರು) ಮತ್ತು ಕಾಂತಿಮತಿ ಅವರ ಪುತ್ರರು. ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಮತ್ತು ಉಪನಿಷತ್ʼಗಳ ಬಗ್ಗೆ ಅಧ್ಯಯನ ನಡೆಸಲು ಕಂಚಿಗೆ ತೆರಳಿದರು. ಅಲ್ಲಿ ಪ್ರಸಿದ್ಧ ಅದೈತ ಗುರುಗಳಾದ ಯಾದವ ಪ್ರಕಾಶರ ಶಿಷ್ಯರಾದರು. ರಾಮಾನುಜರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಅವರು ಹಲವಾರು ಸಂದರ್ಭದಲ್ಲಿ ಧರ್ಮ ಮತ್ತು ತತ್ವಗಳ ವಿಚಾರಗಳಲ್ಲಿ ಗುರುಗಳ ಅಭಿಪ್ರಾಯವನ್ನು ಒಪ್ಪುತ್ತಿರಲಿಲ್ಲ. ಪರಿಣಾಮವಾಗಿ ಗುರು-ಶಿಷ್ಯರ ಮಧ್ಯೆ ಭಿನ್ನಾಭಿಪ್ರಾಯ ಬೆಳೆಯಿತು. ರಾಮಾನುಜರು ಗುರುವನ್ನು ತ್ಯಜಿಸಿ ಮನೆಗೆ ಹಿಂತಿರುಗಿದರು. ತಮ್ಮ 16ನೇ ವಯಸ್ಸಿನಲ್ಲಿ ತಂಗಮ್ಮರನ್ನು ವಿವಾಹವಾದರು. ನಂತರ ಮತ್ತೆ ಶ್ರೀ ರಾಮಾನುಜಾಚಾರ್ಯರು ಗುರುವನ್ನು ಅರಸುತ್ತಾ, ಶ್ರೀರಂಗಂ ತಲುಪಿ ಅಲ್ಲಿಂದ ಕಾಲ್ನಡೆಗೆಯ ಮೂಲಕ ತಿರುಕೋಶ್ಟಿಯೂರು ಎಂಬಲ್ಲಿದ್ದ ಶ್ರೀ ನಂಬಿಯವರಲ್ಲಿ ಶಿಷ್ಯರಾಗಿ ತಮಗೆ ಮಂತ್ರ ಸಿದ್ಧಾಂತವನ್ನು ಬೋಧಿಸುವಂತೆ ವಿನಂತಿಸಿಕೊಳ್ಳುತ್ತಾರೆ. ಆರಂಭದಲ್ಲಿ ಶ್ರೀ ನಂಬಿಯವರು ರಾಮಾನುಜರ ಕೋರಿಕೆಯನ್ನು ಮನ್ನಿಸದೇ ಹಲವಾರು ಬಾರಿ ನಿರಾಕರಿಸುತ್ತಾರೆ.
ಛಲ ಬಿಡದ ತ್ರಿವಿಕ್ರಮನಮನಂತೆ ರಾಮಾನುಜಾಚಾರ್ಯರು ಸ್ವಲ್ಪವೂ ನಿರಾಶೆಯಾಗದೇ, ಪದೇಪದೆ ಗುರುಗಳಲ್ಲಿ ವಿನಮ್ರತೆಯಿಂದ ಬೇಡಿಕೊಂಡಾಗ, ಭಕ್ತನ ಕೋರಿಕೆಯನ್ನು ಮನ್ನಿಸಿ ಒಂದು ಷರತ್ತಿನೊಂದಿಗೆ ಮಹಾ ಬೀಜಾಕ್ಷರೀ ಮಂತ್ರವನ್ನು ಬೋಧಿಸಲು ಒಪ್ಪಿಕೊಳ್ಳುತ್ತಾರೆ. ಈ ಮಂತ್ರ ಬೋಧನೆಯಾದ ನಂತರ ಅದನ್ನು ಸಿದ್ಧಿಸಿಕೊಂಡಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತದೆ. ಅಕಸ್ಮಾತ್ ಈ ಬೀಜ ಮಂತ್ರವನ್ನು ಬಹಿರಂಗಪಡಿಸಿದಲ್ಲಿ ಶಿಕ್ಷೆಯ ರೂಪದಲ್ಲಿ ನರಕಕ್ಕೆ ಹೋಗಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ. ಗುರುಗಳ ಎಲ್ಲಾ ಷರತ್ತಿಗೂ ಒಪ್ಪಿಕೊಂಡ ರಾಮಾನುಜರು ಬೀಜ ಮಂತ್ರದ ಬೋಧನೆಗೆ ಒಳ್ಳೆಯ ಮಹೂರ್ತವನ್ನು ನಿಗದಿಪಡಿಸುತ್ತಾರೆ.
ಆ ಶುಭ ದಿನ ತಮ್ಮ ಎಲ್ಲಾ ಶಿಷ್ಯಂದಿರನ್ನೂ ಕರೆದು, ಈ ಸುದಿನ ನನಗೆ ನನ್ನ ಗುರುಗಳಿಂದ ಮಂತ್ರ ಬೋಧನೆಯಾಗಲಿದೆ ಎಂದು ತಿಳಿಸಿ ಎಲ್ಲರೂ ತಮ್ಮ ಆಗಮನಕ್ಕಾಗಿ ಇಲ್ಲಿಯೇ ಕಾಯಬೇಕೆಂದು ಹೇಳಿ ಗುರುಗಳ ಬಳಿ ಹೋಗುತ್ತಾರೆ. ನಂಬಿ ಗುರುಗಳು ರಾಮಾನುಜರಿಗೆ “ಓಂ ನಮೋ ನಾರಾಯಣ” ಎಂಬ ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ಬೋಧಿಸಿ, ಇದನ್ನು ಜೀವಿತಾವಧಿಯೂ ಪಠಿಸುತ್ತಾ ಸ್ವರ್ಗ ಪ್ರಾಪ್ತನಾಗು ಎಂದು ಹರಸಿ ಹೊರಡುವ ಮೊದಲು ಮತ್ತೊಮ್ಮೆ ಇದನ್ನು ಯಾರಿಗೂ ಹೇಳಕೂಡದು ಎಂದು ಎಚ್ಚರಿಸಿ ಕಳುಹಿಸುತ್ತಾರೆ.
ತಮ್ಮ ಗುರುವಿನಿಂದ ಅಷ್ಟಾಕ್ಷರಿ ಬೀಜ ಮಂತ್ರ ಬೋಧನೆಯಾದ ಕೂಡಲೇ ಸಂತೋಷದಿಂದ ಹೊರಬಂದ ರಾಮಾನುಜಾಚಾರ್ಯರು, ದೇವಾಲಯದ ವಿಮಾನ ಗೋಪುರವನ್ನೇರಿ ಅಲ್ಲಿದ್ದ ತಮ್ಮ ಶಿಷ್ಯಂದಿರನ್ನು ಮತ್ತು ಜನಸಾಮಾನ್ಯರನ್ನು ಕರೆದು ಎಲ್ಲರಿಗೂ ಜೋರುದನಿಯಲ್ಲಿ ಈ ಮಹಾ ಬೀಜಾಕ್ಷರೀ ಮಂತ್ರವನ್ನು ಬೋಧಿಸುತ್ತಾರೆ. ಈ ನಡುವಳಿಕೆಯಿಂದ ಕೋಪಗೊಂಡ ನಂಬಿ ಗುರುಗಳು, ಈ ರೀತಿ ಮಾಡಿದ್ದರಿಂದ ನೀನು ಖಂಡಿತವಾಗಿಯೂ ನರಕಕ್ಕೆ ಹೋಗುವೆ ಎಂದಾಗ, ಅಷ್ಟೇ ಶಾಂತಚಿತ್ತದಿಂದ ಲಕ್ಷಾಂತರ ಜನರಿಗೆ ಈ ಮಂತ್ರ ಶಕ್ತಿಯಿಂದ ಉಪಯೋಗವಾಗಿ, ಅವರೆಲ್ಲರಿಗೂ ಭಗವಂತನ ಅನುಗ್ರಹದಿಂದ ಸ್ವರ್ಗ ಪ್ರಾಪ್ತಿಯಾಗುವುದಾದರೇ ನಾನೊಬ್ಬ ನರಕಕ್ಕೆ ಹೋಗಲು ಸಿದ್ಧ ಎಂದು ಉತ್ತರಿಸುತ್ತಾರೆ ರಾಮಾನುಜರು. ಶಿಷ್ಯನ ಈ ನಿಸ್ವಾರ್ಥ ನಡವಳಿಕೆಯನ್ನು ಗುರುಗಳಾದ ಶ್ರೀ ನಂಬಿಯವರು ಮನಸಾರೆ ಮೆಚ್ಚಿ ಆಶೀರ್ವದಿಸುತ್ತಾರೆ. ನಂತರ ಶ್ರೀಗಳು ತಮ್ಮ ವಿಶಿಷ್ಟಾದ್ವೈತ ಧರ್ಮ ಪ್ರಚಾರವನ್ನು ಮಾಡುತ್ತಾ ಕರ್ನಾಟಕಕ್ಕೆ ಆಗಮಿಸಿ, ಮಂಡ್ಯ ಜಿಲ್ಲೆಯ ತೊಂಡನೂರು (ಈಗಿನ ಕೆರೆತೊಣ್ಣೂರು) ಗ್ರಾಮದಲ್ಲಿ ನೆಲೆಸುತ್ತಾರೆ. ಒಮ್ಮೆ ತಿರುನಾರಾಯಣಪುರ (ಈಗಿನ ಮೇಲುಕೋಟೆ)ಯಲ್ಲಿ ಆದಿನಾರಾಯಣ ದೇವರು ನೆಲೆ ನಿಂತಿರುವ ಸಂಗತಿ ಅವರ ದಿವ್ಯದೃಷ್ಟಿಗೆ ಬಂದು ತಮ್ಮ ಶಿಷ್ಯರೊಂದಿಗೆ ತಿರುನಾರಾಯಣಪುರಕ್ಕೆ ಆಗಮಿಸಿ ಅಲ್ಲಿ ಬೆಟ್ಟದ ಮೇಲಿದ್ದ ಒಂದು ಹುತ್ತವನ್ನು ಹಾಲಿನಿಂದ ಕರಗಿಸಿ ಶ್ರೀ ನಾರಾಯಣಸ್ವಾಮಿ ಮೂರ್ತಿಯನ್ನು ಜೀರ್ಣೋದ್ಧಾರಗೊಳಿಸಿ ಅಲ್ಲೊಂದು ಸುಂದರವಾದ ದೇವಾಲಯವನ್ನು ನಿರ್ಮಿಸಿ ಅದನ್ನು ನಾಡಿಗೆ ಸಮರ್ಪಿಸುತ್ತಾರೆ. ಶ್ರೀ ನಾರಾಯಣಸ್ವಾಮಿ ನೆಲೆನಿಂತಿರುವ ಜ್ಞಾನಮಂಟಪದ ಕ್ಷೇತ್ರ ತಿರುನಾರಾಯಣಪುರ, ಯಾದವಗಿರಿ, ಯದುಗಿರಿ ಇಂದು ಮೇಲುಕೋಟೆಯಾಗಿ ತನ್ನದೇ ಆದ ಪೌರಾಣಿಕ ಹಾಗೂ ಐತಿಹಾಸಿಕ ಪರಂಪರೆಯಿಂದಾಗಿ, ದಕ್ಷಿಣ ಬದರೀಕ್ಷೇತ್ರ ಎಂದು ಹೆಸರುವಾಸಿಯಾಗಿದೆ ಮತ್ತು ಪ್ರತೀ ವರ್ಷವೂ ಇಲ್ಲಿ ನಡೆಯುವ ವೈರಮುಡಿ ಉತ್ಸವ ವಿಶ್ವವಿಖ್ಯಾತವಾಗಿದೆ.
ಪುರಾಣ ಪ್ರಸಿದ್ಧ ಮೇಲುಕೋಟೆಯ ಅಧಿದೇವ ತಿರುನಾರಾಯಣಸ್ವಾಮಿಯನ್ನು ಮೂಲಮೂರ್ತಿಯಾಗಿ ಪ್ರತಿಷ್ಠಾಪಿಸಿದ ಶ್ರೀರಾಮಾನುಜರು; ದೆಹಲಿ ಬಾದಷಹನ ಮಗಳು ಬೀಬಿ ನಾಚಿಯಾರ್ ಬಳಿಯಲ್ಲಿದ್ದ ನಾರಾಯಣ ವಿಗ್ರಹವನ್ನು ಆಕೆಯ ಮನವೊಲಿಸಿ, ಅವಳ ತೆಕ್ಕೆಯಿಂದ ಬಿಡಿಸಿ ತಂದು ಮುದ್ದುಮುದ್ದಾಗಿದ್ದ ಆ ಮೂರ್ತಿಗೆ ಚೆಲುವ ನಾರಾಯಸ್ವಾಮಿ (ತಮಿಳಿನಲ್ಲಿ ಶೆಲ್ವ ನಾರಾಯಣ, ಶೆಲ್ವಪಿಳ್ಳೈ) ಎಂದು ಕರೆದು ವೈಭವದ ಉತ್ಸವಗಳನ್ನು ಏರ್ಪಡಿಸಿ ಅದನ್ನು ಉತ್ಸವ ಮೂರ್ತಿಯಾಗಿ ಮಾಡುತ್ತಾರೆ. ಹಾಗೆಯೇ ಪ್ರೀತಿಯ ಭಕ್ತಿಯಾಗಿ ನಾರಾಯಣನನ್ನು ಬಿಡಲೊಪ್ಪದ ಮುಸಲ್ಮಾನ ಬೀಬಿ ನಾಚಿಯಾರ್ ಪುತ್ಥಳಿಯನ್ನೂ ಶ್ರೀ ನಾರಾಯಣನ ಎದುರಿನ ದೇವಿ ಪಟ್ಟ ಕೊಟ್ಟು ಹಿಂದೂ ಮತ್ತು ಮುಸಲ್ಮಾನರಲ್ಲಿ ಭಾವೈಕ್ಯತೆಯನ್ನು ಬಿತ್ತಿ ಆ ಕಾಲದಲ್ಲಿಯೇ ಕೋಮು ಸೌಹಾರ್ದತೆಯನ್ನು ಸಾರಿದ್ದರು.
ಶೈವ ಧರ್ಮಾವಲಂಬಿಯಾದ ಚೋಳ ದೊರೆಯು ರಾಮಾನುಜಾಚಾರ್ಯರಿಗೆ ಕಿರುಕುಳ ಕೊಡುತ್ತಿದ್ದ. ಆಗ ಕರ್ನಾಟಕದ ಹೊಯ್ಸಳ ರಾಜನಾದ ಬಿಟ್ಟಿದೇವನು (ವಿಷ್ಣುವರ್ಧನ) ಇವರನ್ನು ಸ್ವಾಗತಿಸಿ ಅವರ ಪರಮ ಅನುಯಾಯಿಯಾಗಿ ಬಳಿಕ ವಿಷ್ಣುವರ್ಧನನಾಗಿ ಪರಿವರ್ತನೆಗೊಂಡು ಶ್ರೀಗಳ ನೇತೃತ್ವದಲ್ಲಿ ಮೈಸೂರು ರಾಜ್ಯದಾದ್ಯಂತ ಅನೇಕ ಜಗತ್ಪ್ರಸಿದ್ಧ ಸುಂದರವಾದ ದೇವಾಲಯಗಳನ್ನು ನಿರ್ಮಿಸುತ್ತಾನೆ.
ರಾಮಾನುಜಾಚಾರ್ಯರು ಜನಸಾನ್ಯರಿಗೆ ಮುಕ್ತಿಮಾರ್ಗವನ್ನು ತೋರಿಸಲು ಅತೀವ ಆಸಕ್ತಿ ವಹಿಸಿದರು. ಅವರು ಶಾಸ್ತ್ರಾಧ್ಯಯನ ಮಾಡಿ, ಅನೇಕ ಗ್ರಂಥಗಳನ್ನು ರಚಿಸಿದರು. ಅವರ ಮೂರು ತತ್ತ್ವಶಾಸ್ತ್ರದ ಕೃತಿಗಳು ʼವೇದಾಂತ ಸಂಗ್ರಹʼ, ʼವೇದಾಂತಸಾರʼ, ʼವೇದಸೂತ್ರʼ ಇವುಗಳಲ್ಲಿ ಮೋಕ್ಷ ಗಳಿಸಲು ಭಕ್ತಿಮಾರ್ಗದ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಅವರ ಇತರೆ ಕೃತಿಗಳೆಂದರೆ ʼಶ್ರೀಭಾಷ್ಯʼ, ʼಶ್ರೀರಂಗಗದ್ಯʼ, ʼಶರಣಾಗತಿ ಗದ್ಯʼ, ʼನಿತ್ಯಗ್ರಂಥʼ, ʼವೈಕುಂಠ ಗದ್ಯʼ ಹಾಗೂ ತಮ್ಮ ಮಹತ್ವಪೂರ್ಣ ಗ್ರಂಥವಾದ ʼಗೀತಾಭಾಷ್ಯʼದಲ್ಲಿ ಭಕ್ತಿತತ್ವಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ.
ವಿಶಿಷ್ಟಾದೈತ ತತ್ವ
ರಾಮಾನುಜರು ಪ್ರತಿಪಾಸಿದ ತತ್ವವನ್ನು ʼವಿಶಿಷ್ಟಾ ದೈತʼ ಎಂದು ಕರೆಯಲಾಗಿದೆ. ದೇವರು, ಜಗತ್ತು ಮತ್ತು ಆತ್ಮಗಳ ಮಧ್ಯೆ ಇರುವ ಸಂಬಂಧಗಳನ್ನು ವಿವರಿಸುವ ರೀತಿಯೇ ಅವರ ತತ್ವದ ಕೇಂದ್ರ ಬಿಂದು. ಅವರ ಅಭಿಪ್ರಾಯದಲ್ಲಿ ಮೂರು ಶಾಶ್ವತ ತತ್ವಗಳಿವೆ. ದೇವರು (ಬ್ರಹ್ಮನ್), ಆತ್ಮ (ಚಿತ್) ಮತ್ತು ಜಡಜಗತ್ತು (ಅಚಿತ್). ಇವು ಮೂರು ಬೇರೆ ಬೇರೆಯಾಗಿವೆ ಹಾಗೂ ಸಮಾನವಾಗಿವೆ. ಇವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಒಂದಕ್ಕೊಂದು ಹತ್ತಿರದ ಸಂಬಂಧವಿದೆ. ಇವು ಒಂದೇ ದೇಹದಂತಿವೆ. ಇದಕ್ಕಾಗಿ ರಾಮಾನುಜರ ತತ್ವವನ್ನು ʼವಿಶಿಷ್ಟಾ ದೈತʼ ಎನ್ನಲಾಗಿದೆ. ವಿಶಿಷ್ಟಾದ್ವೆತ್ರೖತ ಸಿದ್ಧಾಂತವು ಭಗವಂತನ ಲೋಕಪಿತೃತ್ವ ಹಾಗೂ ಮಾನವನ ವಿಶ್ವಭ್ರಾತೃತ್ವ ಎರಡನ್ನೂ ನಿರೂಪಿಸಿ, ಬ್ರಹ್ಮವನ್ನು ಸಾಧಿಸಿದರೆ ಉಳಿದೆಲ್ಲವನ್ನೂ ಸಾಧಿಸಿದಂತೆ ಎಂಬ ಉಪನಿಷತ್ತಿನ ತತ್ವವನ್ನು ಸಮರ್ಥಿಸುತ್ತದೆ. ಪ್ರತ್ಯಕ್ಷ, ಅನುಮಾನ ಮತ್ತು ಶಬ್ದಗಳ ಮೂಲಕ ಉಂಟಾಗುವ ಜ್ಞಾನವೇ ಸರಿಯಾದುದು. ಎಲ್ಲದರ ಅಸ್ತಿತ್ವಕ್ಕೂ ಪರಮಾಧಾರ, ಎಲ್ಲ ವಸ್ತುಗಳ ಆದಿ ಅಂತಿಮಕಾರಣ, ಎಲ್ಲ ಅನುಭವಗಳ ಗುರಿ ಬ್ರಹ್ಮನ್. ಏಕಮೇವಾದ್ವಿತೀಯವಾದ ಬ್ರಹ್ಮವು ತಾನು ಅನೇಕವಾಗಬೇಕೆಂದು ಸಂಕಲ್ಪಿಸಿ ಅಸಂಖ್ಯಾತ ಚೇತನ-ಅಚೇತನ ವ್ಯಕ್ತಿ ವಸ್ತುಗಳಾಗಿ ರೂಪುಗೊಳ್ಳುತ್ತದೆ. ಎಲ್ಲ ಕಾರ್ಯಗಳ ಪರಮಕರ್ತೃವಾದ ಬ್ರಹ್ಮವು ಜೀವ ಪ್ರಕೃತಿಗಳಿಂದ ವಿಲಕ್ಷಣವಾಗಿದ್ದರೂ, ಅವುಗಳನ್ನು ಅದರಿಂದ ಬೇರ್ಪಡಿಸಲಾಗದು. ಪ್ರಪಂಚವು ಬ್ರಹ್ಮ ಸ್ವರೂಪವಾದುದಾಗಿದ್ದು, ಪ್ರಕೃತಿಯ ವ್ಯಾಪಾರಗಳು, ಮಾನವನ ಬೆಳವಣಿಗೆಗೆ ಎರಡೂ ಭಗವಂತನ ಸಂಕಲ್ಪದ ಸ್ವತಃ ಸಿದ್ಧಿ ಆಗಿದೆ.
ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲ. ಅವರು ತಮ್ಮ ಅಚಾರ ವಿಚಾರಗಳಿಂದ ಬ್ರಾಹ್ಮಣರಾಗುತ್ತಾರೆ ಎಂದು ಪ್ರತಿಪಾದಿಸಿ ಹೋದ ಕಡೆಯಲ್ಲೆಲ್ಲಾ ಯಾವುದೇ ಕುಲ ಜಾತಿಯನ್ನು ನೋಡದೇ ಎಲ್ಲರಿಗೂ ʼಓಂ ನಮೋ ನಾರಾಯಣಾಯ ನಮಃʼ ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ಉಪದೇಶಿಸಿ, ಭಗವಂತನನ್ನು ಒಲಿಸಲೂ ಭಕ್ತಿ ಎಂಬ ಅಸ್ತ್ರವೊಂದೆ ಸಾಕು. ಸಾಧ್ಯವಾದಗಲೆಲ್ಲಾ ಗೋವಿಂದ ಗೋವಿಂದ ಎನ್ನುವ ನಾಮ ಸ್ಮರಣೆ ಮಾಡುತ್ತಾ ಆ ಉದ್ಘೋಷ ಪ್ರತಿ ಮನೆಯಲ್ಲೂ ಪ್ರತಿಧ್ವನಿಸಬೇಕೆಂಬ ಸಂಕಲ್ಪದಿಂದ ದಾಸಪದ್ದತಿಯನ್ನು ಸೃಷ್ಟಿಸಿದ ಯೋಗಿ ಶ್ರೀ ರಾಮಾನುಜರು.
ಅಸ್ಪೃಶ್ಯರು ಎಂದು ದೂರವಿಟ್ಟವರನ್ನು ದೇವಾಲಯಕ್ಕೆ ಕರೆತಂದು, ಹರಿಯ ಪ್ರೀತಿ ಪುತ್ರರು ನೀವು, ಹಾಗಾಗಿ ನೀವು ಹರಿಜನರು (ಮುಂದೆ ಇದನ್ನೇ ಮಹಾತ್ಮಾ ಗಾಂಧಿಯವರೂ ಪುನರುಚ್ಚರಿಸಿದರು) ಎಂದು ಹೇಳಿ ನಿಮ್ಮ ವಿಶೇಷ ಸೇವೆ ಚೆಲುವನಾರಾಯಣನಿಗಿರಲಿ ಎಂದು ಪ್ರೀತಿಯ ಚಿಲುಮೆಯನ್ನರಿಸಿದ ಚಿನ್ಮಯರು. ಸಾರ್ವಜನಿಕವಾಗಿ ಶೂದ್ರನೊಬ್ಬನನ್ನು ಆಲಂಗಿಸಿ ಮೈಲಿಗೆ ಹರಡುತ್ತದೆಂದರೆ ಮಡಿ ಹರಡುವುದಿಲ್ಲವೇ ಎಂದು ಸರ್ವ ಸಮಾನತೆಯನ್ನು ಸಾರಿದಂತವರು ಶ್ರೀ ರಾಮಾನುಜರು.
ತಮ್ಮ ಜೀವಿತದ ಉತ್ತರಾರ್ಧದ ಐವತ್ತು ವರ್ಷಕಾಲ ಶ್ರೀರಂಗದಲ್ಲಿಯೇ, ನೆಲೆಸಿ ಅಲ್ಲಿ ನೂರಾರು ಕೃತಿಗಳನ್ನು ರಚಿಸಿ ತಮ್ಮ 120ನೆಯ ವಯಸ್ಸಿನಲ್ಲಿ 1137ನೇ ಶನಿವಾರ ಮಧ್ಯಾಹ್ನ ಮಾಘಶುದ್ಧ ಸಪ್ತಮಿಯ ದಿನ ಇಚ್ಛಾ ಮರಣಿಯಾಗಿ ತಮ್ಮ ಶಿಷ್ಯಂದಿರಿಗೆ ಮುಂಚಿತವಾಗಿಯೇ ತಿಳಿಸಿ ರಾಮಾನುಜಾಚಾರ್ಯರು ಭಗವಂತನ ಪಾದಾರವಿಂದ ಸೇರಿದರು. 120 ವರ್ಷಗಳ ಸಾಧನೆಯ ದೀರ್ಘಾಯುಷ್ಯವನ್ನು ಪೂರೈಸಿ ವೈಕುಂಠವನ್ನು ತಲುಪಿ ಶ್ರೀನಾರಾಯಣನನ್ನು ಸೇರಿ 800 ವರ್ಷಗಳಾದರೂ ಇಂದಿಗೂ ಸಹಾ ಅವರ ಭೌತಿಕ ದೇಹ ಯಾವುದೇ ರಾಸಾಯನಿಕ ಕ್ರಿಯೆಯೇ ನಡೆಯದೆ ಇನ್ನೂ ದರ್ಶನಕ್ಕೆ ಯೋಗ್ಯವಾಗಿದೆ.
ಇಂದಿಗೂ ಸಹಾ ನಾಲ್ಕು ಸ್ವಯಂ ವ್ಯಕ್ತ ಕ್ಷೇತ್ರಗಳಾದ ಶ್ರೀರಂಗಂ, ಕಾಂಚೀಪುರಂ, ತಿರುಮಲ ಹಾಗೂ ಮೇಲುಕೋಟೆಗಳಲ್ಲಿ ನಡೆಯುವ ಪೂಜಾ ವಿಧಾನಗಳು ರಾಮಾನುಜಾಚಾರ್ಯರು ಹಾಕಿಕೊಟ್ಟ ಪದ್ಧತಿಯಲ್ಲೇ ನಡೆಯುತ್ತಿವೆ. ಹಾಗಾಗಿ ಒಂದು ಸಾವಿರ ವರ್ಷವಾದರೂ ಶ್ರೀ ರಾಮಾನುಜಾಚಾರ್ಯರು ಇಂದಿಗೂ, ಎಂದಿಗೂ ನಮ್ಮೊಂದಿಗೆ ಶಾಶ್ವತವಾಗಿ ಅಜರಾಮರರಾಗಿರುತ್ತಾರೆ.
ಮಾನವ ಸಮಾಜದ ಅಭ್ಯುದಯಕ್ಕಾಗಿಯೇ ತನು ಮನ ಧನದ ಜೊತೆಗೆ ನಿಸ್ವಾರ್ಥಸೇವೆಯಿಂದ ಭಗವಂತನನ್ನು ಆರಾಧಿಸಿ ಅವನನ್ನು ಹಾಡಿ ಹೊಗಳುವ, ಅವನನ್ನು ಒಲಿಸಿಕೊಳ್ಳುವ ಶಾಸ್ತ್ರಗಳನ್ನು ತಮ್ಮ ತತ್ತ್ವ ಸಿದ್ಧಾಂತಗಳಲ್ಲಿ ಹಾಗೂ ಸಾಮಾಜಿಕ ನೆಲೆಗಟ್ಟುಗಳಲ್ಲಿ ಅಭಿವ್ಯಕ್ತಿಗೊಳಿಸಿ, ಅವುಗಳ ಸಾಮರಸ್ಯವನ್ನು ತಿಳಿಸಿಕೊಟ್ಟಿದ್ದಾರೆ. ತಮ್ಮ ತತ್ತ್ವ, ಚಿಂತನೆ, ನಡೆ ನುಡಿಗಳ ಮೂಲಕ ಶ್ರೇಷ್ಠ ಸಂತರು, ಭಾಷ್ಯಕಾರು, ದಾರ್ಶನಿಕರು, ಸಮಾಜ ಸುಧಾರಕರು, ಅನೇಕ ಕೆರೆಕಟ್ಟೆಗಳನ್ನು ಕಟ್ಟಿಸಿದ ವಾಸ್ತುಶಿಲ್ಪಿ, ದೇವಸ್ಥಾನಗಳ ಜೀರ್ಣೊದ್ಧಾರಕರು ಮತ್ತು ಉತ್ತಮ ನಿರ್ವಾಹಕರಾಗಿದ್ದಲ್ಲದೇ, ಪಾಮರರನ್ನೂ ಸಹಾ ಅಜ್ಞಾನದವೆಂಬ ಕತ್ತಲನ್ನು ನಿವಾರಿಸಿ ಜ್ಞಾನವೆಂಬ ಬೆಳಕಿನ ಕಡೆಗೆ ಕರೆದೊಯ್ದ ಶ್ರೇಷ್ಠ ಆಚಾರ್ಯರು ಶ್ರೀ ರಾಮಾನುಜರು.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.