ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಮತ್ತು ಇತರೆ 41 ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸಚಿವ ಸಂಪುಟ ಅಸ್ತು
ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಡಿಕಲ್ ಗ್ರಾಮ ಪಂಚಾಯಿತಿಯ 14 ಗ್ರಾಮಗಳ ಕುಡಿಯುವ ನೀರಿನ ಬೇಡಿಕೆ ಪೂರೈಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತ ನಂತರ, ಈಗ ಗೌರಿಬಿದನೂರು ತಾಲೂಕಿನ 42 ಗ್ರಾಮಗಳಿಗೆ ನೀರೊದಗಿಸುವ ಯೋಜನೆಗೆ ಅನುಮೋದನೆ ದೊರೆತಿದೆ ಎಂದು. ಈ ಮೂಲಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ತಮ್ಮ ತವರು ಜಿಲ್ಲೆಗೆ ಜೀವಜಲದ ಮತ್ತೊಂದು ಮಹತ್ವದ ಕೊಡುಗೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ಮನೆಗೆ ಕೊಳಾಯಿ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶದೊಂದಿಗೆ, ಜಲ ಜೀವನ್ ಮಿಷನ್ ಜಾರಿ ಮಾಡಿದೆ. ಈ ಯೋಜನೆಯಡಿ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಮತ್ತು ಇತರೆ 41 ಗ್ರಾಮಗಳಿಗೆ 55 ಎಲ್‍ಪಿಸಿಡಿ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೂ ತ್ವರಿತವಾಗಿ ಅನುಮೋದನೆ ನೀಡಿ ಗ್ರಾಮೀಣ ಭಾಗದ ಜನರಿಗೆ ಜೀವಜಲದ ಭರವಸೆಯನ್ನು ಖಾತರಿಪಡಿಸಲಾಗಿದೆ.
ದಂಡಿಗಾನಹಳ್ಳಿ ಕೆರೆಯಿಂದ ನೀರು
ಮಂಚೇನಹಳ್ಳಿ ಹಾಗೂ ಇತರೆ 41 ಗ್ರಾಮಗಳಲ್ಲಿ 10,289 ಮನೆಗಳಿವೆ. 2011 ರ ಜನಗಣತಿ ಪ್ರಕಾರ ಈ ಭಾಗದ ಜನಸಂಖ್ಯೆ 40,516. 2023 ರ ವೇಳೆಗೆ 40,988 ಹಾಗೂ 2053 ರ ವೇಳೆಗೆ ಈ ಜನಸಂಖ್ಯೆ 42,302 ಆಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈ ಗ್ರಾಮಗಳ ಜನರು ಕೊಳವೆಬಾವಿ ಹಾಗೂ ಇತರೆ ಸಣ್ಣ ಜಲಮೂಲಗಳನ್ನು ಅವಲಂಬಿಸಿದ್ದಾರೆ. ಇದರಿಂದಾಗಿ ಪ್ರತಿ ದಿನ ದೂರದ ಪ್ರದೇಶಗಳಿಗೆ ನಡೆದು ನೀರನ್ನು ಹೊತ್ತು ತರುವ ಪರಿಸ್ಥಿತಿ ಇದೆ. ಈ ಸಂಕಷ್ಟವನ್ನು ತಪ್ಪಿಸಿ ಜನರ ಮನೆಗಳಿಗೆ ನೇರವಾಗಿ ಕೊಳಾಯಿ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಈ ಭಾಗದಲ್ಲಿ 0.036 ಟಿಎಂಸಿ ನೀರಿನ ಬೇಡಿಕೆ ಇದೆ.
ಈ ಯೋಜನೆಯ ಹಂತ-1 ರಲ್ಲಿ, ದಂಡಿಗಾನಹಳ್ಳಿ ಕೆರೆಯಿಂದ 55 ಎಲ್‍ಪಿಸಿಡಿ ನೀರನ್ನು ಸರಬರಾಜು ಮಾಡಲಾಗುತ್ತದೆ. ದಿನಕ್ಕೆ 16 ಗಂಟೆ ನೀರು ಪಂಪ್ ಮಾಡುವ ಸಾಮರ್ಥ್ಯದ ಮೂಲಸೌಕರ್ಯವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಒಟ್ಟು 44 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಯಾಗಲಿದೆ. ರಾಜ್ಯ ಸರ್ಕಾರದಿಂದ 26.48 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದಿಂದ 17.52 ಕೋಟಿ ರೂ. ಅನುದಾನ ದೊರೆಯಲಿದೆ. ಹಂತ-2 ರಲ್ಲಿ 23 ಗ್ರಾಮಗಳಿಗೆ ನೀರು ಪೂರೈಸಲು ಉದ್ದೇಶಿಸಲಾಗಿದೆ.
ದಂಡಿಗಾನಹಳ್ಳಿ ಕೆರೆ ಗರಿಷ್ಠ 90.36 ಎಂಸಿಫೀಟ್ ಸಾಮರ್ಥ್ಯ ಹೊಂದಿದ್ದು, ಇಲ್ಲಿಂದ ಗ್ರಾಮಗಳಿಗೆ 2.91 ಎಂಎಲ್‍ಡಿ ನೀರು ಪೂರೈಸಲಾಗುತ್ತದೆ. ಯೋಜನೆಗೆ ಬೇಕಾದ ಮೂಲಸೌಕರ್ಯದ ಕಾಮಗಾರಿಗೆ 15 ತಿಂಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇನ್ನೂ ಶುದ್ಧ ಕುಡಿಯುವ ನೀರಿಗಾಗಿ ಜನರು ಸಂಕಷ್ಟಪಡುವುದು ನಿಂತಿಲ್ಲ. ಇದನ್ನು ಕೊನೆಗಾಣಿಸಲು ಪ್ರಧಾನಿ ನರೇಂದ್ರ ಮೋದಿಯವರು ಮನೆಮನೆಗೆ ಕೊಳಾಯಿ ನೀರು ಸೌಲಭ್ಯ ಕಲ್ಪಿಸುವ ಜಲ ಜೀವನ್ ಮಿಷನ್ ಜಾರಿ ಮಾಡಿದ್ದಾರೆ. ಈ ಯೋಜನೆಯಡಿ ಮಂಚೇನಹಳ್ಳಿ ಮತ್ತು ಇತರೆ 41 ಗ್ರಾಮಗಳ ಮನೆಗಳಿಗೆ ಕೊಳಾಯಿ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಮೂಲಕ ಜನರು ಕುಡಿಯುವ ನೀರನ್ನು ಮನೆಯಲ್ಲೇ ಪಡೆಯುವ ಸವಲತ್ತು ನೀಡಲಾಗುತ್ತಿದೆ. 2024 ರ ವೇಳೆಗೆ ದೇಶದ ಪ್ರತಿ ಮನೆಗೆ ಕೊಳಾಯಿ ನೀರಿನ ಸಂಪರ್ಕ ನೀಡುವುದು ಕೇಂದ್ರ ಸರ್ಕಾರದ ಗುರಿ. ಇದೇ ರೀತಿ ಬಯಲುಸೀಮೆಯ ಎಲ್ಲಾ ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸುವ ಗುರಿಯತ್ತ ನಾವು ದೃಢ ಹೆಜ್ಜೆ ಇರಿಸಿದ್ದೇವೆ.
ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ